Advertisement

ಔಷಧಾಲಯ ಬಂದ್‌ ಕರೆಗೆ ಮಿಶ್ರ ಪ್ರತಿಕ್ರಿಯೆ

12:27 PM Sep 29, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಇ-ಫಾರ್ಮಸಿ ವ್ಯವಸ್ಥೆಯನ್ನು ವಿರೋಧಿಸಿ ಅಖೀಲ ಭಾರತೀಯ ಔಷಧಿ ವ್ಯಾಪಾರಿಗಳ ಸಂಘ ದೇಶಾದ್ಯಂತ ಶುಕ್ರವಾರ ಕರೆ ನೀಡಿದ್ದ ಔಷಧ ಮಳಿಗೆಗಳ ಬಂದ್‌ಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಕೇಂದ್ರ ಸರ್ಕಾರವು ತರಾತುರಿಯಲ್ಲಿ ಇ-ಫಾರ್ಮಸಿ ವ್ಯವಸ್ಥೆ ಜಾರಿಗೆ ಅವಕಾಶ ನೀಡಲು ಮುಂದಾಗಿದ್ದು, ಗ್ರಾಹಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ. ಆನ್‌ಲೈನ್‌ನಲ್ಲಿ ಔಷಧಿ ಮೂಲ, ವಿತರಕರ ಮಾಹಿತಿ ಇಲ್ಲದೆ ಗುಣಮಟ್ಟ ನಿಯಂತ್ರಣ ಖಾತರಿಯೂ ಇಲ್ಲದೆ ಔಷಧಗಳ ವಿತರಣೆಯಿಂದ ಬಳಕೆದಾರರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಔಷಧ ವ್ಯಾಪಾರಿಗಳ ಆರೋಪ.

ಹಾಗಾಗಿ ಆನ್‌ಲೈನ್‌ನಲ್ಲಿ ಔಷಧ ಮಾರಾಟ ಕುರಿತಂತೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಕರಡು ಅಧಿಸೂಚನೆ ರದ್ಧತಿಗೆ ಒತ್ತಾಯಿಸಿ ಶುಕ್ರವಾರ ಬಂದ್‌ಗೆ ಕರೆ ನೀಡಿತ್ತು. ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿವರೆಗೆ ಮಳಿಗೆಗಳನ್ನು ಬಂದ್‌ ಮಾಡಿ ಮುಷ್ಕರ ನಡೆಸುವುದಾಗಿ ಸಂಘ ಪ್ರಕಟಿಸಿತ್ತು. ಆದರೆ ಬೆಳಗ್ಗೆಯಿಂದ ಮುಚ್ಚಿದ್ದ ಬಹಳಷ್ಟು ಔಷಧ ಮಳಿಗೆಗಳು ಶುಕ್ರವಾರ ಸಂಜೆ 6 ಗಂಟೆ ಹೊತ್ತಿಗೆ ತೆರೆದವು. ಹಾಗಾಗಿ ಸಂಜೆ ಹೊತ್ತಿಗೆ ಔಷಧಗಳ ಲಭ್ಯತೆ ಸಹಜ ಸ್ಥಿತಿಗೆ ಮರಳಿದಂತಾಗಿತ್ತು.

ಔಷಧಾಲಯ ಬಂದ್‌ ಕರೆ ಹೊರತಾಗಿಯೂ ಸರ್ಕಾರಿ ಆಸ್ಪತ್ರೆ ಆವರಣ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌, ಕ್ಲಿನಿಕ್‌ಗಳ ಆವರಣದ ಔಷಧಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಅದೇ ರೀತಿ, ಜಿಲ್ಲಾ, ತಾಲ್ಲೂಕು, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಪ್ರಮಾಣದ ಜೀವರಕ್ಷಕ ಔಷಧ ದಾಸ್ತಾನಿಗೆ ಆರೋಗ್ಯ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು.

ಹಾಗಾಗಿ ರೋಗಿಗಳಿಗೆ ಔಷಧಿ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗಲಿ, ಔಷಧ ದೊರೆಯದೇ ಪರದಾಡಬೇಕಾದ ಸ್ಥಿತಿ ನಿರ್ಮಾಣವಾದ ಬಗ್ಗೆ ವರದಿಯಾಗಿಲ್ಲ. ಕೆಲ ವಸತಿ ಪ್ರದೇಶ, ಸಾರ್ವಜನಿಕ ಪ್ರದೇಶದಲ್ಲಿ ಔಷಧಿ ಮಳಿಗೆಗಳು ಬಂದ್‌ ಆಗಿದ್ದರಿಂದ ಅಗತ್ಯ ಔಷಧಿಗಳು ಸಿಗದೆ ಜನ ಪರದಾಡುವಂತಾಗಿತ್ತು. ತೆರೆದಿದ್ದ ಔಷಧಾಲಯಗಳ ಬಳಿ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕೆಲವೆಡೆ ಕಂಡುಬಂತು.

Advertisement

ಇ-ಫಾರ್ಮಸಿ ವ್ಯವಸ್ಥೆಗೆ ಅವಕಾಶ ನೀಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು. ಇ-ಫಾರ್ಮಸಿ ವ್ಯವಹಾರಕ್ಕೆ ಅವಕಾಶ ನೀಡುವುದು ಅವೈಜ್ಞಾನಿಕ ನಡೆಯಾಗಿದ್ದು, ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರ ಕಾಳಜಿ ಇದ್ದರೆ ಕೂಡಲೇ ಇದನ್ನು ಕೈಬಿಡಬೇಕು. ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಖೀಲ ಭಾರತ ಕೆಮಿಸ್ಟ್‌ ಮತ್ತು ಡ್ರಗಿಸ್ಟ್‌ ಸಂಸ್ಥೆಯ ಕರ್ನಾಟಕ ಘಟಕದ ಅಧ್ಯಕ್ಷ ಆರ್‌.ರಘುನಾಥರೆಡ್ಡಿ ತಿಳಿಸಿದರು.

ಮಾರಾಟಗಾರರಲ್ಲಿ ಒಮ್ಮತವಿಲ್ಲ: ಸೆ.28ರಂದು ಔಷಧ ಮಳಿಗೆ ಬಂದ್‌ ವಿಚಾರವಾಗಿ ಆರಂಭದಿಂದಲೂ ರಾಜ್ಯದಲ್ಲಿ ಔಷಧ ಮಾರಾಟಗಾರರಿಂದ ಪರ-ವಿರೋಧದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲ ಔಷಧ ವಿತರಕ ಸಂಸ್ಥೆಗಳು ಹಾಗೂ ಬೃಹತ್‌ ಬೆಂಗಳೂರು ಕೆಮಿಸ್ಟ್‌ ಅÂಂಡ್‌ ಡ್ರಗ್ಗಿಸ್ಟ್‌ ಸಂಸ್ಥೆ ಅಧೀನದ ಬಹಳಷ್ಟು  ಔಷಧ ಮಳಿಗೆಗಳು ಶುಕ್ರವಾರ ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೆಲ ಪ್ರತಿಷ್ಠಿತ ಬ್ರಾಂಡ್‌ನ‌ ಸರಣಿ ಔಷಧಾಲಯಗಳು ತೆರೆದಿದ್ದು ಕಂಡುಬಂತು.
 
ಕೇಂದ್ರ ಸರ್ಕಾರವು ಇ-ಫಾರ್ಮಸಿ ವ್ಯವಸ್ಥೆಯನ್ನು ಕಾನೂನಾತ್ಮಕವಲ್ಲದ ರೀತಿ ಜಾರಿಗೊಳಿಸಲು ಮುಂದಾಗಿರುವುದು ದುರಂತ. ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಗ್ರಾಹಕರನ್ನು ಜಾಗೃತಗೊಳಿಸಿ, ವಾಸ್ತವಾಂಶ ತಿಳಿಸಬೇಕೆಂಬ ಉದ್ದೇಶದಿಂದ ಹಾಗೂ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಈ ಬಂದ್‌ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಮುಷ್ಕರದಿಂದ ಹತ್ತಾರು ಕೋಟಿ ರೂ. ವಹಿವಾಟು ನಷ್ಟವಾಗಿದೆ.
-ರಘುನಾಥ್‌ ರೆಡ್ಡಿ, ಅಖೀಲ ಭಾರತ ಕೆಮಿಸ್ಟ್‌ ಮತ್ತು ಡ್ರಗಿಸ್ಟ್‌ ಸಂಸ್ಥೆ ಕರ್ನಾಟಕ ಘಟಕದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next