Advertisement

ಮಗು ಹುಟ್ಟಿದ ತಕ್ಷಣವೇ ಗ್ರಾಮ ತೊರೆದಿದ್ದ ತಾಯಿ..!

12:37 PM Nov 18, 2021 | Team Udayavani |

ಎಚ್‌.ಡಿ.ಕೋಟೆ: ಕಳೆದ 2 ತಿಂಗಳಿಂದ ತಾಯಿಗೆ ಬೇಡವಾಗಿ, ಮಡಿಲಿನಿಂದ ದೂರವಾಗಿದ್ದ ಹಸುಳೆ ಕಂದಮ್ಮ ಹಲವು ತಿರುವುಗಳನ್ನು ಪಡೆದ ಬಳಿಕ ಕಡೆಗೂ ಬುಧವಾರ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದೆ. ಸುಳ್ಳು ಹೇಳುತ್ತಾ ಸತ್ಯ ಮರೆಮಾಚ್ಚಿದ್ದ ತಾಯಿಗೆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅಧಿಕಾರಿಗಳು ತಾಕೀತು ಮಾಡಿ, ಆಕೆಯಿಂದ ಪತ್ರ ಬರೆಸಿಕೊಂಡು ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

Advertisement

ಏನಿದು ಘಟನೆ?: ತಾಲೂಕಿನ ಅಣ್ಣೂರು ಚಿಕ್ಕೆರೆಹಾ ಡಿಯ ರಂಜಿತಾ (ಹೆಸರು ಬದಲಿಸಿದೆ) ಎಂಬಾಕೆ ತನ್ನ ಪತಿಯಿಂದ ಕಳೆದ 10 ವರ್ಷಗಳಿಂದ ದೂರವಿದ್ದರು. ಈ ನಡುವೆ, ರಂಜಿತಾ ಗರ್ಭಿಣಿಯಾಗಿದ್ದು, ಈ ಬಗ್ಗೆ ಹಾಡಿಯ ಜನರಿಗೆ ಯಾವುದೇ ಸುಳಿವು ನೀಡದಂತೆ ಗೌಪ್ಯತೆ ಕಾಪಾಡಿಕೊಂಡಿದ್ದರು.

ಕಳೆದ 2 ತಿಂಗಳ ಹಿಂದೆ ಬೆಳಗಿನ ಜಾವ ಹೆರಿಗೆಯಾಗುತ್ತಿದ್ದಂತೆಯೇ ಹಾಡಿ ಮಂದಿಗೆ ತಿಳಿಯದಂತೆ ರಂಜಿತಾ ತನ್ನ ಶಿಶುವಿನೊಂದಿಗೆ ಹಾಡಿ ತೊರೆದಿದ್ದರು. ರಾಜೇಗೌಡನ ಹುಂಡಿ ಹಾಡಿಯ ಸಂಬಂಧಿಕರ ಮನೆ ಸೇರಿಕೊಂಡಿದ್ದರು. ರಂಜಿತಾ ತನ್ನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದರೂ ಮಗು ಮಾತ್ರ ಇರಲಿಲ್ಲ. ಮಗು ಮಾರಾಟವಾಗಿದೆಯೋ ಇಲ್ಲವೇ ಸಾವನ್ನಪ್ಪಿದೆಯೋ ಎಂಬ ಶಂಕೆ ವ್ಯಕ್ತವಾಗಿತ್ತು.

ಮಗು ನಾಪತ್ತೆ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಮೌಖೀಕ ದೂರು ನೀಡಿದ್ದರೂ ಗಮನ ಹರಿಸಿರಲಿಲ್ಲ. ಮಗು ಕಾಣೆಯಾಗಿರುವ ಸಂಬಂಧ ಉದಯವಾಣಿಯಲ್ಲಿ ನ.10ರಂದು “ಜನಿಸಿದ ಮಗು ಏನಾಯ್ತು? ತಿಂಗಳು ಕಳೆದರೂ ಸುಳಿವಿಲ್ಲ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಪತ್ರಿಕೆಯ ಸುದ್ದಿಯಿಂದ ಎಚ್ಚೆತ್ತುಕೊಂಡ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ನಿಸರ್ಗ ಸಂಸ್ಥೆ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪರಿಶೀಲನೆ ನಡೆಸಿದ್ದರು.

Advertisement

ತಾಯಿ ರಂಜಿತಾ ಇದ್ದ ಜಾಗಕ್ಕೆ ತೆರಳಿ, ಮಗುವಿನ ಕುರಿತು ವಿಚಾರಣೆ ನಡೆಸಿದ್ದರು. ಆಗ ರಂಜಿತಾ, “ತನ್ನ ಮಗು ಮೃತಪಟ್ಟಿದೆ, ಈಗಾಗಲೇ ಅಂತ್ಯಕ್ರಿಯೆ ನಡೆಸಲಾಗಿದೆ’ ಎಂದು ಸುಳ್ಳು ಹೇಳಿಕೆ ನೀಡಿದ್ದರು. ಅಂತ್ಯಕ್ರಿಯೆ ನಡೆಸಿರುವ ಜಾಗವನ್ನು ತೋರಿಸು ಎಂದು ಪ್ರಶ್ನಿಸಿದಾಗ, ತಬ್ಬಿಬ್ಟಾದ ರಂಜಿತಾಳಿಂದ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಆಕೆಯ ಅನುಮಾನಾಸ್ಪದ ನಡೆಯನ್ನು ಗಮನಿಸಿ, ಮತ್ತಷ್ಟು ತೀವ್ರ ವಿಚಾರಣೆಗೊಳಪಡಿಸಿದಾಗ, “ನನ್ನ ಮಗು ಸಂಬಂಧಿಕರ ಮನೆಯಲ್ಲಿ ಇರಿಸಿದ್ದೇನೆ, ಶೀಘ್ರವೇ ಕರೆತರುತ್ತೇನೆ’ ಎಂದು ತಿಳಿಸಿದ್ದರು.

ಎರಡೂ ಮೂರು ದಿನ ಕಳೆದರೂ ಮಗುವಿನ ಆಗಮನವಾಗಲೇ ಇಲ್ಲ, ಕೊನೆಯದಾಗಿ ಈ ದಿನ ಮಗು ಕರೆಸಲೇಬೇಕೆಂದು ಪಟ್ಟು ಹಿಡಿದಾಗ, ನೆರೆಯ ಹುಣಸೂರು ತಾಲೂಕಿನಲ್ಲಿ ಇರಿಸಿದ್ದ ಮಗುವನ್ನು ಕರೆ ತಂದು ತೋರಿದ್ದಾರೆ. ಇನ್ನು ಮುಂದೆ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದೇ ಮಗುವನ್ನು ನನ್ನ ಜೊತೆಗೇ ಇಟ್ಟುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಆಕೆಯಿಂದ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪತ್ರ ಬರೆಸಿಕೊಂಡಿದ್ದಾರೆ.

ಮಗು ಹುಟ್ಟಿದ ತಕ್ಷಣೆ ತಾಯಿ ಎದೆಹಾಲು ಸೇರಿದಂತೆ ಮತ್ತಿತರ ಪೋಷಣೆ ಮಾಡಬೇಕಿದ್ದ ತಾಯಿಯೇ, ಮಗುವನ್ನು ಅಲೆದಾಡಿಸಿ, ಬಚ್ಚಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈಕೆಯ ಉದ್ದೇಶ ಏನಿತ್ತೋ ಯಾರಿಗೂ ಗೊತ್ತಿಲ್ಲ. ಅಂತೂ ಕಳೆದ 2 ತಿಂಗಳಿನಿಂದ ಹಲವು ತಿರುವುಗಳನ್ನು ಪಡೆದುಕೊಂಡಿದ್ದ ಈ ಪ್ರಕರಣವು ಕಡೆಗೆ ಸುಖಾಂತ್ಯ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next