Advertisement

ಅನುಭವಿ ರಮೇಶಗೆ ಹೊಸ ಪರೀಕ್ಷೆ

12:11 AM May 04, 2023 | Team Udayavani |

ಬೆಳಗಾವಿ: ಗೋಕಾಕ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದು ವಿಶಿಷ್ಟ ದಾಖಲೆ ಮಾಡಿರುವ ರಮೇಶ್‌ ಜಾರಕಿಹೊಳಿ ಈಗ ಏಳನೇ ಬಾರಿ ಜಯದ ವಿಶ್ವಾಸದೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಡಾ| ಮಹಾಂತೇಶ್‌ ಕಡಾಡಿ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸಂಬಂಧಿ ಮಹಾಂತೇಶ್‌ ಕಡಾಡಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದ್ದೇಕೆ ಎಂಬ ಪ್ರಶ್ನೆ ಕ್ಷೇತ್ರದ ಜನರನ್ನು ಕಾಡುತ್ತಿದೆ.

Advertisement

1985ರಿಂದ ಚುನಾವಣ ಕಣದಲ್ಲಿರುವ ರಮೇಶ್‌ ತಮ್ಮ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಅನಂತರ ಯಾವತ್ತೂ ಸೋತಿಲ್ಲ. ಆರು ಬಾರಿ ಶಾಸಕರಾಗಿರುವ ರಮೇಶ್‌ ಇದರಲ್ಲಿ 5 ಸಲ ಕಾಂಗ್ರೆಸ್‌ನಿಂದ ಗೆದ್ದು ಬಂದಿದ್ದರು. 2018ರಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಗನುಗುಣವಾಗಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದರು.

ಪಕ್ಷ ಬದಲಿಸಿದರೂ ಗೆಲುವು: ಪಕ್ಷ ಬದಲಿಸಿದರೂ ಕ್ಷೇತ್ರದ ಜನರು ಅವರನ್ನು ಬಿಟ್ಟು ಹೋಗಲಿಲ್ಲ. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 29 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಇನ್ನು ಚುನಾವಣೆಗೆ ಸಂಪೂರ್ಣ ಹೊಸಬರಾಗಿರುವ ಕಡಾಡಿ ಅವರಿಗೆ ಲಿಂಗಾಯತ ಸಮಾಜದ ಬಲವಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಜಾರಕಿಹೊಳಿ ವಿರುದ್ಧ ಲಿಂಗಾಯತ ಸಮಾಜದ ಕದನ ಎಂದೇ ಬಿಂಬಿಸುವ ಪ್ರಯತ್ನ ನಡೆದಿದೆ.

ಹೀಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿನ ಜಾರಕಿಹೊಳಿ ಅವರ ರಾಜಕೀಯ ಶತ್ರುಗಳು ಈ ಚುನಾವಣೆಯನ್ನು ಬಹಳ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಲಿಂಗಾಯತ ಸಮಾಜದ ಕಾರ್ಡ್‌ನ್ನು ಮುಂದಿಟ್ಟುಕೊಂಡು ಈ ನಾಯಕರು ಜಾರಕಿಹೊಳಿ ವಿರುದ್ಧ ಮುಗಿ ಬಿದ್ದಿರುವುದು ಮತ್ತು ಬಿಜೆಪಿಯಲ್ಲಿನ ಕೆಲವು ನಾಯಕರು ತೆರೆಮರೆಯಲ್ಲಿ ಇದಕ್ಕೆ ಕೈಜೋಡಿಸಿ ರುವುದರಿಂದ ಚುನಾವಣೆ ಬಹಳ ಕುತೂಹಲ ಪಡೆದಿದೆ. ಇನ್ನು ಈ ಹಿಂದೆಲ್ಲ ರಮೇಶ್‌ ವಿರುದ್ಧ ಕಣಕ್ಕಿಳಿದಿದ್ದು ಈ ಬಾರಿ ಟಿಕೆಟ್‌ ಸಿಗದೆ ಮುನಿಸಿಕೊಂಡಿದ್ದ ಹಿರಿಯ ನಾಯಕ ಅಶೋಕ ಪೂಜಾರಿ ಮನವೊಲಿಕೆಯಲ್ಲಿ ಮುಖಂಡರು ಯಶಸ್ವಿಯಾಗಿರುವುದು ಕಾಂಗ್ರೆಸ್‌ಗೆ ಬಲ ತಂದಿದೆ. ಇದುವರೆಗಿನ ಎಲ್ಲ ಚುನಾವಣೆಗಳಲ್ಲಿ ರಮೇಶ ಲಿಂಗಾಯತ-ಮುಸ್ಲಿಂ ಸಮು ದಾಯದ ಬೆಂಬಲದಿಂದ ಗೆಲ್ಲುತ್ತ ಬಂದಿದ್ದರು. ಈ ಸಮುದಾಯದ ಜನರು ನಮ್ಮನ್ನು ಬಿಟ್ಟು ಹೋಗಲ್ಲ ಎಂದು ಭಾವಿಸಿದ್ದರು. ಈ ಸಮುದಾಯದ ಲಾಭವನ್ನು ಸರಿಯಾಗಿ ಉಪಯೋಗಿ ಸಿಕೊಂಡಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಅಂದುಕೊಂಡಷ್ಟು ಸರಳವಾಗಿಲ್ಲ. ಕಾಂಗ್ರೆಸ್‌ ಲಿಂಗಾಯತ ಪಂಚಮಸಾಲಿ ಸಮಾಜದ ಮಹಾಂತೇಶ್‌ ಕಡಾಡಿ ಅವರನ್ನು ಕಣಕ್ಕಿಳಿಸಿ ರುವುದರಿಂದ ಈ ಮತಗಳು ಕೈತಪ್ಪುವ ಆತಂಕ ರಮೇಶ್‌ ಜಾರಕಿಹೊಳಿ ಪಾಳಯದಲ್ಲಿದೆ.

~ ಕೇಶವ ಆದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next