ಮೊಬೈಲ್ ಟಾರ್ಚ್‌ನೊಂದಿಗೆ ಬೆಟ್ಟದ ಮೇಲೆ ಸಾಗುವಾಗ, ಯಾರೋ ಅಪಹರಿಸಿಬಿಟ್ಟಂತೆ ಒಳಗೊಳಗೇ ತಬ್ಬಿಬ್ಟಾಗಿದ್ದೆವು. ಎತ್ತ ನೋಡಿದರತ್ತ ಕಗ್ಗತ್ತಲು, ಬೆಳಕು ಹಿಡಿದ ಕಡೆಗೆಲ್ಲ ಬರೀ ಕಲ್ಲುಗಳ ದರ್ಶನ. ನಡೆದಷ್ಟು ದಾರಿ, ಹತ್ತಿದಷ್ಟು ಕಲ್ಲುಬಂಡೆ. ಅಲ್ಲಿಯ ತನಕ ಇದ್ದ ಚಳಿ, ಅದೆಲ್ಲಿ ಓಡಿಹೋಯಿತೋ, ನೋಡಿದವರಿಲ್ಲ…
ಸುತ್ತಲೂ ಮಂಜು ಆವರಿಸಿ, ತಣ್ಣನೆಯ ಗಾಳಿ ಮೈ ಸವರಿ, ಮನಸ್ಸು ಪ್ರಶಾಂತವಾಗಿ ಏಕಾಗ್ರತೆಗೆ ಜಾರಿತ್ತು. ಮಲ್ಲಿಗೆಯ ತೂಕಕ್ಕೆ ಇಳಿದಂಥ ಭಾವ. ಕುಂತಿಬೆಟ್ಟವನ್ನು ತಬ್ಬುವ ಚಳಿಯಲ್ಲಿ ಏಕಾಂತದ ಆಲಾಪನೆಯೂ ಇರುತ್ತೆ ಎಂದು ಕೇಳಿದ್ದೆ. ಅದು ನಿಜವಾಗಿತ್ತು. ಆ ಮುಂಜಾವಿನಲ್ಲಿ ಅಲ್ಲಿನ ಕಲ್ಲುಬಂಡೆಯ ಮೇಲೆ ವಿರಮಿಸುವ ಸುಖಕ್ಕೆ ಬೇರೆ ಹೋಲಿಕೆಯೇ ಸಿಗಲಿಲ್ಲ.
ಇತ್ತೀಚೆಗೆ ಗೆಳೆಯರ ಜೋಡಿ, ಕುಂತಿಬೆಟ್ಟಕ್ಕೆ ಚಾರಣ ಹೊರಟೆವು. ಮೈಸೂರಿನಿಂದ ಮಧ್ಯರಾತ್ರಿ ಬೈಕ್ ರೈಡ್ ಮಾಡಿಕೊಂಡು, ಇಬ್ಬನಿಯಲ್ಲಿ ಮಿಂದೇಳುತ್ತಾ, ಚುಮು ಚುಮು ಚಳಿಗೆ ಎದೆಗೊಟ್ಟು ಸಾಗುವುದೇ ಒಂದು ಕ್ರೇಜ್. ಈ ಹಿಂದೆ ಇಲ್ಲಿಗೆ ಬಂದಿದ್ದ ಸ್ನೇಹಿತರೇ ನಮಗೆ ದಾರಿದೀಪ. ಅವರು ಹೆಜ್ಜೆ ಇಟ್ಟಲ್ಲಿ, ನಾವು ಸಾಗುತ್ತಿದ್ದೆವು. ಕತ್ತಲೆಯೆಂದರೆ, ಮೊದಲೇ ಭಯ. ಮೊಬೈಲ್ ಟಾರ್ಚ್‌ನೊಂದಿಗೆ ಬೆಟ್ಟದ ಮೇಲೆ ಸಾಗುವಾಗ, ಯಾರೋ ಅಪಹರಿಸಿಬಿಟ್ಟಂತೆ ಒಳಗೊಳಗೇ ತಬ್ಬಿಬ್ಟಾಗಿದ್ದೆವು. ಎತ್ತ ನೋಡಿದರತ್ತ ಕಗ್ಗತ್ತಲು, ಬೆಳಕು ಹಿಡಿದ ಕಡೆಗೆಲ್ಲ ಬರೀ ಕಲ್ಲುಗಳ ದರ್ಶನ. ನಡೆದಷ್ಟು ದಾರಿ, ಹತ್ತಿದಷ್ಟು ಕಲ್ಲುಬಂಡೆ. ಅಲ್ಲಿಯ ತನಕ ಇದ್ದ ಚಳಿ, ಅದೆಲ್ಲಿ ಓಡಿಹೋಯಿತೋ, ನೋಡಿದವರಿಲ್ಲ. ಮೈಯಲ್ಲಿ ಬೆಚ್ಚನೆಯ ಉಸಿರ ಶಾಖದೊಂದಿಗೆ ಹುಟ್ಟಿದ ಬೆವರು ಹನಿಗಳು ಒಂದೊಂದಾಗಿ ಜಾರಿ ನೆಲಕ್ಕೆ ಬೀಳುತ್ತಿದ್ದವು.
ಅದೇ ಸಮಯಕ್ಕೆ ಯಾರೋ, ದೇವನೂರ ಮಹಾದೇವರ, “ಬಂಡೆಗಳ ಮೇಲೆ ಚಿಗುರೊಡೆಯಬೇಕಿದೆ..’ ಎಂಬ ಮಾತನ್ನು ನೆನಪಿಸಿ, ಹುರುಪು ತುಂಬಿದಾಗ, ಮೈಮನಗಳಲ್ಲಿ ಮತ್ತಷ್ಟು ಸ್ಫೂರ್ತಿ ಉಕ್ಕಿತು. ಕೆಲವೊಂದು ದಾರಿಯಂತೂ ಬಹಳ ಕಠಿಣವಾಗಿದ್ದವು. ಅಂಥ ಜಾಗದಲ್ಲಿ ಹತ್ತುವುದು ಕಷ್ಟ ಅನ್ನಿಸಿದರೂ ಅದೊಂಥರ ಥ್ರಿಲ್ಲಿಂಗ್ ಅನುಭವ. ಕಟ್ಟಿಗೆಯನ್ನು ಹೆಗಲ ಮೇಲೆ ಹೊತ್ತು, ಅಹೋರಾತ್ರಿಯ ಕಗ್ಗತ್ತಲೆಯಲ್ಲಿ “ಯಾರೇ ಕೂಗಾಡಲೀ, ಊರೇ ಹೋರಾಡಲಿ’ ಎನ್ನುತ್ತಾ ಬೆಟ್ಟ ಹತ್ತಿದೆವು. ಆ ಮೋಜಿನಲ್ಲಿ ಕಟ್ಟಿಗೆಯೂ ಭಾರ ಎಂಬ ಚಿಂತೆ ಯಾರಲ್ಲೂ ಕಾಣಲೇ ಇಲ್ಲ.
ಇದ್ದಕ್ಕಿದ್ದಂತೆ ತುಂತುರ ಮಳೆ. ಹೆಜ್ಜೆ ಹೆಜ್ಜೆಗೂ ಮಳೆಹನಿಗಳು ನಮ್ಮನ್ನು ಮುತ್ತಿಕ್ಕುತ್ತಲೇ ಇದ್ದವು. ಮೇಲಕ್ಕೆ ಸಾಗಿದಂತೆ, ಮೇಘಪುಂಜವು ಕೈಗೆ ಸಿಗುತ್ತೇನೋ ಎಂಬ ಆಸೆ ಜಿನುಗಿತಾದರೂ, ಅದು ಈಡೇರಲಿಲ್ಲ. ಆದರೆ, ಪ್ರತಿಯೊಬ್ಬರ ಖುಷಿಯೂ ಅಲ್ಲಿ ಮುಗಿಲುಮುಟ್ಟಿತ್ತು. ಬೆಟ್ಟದ ತುದಿಯಲ್ಲಿ ಫೈರ್ ಕ್ಯಾಂಪ್ ಹಾಕಿ, ಮೈಸೂರಿನಿಂದ ತಂದಿದ್ದ ಚಿಕನ್ ಹಾಗೂ ಮೀನನ್ನು ಬೆಂಕಿಯಲ್ಲಿ ಸುಟ್ಟು ತಿನ್ನಲು, ಮುಂದಾದೆವು. ಆಹಾ… ಅದೆಂಥ ರುಚಿ! ಮುಂದುವರಿದು ಸ್ವಲ್ಪ ತರಲೆ, ತಮಾಷೆ ಹಾಗೂ ಮೋಜು ಮಸ್ತಿಯಿಂದ ಕೂಡಿದ್ದ ನಮ್ಮ ತಂಡಕ್ಕೆ ನಿದಿರಾದೇವಿ ಆವರಿಸಿದ್ದೇ ತಿಳಿಯಲಿಲ್ಲ.
ಮುಂಜಾನೆ ಆಗುತ್ತಿದ್ದಂತೆ ಬೆಳಕಿನ ಕಿರಣಗಳು ನಮ್ಮ ಮೈಯನ್ನು ಸೋಕಿದವು. ಪಕ್ಕದಲ್ಲಿ ಯಾವುದೇ ಅಲಾರಂ ಇರಲಿಲ್ಲ. ಚಿಲಿಪಿಲಿ ಹಕ್ಕಿಗಳ ನಾದ ಕಿವಿಗೆ ಮುದ ನೀಡುತ್ತಿತ್ತು. ಅಲ್ಲಿ ಕ್ಲಿಕ್ಕಿಸಿದ ಪ್ರತಿಯೊಂದು ಫೋಟೋದಲ್ಲೂ ಜೀವಂತಿಕೆಯ ಝಲಕ್ಕುಗಳಿದ್ದವು. ಬಂಡೆಗಳಂತೂ ನಿಮಗಿಂತ ನಾವೇನು ಕಮ್ಮಿ ಅಂತಲೇ ಫೋಟೋಗೆ ಪೋಸು ನೀಡುತ್ತಿದ್ದವು. ಎಲ್ಲ ಮುಗಿದು, ಇನ್ನೇನು ನಿಧಾನಕ್ಕೆ ಬೆಟ್ಟ ಇಳೀಬೇಕು… ಆಗ ಎಲ್ಲರಿಗೂ ಅಚ್ಚರಿ. ರಾತ್ರಿ ಏದುಸಿರಿನಿಂದ ಹತ್ತಿದ ಬಂಡೆ ಇದೇನಾ? ಇಷ್ಟು ದೊಡ್ಡ ಬಂಡೆಯಾ? ಒಂದು ಪವಾಡಕ್ಕೆ ಸಾಕ್ಷಿಯಾದಂಥ ಪುಳಕ. ಅಂತಿಮವಾಗಿ ಎಲ್ಲರೂ, ಮೈಸೂರಿನತ್ತ ಪಯಣಿಸಿದೆವು.
ಎಲ್ಲಿದೆ ಕುಂತಿಬೆಟ್ಟ?
ಕುಂತಿಬೆಟ್ಟವು ಮೈಸೂರಿನಿಂದ 35 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಬರುವವರು, ಪಾಂಡವಪುರವನ್ನು ತಲುಪಿ ಅಲ್ಲಿಂದ ಸಾಗಬಹುದು.
ಚಂದ್ರಶೇಖರ್ ಬಿ.ಎನ್., ಮೈಸೂರು