ಬೆಳಗಾವಿ: ಪತಿಯೊಂದಿಗೆ ಜಗಳವಾಡಿದ ಮಹಿಳೆಯೊಬ್ಬಳು ಮಗನೊಂದಿಗೆ ಇಲ್ಲಿಯ ಗಾಂಧಿ ನಗರದ ಮಾರುತಿ ನಗರ ಬಳಿ ರೈಲು ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗಳು ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾಳೆ.
ಮೂಲತಃ ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದ, ಸದ್ಯ ಮಾರುತಿ ನಗರ ನಿವಾಸಿಯಾದ ರೇಣುಕಾ ಯಲ್ಲಪ್ಪ ಗುಟಗುದ್ದಿ(35) ಹಾಗೂ ಮಗ ಲಕ್ಷ್ಮಣ(7) ಮೃತಪಟ್ಟಿದ್ದಾರೆ. ಮಂಗಳವಾರ ಮಧ್ಯರಾತ್ರಿ 12:30ರ ಸುಮಾರಿಗೆ ಘಟನೆ ಸಂಭವಿಸಿದೆ.
ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ರೈಲು ಹಳಿ ಮೇಲೆ ಬಿದ್ದ ಮೃತದೇಹಗಳನ್ನು ಸ್ಥಳೀಯರು ನೋಡಿದ ಮೇಲೆಯೇ ಘಟನೆ ಬೆಳಕಿಗೆ ಬಂದಿದೆ. ಸವಿತಾ ಎಂಬ 12 ವರ್ಷದ ಮಗಳು ತಾಯಿ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾಳೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಇನ್ನೊಬ್ಬ ಮಗಳು ಹಾವು ಕಚ್ಚಿ ಮೃತಪಟ್ಟಿದ್ದಳು.
ತರಕಾರಿ ಮಾರಾಟ ಮಾಡಿಕೊಂಡಿದ್ದ ಈ ಕುಟುಂಬ ಕೆಲ ವರ್ಷಗಳಿಂದ ಬೆಳಗಾವಿ ಮಾರುತಿ ನಗರದ ಶೆಡ್‌ನಲ್ಲಿ ನೆಲೆಸಿತ್ತು. ಪತಿ-ಪತ್ನಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಅದರಂತೆ ಮಂಗಳವಾರ ರಾತ್ರಿಯೂ ಇಬ್ಬರೂ ಜಗಳವಾಡಿದ್ದಾರೆ. ಆಗ ಪತ್ನಿ ರೇಣುಕಾ ಸಿಟ್ಟಿನ ಭರದಲ್ಲಿ ಮಗಳು ಸವಿತಾ ಹಾಗೂ ಮಗ ಲಕ್ಷ್ಮಣನ ಕೈ ಹಿಡಿದು ಮನೆಯಿಂದ ಹೊರಬಿದ್ದಿದ್ದಾಳೆ. ಇವರು ನೆಲೆಸಿದ್ದ ಶೆಡ್‌ದಿಂದ ಕೇವಲ 100 ಮೀಟರ್ ಅಂತರದಲ್ಲಿರುವ ರೈಲ್ವೆ ಹಳಿಯತ್ತ ತಾಯಿ ಧಾವಿಸುತ್ತಿರುವುದನ್ನು ಕಂಡ ಮಗಳು ತಾಯಿಯ ಕೈ ಬಿಡಿಸಿಕೊಂಡು ಓಡಿ ಹೋಗಿದ್ದಾಳೆ.
ರೈಲು ಹಾಯ್ದು ರೇಣುಕಾಳ ಕಾಲು ಕತ್ತರಿಸಿ ಹೋಗಿದೆ. ಆದರೆ ಸ್ಥಳದಲ್ಲಿ ಕತ್ತರಿಸಿದ ಕಾಲು ಪತ್ತೆಯಾಗಿಲ್ಲ. ಬೀದಿ ನಾಯಿಗಳು ಎಳೆದುಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಮಗನ ದೇಹದಿಂದ ರುಂಡ ಬೇರ್ಪಟ್ಟಿದ್ದು, ಹಳಿಯ ಪಕ್ಕದಲ್ಲೇ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಐದು ಗಂಟೆ ಸುಮಾರಿಗೆ ಪತಿ ಯಲ್ಲಪ್ಪ ಗುಟಗುದ್ದಿ ತನ್ನ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈತನೇ ಪತ್ನಿ ಹಾಗೂ ಮಗನನ್ನು ಹತ್ಯೆ ಮಾಡಿರುವ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದು, ಇದೊಂದು ಸಂಶಯಾಸ್ಪದ ಸಾವು ಎಂದು ದೂರಿದ್ದಾರೆ.
ಸ್ಥಳಕ್ಕೆ ಮಾಳಮಾರುತಿ ಇನ್ಸಪೆಕ್ಟರ್ ಜಗದೀಶ ಹಂಚಿನಾಳ, ರೈಲ್ವೆ ಪಿಎಸ್‌ಐ ಬಿ.ಟಿ. ವಾಲೀಕರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಬಗ್ಗೆ ತನಿಖೆ ನಡೆಸಿದ್ದು, ಪತಿ ಯಲ್ಲಪ್ಪ ಗುಟಗುದ್ದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.