Advertisement
ಶೃಂಗಸಭೆಯ 2ನೇ ದಿನದಂದು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ವಿವಿಧ ನಿಯೋಗಗಳೊಂದಿಗೆ ಪ್ರತ್ಯೇಕ ವಾಗಿ ಮಾತುಕತೆ ನಡೆಸಿದ ಬಳಿಕ ಮೋದಿ, “2018ರ ಎಪ್ರಿಲ್‌ನಲ್ಲಿ ಚೀನದ ವುಹಾನ್‌ನಲ್ಲಿ ನಡೆದಿದ್ದ ಎರಡೂ ದೇಶಗಳ ನಡುವಿನ ಮೊದಲ ಅನೌಪಚಾರಿಕ ಸಭೆಯು ದ್ವಿಪಕ್ಷೀಯ ಬಾಂಧವ್ಯಕ್ಕೆ ಹೊಸ ಶಕ್ತಿ ತುಂಬಿತ್ತು. ಈಗ ಮಹಾಬಲಿಪುರಂ ಶೃಂಗಸಭೆಯು ಆ ಬಾಂಧವ್ಯದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಎರಡೂ ದೇಶಗಳು ತಮ್ಮ ನಡುವಿನ ಭಿನ್ನಮತಗಳು ವಿವಾದಗಳಾಗಿ ಮಾರ್ಪಾಡಾಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ನಿರ್ಧರಿಸಿವೆ. ಪರಸ್ಪರರ ಕಾಳಜಿಗೆ ಬೆಲೆ ನೀಡುವುದು, ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹಾಗೂ ಪ್ರಾಂತೀಯ ಮಟ್ಟದಲ್ಲಿ ಶಾಂತಿ, ಸೌಹಾರ್ದ ಸಾಧಿಸಿ ಅದನ್ನು ವಿಶ್ವಮಟ್ಟಕ್ಕೂ ವೃದ್ಧಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಇನ್ನು ಮುಂದೆ ನಡೆದುಕೊಳ್ಳಲಿವೆ’ ಎಂದು ಅವರು ತಿಳಿಸಿದ್ದಾರೆ.
ಜಿನ್‌ಪಿಂಗ್ ಅವರೂ ಶೃಂಗಸಭೆಯ ಫಲಶ್ರುತಿ ಉತ್ತಮವಾಗಿದೆ. ಸಭೆಯಲ್ಲಿ ಮೋದಿಯವರ ಜತೆಗೆ ಸ್ನೇಹಿತನಂತೆ ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ. “ಅನೌಪಚಾರಿಕ ಶೃಂಗಸಭೆ ಯಿಂದಾಗಿ, ಭಾರತ-ಚೀನ ನಡುವಿನ ಸ್ನೇಹ ಮತ್ತಷ್ಟು ಗಾಢ ವಾಗಿದೆ. ಈ ಸ್ನೇಹವನ್ನು, ಮತ್ತಷ್ಟು ಬಲಗೊಳಿಸಿ ಬಾಂಧವ್ಯವನ್ನು ಕಾಪಾಡಿಕೊಂಡು ಹೋಗುವುದೇ ನನ್ನ ಸರಕಾರದ ಮೊದಲ ಆದ್ಯತೆ ಯಾಗಲಿದೆ’ ಎಂದಿದ್ದಾರೆ. 2 ದಿನಗಳಲ್ಲಿ ಪ್ರಧಾನಿ ಮೋದಿ ಹಾಗೂ ಜಿನ್‌ಪಿಂಗ್ ನಡುವೆ ಸುಮಾರು ಐದೂವರೆ ಗಂಟೆಗಳ ಮಾತುಕತೆ ನಡೆದಿದೆ.