Advertisement
ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ಜಿಲ್ಲಾಧಿಕಾರಿಗಳು, ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಒಟ್ಟು 3 ಖಾತೆಗಳಿವೆ. ಇಲಾಖೆಯ ವಿವಿಧ ಅಭಿವೃದ್ಧಿ ಕಾರ್ಯ ಕ್ರಮ, ಫಲಾನುಭವಿಗಳಿಗೆ ಸಹಾಯಧನ ವಿತರಣೆ ಸೇರಿ ವಿವಿಧ ಯೋಜನೆಗಳಿಗೆ ವ್ಯಯಿಸಲು ಈ ಮೂರು ಖಾತೆಗಳಲ್ಲಿ 2,47,73,999 ರೂ. ಹಣವಿತ್ತು. ಆ ಮೊತ್ತ 2021ರ ಅ. 28ರಿಂದ 2024ರ ಫೆ. 22ರ ಅವಧಿಯಲ್ಲಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಗೊಂಡಿದೆ.
ಈ ಹಗರಣದ ಕುರಿತು ಬಾಗಲ ಕೋಟೆಯ ಸೆನ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ತನಿಖೆಯ ಬಳಿಕ ಮೂರು ಖಾತೆಗಳಿಂದ ಒಟ್ಟು 54 ಬಾರಿ ಹಣ ವರ್ಗಾವಣೆಯಾಗಿರುವುದು ಖಚಿತ ವಾಗಿದೆ. ಒಂದು ಖಾತೆಯಿಂದ 28 ಬಾರಿ, ಮತ್ತೂಂದು ಖಾತೆಯಿಂದ 25 ಬಾರಿ ಹಾಗೂ ಇನ್ನೊಂದು ಖಾತೆಯಿಂದ ಒಮ್ಮೆ ಹಣ ವರ್ಗವಾಗಿದೆ. ಮುಖ್ಯವಾಗಿ ಪ್ರವಾಸೋದ್ಯಮ ಸಮಿತಿಯ ಖಾತೆಯಿಂದ ಸಮಾಜ ಕಲ್ಯಾಣ ಇಲಾಖೆಗೆ, ಅಲ್ಲಿಂದ ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಖಾತೆಗೆ ಒಮ್ಮೆ 50 ಲಕ್ಷ ರೂ. ವರ್ಗಾವಣೆಯಾಗಿದೆ. ಹೀಗಾಗಿ ಈ ಹಗರಣದಲ್ಲಿ ನಿರ್ಮಿತಿ ಕೇಂದ್ರದ ಪಾಲೂ ಇರಬಹುದು ಎಂದು ಶಂಕಿಸಲಾಗಿದೆ. ಜಿಲ್ಲಾಧಿಕಾರಿಗಳೇ ಅಧ್ಯಕ್ಷರು
ಗಮನಾರ್ಹ ಸಂಗತಿಯೆಂದರೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹಾಗೂ ನಿರ್ಮಿತಿ ಕೇಂದ್ರ ಎರಡಕ್ಕೂ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುತ್ತಾರೆ. 2021ರಿಂದಲೂ ಸರಕಾರಿ ಇಲಾಖೆ ಹಣ ವರ್ಗಾವಣೆಗೊಳ್ಳುತ್ತಿದ್ದರೂ ಜಿಲ್ಲಾಧಿಕಾರಿ ಅಥವಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಗಮನಕ್ಕೆ ಬರಲಿಲ್ಲವೇ ಎಂಬುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
Related Articles
Advertisement
ಮೂವರು ಡಿ.ಸಿ.ಗಳುಈ ಹಣ ವರ್ಗಾವಣೆಗೊಂಡ ಅವಧಿಯಲ್ಲಿ ಮೂವರು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಪ್ರವಾಸೋದ್ಯಮ ಇಲಾಖೆಗೆ ಪ್ರಭಾರ ಅಧಿಕಾರಿಗಳು ಹಲವು ಬಾರಿ ಬದಲಾವಣೆಗೊಂಡಿದ್ದಾರೆ. ಲೆಕ್ಕ ಪರಿಶೋಧಿತ ವರದಿ ಇಲ್ಲ
ಪ್ರತಿಯೊಂದು ಇಲಾಖೆಯಲ್ಲಿ ಪ್ರತೀ ವರ್ಷ ಮಾರ್ಚ್‌ನಲ್ಲಿ ಲೆಕ್ಕ ಪರಿಶೋಧನೆ ಮಾಡಿಸಲಾಗುತ್ತದೆ. ಆ ವೇಳೆ ಯಾವ ಇಲಾಖೆಯಲ್ಲಿ ಎಷ್ಟು ಅನುದಾನ ಉಳಿದಿದೆ, ಎಷ್ಟು ಖೋತಾ ಆಗಿದೆ, ಯಾವ ಯೋಜನೆ ಅಥವಾ ಉದ್ದೇಶಕ್ಕೆ ಎಷ್ಟು ಅನುದಾನ ಬಳಕೆಯಾಗಿದೆ ಎಂಬುದರ ವಿವರ ಕೊಡಲೇಬೇಕು. ಆದರೆ ಪ್ರವಾಸೋದ್ಯಮ ಇಲಾಖೆಯಲ್ಲಿ ಲೆಕ್ಕ ಪರಿಶೋಧಿತ ವರದಿ ಕೇಳಿದರೆ, ಮಾಡಿಸಿಲ್ಲ ಎಂಬ ಉತ್ತರ ಬರುತ್ತಿದೆ ಎನ್ನಲಾಗಿದೆ. ಹೀಗಾಗಿ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಿಡಿದು, ಬಾಗಲಕೋಟೆಯ ಬೇರೆ ಬೇರೆ ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರಬಹುದು ಎಂಬ ಅನುಮಾನವಿದೆ ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸರಕಾರದ ಹಣ ದುರ್ಬಳಕೆ ಮಾಡಿದವರನ್ನು ಉಗ್ರ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಬ್ಯಾಂಕ್‌ನಲ್ಲಿರಿಸಿದ್ದ ಮೊತ್ತವನ್ನು ಬ್ಯಾಂಕ್‌ನವರೇ ತೆಗೆದುಕೊಂಡಿದ್ದಾರೆ.
-ಎಚ್.ಕೆ. ಪಾಟೀಲ್, ಪ್ರವಾಸೋದ್ಯಮ ಸಚಿವ