Advertisement

ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣಗಳ ಆ್ಯಪ್‌

11:09 AM Oct 13, 2018 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸುವವರಿಗೆ ಇನ್ನು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಸುಲಭ ಲಭ್ಯ. ಉಪಯುಕ್ತ ವಿವರಗಳನ್ನು ಅಂಗೈಯಲ್ಲೇ ತೆರೆದಿಡುವ ಮೊಬೈಲ್‌ ಆ್ಯಪ್‌ ಅನ್ನು ಪ್ರವಾಸೋದ್ಯಮ ಇಲಾಖೆ ಸಿದ್ಧಪಡಿಸುತ್ತಿದೆ. 

Advertisement

ಪ್ರವಾಸಿ ಸ್ಥಳಗಳ ವಿವರ ಒದಗಿಸುವ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಯೋಜನೆಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಕೆಲವೇ ದಿನಗಳಲ್ಲಿ ಟೆಂಡರ್‌ ಕರೆಯಲಿದ್ದು, ನೂತನ ಆ್ಯಪ್‌ ಶೀಘ್ರ ಬಳಕೆಗೆ ಲಭ್ಯವಾಗಲಿದೆ.

ನೂತನ ಆ್ಯಪ್‌ನಲ್ಲಿ ಬೀಚ್‌, ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಹೀಗೆ ವಿವಿಧ ವಿಭಾಗಗಳಿರುತ್ತವೆ. ಒಟ್ಟಾರೆ 32ಕ್ಕೂ ಹೆಚ್ಚು ಪ್ರವಾಸಿ ತಾಣಗಳ ಮಾಹಿತಿ ಇರಲಿದೆ. ಜತೆಗೆ ಟೂರ್‌ ಮತ್ತು ಟ್ರಾವೆಲ್‌ ಏಜೆನ್ಸಿ, ಸುತ್ತಮುತ್ತ ಇರುವ ಲಾಡ್ಜ್, ಹೊಟೇಲ್‌ಗ‌ಳು ಇತ್ಯಾದಿ ವಿವರಗಳನ್ನೂ ಒಳಗೊಂಡಿರುತ್ತದೆ. ಅನೇಕ ಪ್ರವಾಸಿ ತಾಣಗಳಲ್ಲಿ ಮಾರ್ಗದರ್ಶಕರ ಕೊರತೆ ಇದ್ದು, ನೂತನ ಆ್ಯಪ್‌ ಆ ಪ್ರದೇಶಗಳ ಸಮಗ್ರ ವಿವರವನ್ನು ಒಳಗೊಂಡಿರುತ್ತದೆ.

30 ಕೋಟಿ ರೂ. ವೆಚ್ಚದ ಟೆಂಡರ್‌
ಮಂಗಳೂರು ಪ್ರವಾಸೋದ್ಯಮ ಇಲಾಖೆಗೆ ಸದ್ಯ ಅಧಿಕೃತ ಅಂತರ್ಜಾಲ ತಾಣವಿಲ್ಲ. ನೂತನ ವೆಬ್‌ಸೈಟ್‌ ಇನ್ನಷ್ಟೇ ರೂಪಿಸಬೇಕಿದ್ದು, ಮೊಬೈಲ್‌ ಆ್ಯಪ್‌ನಲ್ಲಿ ಸಿಗುವ ಎಲ್ಲ ಮಾಹಿತಿಗಳು ಅದರಲ್ಲೂ ಸಿಗಲಿವೆ. ಮೊಬೈಲ್‌ ಆ್ಯಪ್‌, ವೆಬ್‌ಸೈಟ್‌, ಮಾಹಿತಿ ಕೈಪಿಡಿ ಸಹಿತ ಒಟ್ಟಾರೆ ಪ್ರವರ್ಧನೆ ಕಾರ್ಯಗಳಿಗಾಗಿ 30 ಕೋಟಿ ರೂ. ಟೆಂಡರ್‌ ಕರೆಯಲು ತೀರ್ಮಾನಿಸಲಾಗಿದೆ.

ಎನ್‌ಐಟಿಕೆಯಲ್ಲೂ ಪ್ರವಾಸಿ ಮಾಹಿತಿ ಕೇಂದ್ರ
ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸೋದ್ಯಮ ಇಲಾಖೆಯ “ಪ್ರವಾಸಿ ಮಾಹಿತಿ ಕೇಂದ್ರ’ ಇದೆ. ಇಲ್ಲಿ ಮೇಲ್ವಿಚಾರಕರಿದ್ದು, ನಿಲ್ದಾಣಕ್ಕೆ ಆಗಮಿಸುವವರಿಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಸದ್ಯದಲ್ಲೇ ಎನ್‌ಐಟಿಕೆಯಲ್ಲೂ ಮಾಹಿತಿ ಕೇಂದ್ರ ಆರಂಭಿಸಲು ಇಲಾಖೆ ಮುಂದಾಗಿದೆ. ಈ ಪ್ರದೇಶದಲ್ಲಿ ಹೆಚ್ಚು ವಿದೇಶಿಗರಿದ್ದು, ಅವರಿಗೆ ಈ ಸೇವೆ ಉಪಯುಕ್ತವಾಗಲಿದೆ. 

Advertisement

ಹೆದ್ದಾರಿಗಳಲ್ಲಿ ಪ್ರವಾಸಿ ಮಾರ್ಗಸೂಚಿ
ಹೊರ ಜಿಲ್ಲೆ, ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮೊದಲ ನೋಟಕ್ಕೆ ಮಾಹಿತಿ ಲಭಿಸಬೇಕು ಎಂಬ ಉದ್ದೇಶ ಪ್ರವಾಸೋದ್ಯಮ ಇಲಾಖೆಯದ್ದು. ಹೀಗಾಗಿ ಸದ್ಯವೇ ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಸ್ಥಳಗಳಲ್ಲಿ ಸ್ಥಳೀಯ ಪ್ರವಾಸಿ ಸ್ಥಳಗಳ ಬಗ್ಗೆ ಹೋರ್ಡಿಂಗ್‌, ಮಾರ್ಗಸೂಚಿ ಅಳವಡಿಸಲಾಗುತ್ತದೆ. 

ಪ್ರವಾಸಿಗರ ಅನುಕೂಲ ಕ್ಕೆಂದು ಮೊಬೈಲ್‌ ಆ್ಯಪ್‌ ಪರಿಚಯಿಸುತ್ತಿದ್ದೇವೆ. ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ನಾಗರಿಕರು ಸಲ್ಲಿಸುವ ಪ್ರಸ್ತಾವನೆಗಳನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಮುಂದಿಡುತ್ತೇವೆ. ಜಿಲ್ಲಾಧಿಕಾರಿಗಳು ಇದರ ಅಧ್ಯಕ್ಷರು. ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಮುಂದಾಗುತ್ತೇವೆ.
ಸುಧೀರ್‌ ಗೌಡ, ದ.ಕ. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next