Advertisement

ಶಬ್ದವೇಧಿ ಹ್ಯಾಕಿಂಗ್‌

10:18 PM Aug 25, 2019 | Team Udayavani |

ಇಂದಿನ ಇಂಟರ್ನೆಟ್‌ ಯುಗದಲ್ಲಿ ‘ಸೈಬರ್‌ ಸುರಕ್ಷತೆ’ಯ ಮಹತ್ವದ ಕುರಿತು ಆಗಾಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಳ್ಳುವುದನ್ನು ನೀವು ನೋಡಿರಬಹುದು. ಬ್ಯಾಂಕಿನಿಂದ ಏಕಾಏಕಿ ಹಣ ಮಂಗಮಾಯ ಆಗುವುದನ್ನು ಕಂಡು ಗಾಬರಿಯೂ ಆಗಿರಬಹುದು. ತಂತ್ರಜ್ಞಾನವೊಂದು ಬೆಳೆಯುತ್ತಿದ್ದಂತೆಯೇ ಅದು ಉಪಯೋಗದೊಂದಿಗೆ, ಅನೇಕ ಸವಾಲುಗಳನ್ನೂ ಜೊತೆಯಲ್ಲೇ ಹೊತ್ತು ತರುತ್ತದೆ. ಇಂಟರ್ನೆಟ್‌ ಬ್ಯಾಂಕಿಂಗ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ನಿಂದಾಗಿ ಇಂದು ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳಲ್ಲೇ ಜನರು ಬ್ಯಾಂಕ್‌ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.

Advertisement

ಆನ್‌ಲೈನ್‌ ಶಾಪಿಂಗ್‌ ಕೂಡಾ ಇಂದಿನ ದಿನಗಳಲ್ಲಿ ಹೆಚ್ಚಳ ಕಂಡಿದೆ. ಹೀಗಾಗಿ, ತಂತ್ರಜ್ಞಾನವನ್ನು ಬಳಸಿಯೇ ಕಳ್ಳತನ ಮಾಡುವ ಪ್ರವೃತ್ತಿಯನ್ನು ನಾವು ಕಾಣಬಹುದು. ಯಾವುದೋ ಮೂಲೆಯಲ್ಲಿ ಕುಳಿತು, ಒಬ್ಬರ ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನಿನಲ್ಲಿ ಸಂಗ್ರಹವಾಗಿರುವ ಮಾಹಿತಿ ಕದಿಯುವವರನ್ನು ಹ್ಯಾಕರ್‌ ಎನ್ನುತ್ತಾರೆ. ಹ್ಯಾಕರ್‌ಗಳು ಬ್ಯಾಂಕು, ಇಮೇಲ್‌ ಮುಂತಾದ ಆನ್‌ಲೈನ್‌ ಸೇವೆಗಳ ಪಾಸ್‌ವರ್ಡ್‌ಗಳನ್ನೂ ಕದಿಯಬಲ್ಲರು. ಹ್ಯಾಕರ್‌ಗಳು ಪಾಸ್‌ವರ್ಡ್‌ಗಳನ್ನು ಕದಿಯಲು ನಾನಾ ತಂತ್ರಗಳನ್ನು ಬಳಸುತ್ತಾರೆ.

ನಕಲಿ ವೆಬ್‌ಸೈಟ್‌ ಸೃಷ್ಟಿ, ಕೀ ಲಾಗರ್‌(ಯಾವೆಲ್ಲಾ ಬಟನ್‌ಗಳು ಪ್ರಸ್‌ ಆಗಿದೆ ಎನ್ನುವ ಮಾಹಿತಿ ಕಲೆ ಹಾಕುವ ಸಾಫ್ಟ್ವೇರ್‌) ಬ್ಯಾಂಕ್‌ನವರಂತೆ ನಟಿಸಿ ಬ್ಯಾಂಕ್‌ ಖಾತೆಯ ಸೂಕ್ಷ್ಮ ಮಾಹಿತಿ ಕೇಳುವುದು, ಸೋಷಿಯಲ್‌ ಎಂಜಿನಿಯರಿಂಗ್‌ ಇವೆಲ್ಲಾ ನಾನಾ ತಂತ್ರಗಳು… ಸದ್ದು ಬಂದ ಕಡೆ ಬಾಣ ಹೂಡಿ ಶತ್ರುವನ್ನು ಸದೆಬಡಿಯುವ, “ಶಬ್ದವೇಧಿ’ ವಿದ್ಯೆಯ ಬಗ್ಗೆ ನೀವೆಲ್ಲರೂ ಕೇಳಿಯೇ ಇರುತ್ತೀರಿ. ಅದನ್ನು ಹ್ಯಾಕರ್‌ಗಳೂ ಬಳಸುವ ಸಾಧ್ಯತೆಯನ್ನು ಸಂಶೋಧನೆಯೊಂದು ದೃಢಪಡಿಸಿದೆ. ಒಂದೇ ವ್ಯತ್ಯಾಸವೆಂದರೆ, ಇಲ್ಲಿ ಶಬ್ದ ಬಂದತ್ತ ಪಾಸ್‌ವರ್ಡ್‌ ಕದಿಯಲಾಗುತ್ತದೆ.

ಟೆಕ್ಸಾಸ್‌ ವಿಶ್ವವಿದ್ಯಾಲಯದ ಸಂಶೋಧಕರು ಈ ಆಶ್ಚರ್ಯಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ಕೀಬೋರ್ಡ್‌ನಲ್ಲಿ ಯಾವುದೇ ಅಕ್ಷರದ ಬಟನ್‌ ಪ್ರಸ್‌ ಮಾಡಿದಾಗ ನಿರ್ದಿಷ್ಟ ತರಂಗಾಂತರದ ಶಬ್ದ ಉಂಟಾಗುತ್ತದೆ. ಮನುಷ್ಯರಿಗೆ ಕೇಳದ ಈ ಶಬ್ದವನ್ನು ಮೈಕ್ರೋಫೋನ್‌ ಸಹಾಯದಿಂದ ಗ್ರಹಿಸುವ ಮೂಲಕ ಹ್ಯಾಕರ್‌ಗಳು ಪಾಸ್‌ವರ್ಡನ್ನು ಸುಲಭವಾಗಿ ಮತ್ತು ಖಚಿತವಾಗಿ ಊಹಿಸಬಹುದು. ಅದನ್ನೇ ಟೆಕ್ಸಾಸ್‌ನ ಸಂಶೋಧಕರು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ. ಶಬ್ದವನ್ನು ಗ್ರಹಿಸಲು ಮೈಕ್ರೋಫೋನ್‌ ಚಿಪ್‌ಅನ್ನು ಕೀಬೋರ್ಡ್‌ ಒಳಗಡೆ ಕಾಣದಂತೆ ಅವರು ಅಳವಡಿಸಿದ್ದರು.

ಈ ತಂತ್ರದಲ್ಲಿ ಹ್ಯಾಕರ್‌ಗೆ ಎದುರಾಗುವ ಪ್ರಮುಖ ಸವಾಲು ಎಂದರೆ, ಕೀಬೋರ್ಡ್‌ಅನ್ನು ಇಟ್ಟಿರುವ ಮೇಲ್ಮೆ„ ಯಾವ ಮಟೀರಿಯಲ್‌ನದು ಎನ್ನುವುದನ್ನು ಪತ್ತೆ ಹಚ್ಚುವುದು. ಏಕೆಂದರೆ, ಪ್ಲಾಸ್ಟಿಕ್‌, ಕಬ್ಬಿಣ ಹಾಗೂ ಮರ ಮೂರೂ ವಿಧಗಳ ಮೇಲ್ಮೆ„ ಮೇಲಿಟ್ಟಾಗ ಕೀಬೋರ್ಡ್‌ ವಿಭಿನ್ನ ರೀತಿಯ ಶಬ್ದಗಳನ್ನು ಸೃಷ್ಟಿಸುತ್ತದೆ. ಅದನ್ನು ಪತ್ತೆ ಮಾಡಲು ಸಾಧ್ಯವಾದರೆ ಕಳ್ಳ ಹ್ಯಾಕರ್‌ನ ಕೆಲಸ ಸುಲಭವಾದಂತೆಯೇ ಲೆಕ್ಕ. ಇವೆಲ್ಲಾ ಅಂದುಕೊಂಡಷ್ಟು ಸುಲಭವಲ್ಲ ನಿಜ. ಆದರೆ, ಜನರು ಎಚ್ಚರಿಕೆಯನ್ನಂತೂ ಅಗತ್ಯವಾಗಿ ವಹಿಸಲೇಬೇಕು. 

Advertisement
Advertisement

Udayavani is now on Telegram. Click here to join our channel and stay updated with the latest news.

Next