Advertisement
ಹ್ಯಾಪಿ ಟು ಬ್ಲೀಡ್ ಎನ್ನುವ ಯುವ ಮನಸ್ಸುಗಳ ದಿಟ್ಟತನದ ಅಭಿಯಾನವೊಂದು ಫೇಸ್‌ಬುಕ್ಕಿನಲ್ಲಿ, ವಾಟ್ಸಾಪಿನಲ್ಲಿ ಹಿಂದೊಮ್ಮೆ ನಡೆದಿತ್ತು. ಮೊನ್ನೆ ಯಾಕೋ ಒಂದು ಪೋಸ್ಟು ನೋಡಿದಾಗ ಆ ವಿಷಯ ನೆನಪಾಯಿತು. ಈ ದಿನಗಳಲ್ಲಿ ಎಷ್ಟೋ ದಿನದಿಂದ ಮನದಲ್ಲೇ ಉಳಿದು ಹೋಗಿದ್ದ ಸಂಗತಿಗಳು ಎದುರೆದುರು ನಿಂತು- ಅರೇ! ನಾನ್ಯಾಕಿನ್ನೂ ಈ ಎಲ್ಲ ವಿಚಾರಗಳನ್ನು ಯಾರಿಗೂ ಹೇಳಿಲ್ಲ ಎನ್ನಿಸಿ- ನಾಚಿಕೆಯೇ? ನನಗೆ ನಾನೇ ಕಿಚಾಯಿಸಿಕೊಂಡೆ. ಮತ್ತೆ, ಹಾಗೇನೂ ಇಲ್ಲ ಎಂದೂ ನನಗೆ ನಾನೇ ಸಂತೈಸಿಕೊಂಡೆ.
Related Articles
Advertisement
ಸರಿ, ಸಂಶೋಧನೆ ಶುರುವಾಯಿತು. ಬಚ್ಚಲಮನೆಯ ಕರಟವನ್ನು ಮುಟ್ಟಿಯೇ ನೋಡುವುದು ಎಂದುಕೊಂಡು ನಮ್ಮ ಗ್ಯಾಂಗು ಬಚ್ಚಲಮನೆಗೆ ದಾಳಿ ಇಟ್ಟಿತು. ಆದರೆ ಅಲ್ಲಿ ಕರಟವೇ ಇರಲಿಲ್ಲ! ಆಕೆ ನಮಗೆ ಏನೋ ಸುಳ್ಳು ಹೇಳಿದ್ದಾಳೆಂದು ಅನ್ನಿಸಿತು. ನಮ್ಮನ್ನು ಯಾಮಾರಿಸಿದ ಆಕೆಯ ಮೇಲೆ ಕೋಪವೂ ಬಂತು. ಅವಳ ಸುಳ್ಳನ್ನು ಎಲ್ಲರ ಎದುರು ಅನಾವರಣಗೊಳಿಸಿ ಅವಮಾನಿಸಬೇಕೆಂದು ನಿರ್ಧರಿಸಿ ಮತ್ತೆ ಅವಳ ಮುಂದೆ ಹೋಗಿ ನಿಂತೆವು. ಆಕೆ ಪಾಪ, ಸಣ್ಣ ಕೋಣೆಯಲ್ಲಿ ತಟ್ಟೆ ಚೊಂಬು ತಲೆಯ ಬುಡದಲ್ಲಿ ಇಟ್ಟುಕೊಂಡು ಮುದುರಿ ಮಲಗಿದ್ದಳು. ಬಾಗಿಲ ಬುಡದಲ್ಲಿ ಹೆಡ್‌ಮಾಸ್ತರರ ಹಾಗೆ ನಿಂತಿದ್ದ ನಮ್ಮನ್ನು ನೋಡಿದವಳೇ “ಏನು ಕೋತಿಗಳಾ?’ ಎಂದಳು. “ಎಲ್ಲಿದೆಯೇ ಕರಟ, ಬಚ್ಚಲಮನೆಯಲ್ಲಿ?’ ತನಿಖಾಧಿಕಾರಿಗಳಂತೆ ಪ್ರಶ್ನಿಸಿದೆವು. ಈ ಪ್ರಶ್ನೆ ಕೇಳಿದ್ದೇ ತಡ ಅವಳು ಹೆದರಿಕೊಳ್ಳುವುದು ಬಿಟ್ಟು ನಮ್ಮನ್ನು ಸುಡುವ ಕಣ್ಣಿನಿಂದ ದುರದುರನೆ ನೋಡಿ “ನಿಮ್ಗೆ ಬೇರೆ ಕೆಲಸ ಇಲ್ವಾ ತಲೆಹರಟೆಗಳಾ?’ ಎಂದುಬಿಟ್ಟಳು. ನಮಗೋ ಅವಳು ಸತ್ಯ ತಿಳಿಸದೆ ನಮ್ಮನ್ನೇ ಬೈದಳಲ್ಲ ಎನ್ನುವ ಕೋಪ ಬಂದು “ಇರು ಮಾಡ್ತೀವಿ. ನಮಗೇ ಸುಳ್ಳು ಹೇಳ್ತೀಯಾ…’ ಎನ್ನುತ್ತ ಅಲ್ಲೇ ತಂತಿಯ ಮೇಲೆ ನೇತು ಹಾಕಿದ್ದ ಬಟ್ಟೆಯನ್ನು ತೆಗೆದು ಅವಳ ಕಡೆಗೆ ಎಸೆಯತೊಡಗಿದೆವು. ಆಕೆ ಏನೂ ಮಾಡಲು ತೋಚದೆ “ಬೇಡ ಕಣೊ… ಬೇಡ ಕಣೊ…’ ಎನ್ನುತ್ತ ಬೇಡಿಕೊಳ್ಳತೊಡಗಿದಳು. ಪಾಪ ಮರುದಿನ ಅಷ್ಟೂ ಬಟ್ಟೆಯನ್ನು ನಮ್ಮನ್ನು ಬೈದುಕೊಳ್ಳುತ್ತಲೇ ಒಗೆದಳು. ಆದರೂ ಸತ್ಯ ಹೇಳಲಿಲ್ಲ.
ಇನ್ನು ಭದ್ರಾವತಿಯಲ್ಲಿ ನಾವೊಂದು ವಠಾರದಲ್ಲಿದ್ದೆವು. ಅಲ್ಲಿ ನನಗೊಬ್ಬಳು ಗೆಳತಿ. ಆಕೆ ನನಗಿಂತ ಬಹುಶಃ ಮೂರೋ ನಾಲ್ಕೋ ವರ್ಷಕ್ಕೆ ದೊಡ್ಡವಳಿದ್ದಿರಬೇಕು. ಒಂದು ದಿನ ಸಂಜೆ ನಾನು ಸಂಗೀತ ತರಗತಿಯನ್ನು ಮುಗಿಸಿ ವಾಪಸು ಬಂದೆ. ಅಷ್ಟೊತ್ತಿಗೆ ನನ್ನ ಅಮ್ಮನೂ ಸೇರಿದಂತೆ ವಠಾರದ ಅಷ್ಟೂ ಮಂದಿ ಹೆಂಗಸರು ಆಕೆಯ ಮನೆಯ ಮುಂದೆ ಜಮಾಯಿಸಿದ್ದರು. ನನಗೆ ಗಾಬರಿ! ಏನಾಯಿತಪ್ಪ ಇವಳಿಗೆ ಎಂದುಕೊಂಡೆ.
ಅಷ್ಟೊತ್ತಿಗಾಗಲೇ ಆಕೆ ನನ್ನ ಜೊತೆ ಶಾಲೆಗೆ ಬರದೆ ಐದಾರು ದಿನಗಳೇ ಕಳೆದುಹೋಗಿದ್ದವು. ಕೇಳಿದಾಗಲೆಲ್ಲ ಆಕೆಯ ಅಮ್ಮ ಆಕೆಗೆ ಹುಷಾರಿಲ್ಲ ಎಂದು ಹೇಳುತಿದ್ದರೇ ವಿನಾ ನನಗೆ ಅವಳನ್ನು ನೋಡಲು ಬಿಡುತ್ತಿರಲಿಲ್ಲ. ನಾನು ಅಜ್ಜಿಯ ಬಳಿ ದೂರಿದೆ. ಅವಳು ಸಾಂತ್ವನ ಹೇಳುವ ಬದಲಾಗಿ, ಅಲ್ಲಿಗೆ ಹೋಗಿದ್ದಕ್ಕೆ ಬೈದಳು. ನನಗೋ ತಲೆ ಬುಡ ಅರ್ಥವಾಗಲಿಲ್ಲ. ಪ್ರತಿದಿನ ಇಂದು ಬಂದಾಳು, ನಾಳೆ ಬಂದಾಳು ಎಂದು ಕಾಯುತ್ತಿದ್ದೆ. ಆಕೆ ಒಮ್ಮೆಯೂ ಹೊರಗೆ ಬಂದಿರಲೇ ಇಲ್ಲ. ಈಗ ನೋಡಿದರೆ ಎಷ್ಟೆಲ್ಲಾ ಜನ ಸೇರಿದ್ದಾರಲ್ಲ ಎಂದು ಎಣಿಸಿ, ಆದದ್ದಾಗಲಿ ಎಂದುಕೊಳ್ಳುತ್ತ ಅಲ್ಲಿಗೆ ಮೆಲ್ಲನೆ ಹೋಗಿ ನಿಂತೆ. ಏನಾಶ್ಚರ್ಯ! ಯಾರೊಬ್ಬರೂ ಬೈಯಲಿಲ್ಲ. ಬದಲಾಗಿ “ಓಳ್ಳೆಯದಾಯಿತು. ಬಾ ಇಲ್ಲಿ. ಒಂದು ಆರತಿ ಹಾಡು ಹೇಳು’ ಎಂದರು. ಆಕೆಯನ್ನು ನೋಡಿದರೆ, ಥೇಟ್ ಸಿನೆಮಾ ನಟಿಯರ ಹಾಗೆ ಅಲಂಕಾರ ಮಾಡಿಕೊಂಡು ಆರತಿ ಮಾಡಿಸಿಕೊಳ್ಳುತ್ತ ಕೂತಿದ್ದಳು. ಆನಂತರ ಅವಳು ಶಾಲೆಗೆ ಬರಲಿಲ್ಲ. ಶಾಲೆ ಬಿಡಿಸುವ ಮೊದಲು ಹೀಗೆ ಮಾಡುತ್ತಾರೇನೋ ಅಂದುಕೊಂಡು ಒಂದು ದಿನ ಧೈರ್ಯ ಮಾಡಿ ಅಮ್ಮನ ಬಳಿ “ನಂಗೂ ಶಾಲೆ ಬಿಡಿಸುವ ಮೊದಲು ಹೀಗೆಲ್ಲಾ ಮಾಡ್ತಾರಾ?’ ಎಂದು ಕೇಳಿಯೇಬಿಟ್ಟೆ.
ಆಕೆ “ನೀನು ಶಾಲೆ ಬಿಡೋದೂ ಇಲ್ಲ, ನಿಂಗೆ ಹಿಂಗೆ ಮಾಡೋದೂ ಇಲ್ಲ’ ಎಂದು ಕಡ್ಡಿ ಮುರಿದಂತೆ ಅಂದುಬಿಟ್ಟಳು. ಇಷ್ಟಾದರೂ ನಮ್ಮದೇ ದೇಹದಲ್ಲಿ ನಡೆಯುವ ಈ ಜೈವಿಕ ಕ್ರಿಯೆಯ ಬಗೆಗೆ ಅರಿವಾಗಲಿ, ಮಹತ್ವವಾಗಲಿ ಏನೊಂದು ತಿಳಿದಿರಲೇ ಇಲ್ಲ. ಸುಮಾರು ಎಂಟನೇ ತರಗತಿಗೆ ಬರುವವರೆಗೂ ಈ ರೀತಿಯಾದಂಥ ಅನೂಹ್ಯ ಚಕ್ರವೊಂದು ನಮ್ಮೊಳಗೇ ತಿರುಗಲಿದೆ ಎನ್ನುವ ಸಣ್ಣ ಕಲ್ಪನೆಯೂ ಇರಲಿಲ್ಲ. ಹೈಸ್ಕೂಲಿಗೆ ಬಂದ ಮೇಲೆ ಗೆಳತಿಯರ ನಡುವೆ ಈ ರೀತಿಯ ಮಾತುಗಳು ಗುಸುಗುಸು ಪಿಸುಪಿಸು ಎಂದು ಶುರುವಾಯಿತು. ಯಾರಾದರೂ ವಾರಗಟ್ಟಲೆ ಶಾಲೆ ತಪ್ಪಿಸಿದರೆಂದರೆ ಅವರಿಗೂ ಹೀಗೇ ಆಗಿರಬೇಕು ಎಂದುಕೊಳ್ಳುತ್ತ ಮುಸಿ ಮುಸಿ ನಗುತ್ತಿದ್ದೆವು.
ನನ್ನ ಪರಮಾಪ್ತ ಗೆಳತಿಯೊಬ್ಬಳು ನಿತ್ಯ ನಮ್ಮ ಮನೆಗೆ ಬಂದು ಹೋಗಿ ಮಾಡುತ್ತಿದ್ದಳು. ಆಕೆಗೂ ಒಂದು ದಿನ ಆರತಿ ಎತ್ತಿಸಿಕೊಳ್ಳುವ ಸಂದರ್ಭ ಬಂದೇಬಿಟ್ಟಿತು. ಅದನ್ನು ಅವಳ ಮನೆಯವರು ದೊಡ್ಡ ಕಾರ್ಯಕ್ರಮವೆಂಬಂತೆ ಪರಿಚಯವಿದ್ದ ಎಲ್ಲರನ್ನೂ ಕರೆದು ಆಚರಿಸಿದರು. ಅದು ಹೇಗೋ ನನ್ನ ಪಕ್ಕದ ಮನೆಯಲ್ಲಿದ್ದ ಹುಡುಗನಿಗೆ ಗೊತ್ತಾಗಿ ಹೋಯಿತು. ಆತ ಆಕೆಯ ಹಿಂದೆ ಬಿದ್ದ. ಪ್ರತಿ ಬಾರಿ ಆಕೆ ನನ್ನ ಮನೆಗೆ ಬರುವಾಗ ಹೋಗುವಾಗಲೆಲ್ಲ, “ನಿಮ್ಮನೆಯಲ್ಲಿ ಏನೋ ಕಾರ್ಯಕ್ರಮ ಆಯ್ತಂತೆ. ಸ್ವೀಟು ಕೊಡಿ’ ಎಂದು ಗಂಟು ಬಿದ್ದ. ಇದು ನನ್ನ ಕಿವಿಯನ್ನು ತಲುಪುತ್ತಿತ್ತಾದರೂ ನನಗದರ ಪ್ರಭಾವ ತೀವ್ರವಾಗಿ ಆಗಿರಲಿಲ್ಲ. ಆಕೆ ಮಾತ್ರ ಅವನು ಹಾಗೆ ಕೇಳಿದಾಗಲೆಲ್ಲ ಬಿಳಿಚಿಕೊಳ್ಳುತ್ತಿದ್ದಳು. ಏನೊಂದು ಉತ್ತರ ಹೇಳದೆ ನನ್ನನ್ನೂ ದಬ್ಬಿಕೊಂಡು ನಡೆಯುತ್ತಿದ್ದಳು. ಕೊನೆ ಕೊನೆಗೆ ನನ್ನ ಮನೆಗೆ ಬರುವುದಕ್ಕೇ ನಿರಾಕರಿಸಿದಳು. ನನಗೋ ಅವಳ ಸಂಕಟಗಳಾಗಲಿ, ಸಂಕೋಚಗಳಾಗಲಿ, ತಲ್ಲಣಗಳಾಗಲಿ ಗೊತ್ತಾಗುತ್ತಲೇ ಇರಲಿಲ್ಲ. ಅವಳು ನನ್ನ ಮನೆಗೆ ಬರುವುದೇ ಇಲ್ಲ ಎಂದು ಹಠ ಹಿಡಿದಾಗ ದೂರು ನನ್ನ ಮನೆ ತಲುಪಿ, ಅವನಿಗೆ ಬೈಯ್ಯುವುದರೊಂದಿಗೆ ಮುಕ್ತಾಯ ಕಂಡಿತು.
ಈಗ ವಯಸ್ಸು ಮುಟ್ಟು ನಿಲ್ಲುವ ಹಂತಕ್ಕೆ ತಲುಪತೊಡಗಿದೆ. ಯಾವಾಗ ಮುಗಿಯುತ್ತದೋ ಎಂಬ ರಗಳೆಯೂ ಶುರುವಾಗಿದೆ. ಆದರೆ ಅದು ಹೆಣ್ತನದ ಗುರುತು. ನನ್ನದು ಮಾತ್ರವೇ ಎನ್ನುವಂಥ ಅಧ್ಯಾತ್ಮ. ನನ್ನ ಜೀವಂತಿಕೆಯ ಲಕ್ಷಣ ಎನ್ನುವ ಆಪ್ತಭಾವ ಉಕ್ಕಿದಾಗ ಅದನ್ನು ಬಟಾಬಯಲಿನಲ್ಲಿ ತಬ್ಬಿಕೊಳ್ಳಬೇಕೆನ್ನಿಸುತ್ತದೆ. ಇಷ್ಟಾದರೂ ಅದಕ್ಕಿರುವ ಮೈಲಿಗೆ, ಚೌಕಟ್ಟು, ಬೇಲಿ ಹೊರಗಿನ ಎಲ್ಲ ಆವರಣಗಳು ಮತ್ತು ಎದೆಯೊಳಗೆ ಹೊಕ್ಕಿರುವ ನಾಚಿಕೆ ಸಂಕೋಚ ಗೌಪ್ಯತೆ ಎಲ್ಲವೂ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಅನಾವರಣಗೊಳ್ಳುತ್ತಲೇ ಇರುತ್ತವೆ. ಆಕಸ್ಮಿಕವಾಗಿಯಾದರೂ ದೇವಸ್ಥಾನಗಳಿಗೆ ಹೋಗಬೇಕಾಗಿ ಬಂದಾಗ ಎಂದೋ ತಲೆಯಲ್ಲಿ ತುಂಬಿಸಿರುವ ಅಗೋಚರ ಅಪರಾಧಿ ಪ್ರಜ್ಞೆಯಲ್ಲಿ ನರಳುತ್ತೇನೆ. ಮನೆಯ ಹಿರಿಯರ ಜೊತೆ ನ್ಯಾಪ್‌ಕಿನ್‌ಗಳ ಜಾಹೀರಾತು ನೋಡುವಾಗ ಮುಜುಗರವಾಗುತ್ತದೆ. “ಏನಮ್ಮಾ ಅದು?’ ಎನ್ನುವ ಮಗಳ ಪ್ರಶ್ನೆಗೆ ಉತ್ತರ ಹೇಳಲು ತಡಕಾಡುತ್ತೇನೆ. ಆಗೆಲ್ಲಾ ನನ್ನ ಪುಟ್ಟ ಮಗಳಿಗೆ ಈ ಯಾವ ಸಂಕಟಗಳು, ಸಂಕರಗಳು ಎದುರಾಗಬಾರದು ಅನ್ನಿಸಿದರೂ ಅದು ನಡೆಯಲೇಬೇಕಾದ ಹಾದಿ ಎಂದೆನ್ನಿಸಿ ಸುಮ್ಮನಾಗುತ್ತೇನೆ.
ಆದರೆ ನಾನು ಸುಮ್ಮನಿದ್ದರೂ ದಿನಗಳು ಸುಮ್ಮನಿರಬೇಕಲ್ಲ… ಮೊನ್ನೆ ದೀಪಾವಳಿಯ ಹಿಂದಿನ ದಿನ ಹೀಗೆಯೇ ಆಯಿತು. “ಅಮ್ಮಾ… ನಿನಗೊಂದು ಗಿಫ್ಟ್ ಇದೆ’ ಎನ್ನುತ್ತ ಎದುರು ನಿಂತಳು ಮಗಳು. ನಾನು ಸಹಜವಾಗಿಯೇ “ಏನು?’ ಎಂದೆ, ಆಕೆ ವಿಸ್ಪರ್‌ನ ಒಂದು ಪ್ಯಾಕೇಟ್ ಕೈಯ್ಯಲ್ಲಿ ಹಿಡಿದು “ಸ್ಕೂಲಲ್ಲಿ ಕೊಟ್ಟಿದ್ದು…’ ಎಂದು ಮುಸಿ ಮುಸಿ ನಕ್ಕಳು. ನನಗೆ ಪೆಚ್ಚಾಯಿತು. ಇಷ್ಟು ಬೇಗ ಬೆಳೆದುಬಿಟ್ಟಳಾ ನನ್ನ ಪುಟ್ಟಿ ಎನ್ನಿಸಿತು. “ಯಾಕಮ್ಮ ಇದು?’ ತುಂಟ ಕಣ್ಣಿನಲ್ಲಿ ಕೇಳಿದಳು. ನಾನು “ಪ್ರೌಡ್ ಟು ಬ್ಲೀಡ್ ಮಗಳೇ’ ಎಂದು ಮನಸ್ಸಿನಲ್ಲೇ ಅಂದುಕೊಂಡು ಅವಳನ್ನು ಎದೆಗೊತ್ತಿಕೊಂಡೆ.
ದೀಪ್ತಿ ಭದ್ರಾವತಿ