Advertisement

Congress ನಾಯಕತ್ವಕ್ಕೆ ಹೊಸ ತಂಡ: ಲೋಕ ಚುನಾವಣೆ ಹಿನ್ನೆಲೆ ಹೊಸಬರಿಗೆ ಅವಕಾಶಕ್ಕೆ ಚಿಂತನೆ

01:00 AM Aug 28, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷ ಬಹುಮತ ದೊಂದಿಗೆ ಸುಭದ್ರ ಸರಕಾರ ರಚಿಸಿ, ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಇನ್ನೇನಿದ್ದರೂ ಲೋಕಸಭಾ ಚುನಾವಣೆ ಮೇಲೆ ಕಣ್ಣು. ಇದಕ್ಕಾಗಿ ಹೊಸ ತಂಡವನ್ನೇ ಸಜ್ಜುಗೊಳಿಸುತ್ತಿದ್ದು, ಬರುವ ತಿಂಗಳು ಅದು ಅಸ್ತಿತ್ವಕ್ಕೆ ಬರಲಿದೆ.

Advertisement

ಪಕ್ಷದ ಕಾರ್ಯಾಧ್ಯಕ್ಷರಿಂದ ಹಿಡಿದು ಜಿಲ್ಲಾಧ್ಯಕ್ಷರ ಹಂತದವರೆಗೆ ಇಡೀ ಸಮಿತಿಯನ್ನು ಪುನಾರಚನೆ ಮಾಡಲು ಕಾಂಗ್ರೆಸ್‌ ಉದ್ದೇಶಿಸಿದೆ. ಈ ಪ್ರಕ್ರಿಯೆಯಲ್ಲಿ ಹೊಸಮುಖ ಅಥವಾ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಹುರುಪು ತುಂಬಲಾಗುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳು ಆರಂಭಗೊಂಡಿವೆ.

ಈಗಿನ ಸಮಿತಿಯ ಪದಾಧಿಕಾರಿಗಳ ಪೈಕಿ ಕೆಲವರು ಸಚಿವರು, ಶಾಸಕರಾಗಿದ್ದಾರೆ. ಅಂತಹವರು ಎರಡೂ ಕಡೆಗೆ ಗಮನ ಹರಿಸಲು ಆಗುವುದಿಲ್ಲ. ಮತ್ತೂಂದೆಡೆ ಕೆಲವರಿಂದ ನಿರೀಕ್ಷಿತ ಮಟ್ಟದಲ್ಲಿ ಆಸಕ್ತಿ ಕಂಡುಬರುತ್ತಿಲ್ಲ. ಅಂತಹವರ ಬದಲಾವಣೆ ಮಾಡುವ ಮೂಲಕ ಪಕ್ಷಕ್ಕೆ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ. ಹೀಗೆ ಸಮಿತಿ ಪುನಾರಚನೆ ವೇಳೆ ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡಲಾಗುತ್ತದೆ. ಜತೆಗೆ ಸಾಧ್ಯವಾದಷ್ಟು ಆಯಾ ಪ್ರದೇಶಗಳಿಂದಲೇ ರಾಜ್ಯ ಪದಾಧಿಕಾರಿಗಳನ್ನು ನೇಮಕ ಮಾಡುವ ಚಿಂತನೆ ಇದೆ.

ಕಾರ್ಯಾಧ್ಯಕ್ಷರ ಬದಲಾವಣೆ
ವಿಶೇಷವಾಗಿ ಈಗಿರುವ ಕಾರ್ಯಾಧ್ಯಕ್ಷರಲ್ಲಿ ವೀರಶೈವ ಲಿಂಗಾಯತ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾಕ, ರೆಡ್ಡಿ ಸಮುದಾಯಗಳ ತಲಾ ಒಬ್ಬರಿದ್ದಾರೆ. ಅದೇ ಸಮುದಾಯದ ನಾಯಕರನ್ನು ಆಯಾ ಹುದ್ದೆಗಳಿಗೆ ನೇಮಕ ಮಾಡಲು ಉದ್ದೇಶಿಸಲಾಗಿದೆ. ಅದೇ ಜಿಲ್ಲೆಗಳಿಂದಲೇ ಆಯ್ಕೆ ಅನುಮಾನವಾದರೂ ಆಯಾ ಪ್ರದೇಶದಿಂದ ಆಯ್ದು ಕಾರ್ಯಾಧ್ಯಕ್ಷ ಸ್ಥಾನ ನೀಡುವ ಚಿಂತನೆ ಇದೆ. ಮಾಜಿ ಸಂಸದ ಆರ್‌. ಧ್ರುವನಾರಾಯಣ ಅವರ ಸ್ಥಾನಕ್ಕೆ ಕಳೆದ ಎಪ್ರಿಲ್‌ನಲ್ಲಷ್ಟೇ ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಹಾಗಾಗಿ ಅವರು ಎಂದಿನಂತೆ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿಯಲ್ಲಿ ಒಟ್ಟು 180ಕ್ಕೂ ಅಧಿಕ ಪದಾಧಿಕಾರಿಗಳು ಇದ್ದಾರೆ. ಅವರಲ್ಲಿ ಬಹುತೇಕರನ್ನು ಬದಲಾವಣೆ ಮಾಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ ಎಂದು ಮೂಲಗಳು ತಿಳಿಸಿವೆ.

Advertisement

ನನ್ನ ಸಹಿತ ಕೆಪಿಸಿಸಿ ಪದಾಧಿಕಾರಿಗಳಲ್ಲಿ ಹಲವರು ಸಚಿವರಾಗಿದ್ದಾರೆ, ಹಲವರು ಶಾಸಕರಾಗಿದ್ದಾರೆ. ಎರಡೂ ಕಡೆ ಗಮನ ಹರಿಸಲು ಕಷ್ಟ. ಚುನಾವಣೆ ದೃಷ್ಟಿಯಲ್ಲಿ ಪಕ್ಷದ ಸಂಘಟನೆಗಾಗಿ ಸಮಿತಿ ಪುನಾರಚನೆ ಮಾಡಲು ಉದ್ದೇಶಿಸಲಾಗಿದೆ. ಮುಂದಿನ ತಿಂಗಳು ಸ್ಪಷ್ಟ ಚಿತ್ರಣ ಸಿಗಲಿದೆ.
-ಸಲೀಂ ಅಹಮ್ಮದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next