ಉಡುಪಿ: ಬಿದಿರು ಕಡ್ಡಿ ಸೂಕ್ತ ಸಮಯಕ್ಕೆ ಒದಗಿಸಲು ಅನುಕೂಲ ಆಗುವಂತೆ ಅಗರಬತ್ತಿ ಉದ್ಯಮಕ್ಕೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ವಿನಾಯಿತಿ ಕಲ್ಪಿಸಿದ್ದಾರೆ.
ಕಾರ್ಮಿಕ ಆಧಾರಿತ ಉದ್ಯಮವಾದ ಅಗರಬತ್ತಿ ನಿರ್ಮಾಣಕ್ಕೆ ಅಗತ್ಯದ ಕಚ್ಚಾ ವಸ್ತುವಾದ ಬಿದಿರು ಕಡ್ಡಿ ಹೊರದೇಶದಿಂದ ಅಮದುಗೊಳ್ಳುತ್ತಿತ್ತು. ಕೇಂದ್ರ ಸರಕಾರದ ಆಮದು ನಿಯಮಗಳ ಪ್ರಕಾರ ಈ ಬಿದಿರು ಕಡ್ಡಿಗಳು “ಪ್ಲಾಂಟ್ ಕ್ವಾರಂಟೇನ್’ ಪರೀಕ್ಷೆಗೆ ಒಳ ಪಡಬೇಕಾದ ಅನಿವಾರ್ಯತೆಯಿಂದ ಅಗರಬತ್ತಿ ಉದ್ಯಮಕ್ಕೆ ಅಗತ್ಯವಾದ ಬಿದಿರು ಕಡ್ಡಿಗಳು ತಕ್ಕ ಸಮಯಕ್ಕೆ ಕಾರ್ಖಾನೆ/ಕಂಪೆನಿಗಳಿಗೆ ತಲುಪುತ್ತಿರಲಿಲ್ಲ.
ಈ ಕಾರಣದಿಂದ 10 ಲಕ್ಷಕ್ಕೂ ಹೆಚ್ಚಿನ ಜನರು ಅವಲಂಬಿತವಾಗಿರುವ ಅಗರಬತ್ತಿ ಉದ್ಯಮವು ಕಚ್ಚಾವಸ್ತುವಿನ ಕೊರತೆ ಅನುಭವಿಸಿತ್ತು. ಈ ಸಂದರ್ಭದಲ್ಲಿ ಅಖೀಲ ಭಾರತೀಯ ಅಗರಬತ್ತಿ ಉತ್ಪಾದಕರ ಸಂಘ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಭೇಟಿಯಾಗಿ ಉದ್ಯಮದ ಸಮಸ್ಯೆಯನ್ನು ತೋಡಿಕೊಂಡಿದ್ದರು.
ಅಗರಬತ್ತಿ ಉದ್ಯಮದ ಸಮಸ್ಯೆಯನ್ನು ಮನಗೊಂಡ ಸಚಿವರು ತತ್‌ಕ್ಷಣದÇÉೇ ಕೇಂದ್ರ ಕೃಷಿ ಇಲಾಖೆಯ ಪ್ಲಾಂಟ್ ಕ್ವಾರಂಟೈನ್ ವಿಭಾಗಕ್ಕೆ ಸೂಚನೆ ನೀಡಿ, ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿ ನೀಡುವಂತೆ ಆದೇಶಿಸಿದರು.
ಅದರಂತೆ ಕೃಷಿ ಇಲಾಖೆಯು 6.00 ಎಂಎಂ ಕೆಳಗಿನ ಬಿದಿರು ಕಡ್ಡಿಗಳಿಗೆ ಪ್ಲಾಂಟ್ ಕ್ವಾರಂಟೈನ್ ಪ್ರಕ್ರಿಯೆಯಿಂದ ವಿನಾಯಿತಿ ನೀಡುವಂತೆ ಆದೇಶ ನೀಡಲಾಗಿದೆ.