Advertisement

Desi Swara: ಥೇಮ್ಸ್‌ ನದಿಯ ದಡದಲ್ಲಿ ಸಾರ್ಥಕ್ಯ ಕ್ಷಣ: ವಿದೇಶದಲ್ಲೂ ನನಸಾದ ಕನಸು

06:12 PM Dec 02, 2023 | Team Udayavani |

ಇಂಗ್ಲೆಂಡ್‌ ಎಂದೊಡನೆ ಕನ್ನಡಿಗರಿಗೆ ಮೊದಲು ನೆನಪಾಗುವುದೆ ಲ್ಯಾಂಬೆತ್‌ ಬಸವ ಪುತ್ಥಳಿ. ಹನ್ನೆರಡನೆಯ ಶತಮಾನದ ವಚನ ಸಾಹಿತ್ಯದ ರೂವಾರಿ,ಲಿಂಗಾಯತ ಧರ್ಮ ಸ್ಥಾಪಕರಾದ ಜಗಜ್ಯೋತಿ ಬಸವಣ್ಣನವರ ಇಂಗ್ಲೆಂಡಿನಲ್ಲಿ ಸ್ಥಾಪಿತವಾಗಿರುವ ಶಿಲಾಮೂರ್ತಿ ಕರ್ನಾಟಕದ ಹಾಗೂ ವಿಶ್ವದ ಎಲ್ಲ ಬಸವಾಭಿಮಾನಿಗಳಿಗೂ ಆದರ, ಅಭಿಮಾನ. ಅದನ್ನು ಕಾಣುವುದೇ ಹೆಮ್ಮೆಯ ದ್ಯೋತಕ ಎಂದರೆ ಅತಿಶಯೋಕ್ತಿಯಲ್ಲ.

Advertisement

ನಮ್ಮ ಮೊಮ್ಮಗಳ ಜನನದ ದೆಸೆಯಿಂದಲೆ ಇಂಗ್ಲೆಂಡ್‌ ದರ್ಶಿಸುವ ಹಾಗೂ ಅಲ್ಲಿ ಹಲವಾರು ತಿಂಗಳುಗಳ ಕಾಲ ನೆಲೆಸುವ ಅವಕಾಶ ಒದಗಿ ಬಂದಿತ್ತು. “ಹೆಣ್ಣು ಹೆಣ್ಣೆಂದೇಕೆ ಹೀಗಳೆವರು ಕಣ್ಣು ಕಾಣದ ಗಾವಿಲರು, ಹೆಣ್ಣಲ್ಲವೆ ನಮ್ಮನೆಲ್ಲ ಹಡೆದವಳು’ ಎಂಬ ಹದಿಬದಿಯ ಧರ್ಮದ ಕತೃì ಸಂಚಿ ಹೊನ್ನಮ್ಮಳ ಕಾವ್ಯದ ಸಾಲುಗಳು ಮನದಲ್ಲಿ ಸುಳಿದು ಹೆಣ್ಣಿನ ಬಗ್ಗೆ ಇದ್ದ ಅಭಿಮಾನ ಮತ್ತು ಪ್ರೀತಿ ನೂರ್ಮಡಿಸಿತು.

ಇಂಗ್ಲೆಂಡಿಗೆ ಭಾರತದ ಯಾವುದೇ ರಾಜಕಾರಣಿ ಅಥವಾ ಹಿರಿಯ ವ್ಯಕ್ತಿಗಳು ಭೇಟಿ ನೀಡಿದರೂ ಅಲ್ಲಿನ ಬಸವ ಪುತ್ಥಳಿ ಎದುರು ನಿಂತು ಲ್ಯಾಂಬೆತ್‌ನ ಮಾಜಿ ಮೇಯರ್‌ ಆಗಿದ್ದ ಡಾ| ನೀರಜ್‌ ಪಾಟೀಲ್‌ ತಂಡದೊಡನೆ ಫೋಟೋ ಕ್ಲಿಕ್ಕಿಸಿಕೊಂಡರೇನೆ ಅವರ ಇಂಗ್ಲೆಂಡಿನ ಭೇಟಿ ಪರಿಪೂರ್ಣ ಎಂಬ ಪರಿಪಾಠ ಚಾಲ್ತಿಯಲ್ಲಿದೆ.

ನಾವು ಇಂಗ್ಲೆಂಡಿಗೆ ಭೇಟಿ ನೀಡಿದ ಕೆಲವು ದಿನಗಳಲ್ಲೇ ಮಾಡಿದ ಮೊದಲ ಕೆಲಸ ಎಂದರೆ ಮಡದಿಯೊಂದಿಗೆ ರೈಲಿನಲ್ಲಿ ವೆಸ್ಟ್‌ಮಿನಿಸ್ಟರ್‌ ಎಂಬ ಸ್ಥಳದಲ್ಲಿ ಇಳಿದು, ಅಲ್ಲಿಂದ ಮಳೆಯಲ್ಲಿ ಛತ್ರಿ ಹಿಡಿದು ಹತ್ತು ನಿಮಿಷಗಳ ಕಾಲ್ನಡಿಗೆಯ ಅನಂತರ ಥೇಮ್ಸ್‌ ನದಿಯ ದಡದಲ್ಲಿ ಇರುವ ಲ್ಯಾಂಬೆತ್‌ ಬಸವ ಪುತ್ಥಳಿ ಸ್ಥಾಪಿಸಿರುವ ಸ್ಥಳಕ್ಕೆ ಬಂದು ತಲುಪಿವು. ಬಸವಮೂರ್ತಿ ಕಂಡ ಅನಂತರ ಏನೋ ಒಂದು ರೀತಿಯ ಪುಳಕಿತ ಭಾವನೆ ಮನದಲ್ಲಿ ಮೂಡಿತು ಹಾಗೂ 2015ರಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆದ ಉದ್ಘಾಟನ ಕಾರ್ಯಕ್ರಮ ದೂರದರ್ಶನದಲ್ಲಿ ವೀಕ್ಷಿಸಿದ ಸವಿ ನೆನಪು ನಮ್ಮ ಸ್ಮತಿ ಪಟಲದಲ್ಲಿ ತೇಲಿ ಹೋಯಿತು. ನಮ್ಮ ಜೀವನ ಸಾರ್ಥಕವಾದ ಅನುಭವ ಪಡೆಯಿತು.

Advertisement

ನಮ್ಮ ತಾಯ್ನೆಲವನ್ನು ಎರಡು ನೂರು ವರ್ಷಗಳ ಕಾಲ ಗುಲಾಮಗಿರಿಗೆ ತಳ್ಳಿದ ಬ್ರಿಟಿಷರ ನೆಲದಲ್ಲಿ “ಕಾಯಕವೇ ಕೈಲಾಸ’ ಎಂಬ ಕನ್ನಡದ ಸಾಲು ಹಾಗೂ ಹಲವಾರು ವಚನಗಳು ಕನ್ನಡ ಹಾಗೂ ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ಕಂಡು ಮೈ ರೋಮಾಂಚನ ಆದ ಅನುಭವ ಆಯಿತು. ಅಲ್ಲಿಂದ ಮಗಳ ಮನೆಗೆ ಬಂದ ತತ್‌ಕ್ಷಣ ನನ್ನ ಮನಪಟಲದಲ್ಲಿ ಹರಿಯುತ್ತಿದ್ದ ಭಾವನೆಗಳಿಗೆ ರೂಪ ನೀಡಿ ಒಂದು ಕವನವನ್ನು ರಚಿಸಿದೆ.

ಕವಿತೆ ರಚಿಸುವುದರ ಜತೆಗೆ ನನ್ನ ಹವ್ಯಾಸ ಏನೆಂದರೆ ನನ್ನ ಭಾವನೆಗಳಿಗೆ ಕವಿತೆಯ ರೂಪ ನೀಡಿ ಸ್ವರಚಿತ ಚಿತ್ರಪಟ ತಯಾರಿಸಿ ಗಣ್ಯ ವ್ಯಕ್ತಿಗಳಿಗೆ ಹಾಗೂ ಬಹಳ ಪರಿಚಿತರಿಗೆ ಸಭೆ ಸಮಾರಂಭಗಳಲ್ಲಿ ನೆನಪಿನ ಕಾಣಿಕೆಯಾಗಿ ನೀಡುವುದು. ಈಗ ನನ್ನ ಮನೋ ಮಂದಿರದ ಭಾವ ಕವಿತೆಗೆ ಚಿತ್ರಪಟ ತಯಾರಿಸಲು ಅಣಿಯಾದೆ.

ಅಂತೂ ಇಂತೂ ಅರಿಯದ ದೇಶದಲ್ಲಿ ಮಗಳ ಸಹಕಾರದಿಂದ ಹರ ಸಾಹಸ ಮಾಡಿ ಪರಿಕರಗಳನ್ನು ಒದಗಿಸಿಕೊಂಡು ಒಂದು ಚಿತ್ರಪಟ ರೂಪ ತಳೆಯಿತು. ಈಗ ಪರಿಚಯವೇ ಇಲ್ಲದ ದೇಶದಲ್ಲಿ ಲ್ಯಾಂಬೆತ್‌ ಮಾಜಿ ಮೇಯರ್‌ ಡಾ| ನೀರಜ್‌ ಪಾಟೀಲ್‌ ರವರನ್ನು ಭೇಟಿ ಮಾಡಿ ಅಭಿನಂದಿಸುವ ಸವಾಲು ಎದುರಾಯಿತು. ನಮ್ಮ ಬಂಧು ಒಬ್ಬರಿಂದ ಅವರ ದೂರವಾಣಿ ನಂಬರ್‌ ದೊರೆಯಿತು. ಅನಂತರ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಪರಿಚಯ ಮಾಡಿಕೊಂಡು ಅವರ ತಂಡವನ್ನು ಅಭಿನಂದನೆ ಸಲ್ಲಿಸಲು ಅವಕಾಶ ಕೋರಿದೆವು.

ಬಹಳ ಸಂತೋಷದಿಂದ ಬಸವ ಜಯಂತಿಯ ದಿನ ಭೇಟಿ ಆಗುವುದಾಗಿ ಒಪ್ಪಿಗೆ ಸೂಚಿಸಿದರು. ದಿನಗಳು ಉರುಳುತ್ತ ಬಸವ ಜಯಂತಿ ದಿನ ಬಂದೇ ಬಿಟ್ಟಿತು. ನಾವು ವೆಸ್ಟ್‌ ಮಿನಿಸ್ಟರ್‌ ಬಳಿ ಇಳಿದು ಹೊರಟರೆ ಆ ದಿನ ಮ್ಯಾರಥಾನ್‌ ಎಂದು ಅಲ್ಲಿನ ರಸ್ತೆಗಳೆಲ್ಲ ಜನವೋ ಜನ ಮತ್ತೆ ಅಲ್ಲಿಂದ ಸಾಹಸ ನಡೆಸಿ ಅಂತೂ ಇಂತೂ ಬಸವ ಪುತ್ಥಳಿ ಇದ್ದ ಸ್ಥಳವನ್ನು ತಲುಪಿದೆವು.

ಭಾರತೀಯ ದೂತಾವಾಸದ ರಾಯಭಾರಿ ಮಾನ್ಯ ದೊರೆಸ್ವಾಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್ಲಿ ಲ್ಯಾಂಬೆತ್‌ ಮಾಜಿ ಮೇಯರ್‌ ಡಾ| ನೀರಜ್‌ ಪಾಟೀಲ್‌ ಅವರನ್ನು ಖುದ್ದು ಭೇಟಿಯಾಗಿದ್ದು ಮರೆಯಲಾಗದ ಅನುಭವ. ಅಲ್ಲಿನ ಬಸವ ಫೌಂಡೇಶನ್‌ ಮಾಡಿರುವ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಅವರಿಗಾಗಿ ತಯಾರಿಸಿ ತಂದಿದ್ದ ಸ್ವರಚಿತ ಚಿತ್ರಪಟ ಹಾಗೂ ಶಾಲು ಹಾರಗಳನ್ನು ಸಮರ್ಪಿಸಿದೆವು. ಜತೆಗೆ ನನ್ನ ಶ್ರೀಮತಿ ಬಸವ ಪುತ್ಥಳಿಯೆದುರು ಆನಂದದಿಂದ ವಚನ ಗಾಯನ ನಡೆಸಿದರು.

ಇದೇ ಸಂದರ್ಭದಲ್ಲಿ ಡಾ| ನೀರಜ್‌ ಪಾಟೀಲ್‌, ಪತ್ನಿ ಅನಘಾ ಪಾಟೀಲ್‌ ಹಾಗೂ ಅಭಿಜಿತ್‌ ಸಾಲೀಮ್ಸ್‌ ತಂಡದವರಿಂದ ನಮಗೆ ದೊರೆತ ಸಮ್ಮಾನ ನಮ್ಮ ಜೀವನದಲ್ಲಿ ಮರೆಯಲಾಗದ ಅನುಭವ. ಬಹುದಿನಗಳ ಕನಸು ನನಸಾದ ಸಾರ್ಥಕ್ಯ ದೊರೆಯಿತು. ನಾವಂದುಕೊಂಡ ಕಾರ್ಯ ವಿದೇಶದಲ್ಲೂ ಸಾಧಿಸಿದ ಹೆಮ್ಮೆಯಿಂದ ಬೀಗುತ್ತ ಅಲ್ಲಿಂದ ಬೀಳ್ಕೊಂಡೆವು.

ಮ. ಸುರೇಶ್‌ ಬಾಬು
ಇಲ್ಫೋರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next