Advertisement

ಮಕ್ಕಳ ಭವಿಷ್ಯಕ್ಕೆ ಭಿಕ್ಷುಕಿಯಾದ ತಾಯಿ..!

11:38 AM Mar 08, 2019 | |

ವಿಜಯಪುರ: ಕಿತ್ತು ತಿನ್ನು ಬಡತನ. ಮಕ್ಕಳ ಭವಿಷ್ಯಕ್ಕಾಗಿ ಅವರಿವರ ಮನೆಯಲ್ಲಿ ಕಸ ಮುಸುರಿ ತಿಕ್ಕುವ ಕೆಲಸ. ಭಿಕ್ಷಾ ಪಾತ್ರೆ ಹಿಡಿದು ಊರೂರು ಅಲೆದಾಟ. ಇದು ಕಥೆಯಲ್ಲ ಜೀವನ. ಹೌದು. ಇಲ್ಲೋರ್ವ ತಾಯಿ ಮಕ್ಕಳ ಭವಿಷ್ಯ ರೂಪಿಸಲು ಹಸಿವು ಕಟ್ಟಿ, ಭಿಕ್ಷಾ ಪಾತ್ರೆ ಹಿಡಿದು ಊರೂರು
ಅಲೆದಿದ್ದಾರೆ. ಆ ತಾಯಿಯ ಶ್ರಮದ ಪ್ರತಿಫಲ ಎಂಬಂತೆ ಮಕ್ಕಳಿಂದು ಕ್ರೀಡೆಯಲ್ಲಿ ಹಲವು ಪದಕಗಳನ್ನು ಬಾಚಿಕೊಳ್ಳುವುದರ ಜತೆಗೆ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದಾರೆ.

Advertisement

ಅಮ್ಮ ಎಂಬ ಶಬ್ದಕ್ಕೆ ಪರ್ಯಾವಿಲ್ಲ ಎಂಬ ಮಾತಿಗೆ ತಕ್ಕಂತೆ ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಓರ್ವ ತಾಯಿ ಸಾಕ್ಷಿಯಾಗಿದ್ದಾರೆ. ತಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಕ್ರೀಡಾ ಭವಿಷ್ಯ ರೂಪಿಸಿಕೊಡಲು ತಾನು ಹಸಿವು ಕಟ್ಟಿ, ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದು ಊರೂರು ಅಲೆದಿದ್ದಾರೆ. ಆ ತಾಯಿಯ ಶ್ರಮಕ್ಕೆ ಫಲ ಎಂಬಂತೆ ಮಕ್ಕಳು ಕೂಡ ರಂಗದಲ್ಲಿ ಹಲವು ಪದಕಗಳನ್ನು ಬಾಚಿಕೊಂಡು ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿದ್ದಾರೆ.

ಗುಮ್ಮಟನಗರಿಯ ಖಾಜಾಬೀ ಮಕಾಂದಾರ ಎಂಬುವರೇ ಆ ಮಹಾತಾಯಿ. ಖಾಜಾಬೀ ಅವರಿಗೆ 9 ಮಕ್ಕಳ ತುಂಬು ಕುಟುಂಬ. ಜತೆಗೆ 10 ಹೊಟ್ಟೆ ತುಂಬಿಸುವ ಹೊಣೆ. ಟ್ಯಾಂಕರ್‌ ಡ್ರೈವರ್‌ ಆಗಿದ್ದ ಪತಿ ಖಾಜಾಯಿಮಾ ಮಕಾಂದಾರ 15 ವರ್ಷದ ಹಿಂದೆ ಹೃದ್ರೋಗ ಪೀಡಿತನಾಗಿದ್ದ. 

6-7 ಲಕ್ಷ ರೂ. ಸಾಲ ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿ ಪತಿಯನ್ನು ಉಳಿಸಿಕೊಳ್ಳಲು ಹೆಣಗಿದ್ದರು. ಇದರ ಬೆನ್ನಲ್ಲೇ ಪತಿ ಪಾರ್ಶ್ವವಾಯುನಿಂದ ಹಾಸಿಗೆ ಹಿಡಿದರು. ಅಲ್ಲಿಂದ ಖಾಜಾಬೀ ಅವರಿಗೆ ಕಷ್ಟದ ದಿನಗಳಿಗೆ ಕೊನೆ ಇಲ್ಲವಾಯಿತು. ಇಷ್ಟಾದರೂ ಧೃತಿಗೆಡದ ಖಾಜಾಬೀ ತನ್ನ 2 ಗಂಡು ಹಾಗೂ 7
ಜನ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವ ಕನಸು ಕಂಡು ಕಿತ್ತು ತಿನ್ನುವ ಬಡತನದ ಮಧ್ಯೆಯೂ ಎಲ್ಲ ಮಕ್ಕಳಿಗೆ ಕನಿಷ್ಟ ಶಿಕ್ಷಣ ಕೊಡಿಸಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಇವರ 6ನೇ ಮಗಳು ಗೌಸಿಯಾ ಹಾಗೂ 7ನೇ ಮಗಳು ನಸ್ರಿನ್‌ ಅವರಲ್ಲಿ ಅಡಗಿದ್ದ ಕ್ರೀಡಾ ಪ್ರತಿಭೆಯನ್ನು ಅರಿತ ಶಿಕ್ಷಕ ಗಣೇಶ ಭೋಸಲೆ ಇವರಿಗೆ ಸೂಕ್ತ ತರಬೇತಿ ನೀಡಿದರು. ಇಷ್ಟಕ್ಕೆ ಬಿಡದ ಶಿಕ್ಷಕ ಭೋಸಲೆ ಅವರು, ಈ ಮಕ್ಕಳನ್ನು ನಗರ ಬಾಸ್ಕೆಲ್‌ ಬಾಲ್‌ ತರಬೇತುದಾರ ಸದಾಶಿವ ಕೋಟ್ಯಾಳ ಇವರ ಪರಿಚಯ ಮಾಡಿಸಿದರು.

Advertisement

ಅಲ್ಲಿಂದ ಈ ಮಕ್ಕಳ ನಸೀಬು ತೆರೆಯಿತು. ನಸ್ರಿನ್‌ ಗುಜರಾತನ್‌ ಗಾಂಧಿ ನಗರದಲ್ಲಿ 2015 ಫೆ.25 ರಂದು ಜರುಗಿದ ರಾಷ್ಟ್ರೀಯ ಮಟ್ಟದ ಬಾಲಕಿಯರ ಬಾಸ್ಕೆಲ್‌ ತಂಡದಲ್ಲಿ ರಾಜ್ಯ ತಂಡಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ಗುಜರಾತ್‌ನಲ್ಲಿ ಚಿನ್ನದ
ಪದಕ ಕೊರಳಲ್ಲಿ ಹಾಕಿಕೊಂಡು ಕಣ್ಣಂಚಿನಲ್ಲಿ ನೀರು ತಂದುಕೊಂಡ ವಿಜಯಪುರದ ಈ ಮಗಳ ಭಾವನೆ ತವರಿಗೆ ತಲುಪಲೇ ಇಲ್ಲ. ಇದಾದ ಬಳಿಕ ತಂಗಿಯಂತೆ ತಾನೂ ಬಾಸ್ಕೆಟ್‌ ಬಾಲ್‌ ತರಬೇತಿ ಪಡೆಯುತ್ತಿದ್ದ ಈ ಮನೆಯ ಗೌಸಿಯಾ ಎಂಬ ಮತ್ತೂಂದು ಪ್ರತಿಭೆ ಬಾಸ್ಕೆಟ್‌ ಬಾಲ್‌ನಲ್ಲಿ ತನ್ನ ಪ್ರತಿಭೆ ತೋರಲು ಮುಂದಾಗಿದೆ. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಈಗಷ್ಟೇ ಪದವಿ ಪಡೆದಿರುವ ಈಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಪ್ರತಿನಿಧಿ ಸಿ 2017ರಲ್ಲಿ ಚೆನ್ನೈನಲ್ಲಿ ನಡೆದ ಅಂತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರ ಬಾಸ್ಕೆಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದಳು.

ಆದರೂ ತಂಡ ಸೋಲನುಭವಿಸಿದ್ದು ಈಕೆಯನ್ನು ಈಗಲೂ ಬಾಧಿಸುತ್ತಿದೆ.  ಒಂದೆಡೆ ಮನೆಯಲ್ಲಿ ರೋಗಪೀಡಿದ ಪತಿಯ ಸತತ ಚಿಕಿತ್ಸೆ ಹಣ, ಹೊಂದಿಸುವುದು, ಸಾಲ ತರುವುದು, ಸಾಲಗಾರರ ಪ್ರಶ್ನೆಗಳಿಗೆ ಉತ್ತರ ನೀಡುವ ಹಂತದಲ್ಲೇ ಖಾಜಾಬೀ ಅವರ ಪತಿ ಕೂಡ ಕಳೆದ ವರ್ಷ ಆ.17 ರಂದು ತೀರಿ ಹೋಗಿದ್ದಾರೆ. ಹಲವು ಸಂದರ್ಭಗಳಲ್ಲಿ ಮನೆಯ ಆರ್ಥಿಕ ಸಂಕಷ್ಟವೇ ಇವರು ಹಲವು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಕಣ್ಣೀರು ಹಾಕಿದ್ದೂ ಇದೆ. ಆದರೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದಲ್ಲಿ ಮಾತ್ರ ಇಂದಿಗೂ ಈ ತಾಯಿ ಹೆಣಗುತ್ತಿದ್ದಾಳೆ. 

ಒಂದೆಡೆ ಬಡತನ..ಮತ್ತೂಂದೆಡೆ ಮಕ್ಕಳ ಶಿಕ್ಷಣ-ಕ್ರೀಡಾ ಭವಿಷ್ಯಕ್ಕಾಗಿ ಟೊಂಕ ಕಟ್ಟಿ ನಿಂತ ಈ ಮಹಾತಾಯಿ, ಇಂದಿಗೂ ಕೈಯಲ್ಲಿರುವ ಭಿಕ್ಷೆಯ ಪಾತ್ರೆ ಕೆಳಗಿಳಿಸಿಲ್ಲ. ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಕ್ರೀಡಾಪ್ರೇಮಿಗಳು ಇನ್ನಾದರೂ ಕುಟುಂಬದ ಆರ್ಥಿಕ ಸಂಕಷ್ಟ ನೀಗಲು
ಮುಂದಾದರೆ ದೇಶಕ್ಕೆ ಕ್ರೀಡಾ ಆಸ್ತಿಯಾಗಲಿದ್ದಾರೆ. 

„ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next