Advertisement

ನೈಋತ್ಯ ರೈಲ್ವೆಗೆ ರಾಷ್ಟ್ರಮಟ್ಟದ ಪಾರಿತೋಷಕ

07:33 AM Jul 05, 2019 | Team Udayavani |

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ರೈಲ್ವೆ ಮಂಡಳಿ ಕೊಡಮಾಡುವ ರಾಷ್ಟ್ರೀಯ ಮಟ್ಟದ ಪಾರಿತೋಷಕಗಳಿಗೆ ಭಾಜನವಾಗಿದೆ.

Advertisement

ನೈಋತ್ಯ ರೈಲ್ವೆಗೆ 2018-19ರ ಸಾಲಿನ ಸಿವಿಲ್ ಇಂಜಿನಿಯರಿಂಗ್‌ ನಿರ್ಮಾಣ ಮತ್ತು ಭಂಡಾರ ವಿಭಾಗದ ಪಾರಿತೋಷಕಗಳು ಲಭಿಸಿವೆ. ಹೊಸ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ನೈಋತ್ಯ ರೈಲ್ವೆ, ಆಗ್ನೇಯ ರೈಲ್ವೆಯೊಂದಿಗೆ ಜಂಟಿಯಾಗಿ ಸಿವಿಲ್ ಎಂಜಿನಿಯರಿಂಗ್‌ ನಿರ್ಮಾಣದ ದಕ್ಷತಾ ಪ್ರಶಸ್ತಿ ಪಡೆದಿದೆ.

ಕಳೆದ ವರ್ಷ ನೈಋತ್ಯ ರೈಲ್ವೆ 227 ಕಿಮೀಗಳ ಜೋಡಿಮಾರ್ಗ ನಿರ್ಮಿಸಿದೆ. ಜೋಡಿಮಾರ್ಗ ಕಾಮಗಾರಿಯ ಪ್ರಗತಿಯು ರಾಷ್ಟ್ರೀಯ ಸರಾಸರಿಗಿಂತ ಅಧಿಕ ಹಾಗೂ ಹೆಚ್ಚು ವೇಗದ್ದಾಗಿದೆ.

ವಂದಾಲ-ಮುಳವಾಡ ನಡುವಿನ 27 ಕಿಮೀ ಜೋಡಿಮಾರ್ಗವನ್ನು (ಹೋಟಗಿ-ಕೂಡಗಿ-ಗದಗ 284 ಕಿಮೀ) 2019ರ ಎ. 22ರಂದು; ಜುಮನಾಳ-ಮಿಂಚನಾಳ ನಡುವಿನ 32 ಕಿಮೀ ಜೋಡಿಮಾರ್ಗವನ್ನು (ಹೋಟಗಿ-ಕೂಡಗಿ-ಗದಗ 284 ಕಿಮೀ) ಮಾರ್ಚ್‌ 2019ರಲ್ಲಿ; ಅರಸಿಕೆರೆ-ಕರಡಿ ನಡುವಿನ 36 ಕಿಮೀ ಜೋಡಿಮಾರ್ಗವನ್ನು (ಅರಸೀಕೆರೆ-ತುಮಕೂರು 96 ಕಿಮೀ) ನವೆಂಬರ್‌ 2018ರಲ್ಲಿ ಪೂರ್ಣಗೊಳಿಸಲಾಗಿದೆ.

ಚಿಕ್ಕಜಾಜೂರು-ತೋಳಹುಣಸೆ ನಡುವಿನ 37 ಕಿಮೀ ಜೋಡಿಮಾರ್ಗವನ್ನು (ಹುಬ್ಬಳ್ಳಿ-ಚಿಕ್ಕಜಾಜೂರು 190 ಕಿಮೀ) ಡಿಸೆಂಬರ್‌ 2018ರಲ್ಲಿ; ಮಾಕಳೀದುರ್ಗ-ದೇವರಪಲ್ಲಿ ನಡುವಿನ 36 ಕಿಮೀ ಜೋಡಿಮಾರ್ಗವನ್ನು (ಯಲಹಂಕ-ಪೆನುಕೊಂಡ 120 ಕಿಮೀ) ಏಪ್ರಿಲ್ 2019ರಲ್ಲಿ; ಹೊಸಪೇಟೆ-ವಾಸ್ಕೋ ಡಗಾಮಾ ಜೋಡಿಮಾರ್ಗ ಯೋಜನೆ (352 ಕಿಮೀ) ದೇವರಾಯಿ-ಶಿವಥಾನ ನಡುವಿನ 8 ಕಿಮೀ ಜೋಡಿಮಾರ್ಗವನ್ನು ಮೇ 2018ರಲ್ಲಿ; ಕೊಪ್ಪಳ ಮತ್ತು ಮುನಿರಾಬಾದ್‌ ನಡುವಿನ 22 ಕಿಮೀ ಜೋಡಿಮಾರ್ಗವನ್ನು ಡಿಸೆಂಬರ್‌ 2018ರಲ್ಲಿ ಪೂರ್ಣಗೊಳಿಸಲಾಗಿದೆ.

Advertisement

ಅಣ್ಣಿಗೇರಿ ಮತ್ತು ಬಿಂಕದಕಟ್ಟಿ ನಡುವಿನ 18 ಕಿಮೀ ಜೋಡಿಮಾರ್ಗವನ್ನು ಮಾರ್ಚ್‌ 2019ರಲ್ಲಿ; ಅಳ್ನಾವರ ಮತ್ತು ದೇವರಾಯಿ ನಡುವಿನ 21 ಕಿಮೀ ಜೋಡಿಮಾರ್ಗವನ್ನು ಮಾರ್ಚ್‌ 2019ರಲ್ಲಿ ಮುಗಿಸಲಾಗಿದೆ.

ಅತಿ ಹೆಚ್ಚು ಶೇಕಡಾವಾರು ಗುರಿ ಸಾಧನೆ ಮೂಲಕ ನೈಋತ್ಯ ರೈಲ್ವೆಯು ಅತ್ಯುತ್ತಮ ವಲಯವಾಗಿ ಹೊರಹೊಮ್ಮಿದೆ. ಪಾರಿತೋಷಕ ತನ್ನದಾಗಿಸಿಕೊಂಡಿದೆ.

2018-19ರ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ 137.46 ಕೋಟಿ ಮೌಲ್ಯದ ಅನುಪಯುಕ್ತ ಸಾಮಗ್ರಿಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷಕ್ಕಿಂತ ಶೇ. 57.15 ಹೆಚ್ಚಾಗಿದೆ. ಕಳೆದ ಏಳು ವರ್ಷಗಳಲ್ಲಿ ಅತ್ಯಂತ ಹೆಚ್ಚು ಅನುಪಯುಕ್ತ ಸಾಮಗ್ರಿಗಳ ಮಾರಾಟ 2018-19ರ ಆರ್ಥಿಕ ವರ್ಷದಲ್ಲಿ ದಾಖಲಾಗಿದೆ.

ನೈಋತ್ಯ ರೈಲ್ವೆ ಸಾಮಗ್ರಿ ವ್ಯವಸ್ಥಾಪನಾ ವಿಭಾಗವು ಸಾಮಗ್ರಿಗಳ ಖರೀದಿಯಲ್ಲಿ ಶೇ.100 ಡಿಜಿಟಲೀಕರಣ ಜಾರಿಗೆ ತಂದಿದೆ. ಆನ್‌ಲೈನ್‌ ಮೂಲಕವೇ ಟೆಂಡರ್‌ಗಳನ್ನು ಅಂತಿಮಗೊಳಿಸಲಾಗುತ್ತಿದೆ ಮತ್ತು ಕಾಗದರಹಿತ ವ್ಯವಸ್ಥೆ ಮೂಲಕ ಖರೀದಿ ಆದೇಶಗಳನ್ನು ನೀಡಲಾಗುತ್ತಿದೆ. ಪಾವತಿ ಮತ್ತು ಮರುಪಾವತಿ ಆನ್‌ಲೈನ್‌ ಮೂಲಕವೇ ಮಾಡಲಾಗುತ್ತಿದೆ. ಅನುಪಯುಕ್ತ ಸಾಮಗ್ರಿಗಳ ಮಾರಾಟವನ್ನೂ ಸಹ ಇ-ಹರಾಜಿನ ಮೂಲಕವೇ ನಡೆಸಲಾಗುತ್ತಿದೆ.

2018-19ನೇ ಸಾಲಿನಲ್ಲಿ ಸಾಮಗ್ರಿ ವ್ಯವಸ್ಥಾಪನೆಯ ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟ ನಿರ್ವಹಣೆ ತೋರಿದ್ದಕ್ಕಾಗಿ ನೈಋತ್ಯ ರೈಲ್ವೆಗೆ ದಕ್ಷಿಣ ಮಧ್ಯ ರೈಲ್ವೆಯೊಂದಿಗೆ ಜಂಟಿಯಾಗಿ ಭಂಡಾರ ವಿಭಾಗದಲ್ಲಿ ಪಾರಿತೋಷಕ ಘೋಷಿಸಲಾಗಿದೆ.

ಜುಲೈ ಮೂರನೇ ವಾರದಲ್ಲಿ ಮುಂಬೈನಲ್ಲಿ ಆಯೋಜಿಸುವ ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಸಚಿವರು ಪಾರಿತೋಷಕ ವಿತರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next