Advertisement

ಕರುಳ ಬಳ್ಳಿಗಳನ್ನೇ ಕೊಂದಳು ತಾಯಿ

11:02 AM Jun 19, 2019 | Suhan S |

ಕೊಪ್ಪಳ: ತನ್ನ ಮೂರು ಮಕ್ಕಳನ್ನು ಹತ್ಯೆ ಮಾಡಿದ ಹೆತ್ತ ತಾಯಿ ತಾನೂ ನೇಣಿಗೆ ಶರಣಾದ ಹೃದಯ ಕಲಕುವ ಘಟನೆ ಕುಕನೂರು ತಾಲೂಕಿನ ಯರೆಹಂಚಿನಾಳ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಪತಿಯ ಕಿರುಕುಳದಿಂದಲೇ ಈ ದುರ್ಘ‌ಟನೆ ನಡೆದಿದೆ ಎಂದು ಮಹಿಳೆ ತವರು ಮನೆಯ ಸಂಬಂಧಿಕರು ಆರೋಪಿಸಿದ್ದಾರೆ.

Advertisement

ನೇಣಿಗೆ ಶರಣಾದ ತಾಯಿ ಯಲ್ಲಮ್ಮ ಬಾರಕೇರ (28) ತನ್ನ ಮೂವರು ಮಕ್ಕಳನ್ನು ವಿವಿಧ ರೀತಿಯಲ್ಲಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮೊದಲ ಪುತ್ರಿ ಅಕ್ಷತಾ (6)ಳನ್ನು ಕುಡಿಯುವ ನೀರಿನ ಟಾಕಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. 2ನೇ ಪುತ್ರಿ ಕಾವ್ಯಾ(4)ಳನ್ನು ಬಕೆಟ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದು, ಮೂರನೇ ಪುತ್ರ ಪ್ರಪಂಚದ ಜ್ಞಾನವನ್ನೇ ತಿಳಿಯದ ಹಸುಳೆ ನಾಗರಾಜ(2) ನನ್ನು ನೀರಿನ ಗುಂಡಿಯಲ್ಲಿ ಮುಳುಗಿಸಿ ಹತ್ಯೆ ಮಾಡಿ ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ.

ಪತಿ ಉಮೇಶ ಬಾರಕೇರ ನಿತ್ಯ ಕುಡಿದು ಬಂದು ಮನೆಯಲ್ಲಿ ಪತ್ನಿ ಯಲ್ಲಮ್ಮಳಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಯಲ್ಲಮ್ಮ ತವರು ಮನೆ ಲಕ್ಕುಂಡಿಯಲ್ಲಿಯೇ ಕೆಲವು ದಿನ ವಾಸವಾಗಿದ್ದಳು. ವರ್ಷದ ಹಿಂದಷ್ಟೆ ಗಂಡನ ಮನೆ ಯರೆಹಂಚಿನಾಳಗೆ ಆಗಮಿಸಿ ನೆಲೆಸಿದ್ದರೂ ಕಿರಿಕಿರಿ ತಪ್ಪಿರಲಿಲ್ಲ. ಸೋಮವಾರ ಇಬ್ಬರ ನಡುವೆ ಮತ್ತೆ ಜಗಳ ನಡೆದಿದ್ದು, ಇದರಿಂದ ರೋಸಿ ಹೋಗಿದ್ದ ಪತ್ನಿ ಯಲ್ಲಮ್ಮ ಮಧ್ಯರಾತ್ರಿ ಮನೆಯಲ್ಲಿ ಮೂರು ಕಂದಮ್ಮಗಳನ್ನು ಕುಡಿಯುವ ನೀರಿನ ಪಾತ್ರೆಯಲ್ಲಿ ತಲೆ ಬಗ್ಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಪತಿ ಮನೆಯ ಹೊರಗೆ ಮಲಗಿದ್ದು, ಮಂಗಳವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಎಸ್ಪಿ ರೇಣುಕಾ ಸುಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಭೇಟಿ ನೀಡಿದರು. ಪತಿ ಉಮೇಶ ಬಾರಕೇರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

 

Advertisement

ಮೆತಗಲ್ ಘಟನೆ ಮಾಸುವ ಮುನ್ನವೇ ನಡೀತು ಇನ್ನೊಂದು ಘಟನೆ:

ತಾಲೂಕಿನ ಮೆತಗಲ್ ಗ್ರಾಮದಲ್ಲಿ ಒಂದೇ ಕುಟುಂಬದ ಆರು ಜನ ಸಾಮೂಹಿಕ ಆತ್ಮಹತ್ಯೆ ಘಟನೆ ಮಾಸುವ ಮುನ್ನವೇ ಕುಕನೂರು ತಾಲೂಕಿನ ಯರೆ ಹಂಚಿನಾಳದಲ್ಲಿ ಹೆತ್ತ ತಾಯಿಯೇ ಮೂರು ಕಂದಮ್ಮಗಳನ್ನು ಹತ್ಯೆ ಮಾಡಿ ತಾನೂ ನೇಣಿಗೆ ಶರಣಾದ ದುರ್ಘ‌ಟನೆ ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ಪತಿ ಉಮೇಶ ಬಾರಕೇರ ಲಕ್ಕುಂಡಿಯ ಯಲ್ಲಮ್ಮಳನ್ನು 8 ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದನು. ಆರಂಭದಲ್ಲಿ ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದ ಇವರು ಇತ್ತೀಚೆಗೆ ಕುಟುಂಬದಲ್ಲಿ ಕಲಹ ಕಾಣಿಸಿಕೊಂಡಿದೆ. ಪತಿ ಉಮೇಶ ನಿತ್ಯ ಕುಡಿದು ಬಂದು ಪತ್ನಿ ಮಕ್ಕಳನ್ನು ಬಡಿಯುತ್ತಿದ್ದನು. ಇದರಿಂದ ರೋಸಿ ಹೋಗಿದ್ದ ಪತ್ನಿ ಪತಿ ಕಿರುಕುಳ ತಾಳದೆ ತವರು ಮನೆಗೆ ತೆರಳಿ ಅಲ್ಲಿಯೇ ನೆಲೆಸಿದ್ದಳು. ಪತ್ನಿಯ ಹಿಂದೆಯೇ ತೆರಳಿದ್ದ ಉಮೇಶ ಅಲ್ಲೇ ಕೆಲವು ವರ್ಷ ವಾಸ ಮಾಡಿದ್ದನು. ಏಕೋ ಮತ್ತೆ ಯರೆ ಹಂಚಿನಾಳ ಗ್ರಾಮಕ್ಕೆ ಕುಟುಂಬ ಸಮೇತ ಆಗಮಿಸಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು.

ಪತಿ ನಿತ್ಯ ಮದ್ಯ ಸೇವನೆ ಮಾಡಿ ಮನೆಯಲ್ಲಿ ಜಗಳ ಮಾಡುತ್ತಿದ್ದನಂತೆ. ಇದರಿಂದ ನೊಂದ ಪತ್ನಿ ಒಂದು ವಾರ ಹೇಳದೆ ಕೇಳದೆ ಏಲ್ಲಿಯೋ ಹೋಗಿದ್ದಳಂತೆ. ಪುನಃ ಮನೆಗೆ ಬಂದ ಪತ್ನಿ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುವುದು. ಸಂಶಯ ಪಡುವುದು ಮಾಡುತ್ತಿದ್ದರಿಂದ ಯಲ್ಲಮ್ಮ ತೀವ್ರ ನೊಂದು ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ. ಈ ಹಿಂದೆ ಇವರ ಜಗಳ ಬಗೆಹರಿಸಲು ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿಯೂ ನಡೆದಿದೆ. ಹತ್ತಾರು ಬಾರಿ ಪಂಚಾಯಿತಿಯಲ್ಲಿ ಸಮಸ್ಯೆ ಬಗೆಹರಿಸಿದಷ್ಟು ನಿತ್ಯ ಜಗಳ ಹೆಚ್ಚಾಗಿದೆ. ಇದರಿಂದ ಹಿರಿಯರು ಇವರ ನಡವಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ 30 ವರ್ಷ ಪೂರೈಸದ ಪತ್ನಿ ಯಲ್ಲಮ್ಮ ಇಡೀ ಜೀವನದ ಬಂಡಿಯಲ್ಲಿ ನಲಿವುಗಳಿಗಿಂತ ನೋವನ್ನೇ ಹೆಚ್ಚು ಅನುಭವಿಸಿ ಮಾನಸಿಕವಾಗಿ ಕುಗ್ಗಿದ್ದಳಂತೆ. ಕೌಟುಂಬಿಕ ಕಲಕ್ಕೆ ಬೇಸತ್ತು ತಮ್ಮ ಮಕ್ಕಳು ಮುಂದೆ ನೋವು ಅನುಭವಿಸಬಾರದು ತಾನೂ ಇವರ ಕೈಯಲ್ಲಿ ನರಕ ಅನುಭವಿಸುವ ಬದಲು ಸಾಯುವುದು ಮೇಲು ಎಂದು ಆಗಾಗ ಆಪ್ತರ ಬಳಿ ಕಣ್ಣೀರಿಡುತ್ತಲೇ ತನ್ನ ನೋವನ್ನ ಹೇಳಿದ್ದಳಂತೆ. ಮಂಗಳವಾರ ರಾತ್ರಿ ಮಕ್ಕಳನ್ನು ಮನೆಯಲ್ಲಿ ಹತ್ಯೆ ಮಾಡಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಮನೆಯ ಹೊರಗೆ ಮಲಗಿದ್ದು, ಬೆಳಗ್ಗೆ ಎದ್ದು ನೋಡಿ ದಾಗ ಈ ಘಟನೆ ಊರು ತುಂಬೆಲ್ಲ ಹರಡಿದಿದೆ.

ಮಕ್ಕಳ ಹತ್ಯೆ: ಆಕ್ರಂದನ: ಹಿರಿಯ ಪುತ್ರಿ ಅಕ್ಷತಾ ಈ ವರ್ಷವಷ್ಟೆ 1ನೇ ತರಗತಿಗೆ ಪ್ರವೇಶ ಮಾಡಿದ್ದಳು. ಕುಡಿಯುವ ನೀರಿನ ಟಾಕಿಯಲ್ಲಿ ತಲೆ ಮುಳುಗಿಸಿ ಹತ್ಯೆ ಮಾಡಿದ್ದಾಳೆ. 2ನೇ ಪುತ್ರಿ ಕಾವ್ಯಾಳನ್ನು ನೀರಿನ ಬಕೇಟ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದು, ಮೂರನೇ ಪುತ್ರ 2 ವರ್ಷದ ನಾಗರಾಜನನ್ನು ನೀರಿನ ಪಾತ್ರೆಯಲ್ಲಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾಳೆ. ಕೊನೆಗೆ ತಾನೂ ನೇಣಿಗೆ ಶರಣಾಗಿದ್ದಾಳೆ. ತವರು ಮನೆಯವರಿಗೆ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

ಪತಿ ಉಮೇಶ ಬಾರಕೇರ ಬಂಧನ : ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯಲಬುರ್ಗಾ ಪೊಲೀಸರು ಗ್ರಾಮಕ್ಕೆ ಆಗಮಿಸಿ ಪತಿ ಉಮೇಶ ಬಾರಕೇರ್‌ನನ್ನು ಬಂಧಿಸಿ ಕುಕನೂರು ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ಆರಂಭಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ರೇಣುಕಾ ಸುಕಮಾರ ಸೇರಿದಂತೆ ಶಾಸಕ ಹಾಲಪ್ಪ ಆಚಾರ್‌ ಅವರು ಭೇಟಿ ನೀಡಿ ಕುಟುಂಬದ ಹಿನ್ನೆಲೆ ಹಾಗೂ ಆತ್ಮಹತ್ಯೆಕುರಿತಂತೆ ಮಾಹಿತಿ ಪಡೆದರು. ಕುಟುಂಬಕ್ಕೆ ಸಾಂತ್ವನ ಹೇಳಿದರು.

ಘಟನೆಯಲ್ಲಿ ಎರಡು ಕೇಸ್‌ ದಾಖಲು : ಹತ್ಯೆಗೆ ಸಂಬಂಧಿಸಿದಂತೆ ಕುಕನೂರು ಪೊಲೀಸರು ಎರಡು ಕೇಸ್‌ಗಳನ್ನು ದಾಖಲಿಸಿದ್ದಾರೆ. ಒಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು, ಇನ್ನೊಂದು ಕೊಲೆ ಮಾಡಿ ಹಾಗೂ ಕಿರುಕುಳ ನೀಡಿದ ಸಂಬಂಧ ಮತ್ತೂಂದು ಪ್ರಕರಣ ದಾಖಲಿಸಿದ್ದಾರೆ. ಯಲ್ಲಮ್ಮ ಬಾರಕೇರ ಅವರ ತಂದೆ ಪರಸಪ್ಪ ಅವರು ಅಳಿಯನ ವಿರುದ್ಧ ದೂರು ನೀಡಿದ್ದಾರೆ.

ಮೆತಗಲ್ ಘಟನೆ ಮಾಸುವ ಮುನ್ನಾ.. ತಾಲೂಕಿನ ಮೆತಗಲ್ ಗ್ರಾಮದಲ್ಲಿ ಕೆಲವೇ ತಿಂಗಳ ಹಿಂದಷ್ಟೆ ಒಂದೇ ಕುಟುಂಬದ ಆರು ಜನರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿತ್ತು. ಆ ಕುಟುಂಬವೂ ಸಹಿತ ಕೌಟಂಬಿಕ ಕಲಹದ ಜೊತೆಗೆ ಸಾಲಬಾಧೆಗೆ ಮನನೊಂದು ವಿಷ ಸೇವಿಸಿ ಇಡೀ ಕುಟುಂಬವೇ ಇಹಲೋಕ ತ್ಯಜಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next