Advertisement

ದುಸ್ಥಿತಿಯಲ್ಲಿ ಗರಸಂಗಿ ಸರ್ಕಾರಿ ಶಾಲೆ

12:19 PM Jul 09, 2018 | |

ನಾಲತವಾಡ: ಸುತ್ತಲೂ ಬಿರುಕು ಬಿಟ್ಟ ಗೋಡೆಗಳು, ಜೀವ ಭಯ ಉಂಟು ಮಾಡಿದ ಶಿಥಿಲ ಛಾವಣಿ, ಭಯಾನಕ ರೀತಿಯಲ್ಲಿ ಕಾಣಿಸಿಕೊಂಡ ಕಬ್ಬಿಣದ ಸರಳುಗಳು, ಶಾಲಾ ಮುಂಭಾಗದ ಪಡಸಾಲೆಯ ಕಂಬಗಳು ಸಂಪೂರ್ಣ ಬಿರುಕುಗೊಂಡು ಮುರಿದು ಬೀಳುವ ಸ್ಥಿತಿ. ಇದು ಆಲೂರ ಕ್ಲಸ್ಟರ್‌ ವ್ಯಾಪ್ತಿಯ ಗರಸಂಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ.

Advertisement

62 ಮಕ್ಕಳು ಕಲಿಯುತ್ತಿರುವ ಶಾಲೆಯಲ್ಲಿ ಮೂವರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 45 ವರ್ಷಗಳ ಹಿಂದೆ ನಿರ್ಮಿಸಲಾದ ಗರಸಂಗಿ ಗ್ರಾಮದಲ್ಲಿ ಅಡುಗೆ ಕೋಣೆ ಸೇರಿದಂತೆ ಶಾಲೆ ಸುತ್ತಲೂ ಗೋಡೆಗಳು ಬಿರುಕುಗೊಂಡಿವೆ. ಛಾವಣಿಯ ಸಿಮೆಂಟ್‌ ಮೇಲಿಂದ ಮೇಲೆ ಉದುರುತ್ತಿದ್ದು ಕಬ್ಬಿಣದ ಸರಳುಗಳು ಕಾಣಿಸಿಕೊಂಡು ಭಯ ಉಂಟು ಮಾಡಿದೆ. 

ಅಡುಗೆಯ ಕೋಣೆಯೂ ಸಂಪೂರ್ಣ ಬಿರುಕುಗೊಂಡಿದ್ದು ಅಡುಗೆಯವರೂ ಸಹ ಜೀವ ಕೈಯಲ್ಲಿ ಹಿಡಿದೇ ಅಡುಗೆ ಮಾಡಬೇಕಿದೆ. ನಿತ್ಯ ಅಕ್ಕಿ ಹಾಗೂ ಇತರೆ ಆಹಾರ ಸಾಮಗ್ರಿಗಳನ್ನು ಹೊರಗಡೆ ಕುಳಿತೆ ಸಿದ್ಧಪಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಭಯ ಹುಟ್ಟಿಸಿದ ಛಾವಣಿಗಳು: ಶಾಲೆಯ ಎಲ್ಲ ಕೊಠಡಿಗಳ ಛಾವಣಿಯ ಸಿಮೆಂಟ್‌ ಉದುರಿದ ಪರಿಣಾಮ ಕಬ್ಬಿಣದ ಸರಳುಗಳು ಕಾಣಿಸಿಕೊಂಡಿದ್ದು, ಮಕ್ಕಳು ಜೀವ ಕೈಯಲ್ಲಿ ಹಿಡಿದೇ ಕಲಿಯಬೇಕಿದೆ. 

ಮಳೆಗಾಲದಲ್ಲೂ ಸಹ ಸೋರುತ್ತಿದೆ ಎನ್ನಲಾಗಿದೆ. ಶಾಲಾ ದಾಖಲಾತಿ ನಿರ್ವಹಣೆಯ ಮುಖ್ಯಗುರುಗಳ ಕೊಠಡಿ ಛಾವಣಿಯ ಕಬ್ಬಿಣದ ಸರಳುಗಳು ಕಾಣಿಸಿಕೊಂಡಿದ್ದು ಮೇಲಿಂದ ಮೇಲೆ ಈಗಲೂ ಸಿಮೆಂಟ್‌ ಹಾಗೂ ಜಲ್ಲೆ ಉದುರುತ್ತಿದ್ದು ಮುಖ್ಯಗುರುಗಳು ಮೈಯಲ್ಲ ಕಣ್ಣಾಗಿಸಿಕೊಂಡೇ ಕರ್ತವ್ಯ ನಿರ್ವಹಿಸಬೇಕಿದೆ.

Advertisement

ಹದಗೆಟ್ಟ ಶೌಚಾಲಯಗಳು: ಮಕ್ಕಳ ಹಿತದೃಷ್ಟಿಯಿಂದ ಶಾಲಾ ಪಕ್ಕದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಅಧಿಕಾರಿಗಳ ಹಾಗೂ ಶಾಲಾ ಮುಖ್ಯ ಗುರುಗಳ ನಿರ್ಲಕ್ಷ್ಯದಿಂದ ಇಂದಿಗೂ ಶೌಚಾಲಯಗಳ ಸುತ್ತ ಆವರಿಸಿದ ಜೀನಿ ಗಿಡ ಗಂಟಿಗಳನ್ನು ತೆರವುಗೊಳಿಸಿಲ್ಲ. ಇನ್ನೊಂದೆಡೆ ಶೌಚಾಲಯಗಳು, ಛಾವಣಿ ಹಾಗೂ ಬಾಗಿಲು ಕಂಡಿಲ್ಲ, ಶಿಕ್ಷಣ ಇಲಾಖೆ ಬೇಜವಾಬ್ದಾರಿಯಿಂದ ಮಕ್ಕಳಿಗೆ ಶೌಚಾಲಯ ಸೌಲಭ್ಯವಿಲ್ಲದ ಪರಿಣಾಮ ಬಯಲನ್ನೇ ಅವಲಂಬಿಸಿದ್ದಾರೆ.

ಭಯದಲ್ಲಿ ಪಾಲಕರು: ಗರಸಂಗಿ ಗ್ರಾಮಕ್ಕಿಗ ಸದ್ಯ ಇರುವ ಶಿಥಿಲಗೊಂಡ ಶಾಲೆಯನ್ನು ತೆರುವುಗೊಳಿಸಿ ನೂತನ ಕೊಠಡಿಗಳನ್ನು ನಿರ್ಮಿಸಿ ಮಕ್ಕಳ ಕುರಿತು ಪಾಲಕರಲ್ಲಿ ಜೀವ ಭಯವನ್ನು ನಿವಾರಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರ ಬೇಡಿಕೆಯಾಗಿದೆ.

ಬೇಕಿದೆ ಕಾಳಜಿ: ಶಿಕ್ಷಣ ಕ್ಷೇತ್ರದಲ್ಲಿ ನಾನಾ ಯೋಜನೆಗಳು ಜಾರಿಗೆ ತರುತ್ತಲೇ ಇರುವ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳು ಶಿಥಿಲಗೊಂಡು ಅಧೋಗತಿ ತಲುಪಿವೆ. ಜೀವ ಭಯದಲ್ಲೇ ಮಕ್ಕಳು ಕಲಿಯುತ್ತಿದ್ದು ಶೈಕ್ಷಣಿಕ ಯೋಜನೆಗಳಿಗೆ ಹೆಚ್ಚು ಒತ್ತು ಕೊಡುವುದರ ಮೂಲಕ ಇಡಿ ರಾಜ್ಯಾದ್ಯಂತಹ ದುರಸ್ಥಿಯಲ್ಲಿರುವ ಶಾಲೆಗಳಿಗೆ ಕಾಯಕಲ್ಪ ಕಲ್ಪಿಸಲು ಸರಕಾರ ಮುಂದಾಗಬೇಕಿದೆ.

ಮುದ್ದೇಬಿಹಾಳ ತಾಲೂಕಿನಾದ್ಯಂಹ ಒಟ್ಟು 120 ಶಾಲೆಗಳು ಶಿಥಿಲಗೊಂಡು ದುರಸ್ತಿಗೆ ಕಾಯ್ದಿವೆ. ಈಗಾಗಲೇ ಶಾಸಕರ ಆದೇಶದನ್ವಯ ತಾಲೂಕಿನ ಎಲ್ಲ ಶಾಲೆಗಳಿಗೆ ನಮ್ಮ ಸಿಆರ್‌ಪಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದು ಶೀಘ್ರವೇ ದುರಸ್ತಿಗೆ ಇಲಾಖೆಗೆ ಹಾಗೂ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. 
 ಎಸ್‌.ಡಿ. ಗಾಂಜಿ, ಬಿಇಒ ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next