Advertisement
ಶನಿವಾರ ಹೊಸ ಪದಾಧಿಕಾರಿಗಳ ಪಟ್ಟಿ ಪ್ರಕಟವಾಗಿದ್ದು, ಸಿ.ಟಿ. ರವಿ ಅವರಿಗೆ ಕೊಕ್ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಅದರ ಬೆನ್ನಲ್ಲೇ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಖಚಿತ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬಂದಿದೆ. ಆ. 2ರಂದು ಅವರು ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ವಿಪಕ್ಷ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಒಲಿಯಬಹುದೆಂದು ತರ್ಕಿಸಲಾಗುತ್ತಿದೆ.
ಈ ಬಾರಿ ಪರಿಷ್ಕರಣೆಗೊಂಡ ಪದಾಧಿಕಾರಿಗಳ ಪಟ್ಟಿಯಲ್ಲಿ ರಾಜ್ಯದಿಂದ ಬಿ.ಎಲ್. ಸಂತೋಷ್ ಹೆಸರು ಮಾತ್ರ ಉಳಿದುಕೊಂಡಿದೆ. ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಯಾವುದೇ ಅವಧಿ ನಿಗದಿಯಾಗಿರುವುದಿಲ್ಲ. ಆರೆಸ್ಸೆಸ್ ವಾಪಸ್ ಕರೆಸಿಕೊಳ್ಳಲು ಬಯಸಿದಾಗ ಮಾತ್ರ ಆ ಹುದ್ದೆಗೆ ನೇಮಕಗೊಂಡ ವ್ಯಕ್ತಿಗಳು ಬದಲಾಗುತ್ತಾರೆ. ಹೀಗಾಗಿ ಸಂತೋಷ್ ಹೆಸರು ಪಟ್ಟಿಯಲ್ಲಿ ಉಳಿದುಕೊಂಡಿರುವುದಕ್ಕೆ ಪಕ್ಷದ ರಾಷ್ಟ್ರೀಯ ಲೆಕ್ಕಾಚಾರಗಳ ದೃಷ್ಟಿಯಿಂದ ಯಾವುದೇ ಮಹತ್ವವಿಲ್ಲ. ಆದರೆ ರಾಜ್ಯ ಬಿಜೆಪಿ ಬಣ ರಾಜಕಾರಣದ ಮಸೂರದಿಂದ ನೋಡಿದಾಗ ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಮಾಡಿದ ಪ್ರಯೋಗದಿಂದ ಪಕ್ಷಕ್ಕೆ ಸೋಲಾಯಿತು, ಇದಕ್ಕೆ ಸಂತೋಷ್ ನೇರ ಕಾರಣ ಎಂಬ ದೂರುಗಳು ವರಿಷ್ಠರ ನೆಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಇದರಿಂದ ಅರ್ಥೈಸಬಹುದಾಗಿದೆ.
Related Articles
ಈ ಬೆಳವಣಿಗೆಗೂ ಕೆಲವು ದಿನಗಳ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಿ.ಟಿ. ರವಿ ಆಶೀರ್ವಾದ ಪಡೆದ ಫೋಟೋಕ್ಕೂ ಹೊಂದಾಣಿಕೆಯಾಗುತ್ತಿದ್ದು, ವರಿಷ್ಠರ ಸೂಚನೆ ಮೇರೆಗೆ ರವಿ ಅವರು ಯಡಿಯೂರಪ್ಪನವರ ಸಹಕಾರ ಕೋರಿ ಬಂದಿದ್ದರೆಂದು ವ್ಯಾಖ್ಯಾನಿಸಲಾಗಿದೆ. ಅಲ್ಲದೆ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟ್ಟ ಕಟ್ಟುವುದು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ.
Advertisement
ವಿಪಕ್ಷ ನಾಯಕ ಯಾರು?ರಾಜ್ಯಾಧ್ಯಕ್ಷ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿ.ಟಿ. ರವಿಯವರಿಗೆ ದೊರೆತರೆ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರಿಗೆ ವಿಪಕ್ಷ ನಾಯಕ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯೆ ಪೈಪೋಟಿ ಹೆಚ್ಚಿದ್ದು, ಅಂತಿಮ ಹಂತದಲ್ಲಿ ಹೊಸ ಪ್ರಯೋಗ ದೃಷ್ಟಿಯಿಂದ ಅರವಿಂದ ಬೆಲ್ಲದ್ ನೇಮಕಗೊಂಡರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಮೂಲಗಳು ತರ್ಕಿಸುತ್ತಿವೆ.