ದೇಶಿ ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣದಲ್ಲಿ ಸಂಶೋಧನೆಗೆ ಮತ್ತು ಅನ್ವೇಷಣೆಗೆ ಉತ್ತೇಜನ ನೀಡುವಲ್ಲಿ ಕೇಂದ್ರ ಸರ್ಕಾರ ಹೊಸ ಮೈಲುಗಲ್ಲು ಸಾಧಿಸಿದೆ. ಪ್ರಸಕ್ತ ಬಜೆಟ್‌ನಲ್ಲಿ ಶಿಕ್ಷಣಕ್ಕೆ 99,300 ಕೋಟಿ ಹಾಗೂ ಕೌಶಲ್ಯಾಭಿವೃದ್ಧಿಗೆ 3 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ಸಂಶೋಧನೆ ಹಾಗೂ ಅನ್ವೇಷಣೆಗೆ ಹೆಚ್ಚಿನ ಮಹತ್ವವನ್ನು ವಿಶ್ವವಿದ್ಯಾಲಯಗಳ ಮೂಲಕ ನೀಡಲು ಮುಂದಾಗಿದೆ.
ದೇಶದ ವಿಶ್ವವಿದ್ಯಾಲಯಗಳಲ್ಲಿನ ಗುಣಮಟ್ಟ ಸುಧಾರಣೆಗೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದು ಒಳ್ಳೆಯ ಬೆಳವಣಿಗೆ. ಗುಣಮಟ್ಟ ಸುಧಾರಣೆಯಿಂದ ಮಾತ್ರ ವಿಶ್ವದ ವಿವಿಧ ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಾರೆ. ಇಲ್ಲಿನ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ನೋಡಿಕೊಂಡು ವಿಶ್ವದ ವಿದ್ಯಾರ್ಥಿಗಳು ಭಾರತದತ್ತ ಬರುತ್ತಾರೆ.
ಆಗ ವಿಶ್ವಮಾನ್ಯತೆಯೂ ನಮ್ಮ ವಿಶ್ವವಿದ್ಯಾಲಯಗಳಿಗೆ ಸಿಗುತ್ತದೆ ಮತ್ತು ವಿಶ್ವದರ್ಜೆಯ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿದೇಶಿ ನೇರ ಬಂಡವಾಳ ಹೂಡಿಕೆಯು ನಿಜಕ್ಕೂ ಶಿಕ್ಷಣ ಕ್ಷೇತ್ರದ ಸ್ವಾಗತಾರ್ಹ ನಿಲುವಾಗಿದೆ. ಆನ್‌ಲೈನ್ ಕೋರ್ಸ್‌ಗಳನ್ನು ಎಲ್ಲ ವಿಷಯದಲ್ಲಿ ನೀಡಲು ಸಾಧ್ಯವಿಲ್ಲ. ಆದರೆ, ಕೆಲವೊಂದು ವಿಷಯದಲ್ಲಿ ಸಮರ್ಪಕವಾಗಿ ನೀಡಲು ಸಾಧ್ಯವಿದೆ.
ಎಂಜಿನಿಯರಿಂಗ್ ಅಥವಾ ವಿಜ್ಞಾನದ ಕೆಲವು ಕೋರ್ಸ್‌ಗಳಿಗೆ ಪ್ರಯೋಗಾಲಯದ ಮಹತ್ವ ಬಹಳ ಇದೆ. ಹೀಗಾಗಿ ಆನ್‌ಲೈನ್‌ನಲ್ಲಿ ನೀಡಬಹುದಾದ ಕೋರ್ಸ್‌ಗಳ ಬಗ್ಗೆ ಚಿಂತನೆ ನಡೆದಿರುವುದು ಸೂಕ್ತ ನಿರ್ಧಾರವಾಗಿದೆ. ಹೊಸ ಎಂಜಿನಿಯರಿಂಗ್ ಪದವೀಧರರಿಗೆ ಇಂಟರ್ನ್ಶಿಪ್ ಕಾರ್ಯಕ್ರಮ ಈ ಹಿಂದೆಯೂ ಇತ್ತು. ಆದರೆ, ಅಷ್ಟೊಂದು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಈಗ ಅದಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿರುವ ಬಜೆಟ್ ಇದಾಗಿದೆ.
* ಪ್ರೊ.ಎನ್.ಆರ್.ಶೆಟ್ಟಿ , ಶಿಕ್ಷಣ ತಜ್ಞರು