Advertisement

ಮಕ್ಕಳೊಂದಿಗೆ ನದಿಗೆ ಹಾರಿದ ಮೈಸೂರಿನ ಮಹಿಳೆ

01:02 AM Sep 30, 2019 | Sriram |

ಬಂಟ್ವಾಳ: ಯಜಮಾನನ ಸಾವಿನಿಂದ ಕಂಗೆಟ್ಟ ಕುಟುಂಬವೊಂದರ ಮೂವರು ಸದಸ್ಯರು ತಮ್ಮ ಸಾಕುನಾಯಿ ಸಹಿತ ಶನಿವಾರ ರಾತ್ರಿ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿದ್ದಾರೆ. ಈ ಪೈಕಿ ಇಬ್ಬರ ಶವಗಳು ಲಭಿಸಿವೆ. ಓರ್ವ ಪತ್ತೆಯಾಗಿಲ್ಲ.

Advertisement

ಕೊಡಗು ಜಿಲ್ಲೆಯ ವೀರಾಜಪೇಟೆ ಕಡಂಗಳ ಬಳ್ಳಚಂಡ ಮೂಲದ, ಪ್ರಸ್ತುತ ಮೈಸೂರು ಜಿಲ್ಲೆಯ ಸರಸ್ವತಿಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯ ಪಿ.ಎಸ್‌. ನಗರದಲ್ಲಿ ನೆಲೆಸಿರುವ ಕವಿತಾ ಮಂದಣ್ಣ (55), ಅವರ ಪುತ್ರ ಕೌಶಿಕ್‌ ಮಂದಣ್ಣ (30) ಹಾಗೂ ಪುತ್ರಿ ಕಲ್ಪಿತಾ ಮಂದಣ್ಣ (20) ಅವರು ನೀರಿಗೆ ಹಾರಿದವರು.

ಘಟನೆ ನಡೆದ ತತ್‌ಕ್ಷಣ ಸ್ಥಳೀಯರು ಕಾರ್ಯಾಚರಣೆ ನಡೆಸಿ ಕವಿತಾ ಮತ್ತು ಅವರ ಸಾಕುನಾಯಿಯನ್ನು ಮೇಲೆತ್ತಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕವಿತಾ ಅವರು ಮೃತಪಟ್ಟಿದ್ದರು.

ಘಟನೆಯ ವಿವ
ಶನಿವಾರ ರಾತ್ರಿ ಇಕೋ ಕಾರಿನಲ್ಲಿ ಬಂದಿದ್ದ ಮೂವರು ತಮ್ಮ ವಾಹನವನ್ನು ನಿಲ್ಲಿಸಿ ಪಾಣೆ ಮಂಗಳೂರು ಸೇತುವೆ ಮೇಲಿಂದ ನೀರಿಗೆ ಹಾರಿದ್ದರು. ಇದನ್ನು ರಿಕ್ಷಾ ಚಾಲಕರೊಬ್ಬರು ಗಮನಿಸಿ ಬಂಟ್ವಾಳ ನಗರ ಪೊಲೀಸರು ಹಾಗೂ ಗೂಡಿನಬಳಿಯ ಈಜುಗಾರರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಈಜುಗಾರರು ಕವಿತಾ ಹಾಗೂ ನಾಯಿಯನ್ನು ಮೇಲೆತ್ತಿದ್ದರು. ಈಜುಗಾರರು ತಡರಾತ್ರಿ 2.30ರ ವರೆಗೆ ಕಾರ್ಯಾಚರಣೆ ನಡೆಸಿದ್ದರೂ ಮತ್ತಿಬ್ಬರ ಸುಳಿವು ಸಿಕ್ಕಿರಲಿಲ್ಲ.

ರವಿವಾರ ದಿನವಿಡೀ ಕೌಶಿಕ್‌ ಹಾಗೂ ಕಲ್ಪಿತಾಗಾಗಿ ನದಿಯಲ್ಲಿ ಹುಡುಕಾಟ ನಡೆಸಲಾಗಿದೆ. ಕಲ್ಪಿತಾ ಅವರ ಮೃತದೇಹ ಕೊಣಾಜೆ ಠಾಣಾ ವ್ಯಾಪ್ತಿಯ ಇನೋಳಿ ಕೊರಿಯಾ ಸಮೀಪ ಪತ್ತೆಯಾಗಿದೆ. ಅವರ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದೆ.

Advertisement

ಬಂಟ್ವಾಳ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಡಿ. ನಾಗರಾಜು, ನಗರ ಎಸ್‌ಐ ಚಂದ್ರಶೇಖರ್‌ ಸಿಬಂದಿ ಜತೆಯಲ್ಲಿ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಂಡಿದ್ದರು. ಸ್ಥಳೀಯ ಈಜುಗಾರರು ಸಹಿತ ಬಂಟ್ವಾಳ ಅಗ್ನಿಶಾಮಕ ದಳದ ಸಿಬಂದಿ ರವಿವಾರ ಬೆಳಗ್ಗಿನಿಂದಲೇ ನದಿಯಲ್ಲಿ ತುಂಬಾ ದೂರದ ವರೆಗೆ ಹುಡುಕಾಡಿದ್ದರು. ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ಬಿ.ಮೂಡ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್‌, ಪಾಣೆಮಂಗಳೂರು ಗ್ರಾಮ ಲೆಕ್ಕಾಧಿಕಾರಿ ವಿಜೇತ, ಸಿಬಂದಿ ಸದಾಶಿವ ಕೈಕಂಬ, ಶಿವಪ್ರಸಾದ್‌ ರವಿವಾರ ಕಾರ್ಯಾಚರಣೆಯ ಸ್ಥಳದಲ್ಲಿದ್ದರು.

ಮೃತರ ಸಂಬಂಧಿಕರು ರವಿವಾರ ತುಂಬೆ ಆಸ್ಪತ್ರೆಗೆ ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರ ಬರೆದಿಟ್ಟಿದ್ದರು
ಈ ಮೂವರು ಮಂಗಳೂರಿನತ್ತ ಬರುವ ಮೊದಲು ಪತ್ರ ಬರೆದಿಟ್ಟಿದ್ದರು ಎಂದು ಸರಸ್ವತಿಪುರಂ ಪೊಲೀಸರು ಬಂಟ್ವಾಳ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ ಪತ್ರದಲ್ಲಿ ಏನಿದೆ ಎಂಬ ಮಾಹಿತಿ ಸಿಕ್ಕಿಲ್ಲ. ಕೃಷಿಕರಾಗಿದ್ದ ಕಿಶನ್‌ ಸಾವಿಗೂ ಕಾರಣ ತಿಳಿದುಬಂದಿಲ್ಲ. ಅವರ ಅಂತ್ಯಕ್ರಿಯೆ ನಡೆಯುವ ಮೊದಲೇ ಮನೆ ಮಂದಿ ನದಿಗೆ ಹಾರಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಹುಡುಕಾಟಕ್ಕೆ 4 ಬೋಟುಗಳು
ರವಿವಾರ ಅಗ್ನಿಶಾಮಕ ದಳದ ಬಂಟ್ವಾಳ ಹಾಗೂ ಪಾಂಡೇಶ್ವರದ 2 ಬೋಟುಗಳು, ಎನ್‌ಡಿಆರ್‌ಎಫ್‌ನ 2 ಬೋಟುಗಳು ಹುಡುಕಾಟ ನಡೆಸಿದ್ದವು.ಅಗ್ನಿಶಾಮಕ ದಳದ 12 ಹಾಗೂ ಎನ್‌ಡಿಆರ್‌ಎಫ್‌ನ 15 ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಜತೆಗೆ ಸ್ಥಳೀಯ ಈಜುಪಟುಗಳಾದ ಮಹಮ್ಮದ್‌, ಮೋನು, ಸತ್ತಾರ್‌ ಗೂಡಿನಬಳಿ ಹಾಗೂ ಇಬ್ರಾಹಿಂ ಕೂಡ ಪಾಲ್ಗೊಂಡಿದ್ದರು. ಕೌಶಿಕ್‌ ಮಂದಣ್ಣ ಅವರಿಗಾಗಿ ರವಿವಾರ ಸಂಜೆಯ ವರೆಗೂ ಶೋಧ ನಡೆಸಿದ್ದು, ಸೋಮವಾರ ಬೆಳಗ್ಗೆ ಮತ್ತೆ ಆರಂಭಿಸಲಾಗುವುದು ಎಂದು ಅಸಿಸ್ಟೆಂಟ್‌ ಫೈರ್‌ ಆಫೀಸರ್‌ ರಾಜೀವ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಪಾಣೆಮಂಗಳೂರಿನಲ್ಲೂ ಇಲ್ಲ ಸಿಸಿ ಕೆಮರಾ
ಸಿದ್ಧಾರ್ಥ್ ಸಾವಿನ ಬಳಿಕ ಉಳ್ಳಾಲ ಸೇತುವೆಯಲ್ಲಿ ಸಿಸಿ ಕೆಮರಾ ಹಾಗೂ ನೆಟ್‌ ಅಳವಡಿಸುವ ಕುರಿತು ಜನಪ್ರತಿನಿಧಿಗಳು, ದ.ಕ.ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಚಿಂತಿಸಿತ್ತು. ಸಿದ್ಧಾರ್ಥ್ ಸಾವಿನ ಬಳಿಕವೂ ಅಲ್ಲಿ ಕೆಲ ವರು ನದಿಗೆ ಹಾರಿದ್ದರೂ ಸಿಸಿ ಕೆಮರಾ ಅಳವಡಿಸಲಾಗಿಲ್ಲ. ಇತ್ತ ಪಾಣೆಮಂಗಳೂರಿನಲ್ಲೂ ಸಿಸಿ ಕೆಮರಾ ಸಹಿತ ಯಾವುದೇ ಸುರಕ್ಷಾ ಕ್ರಮಗಳಿಲ್ಲ.

ಯಜಮಾನನ ಸಾವು ತಂದ ಆಘಾತ
ಸೆ. 28ರಂದು ಕವಿತಾ ಅವರ ಪತಿ ಕಿಶನ್‌ ಮಂದಣ್ಣ ಸಾವನ್ನಪ್ಪಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡುಹೋದ ಬಳಿಕ ಸಂಬಂಧಿಯೊಬ್ಬರ ಜತೆ ಫೋನಿನಲ್ಲಿ ಮಾತನಾಡಿ ಪತ್ನಿ ಕವಿತಾ, ಮಕ್ಕಳಾದ ಕೌಶಿಕ್‌ ಹಾಗೂ ಕಲ್ಪಿತಾ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಮಂಗಳೂರಿನತ್ತ ಹೊರಟಿದ್ದರು.

ತಮ್ಮ ಕೆಎ 09 ಎಂಎ 489 ನೋಂದಣಿಯ ಮಾರುತಿ ಇಕೋ ಕಾರಿನಲ್ಲಿ ಬಂದಿದ್ದ ಅವರು ರಾತ್ರಿ 10.30ರ ವೇಳೆಗೆ ಕಾರನ್ನು ಪಾಣೆಮಂಗಳೂರು ಹೊಸ ಸೇತುವೆ ಬಳಿ ನಿಲ್ಲಿಸಿ ನದಿಗೆ ಧುಮುಕಿದ್ದರು. ಮೈಸೂರು ಪಶ್ಚಿಮ ಆರ್‌ಟಿಒ ವ್ಯಾಪ್ತಿಯ ಕಾರಿನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಸರಸ್ವತಿಪುರಂ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ ಬಂಟ್ವಾಳ ನಗರ ಪೊಲೀಸರು ನೀರಿಗೆ ಹಾರಿದ್ದ ಕುಟುಂಬದ ಗುರುತು ಪತ್ತೆ ಹಚ್ಚುವಲ್ಲಿ ಸಫಲರಾದರು.

ಬದುಕಿದ ಸಾಕುನಾಯಿ
ದುರಂತದಲ್ಲಿ ನಾಯಿ ಬದುಕುಳಿದಿದೆ. ನಾಯಿ ನೀರಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಅತ್ತ ತೆರಳಿದಾಗ ಮಹಿಳೆ ಕಂಡುಬಂದಿದ್ದರು. ಪ್ರಸ್ತುತ ನಾಯಿಯನ್ನು ಎಸ್‌ಐ ಚಂದ್ರಶೇಖರ್‌ ಅವರು ಆರೈಕೆಗಾಗಿ ಬಿ.ಸಿ.ರೋಡಿನ ಮತ್ಸé ಅಕ್ವೇರಿಯಂಗೆ ನೀಡಿದ್ದು, ಅಲ್ಲಿನ ಪುಷ್ಪರಾಜ್‌ ಆರೈಕೆ ಮಾಡು ತ್ತಿದ್ದಾರೆ. ನಾಯಿಯು ಸ್ಥಳೀಯ ತಳಿಯಾಗಿದ್ದು, ಉತ್ತಮ ಬುದ್ಧಿ ಹೊಂದಿದೆ ಎಂದು ಪುಷ್ಪರಾಜ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next