ರವಿಚಂದ್ರನ್ ಅವರ ಪುತ್ರ ಮನೋರಂಜನ್ “ಸಾಹೇಬ’ ಎಂಬ ಚಿತ್ರಕ್ಕೆ ಹೀರೋ ಅಂತ ಯಾವಾಗ ಅನೌನ್ಸ್ ಮಾಡಲಾಯಿತೋ, ಆಗಿನಿಂದಲೇ “ಸಾಹೇಬ’ನ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳು ಹೆಚ್ಚಾದವು. ಅದಕ್ಕೆ ಕಾರಣ, ಮನೋರಂಜನ್ ಅಭಿನಯದ ಮೊದಲ ಸಿನಿಮಾ “ಸಾಹೇಬ’. ಅಲ್ಲದೆ, ಅದೊಂದು ಹೊಸ ಬಗೆಯ ಚಿತ್ರ. ಜಯಣ್ಣ , ಭೋಗೇಂದ್ರ ನಿರ್ಮಾಣದಲ್ಲಿ ಭರತ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳಿವೆ. ಈಗಾಗಲೇ ಸಾಹೇಬ ಚಿತ್ರ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಹಾಡುಗಳು ಈಗಾಗಲೇ ಎಲ್ಲೆಡೆ ಹಿಟ್ ಆಗುವ ಮೂಲಕ ಚಿತ್ರ ನೋಡುವ ಕಾತರವನ್ನು ಹೆಚ್ಚಿಸಿವೆ. ಹೀರೋ ಮನೋರಂಜನ್ ಜತೆಗಿನ ಕೆಲಸ ಮತ್ತು ಚಿತ್ರದ ಕುರಿತು ನಿರ್ದೇಶಕ ಭರತ್ “ರೂಪತಾರಾ’ ಜತೆ ಮಾತುಗಳನ್ನು ಹಂಚಿಕೊಂಡಿದ್ದಾರೆ.
“ಕಳೆದ ಜನವರಿಯಲ್ಲಿ “ಸಾಹೇಬ’ ಮುಹೂರ್ತ ಕಂಡಿತ್ತು. ಈ ಜನವರಿಯಲ್ಲಿ ಚಿತ್ರ ಮುಗಿದು, ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾ ಕಂಪ್ಲೀಟ್ ಚಿತ್ರೀಕರಣಗೊಂಡಿದ್ದು, ಸದ್ಯಕ್ಕೆ ಸಣ್ಣ ಪುಟ್ಟ ಸಿಜಿ ವರ್ಕ್ ನಡೆಯತ್ತಿದೆ. ಈಗಾಗಲೇ ಆಡಿಯೋ ಸಿಡಿ ರಿಲೀಸ್ ಆಗಿದ್ದು, ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಾಗೇಂದ್ರಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಮತ್ತು ಸಾಹಿತಿ ಎಚ್.ಎಸ್.ವೆಂಕಟೇಶ್ ಮೂರ್ತಿ ಗೀತೆಗಳನ್ನು ರಚಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಈ ಚಿತ್ರದ ವಿಶೇಷವೆಂದರೆ, ರವಿಚಂದ್ರನ್ ಅಭಿನಯದ “ನಾನೂ ನನ್ನ ಹೆಂಡ್ತಿ’ ಚಿತ್ರದ ಸೂಪರ್ ಹಿಟ್ ಹಾಡು “ಯಾರೆ ನೀನು ರೋಜಾ ಹೂವೇ …’ ಎಂಬ ಹಾಡೊಂದನ್ನು ಈ ಚಿತ್ರದಲ್ಲಿ ರಿಮೀಕ್ಸ್ ಆಗಿ ಬಳಸಿಕೊಳ್ಳಲಾಗಿದೆ. ಕಥೆಯಲ್ಲಿ ಇಲ್ಲಿ ಆ ರೀತಿಯ ಇಮೇಜ್ ಇಲ್ಲ. ಆದರೆ, ರವಿಚಂದ್ರನ್ ಅವರ ಪುತ್ರ ಅಂತ ನಾವು ಹೇಳಬೇಕಿತ್ತು. ಹಾಗಾಗಿ, ಆ ಹಾಡನ್ನು ಇಟ್ಟರೆ, ಸೂಕ್ತವಾಗಿರುತ್ತೆ ಎಂಬ ಕಾರಣಕ್ಕೆ, ಅದನ್ನು ಬಳಸಿಕೊಳ್ಳಲಾಗಿದೆ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದು, ರವಿಚಂದ್ರನ್ ಸಿನಿಮಾಗಳ ಕ್ಯಾಮೆರಾಮೆನ್ ಸೀತಾರಾಮ್ ಅವರೇ, ಮನೋರಂಜನ್ ಮೊದಲ ಚಿತ್ರಕ್ಕೂ ಕ್ಯಾಮೆರಾ ಹಿಡಿದಿದ್ದಾರೆ. ಇನ್ನು, ಈ ಚಿತ್ರಕ್ಕೆ “ಯಾರೆ ನೀನು ರೋಜಾ ಹೂವೇ …’ ಹಾಡನ್ನು ಬಳಸಿಕೊಳ್ಳಲು ಬಲವಾದ ಕಾರಣವೂ ಇದೆ. ಮೊದಲು, ಮನೋರಂಜನ್‌ಗೆ ಹೊಸ ಟ್ಯೂನ್‌ಗೊಂದು ಸ್ಪೆಷಲ್ ಹಾಡು ಮಾಡಿ ಅವರನ್ನು ಇಂಟ್ರಡಕ್ಷನ್ ಮಾಡಬೇಕು ಎಂಬ ಪ್ಲಾನ್ ಇತ್ತು. ಆದರೆ, ರವಿಚಂದ್ರನ್ ಅವರ ಪುತ್ರ ಅಂತ ಹೇಳುವುದಕ್ಕಾಗಿಯೇ ಆ ಸಾಂಗ್ ಅನ್ನು ಬಳಸಿಕೊಳ್ಳಲಾಗಿದೆ. ಹಾಗಂತ ಇದು, ರವಿಚಂದ್ರನ್ ಅವರ ಶೈಲಿಯ ಸಿನಿಮಾವಂತೂ ಅಲ್ಲ. ಮನೋರಂಜನ್‌ಗಾಗಿಯೇ ಮಾಡಿದ ಕಥೆಯಂತೂ ಅಲ್ಲ. ಪಾತ್ರದ ಮೂಲಕ ಕಥೆ ಹೇಳುವ ಪ್ರಯತ್ನ ಇಲ್ಲಾಗಿದೆ. ಇಲ್ಲಿ ಮನೋರಂಜನ್‌ಗಂತ ಕಥೆ ಬರೆಯದೆ, ಕಥೆಗಾಗಿಯೇ ಹೀರೋನನ್ನಯ ಆಯ್ಕೆ ಮಾಡಲಾಗಿದೆ. ಅದು ಈ ಚಿತ್ರದ ವಿಶೇಷತೆಗಳಲ್ಲೊಂದು ಎಂದು ವಿವರ ಕೊಡುತ್ತಾರೆ ನಿರ್ದೇಶಕ ಭರತ್.
“ಸಾಹೇಬ’ ಅಂದರೆ ಯಾರು? ಸಹಜವಾಗಿಯೇ ಈ ಪ್ರಶ್ನೆ ಬರುತ್ತೆ. “ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ …’ ಎಂಬ ಮಾತು ಎಲ್ಲರಿಗೂ ಗೊತ್ತು. ಅದರಂತೆ, ಇಲ್ಲಿ ನಾಯಕಿಯ ಬದುಕಿಗೊಬ್ಬ ನಾಯಕ ಬೇಕು. ಹಾಗಾಗಿ, ಅವಳ ಲೈಫ್ಗೊಬ್ಬ ಎಂಟ್ರಿಯಾದಾಗ, ಏನೆಲ್ಲಾ ಆಗುತ್ತೆ ಅನ್ನೋದ್ದನ್ನು ಇಲ್ಲಿ ಹೇಳಲಾಗಿದೆ. ಅವಳ ಲೈಫಲ್ಲಿ “ಸಾಹೇಬ’ ಬರುವುದೇ ಚಿತ್ರದ ಕಥೆ. ಇಲ್ಲಿ ತುಂಬಾ ಮೆಲೋಡ್ರಾಮ ಆಗಬಾರದು ಎಂಬ ಕಾರಣಕ್ಕೆ ಎಲ್ಲವನ್ನೂ ನೇರವಾಗಿಯೇ ಹೇಳಲಾಗಿದೆ. ವಿನಾಕಾರಣ, ಬಿಲ್ಡಪ್ಸ್ ಇಲ್ಲ, ಎಲ್ಲವನ್ನೂ ಇಲ್ಲಿ ಸಂದರ್ಭಕ್ಕನುಸಾರವಾಗಿ ನಡೆಯುತ್ತಾ ಹೋಗುತ್ತದೆ. ಇಲ್ಲಿ ಹಳೆಯ ಫಾರ್ಮುಲ ಬದಲಾಗಿ, ಹೊಸದೊಂದು ಫಾರ್ಮುಲ ಮೂಲಕ ಸಿನಿಮಾವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಒಂದೊಳ್ಳೆಯ ರೊಮ್ಯಾಂಟಿಕ್ ಸಿನಿಮಾಗೆ ಏನೆಲ್ಲಾ ಇರಬೇಕೋ ಅದೆಲ್ಲವೂ ಇದರಲ್ಲಿ ಆಡಗಿದೆ. ಇದನ್ನು ಮಾಸ್ ಸಿನಿಮಾನೋ ಅಥವಾ ಕ್ಲಾಸ್ ಸಿನಿಮಾನೋ ಅಂತ ಹೇಳಬೇಕಿಲ್ಲ. ಪಾತ್ರದ ಮೂಲಕವೇ ಕಥೆ ಸಾಗುತ್ತದೆ. ನಾಯಕಿ ಮತ್ತು ನಾಯಕ ಇವರಿಬ್ಬರಿಗೂ ಸಮನಾದ ಪಾತ್ರ ಇಲ್ಲಿದೆ. ಸಾನ್ವಿ ಇಲ್ಲಿ ಪಾತ್ರವನ್ನು ಜೀವಿಸಿದ್ದಾರೆ. ಕನ್ನಡ ಭಾಷೆಯನ್ನು ಅರ್ಥ ಮಾಡಿಕೊಂಡು, ಸಣ್ಣ ಸಣ್ಣ ಸಂಗತಿಗಳನ್ನು ಚೆನ್ನಾಗಿ ಆರ್ಥ ಮಾಡಿಕೊಂಡು ಕೆಲಸ ಮಾಡಿದ್ದಾರೆ. ಇನ್ನು, ನಾಯಕ ಮನೋರಂಜನ್ ಕೂಡ ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸಿದ್ದಾರೆ. ನಟನೆ ಬಗ್ಗೆ ಹೇಳುವುದಾದರೆ, ಆದ್ಭುತ ನಟ ಅವರು. ರವಿಚಂದ್ರನ್ ಅವರ ಪುತ್ರ ಹೀಗೆ ಇದ್ದಾರೆ ಅಂದರೆ ಅದು ನಾಟ್ ದಟ್. ಅವರು ತುಂಬಾ ಶಿಸ್ತುಬದ್ಧವಾಗಿ ಕೆಲಸ ಮಾಡಿದ್ದಾರೆ. ಇಂಡಸ್ಟ್ರಿಗೆ ಹೊಸದಾಗಿ ಬಂದಾಗ, ಇರಬೇಕಾದಂತಹ ಶ್ರದ್ಧೆ ಅವರಲ್ಲಿದೆ. ಒಳ್ಳೆಯ ವ್ಯಕ್ತಿತ್ವದಲ್ಲೇ ಕೆಲಸ ಮಾಡುವ ಅವರು, ಸಿನಿಮಾದ ಪಾತ್ರಕ್ಕೆ ಏನೇನು ಬೇಕೋ ಅದನ್ನು ಕೊಡುವ ಮೂಲಕ “ಸಾಹೇಬ’ ಚಿತ್ರವನ್ನು ಮತ್ತಷ್ಟು ಅಂದಗಾಣಿಸಿದ್ದಾರೆ ಎನ್ನುತ್ತಾರೆ ಭರತ್.
ಮನುಗೆ ಸ್ಟೋರಿ ಸೆನ್ಸ್ ಇದೆ …
“ನಾಯಕ ಮನೋರಂಜನ್‌ಗೆ ಕಥೆಯ ಆಯ್ಕೆ ಬಗ್ಗೆ ತುಂಬಾ ಎಚ್ಚರವಿದೆ. ನಿಜವಾಗಿಯೂ ಅವರಿಗೆ ಸ್ಟೋರಿ ಸೆನ್ಸ್ ಇದೆ. ಅಂತಹ ಹೀರೋಗಳು ಇಲ್ಲಿ ಕಮ್ಮಿ. ಮೊದಲ ಸಿನಿಮಾದ ಕಥೆಯನ್ನು ಆಯ್ಕೆ ಮಾಡಿಕೊಳ್ಳುವಾಗ, ತುಂಬಾನೇ ಎಚ್ಚರ ವಹಿಸಬೇಕು. ಆ ನಿಟ್ಟಿನಲ್ಲಿ ಮನೋರಂಜನ್ ತುಂಬಾ ಅಚ್ಚುಕಟ್ಟಾಗಿ ಈ ಕಥೆ ಕೇಳಿ, ಇದ್ದ ಅನುಮಾನಗಳನ್ನೆಲ್ಲಾ ಬಗೆಹರಿಸಿಕೊಂಡ ನಂತರ ಕಥೆ ಒಪ್ಪಿದ್ದಾರೆ. ಅಂತಹ ನಾಯಕ ನಟರಿದ್ದಾಗ, ಅವರಿಗೆ ಒಳ್ಳೆಯ ನಿರ್ದೇಶಕರೂ ಸಿಗಬೇಕು. ಅವರೀಗ “ವಿಐಪಿ’ ಎಂಬ ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಅಂತಹ ಚಿತ್ರ ಮಾಡುವ ಮುನ್ನ, ಇಂತಹ ಕಥೆ ಒಪ್ಪಿ ಕೆಲಸ ಮಾಡಿರುವುದು ನಿಜಕ್ಕೂ ಖುಷಿ ಕೊಟ್ಟಿದೆ’ ಎನ್ನುತ್ತಾರೆ ಭರತ್.
ಇನ್ನು, “ಸಾಹೇಬ’ ಚಿತ್ರವನ್ನು ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಸುಮಾರು 90 ದಿನಗಳ ಚಿತ್ರೀಕರಿಸಲಾಗಿದೆ. ಇಟಲಿಯಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಉಳಿದಂತೆ ಮನೋರಂಜನ್ ಅವರ ತಾಯಿ ಪಾತ್ರವನ್ನು ಹಿರಿಯ ಕಲಾವಿದೆ ಲಕ್ಷ್ಮೀ ಅವರು ನಿರ್ವಹಿಸಿದ್ದಾರೆ. ಉಳಿದಂತೆ ಪಾಪಾ ಪಾಂಡು ಖ್ಯಾತಿಯ ಚಿದಾನಂದ್ ಇತರರು ಚಿತ್ರದಲ್ಲಿ ನಟಿಸಿದ್ದಾರೆ.