ಬೆಂಗಳೂರು: “ಪ್ರಿಯತಮೆಯ ವರ್ತನೆ ಹಾಗೂ ಬಿಎಂಆರ್‌ಸಿಎಲ್‌ನ ಅನಗತ್ಯ ನಿಯಮಗಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ,’ ಎಂದು ಡೆತ್‌ನೋಟ್ ಬರೆದಿಟ್ಟು ಮೆಟ್ರೋ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸುಂಕದಕಟ್ಟೆಯ ನಿವಾಸಿ ಸಂತೋಷ್ (25)ಮೃತ ಯುವಕ.
ಮೂಲತ ಹಾಸನದ ಅರಸಿಕೇರೆ ತಾಲೂಕಿನ ಸಂತೋಷ್, ಕೆಲ ವರ್ಷಗಳಿಂದ ಮೆಟ್ರೋದ ನಿರ್ವಹಣೆ ಹಾಗೂ ಕಾರ್ಯಚರಣೆ ವಿಭಾಗದಲ್ಲಿ ನೌಕರನಾಗಿದ್ದು, ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿರುವ ಮೆಟ್ರೋ ಸಿಬ್ಬಂದಿ ವಸತಿ ಸಮುತ್ಛಯದ ಮನೆಯಲ್ಲಿ ತನ್ನ ತಾಯಿ ಹಾಗೂ ಸಹೋದರನ ಜತೆ ವಾಸವಿದ್ದ. ಕಳೆದ ರಾತ್ರಿ ಎಂದಿನಂತೆ ಊಟ ಮಾಡಿ ತನ್ನ ಕೊಠಡಿಯಲ್ಲಿ ಮಲಗಿದ್ದ ಸಂತೋಷ್, ರಾತ್ರಿಯೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗುರುವಾರ ಬೆಳಿಗ್ಗೆ ಆತನ ಸಹೋದರ ಕೊಠಡಿ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಕೂಡಲೇ ಘಟನಾಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿಟ್ಟಿರುವುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದರು.
ಡೆತ್ ನೋಟ್‌ನಲ್ಲೇನಿದೆ!: ಸ್ಥಳೀಯ ನಿವಾಸಿಯಾಗಿರುವ ಯುವತಿ ಹಾಗೂ ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋದ ಯುವತಿ, ವಾಪಾಸಾಗಿರಲಿಲ್ಲ. ಮಗಳು ಸಂತೋಷ್‌ನನ್ನು ಪ್ರೀತಿಸುತ್ತಿದ್ದ ವಿಷಯ ಗೊತ್ತಿದ್ದ ಆಕೆಯ ಪೋಷಕರು, ಸಂತೋಷ್ ವಿರುದ್ಧ ಚಂದ್ರಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಸಂತೋಷ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು ಎಂದು ತಿಳಿದು ಬಂದಿದೆ.
ತಾನು ಪ್ರೀತಿಸಿದ ಯುವತಿಯ ವರ್ತನೆಯಿಂದ ತನಗೂ ಹಾಗೂ ನನ್ನ ಪೋಷಕರಿಗೆ ಸಾಕಷ್ಟು ನೋವಾಗಿದೆ. ಜತೆಗೆ ಬಿಎಂಆರ್‌ಸಿಯಲ್ಲಿರುವ ನಿಯಮಾವಳಿಗಳ ನೆಪ ಹೇಳಿ ಅಧಿಕಾರಿಗಳು ಉದ್ಯೋಗಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಪರಸ್ಪರ ಮಾತನಾಡಲು ಕೂಡ ಬಿಡುವುದಿಲ್ಲ. ಈ ಘಟನೆಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.