ನಾನು ಮತ್ತು ನನ್ನ ಇಬ್ಬರು ಆತ್ಮೀಯ ಸ್ನೇಹಿತರಾದ ಆನಂದ, ಪುಂಡಲೀಕ ಸೇರಿ ಒಂದು ದಿನ ಹೀಗೆ ಸುಮ್ಮನೆ ಸುತ್ತಾಡಲು ಸಿಟಿಗೆ ಹೋಗಿದ್ದೆವು. ನಾವು ಮೂರು ಮಂದಿ ಎಷ್ಟು ಆತ್ಮೀಯರೆಂದರೆ ಹೆತ್ತವರಿಗೂ ಗೊತ್ತಿಲ್ಲದ ಕೆಲವು ಸೂಕ್ಮ ವಿಚಾರಗಳು ಇವರಿಗೆ ಗೊತ್ತಿದೆ. ನಮ್ಮಲ್ಲಿ ಯಾವುದೇ ರೀತಿಯ ಗೌಪ್ಯತೆ ಅನ್ನೋದೇ ಇರಲಿಲ್ಲ ಎಂದು ಹೇಳಬಹುದು.
ಎಲ್ಲೇ ಹೊರಟರೂ ಮೂವರೂ ಜತೆಗೇ ಹೋಗುವುದು. ಅಂದು ಕೂಡ ನಾವು ಮೂರು ಜನ ಸೇರಿ ಸಿಟಿ ರೌಂಡ್ ಹಾಕಿ ಹಸಿದಿದ್ದೆವು. ಆದರೆ ಆಗಲೇ ತಡವಾದ ಕಾರಣ ನಾವು ಸ್ವೀಟ್ ಅನ್ನು ಪಾರ್ಸೆಲ್ ಮಾಡಿಸಿಕೊಂಡು ಊರಿನತ್ತ ಹೊರಟೆವು. ಊರಿನ ಸಮೀಪದ ಹಳ್ಳದ ಹತ್ತಿರ ನೇಚರ್ ಕಾಲ್ ಬಂತೆಂದು ಗಾಡಿ ನಿಲ್ಲಿಸಿದ ಸಂದರ್ಭ ನಮಗೊಂದು ನಾಯಿ ಮರಿಯ ನರಳಾಟದ ಶಬ್ದ ಕೇಳಿಸಿತು.
ನಮ್ಮ ಹುಡುಗ ಆನಂದ ಮೊದಲೇ ಶ್ವಾನಪ್ರಿಯ. ಶಬ್ದ ಕೇಳಿದ ತತ್‌ಕ್ಷಣ ದೋಸ್ತ್ ಪಾಪ್ ನಾಯಿ ಮರಿ ಗಟರ್ ಒಳಗ್ ಬಿದ್ದೇ, ಬರ್ರಿ ತಗಿಯೋನ್ ಅಂದ. ಅವನು ಹಾಗೆ ಹೇಳಿದ ಮೇಲೆ ನಮ್ಮಿಬ್ಬರಲಿದ್ದ ಮಾನವೀಯತೆ ಜಾಗೃತಗೊಂಡು ನಾವು ಕೂಡ ತುರ್ತು ಕಾರ್ಯಾಚರಣೆಯಲ್ಲಿ ಕೈಜೋಡಿಸಿದೆವು. ಮೊದಲು ಮೊಬೈಲ್ ಟಾರ್ಚ್ ಹಾಕಿ ನಾಯಿಮರಿ ಎಲ್ಲಿದೆ ಎಂದು ತಿಳಿದ ಮೇಲೆ ಅದನ್ನು ಮೇಲೆತ್ತಲು ಉಪಾಯ ಯೋಚಿಸಿದೆವು.
ಆಗ ಆನಂದ ಒಂದು ಕಟ್ಟಿಗೆ ತಂದು ಅದಕ್ಕೆ ಅಲ್ಲೇ ಬಿದ್ದಿದ್ದ ಹಗ್ಗದ ಎಳೆಯಿಂದ ಒಂದು ಕುಣಿಕೆ ತರ ಬಿಗಿದು ಅದನ್ನು ನಾಯಿ ಮರಿಯ ಕುತ್ತಿಗೆ ಅಥವಾ ಕಾಲಿಗೆ ಹಾಕಲು ಪ್ರಯತ್ನಿಸೋಣ, ಅದು ಸಿಕ್ಕಿಕೊಂಡರೆ ಮೇಲೆ ಎಳೆದು ಉಳಿಸಬಹುದೆಂಬುದು ಆತನ ಉಪಾಯ. ಆದರೆ ನಾವು ಅದನ್ನು ಹಾಕಲು ಪ್ರಯತ್ನಿಸಿದಾಗಲೆಲ್ಲ ಅದು ನರಳಾಡುತ್ತಾ ಅತ್ತಿತ್ತ ಹೋಗುತ್ತಿತ್ತು. ಹಾಗೆ ಬಿಟ್ಟರೆ ರಾತ್ರಿ ಚಳಿಗೆ ಚರಂಡಿ ನೀರಲ್ಲೇ ಮುಳುಗಿ ಸಾಯುತ್ತೇನೋ ಎಂಬ ತವಕದಲ್ಲೇ ಅದಕ್ಕೆ ಸರಿಯಾಗಿ ಕುಣಿಕೆ ಹಾಕಿದ ಗೆಳೆಯ ಆನಂದ. ಅಬ್ಟಾ… ಅಂತೂ ಇಂತೂ ಸಿಕ್ತಲ್ಲ ಎಂದು ಚರಂಡಿಯಿಂದ ಮೇಲೆ ಎತ್ತಿ ರಸ್ತೆ ಬದಿ ಬಿಟ್ಟು ಕುಣಿಕೆ ತೆಗೆದೆವು.
ಅಲ್ಲೇ ಆಗಿದ್ದು ನೋಡಿ ನಿಜವಾದ ದುರಂತ. ಕುಣಿಕೆ ತೆಗೆಯುತ್ತಿದ್ದಂತೆ ಅದು ಗಾಬರಿಯಿಂದ ಓಡಲಾರಂಭಿಸಿತು. ಓಡುತ್ತಾ ರಸ್ತೆ ಕಡೆ ಸಾಗಿದ್ದೇ ತಡ, ವೇಗದಿಂದ ಬಂದ ಕಾರೊಂದು ಅದರ ಮೇಲೆ ಹರಿದಿತ್ತು. ಯಪ್ಪಾ… ನಮಗಂತೂ ಆ ದೃಶ್ಯ ಎಷ್ಟರ ಮಟ್ಟಿಗೆ ನೋವುಂಟು ಮಾಡಿತೆಂದರೆ ಪದಗಳಲ್ಲಿ ವಿವರಿಸಲಾಗದು. ನಮ್ಮ ಆನಂದನಿಗಂತೂ ಎಲ್ಲಿಲ್ಲದ ಕೋಪ.
ಆ ಕೋಪದಲ್ಲಿ ಆ ಕಾರಿನವನಿಗೆ ಎಷ್ಟು ಶಾಪ ಹಾಕಿದನೋ ತಿಳಿಯದು, ಏನೋ ಒಂದು ಜೀವ ಉಳಿಸಿ ಸ್ವಲ್ಪ ಪುಣ್ಯ ಸಂಪಾದಿಸೋ ಭರದಲ್ಲಿ ನಮ್ಮಿಂದಲೇ ಒಂದು ಜೀವ ಹೀನಾಯವಾಗಿ ಕೊಲೆಯಾಯಿತಲ್ಲ ಎಂಬ ಅತೀವ ನೋವು ನಮ್ಮನ್ನು ಮೂಖರನ್ನಾಗಿಸಿತು. ಆ ಚರಂಡಿಯಲ್ಲೇ ಬಿದ್ದಿದ್ದರೆ ಇನ್ನು ಸ್ವಲ್ಪ ಹೊತ್ತು ಬದುಕಿರುತ್ತಿತ್ತೇನೋ, ಅದನ್ನು ಹೊರ ತೆಗೆದು ಇಷ್ಟು ಕ್ರೂರ ಸಾವು ನೀಡಿದ್ದೀವಲ್ಲಾ ಎಂಬ ನೋವು ನಮ್ಮದಾಗಿತ್ತು. ಅದೇ ನೋವಲ್ಲಿ ಮನೆ ಸೇರಿ ನಮ್ಮ ಹಸಿವು ಮರೆತು ಮಲಗಿದೆವು. ಆ ಕ್ಷಣ ಎಂದಿಗೂ ನೆನೆಸಿಕೊಂಡಾಗ ಅನಿಸುತ್ತದೆ ಅಂದು ತಪ್ಪಾದರೂ ಯಾರದ್ದು ಅಂತ…?
-ಹಣಮಂತ ಕಾಂಬಳೆ
ಶ್ರೀ ಸಿದ್ಧಾರ್ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು