ಮುಂಬಯಿ: ಕಿಡ್ನಿ ವೈಫಲ್ಯಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಇಬ್ಬರು ತಾಯಂದಿರು. ಒಬ್ಬರು ಭಾರತದವರಾದರೆ, ಮತ್ತೂಬ್ಬರು ದೂರದ ತಾಂಜೇನಿಯಾದವರು. “ನನ್ನ ಕಿಡ್ನಿ ಕೊಟ್ಟಾದರೂ ಸರಿ, ಅಮ್ಮನನ್ನು ಉಳಿಸಿಕೊಳ್ಳುತ್ತೇನೆ” ಎಂದು ನಿರ್ಧರಿಸಿರುವ ಅವರ ಪುತ್ರರು. ಆದರೆ, ತಮ್ಮ ತಮ್ಮ ತಾಯಿಗೆ ಕಿಡ್ನಿ ಕೊಡಲು ಇಬ್ಬರು ಯುವಕರಿಗೂ ಬ್ಲಿಡ್ ಗ್ರೂಪ್ ಹೊಂದಿಕೆಯಾಗುತ್ತಿಲ್ಲ!
ಇಂಥ ಗೊಂದಲದಲ್ಲಿ ನಡೆದಿದ್ದೇ “ಅಪರೂಪದಲ್ಲಿ ಅಪರೂಪದ ಕಿಡ್ನಿ ಸ್ವ್ಯಾಪಿಂಗ್’.
ಹೌದು, ಮುಂಬಯಿನ ಆಸ್ಪತ್ರೆಯೊಂದರಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಕ್ರಾಸ್‌ಬಾರ್ಡರ್ ಕಿಡ್ನಿ ಸ್ವಾéಪಿಂಗ್ ನಡೆದಿದೆ. ಪೂರ್ವ ಆಫ್ರಿಕಾದ ದೇಶ ತಾಂಜೇನಿಯಾದ ಮಹಿಳೆಯ ಪುತ್ರನು ಭಾರತದ ಮಹಿಳೆಗೆ ತನ್ನ ಕಿಡ್ನಿಯನ್ನು ದಾನ ಮಾಡಿದರೆ, ಭಾರತದ ಮಹಿಳೆಯ ಪುತ್ರನು ತಾಂಜೇನಿಯಾದ ಮಹಿಳೆಗೆ ಕಿಡ್ನಿ ದಾನ ಮಾಡಿದ್ದಾರೆ.
ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ತಾಂಜೇನಿಯಾದ 58 ವರ್ಷದ ಫ್ರಾನ್ಸಿಸ್ಕಾ ಝಕಾರಿಯಾ ಅವರು ಮುಂಬಯಿನ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ಜೋಡಣೆ ಶಸ್ತ್ರಚಿಕಿತ್ಸೆ ಮಾಡಲೇಬೇಕು ಎಂದು ವೈದ್ಯರು ಸೂಚಿಸಿದ್ದರು. ಅವರಿಗೆ ಕಿಡ್ನಿ ನೀಡಲು 32 ವರ್ಷದ ಪುತ್ರ ಮುಂದೆ ಬಂದನಾದರೂ, ತಾಯಿ-ಮಗನ ಬ್ಲಿಡ್ ಗ್ರೂಪ್ ಮ್ಯಾಚ್ ಆಗದ ಕಾರಣ, ಶಸ್ತ್ರಚಿಕಿತ್ಸೆ ಅಸಾಧ್ಯ ಎಂದು ವೈದ್ಯರು ಹೇಳಿದರು.
ಇದೇ ಸಂದರ್ಭದಲ್ಲಿ ಮುಂಬಯಿನವರೇ ಆದ 57 ವರ್ಷದ ಶೀಲಾ ಚೈನಾನಿ ಅವರೂ ಇದೇ ಸ್ಥಿತಿ ಎದುರಿಸುತ್ತಿದ್ದರು. ಅವರ ಮಗನ ರಕ್ತದ ಗ್ರೂಪ್ ಹೊಂದಿಕೆಯಾಗದ ಕಾರಣ, ಶೀಲಾ ಅವರ ಶಸ್ತ್ರಚಿಕಿತ್ಸೆಯೂ ನನೆಗುದಿಗೆ ಬಿದ್ದಿತ್ತು. ಆದರೆ, ಪವಾಡವೆಂಬಂತೆ, ಫ್ರಾನ್ಸಿಸ್ಕಾ ಅವರ ಪುತ್ರನ ರಕ್ತದ ಮಾದರಿಯೂ ಶೀಲಾರ ರಕ್ತದ ಗುಂಪಿಗೆ ಮ್ಯಾಚ್ ಆಗುತ್ತಿತ್ತು. ಅದೇ ರೀತಿ, ಶೀಲಾರ ಪುತ್ರನ ಬ್ಲಿಡ್ ಗ್ರೂಪ್ ಮತ್ತು ಫ್ರಾನ್ಸಿಸ್ಕಾರ ಬ್ಲಿಡ್ ಗ್ರೂಪ್ ಒಂದೇ ಆಗಿತ್ತು. ಹೀಗಾಗಿ, ಪರಸ್ಪರ ಕಿಡ್ನಿ ಸ್ವಾéಪಿಂಗ್‌ಗೆ ನಿರ್ಧರಿಸಿ, ಡಿ.4ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿತು. ಹೀಗಾಗಿ, ಪರಿಚಯವೇ ಇಲ್ಲದ ಈ ನಾಲ್ವರ ನಡುವೆ ಬಿಡಿಸಲಾಗದ ಬಂಧವೊಂದು ಏರ್ಪಟ್ಟಿತು.