Advertisement

ರೂಪರೂಪಗಳನು ದಾಟಿದ ಹೊಸ ರೂಪಕ

09:25 AM Apr 23, 2019 | mahesh |

ದೀಪಿಕಾ ಪಡುಕೋಣೆ ಎಂದ ಕೂಡಲೇ ರೂಪವತಿಯೊಬ್ಬಳ ಬಿಂಬ ಕಣ್ಣೆದುರು ಕಟ್ಟುತ್ತದೆ. ಆಕೆಯಲ್ಲಿ ಅಭಿನಯ ಪ್ರತಿಭೆ ಇಲ್ಲವೆಂದಲ್ಲ, ಆದರೆ, ರೂಪ ಮುಖ್ಯ ಬಂಡವಾಳ. ಆ ಬಂಡವಾಳವನ್ನು ಬದಿಗಿರಿಸಿ ಕಾಣಿಸಿಕೊಳ್ಳುವುದೇನು, ಸಣ್ಣ ಸಂಗತಿಯೆ? ಚಪಾಕ್‌ ಸಿನೆಮಾಕ್ಕಾಗಿ ದೀಪಿಕಾ ಹೊಸಮುಖದೊಂದಿಗೆ ಸಿದ್ಧವಾಗಿದ್ದಾರೆ. ರೂಢಿಯ ಮಾತಿನಲ್ಲಿ ಹೇಳುವುದಿದ್ದರೆ ಅದು ಕುರೂಪದ ಮುಖ! ಆ್ಯಸಿಡ್‌ ಸಂತ್ರಸ್ತೆಯಾದ ಲಕ್ಷ್ಮೀ ಅಗರವಾಲ್‌ ಎಂಬವರ ಜೀವನಕಥಾಧಾರಿತ ಸಿನೆಮಾ ಚಪಾಕ್‌. ಕೇವಲ ಮನೋರಂಜನೆಗಾಗಿ ಸೀಮಿತಗೊಂಡಿರುವ ಸಿನೆಮಾಲೋಕ ಆಗೊಮ್ಮೆ ಈಗೊಮ್ಮೆ ಸಮಾಜಪರವಾದ, ಮಾನವೀಯ ಕಳಕಳಿಯ ಕಥಾವಸ್ತುವನ್ನು ಎತ್ತಿಕೊಂಡು ತೆರೆಗೆ ತರುತ್ತದೆ. ಈ ವಿಚಾರದಲ್ಲಿ ಬಾಲಿವುಡ್‌ ಯಾವತ್ತೂ ಮುಂದು. ಈಗ ದೀಪಿಕಾ ಪಡುಕೋಣೆ ಆ್ಯಸಿಡ್‌ ಸಂತ್ರಸ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವ್ಯಾವಹಾರಿಕವಾಗಿ ಮಾತ್ರವಲ್ಲ, ತಾತ್ತ್ವಿಕವಾಗಿಯೂ ದೃಢವಾದ ಹೆಜ್ಜೆಯೇ. ಹೆಣ್ಣನ್ನು ಸೌಂದರ್ಯದ ಬೊಂಬೆಯನ್ನಾಗಿ ನೋಡುವ ಸಮಾಜದ ಮುಂದೆ ಹೀಗೆ ಕಾಣಿಸಿಕೊಳ್ಳಬೇಕಾದರೆ ಧೈರ್ಯ ಬೇಕು. ಈ ಮೂಲಕ ದೀಪಿಕಾರ ಅಂತರಂಗದ ಸೌಂದರ್ಯ ಅನಾವರಣಗೊಂಡಂತಾಗಿದೆ. ಅಂದ ಹಾಗೆ, ದೀಪಿಕಾ ಹೆಸರಿನಲ್ಲಿರುವ ಪಡುಕೋಣೆ ಉಡುಪಿ ಜಿಲ್ಲೆಯ ಕುಂದಾಪುರ ಬಳಿಯ ಒಂದು ಊರು !

Advertisement

ಇತ್ತೀಚೆಗೆ ತೀರಿಕೊಂಡ ಎಲ್‌. ವಿ. ಶಾರದಾ ಫ‌ಣಿಯಮ್ಮ ಚಿತ್ರಕ್ಕಾಗಿ ತಲೆ ಬೋಳಿಸಿಕೊಂಡ ಪ್ರಸಂಗವು ಕಲೆಯನ್ನು ಕುರಿತ ಬದ್ಧತೆ ಮತ್ತು ಅನುರಕ್ತಿಯನ್ನು ಕುರಿತ ರೂಪಕದಂತೆಯೇ ಕಾಣಿಸುತ್ತದೆ. ಗಾಂಧಿ ಪಾತ್ರ ಮಾಡಿದ ಬೆನ್‌ ಕಿಂಗ್‌ ಸ್ಲೇ ಒಂದೋ ಎರಡೋ ಹಲ್ಲುಗಳನ್ನೇ ಕೀಳಿಸಿದ್ದೂ, ಆ ಪಾತ್ರವನ್ನು ಒಪ್ಪಿಕೊಂಡ ಮೇಲೆ, ಅದು ಮುಗಿಯುವವರೆಗೂ ಸಸ್ಯಾಹಾರಿಯಾಗಿ ಗಾಂಧಿಯನ್ನು ಆವಾಹಿಸಿಕೊಳ್ಳುವ ಪ್ರಯತ್ನ ನಡೆಸಿದ್ದೂ ಕೂಡ ಪಾತ್ರದ ಪರಿಪೂರ್ಣತೆಯ ಹಂಬಲದಲ್ಲಿಯೇ.

ಇತ್ತೀಚೆಗೆ ದೀಪಿಕಾ ಪಡುಕೋಣೆ ಆ್ಯಸಿಡ್‌ ಸಂತ್ರಸ್ತೆಯ ಪಾತ್ರವ‌ನ್ನು ಒಪ್ಪಿಕೊಂಡಿದ್ದಾರೆ. (ಯಾಕೋ ಕಾಣೆ- ವಾಸಂತಿ ಪಡುಕೋಣೆಯವರ ನನ್ನ ಮಗ ಗುರುದತ್ತ ಕೃತಿ ನೆನಪಾಗುತ್ತಿದೆ. ಕನ್ನಡದ ವಿಶಿಷ್ಟ , ಪುಟ್ಟ ಕೃತಿ ಇದು. ತಾಯ್ತನದ ಅದಮ್ಯ ವಾತ್ಸಲ್ಯದಲ್ಲಿಯೂ ಸ್ಪಷ್ಟವಾದ ಆಧುನಿಕ ದೃಷ್ಟಿಕೋನವನ್ನು , ದುರಂತಗಳ ಎದುರಿಗೂ ಕುಗ್ಗದ ಹೆಣ್ಣಿನ ಅನೂಹ್ಯವಾದ ಧಾರಣ ಶಕ್ತಿಯನ್ನು ಎತ್ತಿಹಿಡಿಯುವ ಇದು ನನ್ನ ಪ್ರೀತಿಯ ಪುಸ್ತಕಗಳಲ್ಲೊಂದು). ಬಯೋಪಿಕ್‌ ಎನ್ನಬಹುದಾದ ಈ ಸಿನೆಮಾದ ಈ ಪಾತ್ರವನ್ನು ದೀಪಿಕಾ ಮಾಡುತ್ತಿರುವುದು ಅನೇಕ ಕಾರಣಗಳಿಗಾಗಿ ಮುಖ್ಯ ಮತ್ತು ಕುತೂಹಲಕಾರಿ. ಕನಿಷ್ಠವೆಂದರೂ ಇನ್ನೂ 8-10 ವರ್ಷ ನಾಯಕಿಯಾಗಿ ಮೆರೆಯಬಹುದಾದ ಖಾತ್ರಿಯಿರುವ ದೀಪಿಕಾ ಇಂಥ ಪಾತ್ರವನ್ನು ಯಾಕೆ ಆರಿಸಿಕೊಂಡಿರಬಹುದು? ಇದರ ಪರಿಣಾಮಗಳೇನಾಗಬಹುದು? ಸಾಮಾನ್ಯವಾಗಿ ಮಾರುಕಟ್ಟೆ ಬೆಲೆ ಇಳಿದ ಮೇಲೆ ನಟಿಯರು ಹಲವು ಪ್ರಯೋಗಗಳಿಗೆ ಮುಂದಾಗುತ್ತಾರೆ. ಆದರೆ, ತನ್ನ ವೃತ್ತಿಜೀವನದ ಉತ್ತುಂಗದಲ್ಲಿರುವ ದೀಪಿಕಾ, ಈ ತನಕ ಆಕೆ ಪ್ರತಿನಿಧಿಸುತ್ತಿದ್ದ ಸೌಂದರ್ಯದ ಖನಿ ಪ್ರತಿಮೆಗೆ ವಿರುದ್ಧವಾದ ವಿಕಾರರೂಪಿ ಪಾತ್ರವನ್ನು ನಿಭಾಯಿಸುತ್ತಿರುವುದು ಬಹುಶಃ ಸ್ವತಃ ಆಕೆಯೂ ಊಹಿಸಿರಲಾರದ ಅರ್ಥ ಮತ್ತು ಧ್ವನಿಗಳನ್ನು ಹೊಂದಿದೆ ಎನ್ನಿಸುತ್ತದೆ. ಈ ಕಾರಣಕ್ಕಾಗಿಯೇ ನನಗೆ ಇದೊಂದು ಮುಖ್ಯವಾದ ತಿರುವು-ಹೆಜ್ಜೆ ಅನ್ನಿಸುತ್ತದೆ. ನಾಯಕಿಯರು ಎಂದರೆ ಕಟೆದ ಮೈಮಾಟ ಮಾತ್ರವಲ್ಲ, ನೋಡುವ ಕಣYಳ ಸಿರಿಯಂತಹ ಮುಖವೂ ಹೌದು. ಸುಕ್ಕಿರದ, ಕಲೆಯಿರದ, ನಗು ಮಾಸದ, ಹಾಲು ಬಿಳುಪಿನ… ಒಂದೇ ಎರಡೇ ನಿರೀಕ್ಷೆಗಳು, ಕರಾರುಗಳು. ಈ ಎಲ್ಲವನ್ನೂ ಪಡೆಯುವುದರ ಜೊತೆಗೇ ಅಪಾರ ಪ್ರತಿಭೆಯೂ ಇರುವ ದೀಪಿಕಾರ ಈ ನಿರ್ಧಾರವನ್ನು, ಆಯ್ಕೆಯನ್ನು ಸ್ವಲ್ಪ ವಿವರವಾಗಿ ನೋಡೋಣ.

ದೀಪಿಕಾರ ಈ ಆಯ್ಕೆ ಆಕೆಯ ವೃತ್ತಿಪರ ಜಾಣ್ಮೆಯಾಗಿರಬಹುದು. ಭಾರತವೂ ಸೇರಿದಂತೆ ಜಾಗತಿಕವಾಗಿ ತನ್ನ ವೃತ್ತಿ ಭವಿಷ್ಯವನ್ನು ವಿಸ್ತರಿಸಿಕೊಳ್ಳಬಹುದಾದ ಅಪೂರ್ವ ಅವಕಾಶ ಸೃಷ್ಟಿಯ ಕೌಶಲವಾಗಿರಬಹುದು. ಕಲಾವಿದೆಯಾಗಿ ಇತರರು ಆರಿಸಿಕೊಳ್ಳುವುದು ಬಹುತೇಕ ಅಸಾಧ್ಯ ಎನ್ನುವ ಪಾತ್ರವನ್ನು ಆರಿಸಿಕೊಳ್ಳುವ ಸವಾಲನ್ನು ಎದುರಿಸಬಲ್ಲ ಛಾತಿ ಆಕೆಗಿರಬಹುದು. ಆಕೆಯಲ್ಲಿ ಅಪ್ಪಟ ಕಲಾವಿದೆಯ ಒತ್ತಡವಿರಬಹುದು. ಈ ಎಲ್ಲದರ ಆಚೆಗೆ ಇನ್ನೇನಾದರೂ ಕಾರಣವಿರಬಹುದೆ? ಅನುಕಂಪದ ಆಯಾಮವೊಂದು ಇಲ್ಲಿ ಇದ್ದೀತು.

ಸೌಂದರ್ಯಮೀಮಾಂಸೆಯ ಪ್ರಶ್ನೆ
ಇರಲಿ. ಆದರೆ, ಈ ಎಲ್ಲ ಸಹಜ ಕಾರಣಗಳ ಜೊತೆಗೇ ಇನ್ನೂ ಕೆಲವು ಅಂಶಗಳಿವೆ. ಮೊದಲನೆಯದು, ಆಕೆಯ ಈ ಆಯ್ಕೆಯು, ಸ್ತ್ರೀಸೌಂದರ್ಯದ ಮೀಮಾಂಸೆಯನ್ನು ಪ್ರಶ್ನಿಸುತ್ತಿದೆ! ನಾಯಕಿಯರು ಯಾವ ಹೆಣ್ಣಿನ ಸೌಂದರ್ಯದ ಪ್ರತಿನಿಧಿಗಳು ಎಂದು ಭಾವಿಸಲಾಗುತ್ತದೆಯೋ ಅದನ್ನೇ ಇದು ಗೇಲಿ, ವ್ಯಂಗ್ಯ ಮತ್ತು ವಿಷಾದದಲ್ಲಿ ನಿರಾಕರಿಸುತ್ತಿದೆ. ಹಾಗೆ ನೋಡಿದರೆ, ಹೆಣ್ಣಿನ ಮುಖಕ್ಕೆ ಆ್ಯಸಿಡ್‌ ಹಾಕುವುದು ಅವಳ ಸೌಂದರ್ಯವನ್ನು ಹಾಳುಗೆಡಹುತ್ತದೆ ಎಂಬುದು ನಿಜವೇ. ಆದರೆ, ಯಾವುದನ್ನು ಆಕೆಯ ವ್ಯಕ್ತಿತ್ವದ ಸರ್ವಸ್ವ ಎಂದು ತಿಳಿಯಲಾಗಿದೆಯೋ, ಹೇರಲಾಗಿದೆಯೋ ಅದನ್ನು ನಾಶಮಾಡುವ ಮೂಲಕ ಅವಳ ಬದುಕಿನ ಸಾಧ್ಯತೆಗಳನ್ನು, ಅವಳ ಆತ್ಮವಿಶ್ವಾಸ ಮತ್ತು ಘನತೆಯನ್ನು ಕೆಡಹುವ ಕ್ರೌರ್ಯದ ವಿಕೃತಿ. ನಾವು ಇವತ್ತು ನೋಡುತ್ತಿರುವ ದೀಪಿಕಾ ಪಡುಕೋಣೆ ಎಂಬವಳು ಪಿತೃಸಂಸ್ಕೃತಿ (ಪ್ಯಾಟ್ರಿಯಾರ್ಕಿಯಲ್‌) ಯು ಆರಾಧಿಸುವ ಚೆಲುವಿನ ಮೊತ್ತವೇ ಆದ ಹೆಣ್ಣು , ಅದೇ ಸಂಸ್ಕೃತಿ ನಾಶಮಾಡಿ ವಿಕಾರಗೊಳಿಸಿರುವ ಪಾತ್ರವನ್ನು ಮಾಡುವುದು ಆ ಮೀಮಾಂಸೆಯನ್ನೇ ಒಡೆಯುವ ದಿಟ್ಟ ಪ್ರಯತ್ನವಾಗಿ ನನಗೆ ಕಾಣಿಸುತ್ತದೆ. ಬೌದ್ಧಿಕವಾಗಿ ಆಕೆ ಇಷ್ಟೆಲ್ಲ ಆಲೋಚನೆ ಮಾಡಿದ್ದಾರೆಯೊ? ನನಗೆ ಗೊತ್ತಿಲ್ಲ. ಆದರೆ, ಖಂಡಿತಕ್ಕೂ ಈ ನಮ್ಮ ಕಾಲದಲ್ಲಿ ಅದಕ್ಕೆ ಅಪಾರ ಮಹತ್ವವಿದೆ. ನನಗಂತೂ ಇದೊಂದು ಪ್ರತಿರೋಧದ ಮಾದರಿಯಾಗಿಯೇ ಕಾಣಿಸುತ್ತದೆ. ಆಕೆಯ ಈ ಪ್ರಯತ್ನವನ್ನು ನಾವು ಈ ದೃಷ್ಟಿಯಿಂದ ಚರ್ಚಿಸುವ ವೇದಿಕೆಗಳು ಸೃಷ್ಟಿಯಾಗಬೇಕು. ಅವಳ ಪಾತ್ರವನ್ನು ಕೇವಲ ಒಂದು ಪಾತ್ರವಾಗಿ ನೋಡದೆ, ಆಕೆಯ ಅಭಿನಯ, ಪ್ರತಿಭೆ ಮತ್ತು ಆಯ್ಕೆಯ ಹೆಗ್ಗ‌ಳಿಕೆ ಮಾತ್ರವಾಗದೇ ಅದಕ್ಕೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಕೊಡಬೇಕಾದ ಆವರಣವನ್ನು ಕಟ್ಟಬೇಕು. ಸಿನೆಮಾವೂ ಸೇರಿದಂತೆ ಜನಪ್ರಿಯ ಮಾಧ್ಯಮಗಳು ಹೆಣ್ಣನ್ನು ಮಧುಭಾಂಡವಾಗಿ ಬಳಸಿ ಬಿಸಾಕುವ ಸೂತ್ರ, ಸಮೀಕರಣಗಳನ್ನು ಬದಲಿಸುವಲ್ಲಿ ಒಂದು ಹೆಜ್ಜೆ ಮುಂದೆ ಎನ್ನುವಂತೆ ಇದನ್ನು ನೋಡಬೇಕು. ಹೆಣ್ಣಿನ ಸೌಂದರ್ಯವನ್ನು ದೇಹದಾಚೆಗೆ ಒಯ್ಯುವ ಪ್ರಯಾಣವಾಗಿ ಇದು ವಿಸ್ತಾರಗೊಳ್ಳಬೇಕು. ಚೆಲುವು ಎನ್ನುವುದು ವ್ಯಕ್ತಿತ್ವದ್ದೇ ಹೊರತು ಕೇವಲ ದೇಹದ್ದಲ್ಲ ಎನ್ನುವ ಅರಿವಿಗೆ ಇದು ನಾಂದಿಯಾಗುವಂತೆಯೇ ದೇಹವನ್ನು ವಿಕಾರಗೊಳಿಸಿ ಅವಳ ಕತೆಯೇ ಮುಗಿಯಿತು ಎನ್ನುವ ರಾಕ್ಷಸತ್ವಕ್ಕೆ ಇದು ಔಷಧಿಯೂ ಆಗಬೇಕು.

Advertisement

ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, sisterhood is powerfull ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿಯೂ ದೀಪಿಕಾರ ಈ ತೀರ್ಮಾನ ಸ್ವಾಗತಾರ್ಹ ಎನ್ನುವುದು. ಕಲಾವಿದೆಯಾಗಿ ದೀಪಿಕಾ ತನ್ನ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ ಅನ್ನಿಸುತ್ತದೆ. ಹೆಣ್ಣನ್ನು ನಿರಂತರವಾಗಿ, ಎಲ್ಲ ಬಗೆಯಲ್ಲೂ ಹಿಂಸಿಸುವ ಪಾಶವೀ ಪ್ರವೃತ್ತಿಗೆ ನಿಯಂತ್ರಣ ಬರುವುದು ನಮ್ಮ ಸಂಘಟಿತ ಹೋರಾಟದಿಂದ ಮಾತ್ರ. ಎಲ್ಲ ವರ್ಗಗಳ, ಎಲ್ಲ ಕ್ಷೇತ್ರಗಳ ಹೆಣ್ಣು ಮಕ್ಕಳು ಒಗ್ಗೂಡುವುದು ಅಗತ್ಯ ಮತ್ತು ಅನಿವಾರ್ಯ. ಇದರ ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕ ಅರಿವಿನಲ್ಲಿ ದೀಪಿಕಾ ತೆಗೆದುಕೊಂಡಿರಬಹುದಾದ ಈ ತೀರ್ಮಾನವನ್ನು ಬೆಂಬಲಿಸುವ ಮೂಲಕ, ಹೆಚ್ಚು ಸಾರ್ವಜನಿಕಗೊಳಿಸುವ ಮೂಲಕ ನಾವು ಇದನ್ನು ಮಹಿಳಾ ಹೋರಾಟದ ಒಂದು ಭಾಗವಾಗಿಸಿಕೊಳ್ಳಬೇಕು. ಇದು ಆಕೆಗೆ ಇನ್ನೂ ಮುಂದುವರಿಯಲು ಸ್ಫೂರ್ತಿಯಾಗುವುದು ಮಾತ್ರವಲ್ಲ, ಇತರ ಕಲಾವಿದೆಯರಿಗೂ ಕಣ್ತೆರೆಸುವ ದಿಕ್ಸೂಚಿಯಾಗಬಹುದು.

ನಾಯಕಿಯರ ಪಾತ್ರಗಳ ಆಯ್ಕೆಗೆ ಅವಳ ದೇಹ ಸೌಂದರ್ಯದ ಮೂಲಕ ಹಾಕಲಾಗಿದ್ದ ಬೇಲಿಯನ್ನು ಕಿತ್ತು ಹಾಕುವ ಬಲವಾದ ಘಟನೆಯಾಗಿಯೂ ಇದನ್ನು ನೋಡಲು ಸಾಧ್ಯ.
If I learn to express my experience as a woman in its physicality, in its totality and most importantly without self sensorship I will be speaking a new language…
-Addrin Rich

“ಫಿಲ್ಮ್ಫೇರ್‌’ ಕೊಡಮಾಡುವ “ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ಎರಡು ಬಾರಿ ಮುಡಿಗೇರಿಸಿದ ಹೆಗ್ಗಳಿಕೆ ಈಕೆಯದು. ಇಷ್ಟು ಮಾತ್ರವಲ್ಲ, ಈಕೆ 2017ರಲ್ಲಿ xxx: Return of Xander Cage ಎಂಬ ಇಂಗ್ಲಿಷ್‌ ಚಲನಚಿತ್ರದಲ್ಲಿ ನಟಿಸುವ ಮೂಲಕ ಹಾಲಿವುಡ್‌ನ‌ಲ್ಲಿಯೂ ಪ್ರವೇಶ ಗಿಟ್ಟಿಸಿಕೊಂಡ ಗಟ್ಟಿಗಿತ್ತಿ.

ಆದಾಗ್ಯೂ ಚಪಾಕ್‌ನ ಮಾಲತಿಯ ಪಾತ್ರವು ಸಂಕೀರ್ಣ ಸ್ವರೂಪದಾಗಿದ್ದು, ತುಂಬ ಪಂಥಾಹ್ವಾನದಿಂದ ಕೂಡಿರುವಂಥದ್ದಾಗಿದೆ. ಮೊತ್ತಮೊದಲಾಗಿ ಆ್ಯಸಿಡ್‌ ದಾಳಿಯ ಸಂತ್ರಸ್ತೆಯಾಗಿ ವಿರೂಪಗೊಂಡ, ಅಸಹ್ಯಕರವೆನಿಸುವಂತಹ ಮುಖದೊಂದಿಗೆ ರಜತ ಪರದೆಯ ಮೇಲೆ ಕಾಣಿಸಿಕೊಳ್ಳಲು ಸಿದ್ಧಳಾಗಬೇಕು. ಇದರಿಂದ ತನ್ನ ಅಭಿಮಾನಿಗಳಲ್ಲಿ ಉಂಟಾಗಬಹುದಾದ ಯಾವುದೇ ಭಾವನೆಗಳನ್ನು ಎದುರಿಸುವ ಛಾತಿ ಬೇಕು. ಮತ್ತು ಅದಕ್ಕಿಂತಲೂ ಮುಖ್ಯವಾಗಿ ಈ ಪಾತ್ರ ಭಾವನಾತ್ಮಕವಾಗಿ ಬಹಳಷ್ಟನ್ನು ಬೇಡುವ ಪಾತ್ರ. ಅಷ್ಟನ್ನೂ ಕೊಡುವ ತಾಕತ್ತು ಇರಬೇಕು. ಅಂತಹ ಪಾತ್ರವೊಂದರ ಆಸೆ-ಆಕಾಂಕ್ಷೆ , ತುಮುಲ-ತೊಳಲಾಟ, ಕಷ್ಟ-ಕ್ಷೋಭೆಗಳನ್ನು ತನ್ನದಾಗಿಸಿಕೊಳ್ಳುವ ಆತ್ಮಸ್ಥೈರ್ಯ ಇರಬೇಕು. ಈ ನಿಟ್ಟಿನಲ್ಲಿ ನೋಡಿದಾಗ, ಗ್ಲಾಮರ್‌ ರಾಣಿಯಾಗಿ ವಿರಾಜಿಸುತ್ತಿರುವ ದೀಪಿಕಾ ಪಡುಕೋಣೆ, ಇತ್ತೀಚೆಗಷ್ಟೆ ಪ್ರೀತಿಸಿದವನನ್ನು ವರಿಸಿ ಇನ್ನೂ ಹನಿಮೂನ್‌ನ ಸಂಭ್ರಮದಲ್ಲಿ ಓಲಾಡುತ್ತಿರುವ ದೀಪಿಕಾ ಪಡುಕೋಣೆ, ಈ ಪಾತ್ರಕ್ಕೆ ಎಷ್ಟರಮಟ್ಟಿಗೆ ನ್ಯಾಯ ಒದಗಿಸಿಯಾಳು? ಎನ್ನುವ ಅನುಮಾನ ಮೂಡುವುದು ಸಹಜವೇ. ಆದರೆ ದೀಪಿಕಾ ಪಡುಕೋಣೆಯೇ ಈ ಪಾತ್ರಕ್ಕೆ ಹೇಳಿಮಾಡಿಸಿದಂತಹ ನಟಿ ಎಂದರೆ ನಿಮಗೆ ಆಶ್ಚರ್ಯವಾಗಬಹುದೇನೊ.

ಕಾರಣ…
ದೀಪಿಕಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಒಮ್ಮೆ ಖನ್ನತೆಗೆ ಒಳಗಾಗಿದ್ದಳು. ಅದರ ಬಗ್ಗೆ ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಳು ಕೂಡ. ತದನಂತರ ಆಕೆ ನಮ್ಮ ದೇಶದ ಮಾನಸಿಕ ಅಸ್ವಸ್ಥರ ದಯನೀಯ ಸ್ಥಿತಿಯ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದಳು. ಇದರಿಂದಾಗಿ ನಮ್ಮ ಸಮಾಜದಲ್ಲಿ ಮಾನಸಿಕ ಅಸ್ವಾಸ್ಥ್ಯದ ಬಗ್ಗೆ ಸರಿಯಾದ ತಿಳುವಳಿಕೆಯ ಅಭಾವ ಅಥವಾ ತಪ್ಪುಗ್ರಹಿಕೆ, ಅಂತಹ ಅಸ್ವಾಸ್ಥ್ಯವನ್ನು ಗುರುತಿಸುವಲ್ಲಿಯ ಅಸಫ‌ಲತೆ, ಅದರ ಬಗೆಗಿರುವ ಅಸಡ್ಡೆ ಇತ್ಯಾದಿಗಳನ್ನು ಆಕೆ ಮನಗಂಡಳು. ಫ‌ಲಸ್ವರೂಪ ಒತ್ತಡ, ಆತಂಕ ಮತ್ತು ಖನ್ನತೆ ಕೇಂದ್ರಿತ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಜನಮಾನಸದಲ್ಲಿ ಅರಿವನ್ನುಂಟುಮಾಡಲು ಮತ್ತು ಮಾನಸಿಕ ಸ್ವಾಸ್ಥ್ಯದೊಂದಿಗೆ ಅಕಾರಣವಾಗಿ ಸಾಮಾಜಿಕ ವಲಯದಲ್ಲಿ ತಳಕು ಹಾಕಿಕೊಂಡಿರುವ ಕಳಂಕ ಮತ್ತು ತಾರತಮ್ಯ ಭಾವವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತಾನೇ ಸ್ವತಃ Live Love Laugh Foundation ಎನ್ನುವ ಸರಕಾರಿಯಲ್ಲದ ಒಂದು ಲಾಭರಹಿತ ಸಂಸ್ಥೆಯನ್ನು (NಎO) 2015ರಲ್ಲಿ ಹುಟ್ಟುಹಾಕಿದಳು.

ಈ ಹಿನ್ನೆಲೆಯಲ್ಲಿ ಚಪಾಕ್‌ ನ ಕಥಾವಸ್ತು ದೀಪಿಕಾಳ ಹೃದಯಕ್ಕೆ ಸಮೀಪವಾಗಿರುವಂಥದ್ದಾಗಿದ್ದು, ಮಾಲತಿಯ ಪಾತ್ರದಲ್ಲಿ ತಾದಾತ್ಮ ಹೊಂದಲು ಸುಲಭಸಾಧ್ಯವಾಗಿದೆ. ಜೊತೆಗೆ ದೀಪಿಕಾ ಈ ಚಿತ್ರದ ನಾಯಕಿ ಮಾತ್ರವಾಗಿರದೆ, ಮೇಘನಾ ಗುಲ್ಜಾರ್‌ಳೊಂದಿಗೆ ಸಹನಿರ್ಮಾಪಕಿಯೂ ಆಗಿದ್ದಾಳೆ. ಈ ಕಾರಣದಿಂದಲೂ ಈ ಚಿತ್ರ ಆಕೆಗೆ ಆಪ್ತವಾಗಿದೆ. ಇದರಲ್ಲಿ ಆಕೆಯ ಒಳಗೊಳ್ಳುವಿಕೆ ಓರ್ವ ನಟಿಯ ಪರಿಧಿಯನ್ನು ಮೀರಿದುದಾಗಿದೆ.

ಅಂತೆಯೇ ತನ್ನ ಸಂವೇದನಾಶೀಲ, ಸಹಾನುಭೂತಿಪರ ಗುಣದಿಂದ ಪ್ರೇರಿತ ವೃತ್ತಿಪರತೆಯೊಂದಿಗೆ ಆ್ಯಸಿಡ್‌ ದಾಳಿ ಸಂತ್ರಸ್ತೆಯೋರ್ವಳ ಎಲ್ಲ ಮಾನಸಿಕ ತಲ್ಲಣಗಳನ್ನು ತನ್ನದಾಗಿಸಿಕೊಂಡು ಚಪಾಕ್‌ನ ಮಾಲತಿಯ ಪಾತ್ರವನ್ನು ದೀಪಿಕಾ ಪಡುಕೋಣೆ ಅಭಿನಯಿಸಿದ್ದಾಳೆ, ಅಲ್ಲಲ್ಲ ಬದುಕಿದ್ದಾಳೆ ಎನ್ನಬಹುದು.

ಈ ಕಾರಣದಿಂದಲೇ ಚಪಾಕ್‌ನ ಚಿತ್ರೀಕರಣ ಮುಗಿದ ಮೇಲೆಯೂ ಪಾತ್ರದ ಪರಿಪೂರ್ಣ ನಿರ್ವಹಣೆಗಾಗಿ ತನ್ನ ಮೇಲೆ ಆವಾಹಿಸಿಕೊಂಡ ಪ್ರಯಾಸಕರ ಭಾವನೆಗಳ ಒತ್ತಡವನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳುವತ್ತ ಕಾರ್ಯೋನ್ಮುಖಳಾಗಿದ್ದಾಳೆ. ಸದ್ಯ ಚೇತೋಹಾರಿಯಾಗಿ ಮನಸ್ಸನ್ನು ಮುದಗೊಳಿಸುವ The Marvelous Mrs. Maisel ನಂತಹ ಚಿತ್ರಗಳನ್ನು ದೀಪಿಕಾ ಪಡುಕೋಣೆ ವೀಕ್ಷಿಸುತ್ತಿದ್ದಾಳಂತೆ.

ತಮ್ಮ ಯಾವುದೇ ತಪ್ಪಿಲ್ಲದೆ ವಿಕೃತ ಮನಸ್ಸಿನ ಪುರುಷರ ಆ್ಯಸಿಡ್‌ ದಾಳಿಗೆ ತುತ್ತಾಗುವ ನಿಷ್ಪಾಪ ಸಂತ್ರಸ್ತೆಯರ ಕರುಣಾಜನಕ ಸ್ಥಿತಿಯ ಬಗ್ಗೆ ಸಮಾಜದಲ್ಲಿ ಅಪೇಕ್ಷಣೀಯ ಜಾಗೃತಿಯನ್ನುಂಟುಮಾಡಿ, ಅವರು ಆತ್ಮಗೌರವ ಹಾಗೂ ಘನತೆಯೊಂದಿಗೆ ಬದುಕಲು ಹೆಚ್ಚಿನ ಅನುಕೂಲಗಳನ್ನು ಕಲ್ಪಿಸುವಲ್ಲಿ ಈ ಚಲನಚಿತ್ರವು ತನ್ನ ಶೀರ್ಷಿಕೆಗೆ ಅನ್ವರ್ಥವಾಗಿ ಚಪಾಕ್‌ ಎಂದು ಸದ್ದು ಮಾಡಲಿ.

ನಟಿ ಶ್ರೀದೇವಿ ತನ್ನ ದೇಹಸೌಂದರ್ಯವನ್ನು ಉಳಿಸಿಕೊಳ್ಳಲು, ಚಿರಂತನವಾಗಿಸಿಕೊಳ್ಳಲು ನಡೆಸಿದ ಹರಸಾಹಸಗಳ ಪಕ್ಕ ದೀಪಿಕಾರ ಸಾಹಸವನ್ನು ಇಟ್ಟು ನೋಡಿ. ಸ್ಥಾಪಿತ ಚೌಕಟ್ಟು, ಅದರ ಬಂಧನ ಮತ್ತು ಆಮಿಷಗಳಿಂದ ಹೊರಬರುವುದರ ಸವಾಲು ಅರ್ಥವಾಗುತ್ತದೆ. ಶ್ರೀದೇವಿಯ ಸಾವಿಗೆ ಆಕೆ ಮಾಡಿಸಿಕೊಂಡ ಹಲವಾರು ಸೌಂದರ್ಯವರ್ಧಕ ಚಿಕಿತ್ಸೆಗಳೂ ಕಾರಣವಿರಬಹುದು ಎನ್ನುವ ವಾದವಿದೆ. ಆಕೆಯ ಅಕಾಲ ಸಾವಿನ ಕಾರಣವೇನಾದರೂ ಇರಲಿ, ಬಳುಕುವ ದೇಹ ಉಳಿಸಿಕೊಳ್ಳುವ ಅನಿವಾರ್ಯತೆಯ ವಾತಾವರಣವೇ ಅಮಾನವೀಯ. ಅದು ಅವಳ ಅಯ್ಕೆ ಎನ್ನುವ ಮಾತು ಅರ್ಧ ಸತ್ಯ ಮಾತ್ರವಾಗಿರಲು ಸಾಧ್ಯ. ಐವತ್ತರ ವಯಸ್ಸಿನಲ್ಲಿ ಆಕೆ ಇಪ್ಪತ್ತೈದರ ಹರೆಯದವಳ ಹಾಗೆ ಏಕೆ ಕಾಣಿಸಬೇಕು? ಈ ಒತ್ತಡವೇ ಶೋಷಣೆ ಅಲ್ಲವೆ?

ರೇಖಾಳದ್ದು ಇನ್ನೂ ವಿಚಿತ್ರ. ಅಪಾರ ಪ್ರತಿಭೆಯ ಈ ಕಲಾವಿದೆಯೂ ಖೂನ್‌ ಭಾರಿ ಮಾಂಗ್‌ ನಂತಹ ಚಿತ್ರಗಳಲ್ಲಿ ಮುಖದ ವಿರೂಪದಲ್ಲಿ ಕಾಣಿಸಿಕೊಂಡರೂ ಅದನ್ನು ಸೌಂದರ್ಯ ಮೀಮಾಂಸೆಯ ಬದಲಾವಣೆಯ ಜೀವನದೃಷ್ಟಿಯಾಗಿ ಕಾಣಲು ಆಕೆಗೆ ಸಾಧ್ಯವಾಗಲಿಲ್ಲ. ಆ ಇರಾದೆಯೇ ಆಕೆಗಿರಲಿಲ್ಲ ಎನ್ನುವುದು ನಿಜ. ಇಂಥ ಹಿನ್ನೆಲೆಯಲ್ಲಿ ದೀಪಿಕಾ ಭಿನ್ನವಾಗಿ ಮಾತ್ರವಲ್ಲ, ಸೂಕ್ತ ಸಂವೇದನೆಯ ಕಲಾವಿದೆಯಾಗಿ ಕಾಷಿಸುತ್ತಾರೆ. ಖನ್ನತೆಯಿಂದ ಬಳಲಿ ಚೇತರಿಸಿಕೊಂಡವರು ಈಕೆ. ಆ ಅನುಭವ ಈಕೆಯನ್ನು ಇನ್ನಷ್ಟು ಅಂತಃಕರಣಿಯಾಗಿಸಿದೆ ಅನಿಸುತ್ತದೆ.

ಎಂ. ಎಸ್‌. ಆಶಾದೇವಿ

ಗುಳಿ ಕೆನ್ನೆಯ, ಮಿಂಚು ಕಂಗಳ, ಮೋಹಕ ನಗುವಿನ ಚೆಲುವಿ ಡಿಪ್ಪಿ ಯಾನೆ ದೀಪಿಕಾ ಪಡುಕೋಣೆ, ಕಳೆದ ಮಾರ್ಚ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ತನ್ನ ಕೆಲವು ಪೋಸ್ಟ್‌ಗಳ ಮೂಲಕ ಚಿತ್ರರಸಿಕರಲ್ಲಿ ಮತ್ತು ತನ್ನ ಅಭಿಮಾನಿ ಬಳಗದಲ್ಲಿ ಒಂದು ಸಂಚಲನವನ್ನೇ ಸೃಷ್ಟಿಸಿದ್ದಾಳೆ. ಆಕೆ ಹಂಚಿಕೊಂಡ ಚಿತ್ರಗಳು ಆಕೆಯ ಮುಂಬರುವ ಚಲನಚಿತ್ರಕ್ಕೆ ಸಂಬಂಧಿಸಿದುದಾಗಿದ್ದು , ನೋಡುಗರ ಹುಬ್ಬೇರಿಸುವಂತಿವೆ. ಈ ಚಲನಚಿತ್ರವನ್ನು ಲಕ್ಷ್ಮೀ ಅಗರವಾಲ್‌ ಎಂಬಾಕೆಯ ಜೀವನವನ್ನು ಆಧರಿಸಿ ನಿರ್ಮಿಸಲಾಗಿದೆ.

ಯಾರೀ ಲಕ್ಷ್ಮೀ ಅಗರ್‌ವಾಲ್‌?
ಲಕ್ಷ್ಮೀ ಅಗರ್‌ವಾಲ್‌ ಹುಟ್ಟಿದ್ದು ದಿಲ್ಲಿಯ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ. 2005ರಲ್ಲಿ ಅದೊಂದು ದಿನ 15 ವರ್ಷದ ಹುಡುಗಿ ಲಕ್ಷ್ಮೀ ಅಗರ್‌ವಾಲ್‌ ಸಂಗೀತ ಕ್ಲಾಸ್‌ನಿಂದ ಮನೆಗೆ ಮರಳುತ್ತಿದ್ದಳು. ಆಗ ಆಕೆಯ ಮುಖದ ಮೇಲೆ 32 ವರ್ಷದ ಓರ್ವ ತರುಣ ಆ್ಯಸಿಡ್‌ ಎರಚಿದ. ತನ್ನ ಪ್ರೇಮ ನಿವೇದನೆಯನ್ನು ಪುರಸ್ಕರಿಸದೆ, ತನ್ನ ವಿವಾಹ ಪ್ರಸ್ತಾವವನ್ನು ತಿರಸ್ಕರಿಸಿದುದಕ್ಕಾಗಿ ಆತ ಈ ಘೋರವಾದ ದುಷ್ಕೃತ್ಯವನ್ನೆಸಗಿದ್ದ. ಇದರಿಂದ ಮುಖದ ಬಹುಭಾಗದ ಮತ್ತು ದೇಹದ ಇತರ ಕೆಲವು ಭಾಗಗಳ ಚರ್ಮ ಸುಟ್ಟುಹೋದುದರಿಂದ ಲಕ್ಷ್ಮೀ ಅಗರ್‌ವಾಲ್‌ ತಿಂಗಳುಗಟ್ಟಲೆ ಯಮಯಾತನೆಯನ್ನು ಅನುಭವಿಸುತ್ತ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಪಡಬೇಕಾಯಿತು. ಅಂತೂ ಕೊನೆಗೊಮ್ಮೆ ಮನೆಗೆ ಮರಳಿದಾಗ ವಿರೂಪಗೊಂಡ ಮುಖದ ದುಃಖ-ದುಮ್ಮಾನಗಳು ಅವಳ ಜೀವನವನ್ನು ದುರ್ಭರವಾಗಿಸಿದವು. ಆತ್ಮಹತ್ಯೆಯ ಯೋಚನೆಯೂ ಆಕೆಯ ಮನದಲ್ಲಿ ಸುಳಿಯಿತು. ಆದರೆ, ತನ್ನನ್ನು ಉಳಿಸಿಕೊಳ್ಳಲು ತನ್ನ ಪಾಲಕರು ಪಟ್ಟ ಪಾಡನ್ನು ನೆನೆದು, ಏನಾದರಾಗಲಿ ಅವರಿಗಾಗಿಯಾದರೂ ತಾನು ಬದುಕಬೇಕು, ಸ್ವಾವಲಂಬಿಯಾಗಬೇಕು ಎನ್ನುವ ದೃಢ ನಿರ್ಧಾರವನ್ನು ಲಕ್ಷ್ಮೀ ಕೈಗೊಂಡಳು. ಟೈಲರಿಂಗ್‌, ಬ್ಯೂಟಿಷಿಯನ್‌ ಕೋರ್ಸ್‌, ಕಂಪ್ಯೂಟರ್‌ ಕೋರ್ಸ್‌ಗಳನ್ನು ಮುಗಿಸಿದಳು. ಆದರೆ, ಕೆಲಸ ಸಿಗಲು ವಿರೂಪಗೊಂಡ ಅವಳ ಮುಖವೇ ತೊಡಕಾಯಿತು. ಆದರೆ, ಧೃತಿಗೆಡದೆ ಮುನ್ನಡೆದ ಲಕ್ಷ್ಮೀ, ತನ್ನಂಥ ಸಂತ್ರಸ್ತೆಯರನ್ನು ಒಗ್ಗೂಡಿಸಿ ಅವರ ನೋವಿಗೆ ದನಿಯಾದಳು. ಅವರಿಗೆ ನ್ಯಾಯ ಒದಗಿಸಿ ಪುನರ್ವಸತಿ ಕಲ್ಪಿಸಲು ಹೋರಾಟ ನಡೆಸಿದಳು. ತನ್ನ ಮೇಲೆ ಆ್ಯಸಿಡ್‌ ಎರಚಿದವರನ್ನು ಜೈಲಿಗಟ್ಟಿ ಕಂಬಿ ಎಣಿಸುವಂತೆ ಮಾಡಿದಳು. ಯಾವುದೇ ಎಗ್ಗಿಲ್ಲದೆ ಮಾರಾಟವಾಗುತ್ತಿದ್ದ ಆ್ಯಸಿಡ್‌ಗಳಿಂದಾಗಿ ಮುಗ್ಧ ಹೆಣ್ಣುಮಕ್ಕಳ ಮೇಲಿನ ಇಂತಹ ದಾಳಿಗಳು ಹೆಚ್ಚುತ್ತಿವೆ ಎನ್ನುವ ತಥ್ಯವನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದಳು. ಇದರ ಪರಿಣಾಮವಾಗಿ ಆ್ಯಸಿಡ್‌ ಎರಚುವಿಕೆಯಂತಹ ಅಪರಾಧಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಆ್ಯಸಿಡ್‌ ಮಾರಾಟವನ್ನು ನಿಯಂತ್ರಿಸಲು ಅಗತ್ಯವಾದ ಕಾನೂನುಗಳನ್ನು ಪುನಾರೂಪಿಸಬೇಕೆಂದು 2013ರಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸುವಂತಾಯಿತು. 2014ರಲ್ಲಿ ಅಮೆರಿಕದ ಅಂದಿನ ಪ್ರಥಮ ಮಹಿಳೆಯಾಗಿದ್ದ ಮಿಶೆಲ್‌ ಒಬಾಮಾ International Woman of Courage ಪ್ರಶಸ್ತಿಯನ್ನು ಲಕ್ಷ್ಮೀ ಅಗರ್‌ವಾಲ್‌ಗೆ ಪ್ರದಾನ ಮಾಡಿದರು. ಅದೇ ವರ್ಷ ಲಕ್ಷ್ಮೀ ತನ್ನಂತಹ ಸಂತ್ರಸ್ತೆಯರ ಬದುಕನ್ನು ಹಸನಾಗಿಸಲು ಛಾಂವ್‌ ಎಂಬ ಸರಕಾರಿಯಲ್ಲದ ಒಂದು ಸಂಸ್ಥೆಯನ್ನು (NGO) ಆರಂಭಿಸಿದಳು.

ಮಾಲತಿಯ ಪಾತ್ರದಲ್ಲಿ ದೀಪಿಕಾ
ಲಕ್ಷ್ಮೀ ಅಗರ್‌ವಾಲಳ ಜೀವನಾಧಾರಿತ ಚಪಾಕ್‌ ಎಂಬ ಶೀರ್ಷಿಕೆಯ ಚಲನಚಿತ್ರ ಜನವರಿ 10, 2020ರಂದು ತೆರೆಕಾಣಲಿದೆ. ಚಪಾಕ್‌ ಎಂದರೆ ಯಾವುದಾದರೂ ಒಂದು ವಸ್ತು ದ್ರವದ ಮೇಲೆ ರಭಸದಿಂದ ಎಸೆಯಲ್ಪಟ್ಟಾಗ ಆಗುವ ಸದ್ದು. ಈ ಶಬ್ದವನ್ನು ಗುಲ್ಜಾರ್‌ರವರು ತಮ್ಮ ಗೀತೆಯೊಂದರಲ್ಲಿ ಅಳವಡಿಸಿದ್ದರು. ಇದೀಗ ಅವರ ಪುತ್ರಿ ಮೇಘನಾ ಗುಲ್ಜಾರ್‌, ತಾನು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅದನ್ನೇ ಶೀರ್ಷಿಕೆಯನ್ನಾಗಿಸಿ ಅರ್ಥವತ್ತಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಚಪಾಕ್‌ ಎನ್ನುವುದು ಆ್ಯಸಿಡ್‌ ಅನ್ನು ಒಮ್ಮಿಂದೊಮ್ಮೆಲೆ ಮುಖದ ಮೇಲೆ ಎರಚಿದಾಗ ಆಗುವ ಸದ್ದು ಮತ್ತು ಅದು ಸಂತ್ರಸ್ತೆಯ ಜೀವನವನ್ನೇ ಶಾಶ್ವತವಾಗಿ ಬದಲಾಯಿಸುವ ಆಘಾತಕಾರಿ ಮಾರ್ದನಿ ಕೂಡ. ಚಪಾಕ್‌ ನಲ್ಲಿ ದೀಪಿಕಾ ನಿರ್ವಹಿಸುತ್ತಿರುವುದು ಆ್ಯಸಿಡ್‌ ದಾಳಿಗೆ ತುತ್ತಾಗುವ ಮಾಲತಿ ಎನ್ನುವ ಹುಡುಗಿಯ ಪಾತ್ರವನ್ನು.

ಥಳಕು-ಬಳುಕಿನ ಚಿತ್ರರಂಗದಲ್ಲಿ ನಟಿಯಾಗಬೇಕಾದರೆ ಸಹಜವಾಗಿ ಸೌಂದರ್ಯ ಅಪೇಕ್ಷಣೀಯವೆನಿಸಬಹುದಾದರೂ, ಅಲ್ಲಿ ಸುದೀರ್ಘ‌ ಕಾಲ ಯಶಸ್ಸಿನ ಶಿಖರದಲ್ಲಿ ಗಟ್ಟಿಯಾಗಿ ತಳವೂರಿ ಮೆರೆಯಲು ಅದೊಂದು ಸಾಲದು ಎನ್ನುವುದು ಅನುಭವವೇದ್ಯ. ಸೌಂದರ್ಯದೊಂದಿಗೆ ಅಭಿನಯ ಕೌಶಲ, ವೃತ್ತಿಪರತೆ ಮತ್ತು ಕಠಿಣ ಪರಿಶ್ರಮಗಳೂ ಅಗತ್ಯ. ಚೆಲುವಿನ ಗನಿಯಾಗಿರುವ ದೀಪಿಕಾ ಪಡುಕೋಣೆ, ಇವೆಲ್ಲವೂ ಮೇಳೈಸಿರುವ ಓರ್ವ ಅಪೂರ್ವ ಕಲಾವಿದೆ. ಓಂ ಶಾಂತಿ ಓಂ ಚಿತ್ರದಲ್ಲಿ ಗ್ಲಾಮರಸ್‌ ಸೂಪರ್‌ಸ್ಟಾರ್‌ ಆಗಿ ಪಾದಾರ್ಪಣೆ ಮಾಡಿದ ಈಕೆ, ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಪಿಕು, ಕಾಕ್‌ಟೇಲ್‌, ಗೋಲಿಯೋಂ ಕಿ ರಾಸಲೀಲಾ: ರಾಮಲೀಲಾ, ಬಾಜಿರಾವ್‌ ಮಸ್ತಾನಿ, ಪದ್ಮಾವತ ಇತ್ಯಾದಿ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿ, ಚಿತ್ರವಿಮರ್ಶಕರಿಂದಲೂ, ಚಿತ್ರರಸಿಕರಿಂದಲೂ “ಭೇಷ್‌’ ಅನ್ನಿಸಿಕೊಂಡ ಖ್ಯಾತಿ ಇವಳದು.

ನಂದಿನಿ ಡಿ. ಕಾಮತ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next