Advertisement

ರೋಗಪತ್ತೆ ವಿಧಾನಗಳಿಂದ ಹೊಸ ಕ್ರಾಂತಿ

11:00 AM Sep 13, 2019 | Team Udayavani |

ಬೆಳಗಾವಿ: ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಆವಿಷ್ಕಾರಗೊಂಡ ನಂತರ ಅದರ ಪ್ರತಿಫಲವು ಗ್ರಾಮೀಣ ಪ್ರದೇಶದ ಜನರಿಗೂ ಕೈಗೆಟುಕುವ ದರದಲ್ಲಿ ಲಭಿಸುವಂತಾಗಬೇಕು. ಏರುತ್ತಿರುವ ವೈದ್ಯಕೀಯ ವೆಚ್ಚಕ್ಕೆ ತಂತ್ರಜ್ಞಾನ ಪರಿಹಾರ ಸೂಚಿಸಬೇಕು ಎಂದು ಗೋವಾದ ಆರೋಗ್ಯ, ವ್ಯಾಪಾರ ಹಾಗೂ ವಾಣಿಜ್ಯ ಸಚಿವ ವಿಶ್ವಜೀತ ರಾಣೆ ಹೇಳಿದರು.

Advertisement

ನಗರದ ಯುಎಸ್‌ಎಂ-ಕೆಎಲ್ಇ ವೈದ್ಯಕೀಯ ಕಾರ್ಯಕ್ರಮದ ದಶಮಾನೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಲಾಗಿದ್ದ ವೈದ್ಯಕೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿದ ತಂತ್ರಜ್ಞಾನದ ಮೂಲಕ ಶೀಘ್ರ ರೋಗಪತ್ತೆ ಮಾಡುವ ವಿಧಾನಗಳನ್ನು ಕಂಡು ಹಿಡಿಯುತ್ತಿದ್ದು, ಅವು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಲಿವೆ ಎಂದರು.

ಗೋವಾ ರಾಜ್ಯದಲ್ಲಿ ಮಹಿಳೆಯರು ಹೆಚ್ಚಾಗಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ರೋಗ ಬರುವ ಮುಂಚೆಯೇ ಪತ್ತೆ ಮಾಡಲು ಅನುಕೂಲವಾಗುವ ತಂತ್ರಜ್ಞಾನ ಕಂಡು ಹಿಡಿಯಲಾಗಿದ್ದು ಇದು ಗೋವಾದ ಜನರಿಗೆ ವರದಾನವಾಗಿದೆ. ಒಂದು ಚಿಕ್ಕ ಸಾಧನ ರೋಗ ಕಂಡು ಹಿಡಿದು ಚಿಕಿತ್ಸೆಗೆ ದಾರಿಯನ್ನು ಸುಗಮಗೊಳಿಸುತ್ತಿದೆ. ಇಂತಹ ಆವಿಷ್ಕಾರಗಳು ನಿರಂತರವಾಗಿ ನಡೆಯಬೇಕು ಮತ್ತು ಜನರಿಗೆ ಸದುಪಯೋಗವಾಗಬೇಕು ಎಂದು ಹೇಳಿದರು.

ಕೇಂದ್ರ ಸರಕಾರದ ಅನುದಾನದಡಿ ಗೋವಾ ರಾಜ್ಯದಲ್ಲಿ ಸುಸಜ್ಜಿತ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರವೇ ನಿರ್ಮಾಣವಾಗಲಿದೆ. ಸಮಾಜಕ್ಕೆ ಅನುಕೂಲವಾಗುವ ಕೆಎಲ್ಇ ಸಂಸ್ಥೆಯೊಂದಿಗೆ ಗೋವಾದ ಜನರು ಬೆರೆತುಹೋಗಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯಕ್ಕೆ ಈ ಸಂಸ್ಥೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ದೂರದೃಷ್ಟಿ ನಮಗೆ ಬಹಳ ಪ್ರಯೋಜನಕಾರಿಯಾಗಿದೆ ಎಂದು ಶ್ಲಾಘಿಸಿದರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಯುಎಸ್‌ಎಂ- ಕೆಎಲ್ಇ ವೈದ್ಯಕೀಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಇದುವರೆಗೆ ಸುಮಾರು 467 ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆದು ಸೇವೆಗೆ ನಿಯೋಜನೆಗೊಂಡಿದ್ದಾರೆ ಎಂದು ಹೇಳಿದರು.

Advertisement

ಇದಕ್ಕೆ ಪೂರಕವಾಗಿ ಈಗ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದೊಂದಿಗೆ ಮಲೇಶಿಯಾ ತಾಂತ್ರಿಕ ಮಹಾವಿದ್ಯಾಲಯವು ಒಡಂಬಡಿಕೆ ಮಾಡಿಕೊಳ್ಳಲಿದೆ. ಇದೇ ರೀತಿ ಹಲವು ದೇಶಗಳು ಕೆಎಲ್ಇ ಸಂಸ್ಥೆಯೊಂದಿಗೆ ಕೈಜೋಡಿಸಲು ಮುಂದೆ ಬಂದಿದ್ದು, ಮಾಲ್ಡೀವ್ಸ್‌ ಮತ್ತು ಶ್ರೀಲಂಕಾ ದೇಶಗಳು ಶೀಘ್ರದಲ್ಲಿಯೇ ಕೆಎಲ್ಇ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿವೆ ಎಂದರು.

ಯುಎಸ್‌ಎಂ ಕೆಎಲ್ಇ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ ಮಾತನಾಡಿ, ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗುಣಮಟ್ಟದ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವ ವಿಶ್ವಜೀತ ರಾಣೆ, ಮಲೇಶಿಯಾದ ಕೌನ್ಸಿಲ್ ಮೆಂಬರ್‌ ಪ್ರೊ. ತಾನ ಶ್ರೀಡಾಟೋ ಜುಲ್ಕಿಫ್ಲಿಬಿಂಗ್‌, ಅಬ್ದುಲ್ ರಜಾಕ್‌, ನಿರ್ದೇಶಕರಾದ ಡಾ. ಅಹ್ಮದ ಸುಕಾರಿ ಹಲಿಮ, ಡೀನ್‌ ಪ್ರೊ. ಶೈಫುಲ್ ಬಹಾರಿ ಇಸ್ಮಾಯಿಲ್ ಡಾ. ಕಮುರುದ್ದಿನ ಜಾಲಮ್‌ ಅವರನ್ನು ಸತ್ಕರಿಸಲಾಯಿತು.

ಕಾರ್ಯಾಗಾರದಲ್ಲಿ ಡಾ. ಎ.ಸಿ.ಪಾಂಗಿ, ಕಾಹೇರನ ಕುಲಪತಿ ಡಾ.ವಿವೇಕ ಸಾವೋಜಿ, ಕುಲಸಚಿವ ಡಾ. ವಿ.ಡಿ. ಪಾಟೀಲ, ಜೆಎನ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್‌.ಎಸ್‌. ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ.ಜಾಲಿ, ಡಾ.ಎ.ಎಸ್‌. ಗೋಧಿ, ಡಾ. ಆರ್‌.ಎಸ್‌.ಮುಧೋಳ ಮುಂತಾದವರು ಉಪಸ್ಥಿತರಿದ್ದರು. ವಿವಿಧ ದೇಶಗಳ ಸುಮಾರು 600ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next