ಈ ಹಿಂದೆ “ಕಥಾ ವಿಚಿತ್ರ’ ಚಿತ್ರ ನಿರ್ದೇಶಿಸಿದ್ದ ಅನೂಪ್ ಆಂಟೋನಿ, ಇದೀಗ ಮತ್ತೂಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ “ಅಖಿಲ್’ ಎಂದು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ ಚಿತ್ರತಂಡ, ಆಷಾಢ ನಂತರ ಚಿತ್ರೀಕರಣಕ್ಕೆ ಹೊರಡಲು ತಯಾರಿ ನಡೆಸಿದೆ. ಈ ಚಿತ್ರದ ಮೂಲಕ ಸೂರಜ್ ಎಂಬ ಹೊಸ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದೆ.
ಸೂರಜ್‌ಗೆ “ಅಖಿಲ್’ ಮೊದಲ ಚಿತ್ರವಾದರೂ, ಸಿನಿಮಾರಂಗದ ಅನುಭವ ಇದೆ. “ಐರಾವತ’ ಹಾಗೂ “ತಾರಕ್’ ಚಿತ್ರಗಳಲ್ಲಿ ಒಂದಷ್ಟು ಸಿನಿಮಾ ಕಲಿಕೆಗೆ ಅವಕಾಶ ಮಾಡಿಕೊಟ್ಟಿದ್ದ ದರ್ಶನ್, ಸೂರಜ್ ಅವರ ಹೊಸ ಚಿತ್ರಕ್ಕೆ ಶುಭಕೋರಿದ್ದಾರೆ. ನಟನೆ ಬಗ್ಗೆ ತಿಳಿದುಕೊಂಡ ಬಳಿಕ ಹೀರೋ ಆಗಬೇಕು ಎಂಬ ದರ್ಶನ್ ಅವರ ಮಾತಿಗೆ, ಸೂರಜ್ ಸಿನಿಮಾಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಕಲಿತು ಈಗ “ಅಖಿಲ್’ ಮೂಲಕ ಹೀರೋ ಆಗುತ್ತಿದ್ದಾರೆ.
ಚಿತ್ರದ ಶೀರ್ಷಿಕೆ ಹೇಳುವಂತೆ, ಇದೊಂದು ಕಾಲೇಜ್ ಹುಡುಗರ ಲವ್‌ಸ್ಟೋರಿ. ಲವ್ ಜೊತೆಗೆ ಮಾಸ್ ಅಂಶಗಳೂ ಇಲ್ಲಿರಲಿವೆ ಎಂಬುದು ನಿರ್ದೇಶಕ ಅನೂಪ್ ಆಂಟೋನಿ ಅವರ ಮಾತು. ಕಾಲೇಜ್ ಕಥೆಯಾದ್ದರಿಂದ, ಪ್ರೀತಿ, ಪ್ರೇಮ ಇತ್ಯಾದಿ ಜೊತೆಗೆ ಹುಡುಗರ ನಡುವಿನ ಹೊಡೆದಾಟ ದೃಶ್ಯಗಳು ಕಾಣಿಸಿಕೊಳ್ಳಲಿವೆ. ಪ್ರತಿಯೊಬ್ಬ ಕಾಲೇಜ್ ಹುಡುಗನಿಗೂ ಸಂಬಂಧಿಸಿದಂತಹ ಕಥೆ ಇಲ್ಲಿದೆ.
ಚಿತ್ರ ನೋಡುವ ಪ್ರತಿ ಹುಡುಗನೂ ನನ್ನದೇ ಕಥೆ ಎಂದು ಭಾವಿಸುವಂತಹ ಚಿತ್ರ ಕಟ್ಟಿಕೊಡಲು ಹೊರಟಿರುವ ಅನೂಪ್, ಸುಮಾರು 65 ದಿನಗಳ ಕಾಲ ಬೆಂಗಳೂರಲ್ಲೇ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದಾರೆ. ಸದ್ಯಕ್ಕೆ ಸೂರಜ್ ಹೀರೋ ಆಗಿ ಪಕ್ಕಾ ಆಗಿದ್ದಾರೆ. ಇನ್ನುಳಿದಂತೆ ನಾಯಕಿ ಮತ್ತು ಇತರೆ ಕಲಾವಿದರ ಆಯ್ಕೆ ಈಗಷ್ಟೇ ನಡೆಯಬೇಕಿದೆ.
“ಕಥಾ ವಿಚಿತ್ರ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಅಭಿಲಾಶ್ ಕಲತಿ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕರ ಆಯ್ಕೆ ನಡೆಯಬೇಕಿದ್ದು, ಹರಿಕೃಷ್ಣ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ವಿಜಯ್‌ರಾಜ್ ಸಂಕಲನವಿದೆ. ಅಂದಹಾಗೆ, ಈ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿರುವುದು ವಿಶೇಷ.