Advertisement
ಕಳೆದ ವರ್ಷ ಇಡೀ ಮಂಗಳೂರೇ ದೋಣಿಯಂತೆ ನೀರಿನಲ್ಲಿ ಮುಳುಗುತ್ತಿತ್ತು. ಎಲ್ಲಿ ನೋಡಿದರೂ ನೀರು, ಟ್ರಾಫಿಕ್ ಜಾಮ್ ಹಾಗೂ ನೆತ್ತಿ ಮೇಲೆ ಎಡೆಬಿಡದೇ ಧೋ ಎಂದು ಸುರಿಯುವ ಬಿರುಸಾದ ಮಳೆ. ಎಲ್ಲದರ ಮಧ್ಯೆ ಜನರು ತತ್ತರಿಸಿ ಹೋಗಿದ್ದರು. ಈ ಬಾರಿ ಆ ಮಳೆಯೆಲ್ಲಾ ಜಿಲ್ಲೆಯ ಅಕ್ಕ ಪಕ್ಕ ಪ್ರದೇಶಗಳಲ್ಲಿ ಹಂಚಿಹೋಗಿರುವಾಗ ಮಂಗಳೂರಿಗೆ ತುಸು ನೆಮ್ಮದಿ. ಹಾಗೆಂದು ಎರಡೂ ತೀವ್ರಗಾಲದಲ್ಲೇ ಇದ್ದೇವೆ. ನಾಲ್ಕು ತಿಂಗಳ ಹಿಂದೆ ನೀರಿಲ್ಲ ಎಂದು ಗೋಳು ಹೊಯ್ದುಕೊಂಡಿದ್ದೆವು. ಈಗ ಮಳೆ.ಈ ಮಾತು ಕೇವಲ ಮಂಗಳೂರಿಗೆ ಅನ್ವಯಿಸುವುದಿಲ್ಲ ; ಮುಂಬಯಿಗೆ ಪ್ರತಿ ವರ್ಷವೂ ಅನ್ವಯಿಸುತ್ತಲೇ ಇದ್ದೇವೆ. ದಿಲ್ಲಿಯದ್ದೂ ಇದೇ ಕಥೆ. ಬೆಂಗಳೂರಿನದ್ದು ಕೇಳುವಂತಿಲ್ಲ. ಮುಂಬಯಿಯಷ್ಟು ಅಲ್ಲದಿದ್ದರೂ ಪರವಾಗಿಲ್ಲ ಎನ್ನುವಂತಿಲ್ಲ. ಯಾವಾಗಲಾದರೂ ಪ್ರವಾಹ ಪರಿಸ್ಥಿತಿ ತಲೆದೋರಬಹುದು.
ಈ ದಿಢೀರ್ ಪ್ರವಾಹ (ಫ್ಲ್ಯಾಶ್ ಫ್ಲಡ್ ) ಎಂಬುದೇ ನಮಗೆ ಅದರಲ್ಲೂ ನಗರದಲ್ಲಿ ವಾಸಿಸುವವರಿಗೆ ತೀರಾ ಪರಿಚಿತವಾಗಿರುವಂಥ ಪದವಾಗಬಹುದು. ಯಾಕೆಂದರೆ, ಈ ಪ್ರವಾಹ ಖಂಡಿತಾ ಆಮಂತ್ರಣ ಪತ್ರಿಕೆ ಕೊಟ್ಟು ಬರೋಲ್ಲ. ನಿರಂತರವಾಗಿ ನಾಲ್ಕು ಗಂಟೆ ಮಳೆ ಸುರಿದರೆ ಇಡೀ ನಗರ ಸ್ತಬ್ಧವಾಗುತ್ತದೆ. ಕಚೇರಿಯಿಂದ ಮನೆಗೆ ಹೊರಡುವ ಜನರೆಲ್ಲಾ ಕಚೇರಿಯಲ್ಲೇ ಉಳಿದುಕೊಳ್ಳುತ್ತಾರೆ, ಮನೆಯಿಂದ ಹೊರಗೆ ಬರುವವರು ಬಾಗಿಲು ತೆಗೆಯುವುದೇ ಇಲ್ಲ, ಶಾಲೆಯಿಂದ ಮನೆಗೆ ಹೊರಡುವ ಮಕ್ಕಳು ಅಪ್ಪ-ಅಮ್ಮನ ಬರುವಿಕೆಗೆ ಕಾಯುತ್ತಾರೆ. ಅಂಗಡಿ ಮುಂಗಟ್ಟುಗಳೆಲ್ಲಾ ಬಂದ್ ಆಗುತ್ತವೆ. ಒಂದೇ ಎರಡೇ..ಸಾವಿರಾರು ಸನ್ನಿವೇಶಗಳನ್ನು ಕಟ್ಟಿಕೊಡಬಹುದು. ಹತ್ತು ದಿನಗಳಿಂದ ನಿತ್ಯವೂ ಟಿವಿಯಲ್ಲಿ, ಪತ್ರಿಕೆಗಳಲ್ಲಿ ಪ್ರವಾಹದ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಅದಕ್ಕೇ ನಗರವಾಸಿಗಳಲ್ಲಿ ಹಲವರು “ಯಾಕಪ್ಪಾ ಈ ಮಳೆ ಬರುತ್ತದೆ?’ ಎನ್ನುವುದು.
Related Articles
ಈ ಪ್ರಶ್ನೆಯೂ ನಾವೇ ಕೇಳಿಕೊಳ್ಳುವಂಥದ್ದು. ಪ್ರಸ್ತುತ ನಮ್ಮ ನಗರಾಡಳಿತಗಳು (ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಇತ್ಯಾದಿ) ಯೋಚಿಸುತ್ತಿರುವ ದಿಕ್ಕು ಕಂಡರೆ ಇದು ಅನಿವಾರ್ಯವೇ. ಕಾರಣ ಕೇಳುವಂತಿಲ್ಲ. ಒಂದು ಊರು ಹೇಗಿರಬೇಕು ಎಂಬುದನ್ನು ನಮ್ಮ ಪೂರ್ವಜರು ಹೇಳಿದ್ದಾರೆ. ಆದರೆ ನಾವು ಅದನ್ನು ಪಾಲಿಸದೇ ನಗರಗಳನ್ನು ಸೃಷ್ಟಿಸಿಕೊಳ್ಳಲು ಆರಂಭಿಸಿ ಸಮಸ್ಯೆ ಸೃಷ್ಟಿಸಿಕೊಂಡಿರುವುದು ಸ್ಪಷ್ಟ. ಅದರ ಭಾಗವಾಗಿ ಸದ್ಯಕ್ಕೆ ಇದರಿಂದ ಮುಕ್ತಿಯಿಲ್ಲ.
Advertisement
ಮುಕ್ತಿ ಹೇಗೆ?ಮೊದಲು ಸಮಸ್ಯೆಯ ಮೂಲಕ್ಕೆ ಹೋಗಬೇಕು. ಇಪ್ಪತ್ತೈದು ವರ್ಷಗಳ ಹಿಂದೆ ಈ ಸುರಿದ ಮಳೆ ನೀರೆಲ್ಲಾ ಎಲ್ಲಿಗೆ ಹೋಗುತ್ತಿತ್ತು? ಒಂದಿಷ್ಟು ನೀರು ಹೋಗಿ ಕೆರೆ ಸೇರುತ್ತಿತ್ತು, ಮತ್ತೂಂದಿಷ್ಟು ಭೂಮಿಯಲ್ಲೇ ಇಂಗುತ್ತಿತ್ತು, ಇನ್ನೊಂದಿಷ್ಟು ಜೌಗು ಪ್ರದೇಶಗಳಲ್ಲಿ ನಿಂತು ಇಂಗುತ್ತಿತ್ತು, ಉಳಿದ ಒಂದಿಷ್ಟು ಸಮುದ್ರ ಸೇರುತ್ತಿತ್ತು. ಈಗ ಅದಕ್ಕೆಲ್ಲಾ ಏನಾಗಿದೆ ಎಂದುಕೊಂಡರೆ, ಕೆರೆಗಳನ್ನು ಮುಚ್ಚಿ ಬಿಲ್ಡಿಂಗ್‌ಗಳನ್ನು ಕಟ್ಟಿದ್ದೇವೆ, ಭೂಮಿಯಲ್ಲಿ ಇಂಗಲು ಒಂದಿಂಚು ಸ್ಥಳವನ್ನೂ ಬಿಟ್ಟಿಲ್ಲ, ಚರಂಡಿಗಳನ್ನು ಮುಚ್ಚಿ ಕುಳಿತುಕೊಂಡಿದ್ದೇವೆ, ಜೌಗು ಪ್ರದೇಶಗಳನ್ನೆಲ್ಲಾ ನುಂಗಿದ್ದೇವೆ. ಇಷ್ಟೇ ಅಲ್ಲ ; ನೀರು ಹರಿದು ಸಮುದ್ರಕ್ಕೆ ಹೋಗುವ ಮಾರ್ಗವನ್ನೂ ಮುಚ್ಚಿ ಬಿಟ್ಟಿದ್ದೇವೆ. ಅದರೆಲ್ಲದರ ಪರಿಣಾಮ ಆಕಾಶದಿಂದ ಬಿದ್ದ ಮಳೆ ನೀರು ಎಲ್ಲಿ ಹರಿದು ಹೋಗಲೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಲ್ಲಲ್ಲೇ ನಿಂತುಬಿಡುತ್ತಿದೆ. ಅದರ ಪರಿಣಾಮವೇ ದಿಢೀರ್ ಪ್ರವಾಹ. ಪರಿಹಾರವೇನು?
ಉತ್ತರವಿಲ್ಲದ ಪ್ರಶ್ನೆಗಳಿಲ್ಲ. ಹಾಗೆಯೇ ಇದಕ್ಕೂ ಉತ್ತರಗಳಿವೆ. ಆದರೆ ನಾವೇ ಹುಡುಕಿಕೊಳ್ಳಬೇಕು. ನಾವು ಪ್ರವಾಹದಿಂದ ನಲುಗದ ನಗರವನ್ನು ಕಟ್ಟಬೇಕು. ಜನರನ್ನೂ ಪ್ರವಾಹ ಪರಿಸ್ಥಿತಿ ಎದುರಿಸುವಂಥ ರೀತಿಯಲ್ಲಿ ತಯಾರು ಮಾಡಬೇಕು. ಇದಕ್ಕೆ ಆಡಳಿತ, ಜನಪ್ರತಿನಿಧಿಗಳೆಲ್ಲರೂ ಸಾಕಷ್ಟು ಸಮಯವನ್ನು ವಿನಿಯೋಗಿಸಬೇಕು. ಇವುಗಳ ಜತೆಗೆ ಒಂದಿಷ್ಟು ಸರಳ ಪರಿಹಾರಗಳನ್ನು ಆಡಳಿತ ನಡೆಸುವವರು ಕಲ್ಪಿಸಲು ಮುಂದಾದರೆ ಪ್ರವಾಹದ ಸ್ಥಿತಿಯನ್ನು ಎದುರಿಸಲು ಸಾಧ್ಯ. ಮಾನಸಿಕ ಧೈರ್ಯ ತುಂಬುವ ಕಾರ್ಯಕ್ರಮಗಳು
ಇಂಥ ಸ್ಥಿತಿಯಲ್ಲಿ ಜಿಲ್ಲಾಡಳಿತಗಳು ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಅಥವಾ ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸುತ್ತವೆ. ಊಟೋಪಚಾರವನ್ನೂ ಒದಗಿಸುತ್ತವೆ. ಆದರೆ, ಮನೋಧೈರ್ಯವನ್ನು ತುಂಬಲು ಗಮನ ಕೊಡುವುದು ಕಡಿಮೆ. ಜಿಲ್ಲಾಡಳಿತಗಳು ಮನೋಪರಿಣಿತರನ್ನು ಕರೆಸಿ, ಅವರಿಗೆ ಪ್ರವಾಹದಂಥ ಸ್ಥಿತಿ (ಎಲ್ಲವನ್ನೂ ಕಳೆದುಕೊಂಡ ಶೂನ್ಯಭಾವ ಆವರಿಸುವಂಥದ್ದು)ಯನ್ನು ಎದುರಿಸಲು ಸಲಹೆ ಕೊಡಿಸಬೇಕು. ಆಗ ಮತ್ತೆ ಬದುಕು ಕಟ್ಟಿಕೊಳ್ಳುವ ಹುಮ್ಮಸ್ಸು ಬರಬಹುದು. ಪ್ರವಾಹ ಪರಿಸ್ಥಿತಿ ಉದ್ಭವಿಸುವ ಮೊದಲೂ ನಾಗರಿಕರಿಗೆ ಮನೋಸಲಹೆ ನೀಡಿ ಧೈರ್ಯ ತುಂಬಿದರೆ, ಒಂದಿಷ್ಟು ಅನಾಹುತಗಳನ್ನು ತಡೆಯಲು ಸಾಧ್ಯವಿದೆ. ಒಂದು ಅನಿವಾರ್ಯಕ್ಕೆ ಒಗ್ಗಿಕೊಳ್ಳುವುದನ್ನು ಬಿಟ್ಟರೆ ಬೇರೆ ಯಾವ ಮಾರ್ಗವೂ ಇರುವುದಿಲ್ಲ. ಪರಿಸ್ಥಿತಿಯಿಂದ ಪಲಾನಯಗೈಯುವುದು ಸುಲಭವೆನಿಸಿದರೂ ಪರಿಹಾರವಲ್ಲ. ಅದಕ್ಕೆ ಜಿಲ್ಲಾಡಳಿತ, ಸ್ಥಳೀಯಾಡಳಿತ ಪ್ರವಾಹ ಪೀಡಿತ ನಗರಗಳ ನಿರ್ವಹಣೆಯನ್ನೇ ವಿಭಿನ್ನವಾಗಿ ಕೈಗೊಳ್ಳಬೇಕು. ಅದೇ ಮಂಗಳೂರಿನಿಂದ ಹಿಡಿದು ಎಲ್ಲ ನಗರಗಳಲ್ಲೂ ಆಗಬೇಕಾಗಿದೆ. ಆಡಳಿತ ಏನು ಮಾಡಬೇಕು?
ನಗರಕ್ಕೆ ಸರಿಯಾದ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಬೇಕು. ಈ ವ್ಯವಸ್ಥೆಯೂ ಮುಂದಿನ 25 ವರ್ಷಗಳ ಅಗತ್ಯವನ್ನು ಪೂರೈಸುವಂತಿರಬೇಕು. ಜೌಗು ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು. ಕೆರೆ-ಮದಕಗಳನ್ನು ಮುುಚ್ಚದೇ, ಅವುಗಳ ಸಂಗ್ರಹ ಸಾಮರ್ಥಯ ಹೆಚ್ಚಿಸಬೇಕು. ಅವುಗಳಿಗೆ ಹರಿದು ಹೋಗುವ ನೀರಿನ ಮಾರ್ಗವನ್ನು ಸರಿಯಾಗಿ ನಿರ್ವಹಿಸಿದರೆ, ಪ್ರವಾಹ ಪರಿಸ್ಥಿತಿಯನ್ನು ಒಂದಿಷ್ಟು ತಡೆಯಬಹುದು. ಇಷ್ಟಾದ ಮೇಲೂ ಒಂದಿಷ್ಟು ಅನಿರೀಕ್ಷಿತ ಪ್ರಮಾಣದಷ್ಟು ಮಳೆ ಬಂದೇ ಬರಬಹುದು. ಆದರೆ ಅದರ ತೀವ್ರತೆಯನ್ನು ನಮ್ಮ ಮುಂಜಾಗ್ರತ ಕ್ರಮಗಳಿಂದ ನಿರ್ವಹಿಸಬಹುದು. - ಅಸೀಮ, ಮಂಗಳೂರು