Advertisement

ಪುನರ್‌ನಿರ್ಮಿತ ಗಾಂಧಿಕಟ್ಟೆ ಉದ್ಘಾಟನೆಗೆ ಸಿದ್ಧ

10:22 PM Aug 25, 2020 | mahesh |

ಪುತ್ತೂರು: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ಚಳವಳಿ ಸಂದರ್ಭ ಭೇಟಿ ನೀಡಿ ಸಾರ್ವಜನಿಕ ಭಾಷಣಕ್ಕೆ ಸಾಕ್ಷಿಯಾಗಿದ್ದ ನಗರದ ಮುಖ್ಯ ರಸ್ತೆ ಸನಿಹದ ಗಾಂಧಿಕಟ್ಟೆ ಪುನರ್‌ ನಿರ್ಮಾಣ ಗೊಂಡು ಉದ್ಘಾಟನೆಗೆ ಅಣಿಯಾಗಿದೆ. ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ವಾಣಿಜ್ಯ ಸಂಕೀರ್ಣ ಬಳಿಯ ರಸ್ತೆಗೆ ಹೊಂದಿಕೊಂಡು ಗಾಂಧಿಕಟ್ಟೆ ಪುನರ್‌ ನಿರ್ಮಾಣಗೊಂಡಿದೆ. ಆ. 26 ರಂದು ಲೋಕಾರ್ಪಣೆಗೊಳ್ಳಲಿದೆ.

Advertisement

8 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ
ನಾದುರಸ್ತಿಯಲ್ಲಿದ್ದ ಗಾಂಧಿಕಟ್ಟೆ ಸನಿಹ ಕುಡುಕರ ಹಾವಳಿ, ಗಾಂಧೀಜಿ ಪ್ರತಿಮೆಯಲ್ಲಿನ ಕನ್ನಡಕ, ಊರುಗೋಲು ಮೊದಲಾದ ವಸ್ತುಗಳ ಕಳವು ಹೀಗೆ ಗಾಂಧಿ ಕಟ್ಟೆ ಅವ್ಯವಸ್ಥೆಗಳ ಗೂಡಾಗಿತ್ತು. ಹೀಗಾಗಿ ಮರು ನಿರ್ಮಾಣಕ್ಕೆ ಮತ್ತಷ್ಟು ಒತ್ತಡ ಕೇಳಿ ಬಂದಿತ್ತು. ಮಹಾಲಿಂಗೇಶ್ವರ ದೇವರ ಕಟ್ಟೆ ಇರುವ ಅಶ್ವತ್ಥ ಮರ ಹಾಗೂ ಗಾಂಧಿ ಕಟ್ಟೆ ಒಂದೇ ಕಡೆ ಇದ್ದು, ಪುನರ್‌ ನಿರ್ಮಾಣದ ಸಂದರ್ಭ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ್ದವು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಹಕ್ಕಿಗಳ ಆವಾಸ ತಾಣವಾಗಿದ್ದ ಹಾಗೂ ಧಾರ್ಮಿಕ ನಂಬಿಕೆಯ ಸಂಕೇತವಾಗಿದ್ದ ಅಶ್ವತ್ಥ ಮರದ ಗೆಲ್ಲು ತೆರವಿಗೆ ಧಾರ್ಮಿಕ ಮುಖಂಡರು, ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೂ ಪುನರ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ನಗರಸಭೆಯಿಂದ 8 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿ ಗಾಂಧಿಕಟ್ಟೆಯನ್ನು ರಸ್ತೆಗೆ ಸಮಾನಾಂತರವಾಗಿ ಕೆಳಭಾಗಕ್ಕೆ ಮರು ನಿರ್ಮಾಣ ಮತ್ತು ಅಶ್ವತ್ಥ ಮರಕ್ಕೆ ಸುತ್ತಲೂ ಭದ್ರವಾದ ಕಟ್ಟೆ ಕಟ್ಟುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಅಶ್ವತ್ಥ ಮರಕ್ಕೆ ಹಾನಿಯಾಗದಂತೆ ಪೂರಕ ವ್ಯವಸ್ಥೆ ಕೈಗೊಳ್ಳುವ ಅಂದಾಜನ್ನು ನಗರಸಭೆ ರೂಪಿಸಿ ಕಳೆದ ವರ್ಷ ಕಾಮಗಾರಿ ಪ್ರಾರಂಭಗೊಂಡಿತ್ತು. ಹಸುರು ಹುಲ್ಲು ಆವರಿತ, ಸುತ್ತಲು ಸುರಕ್ಷಾ ಬೇಲಿ, ಮುಂಭಾಗಕ್ಕೆ ಶೀಟು ಅಳವಡಿಸಿ ಗಾಂಧಿಕಟ್ಟೆ ನಿರ್ಮಿಸಲಾಗಿದೆ.

ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ
ಗಾಂಧಿಕಟ್ಟೆ ಇರುವ ಪ್ರದೇಶ ಬೊಟ್ಟ ತ್ತಾರ್‌ ಎಂಬ ಹೆಸರಿನಲ್ಲಿ ಗುರುತಿಸಿದೆ. ಇಲ್ಲಿ ರಸ್ತೆ ಬದಿಯಲ್ಲಿ ಶತಮಾನದ ಹಿಂದೆಯೇ ಅಶ್ವತ್ಥ ಮರವಿತ್ತು. ಇದರ ಪಕ್ಕದಲ್ಲಿ ಕ್ಯಾಂಟೀನ್‌ ಇತ್ತು. ಇದನ್ನು ಟಿಫಿನ್‌ ಹಾಲ್‌ ಎಂದು ಕರೆಯಲಾಗುತ್ತಿತ್ತು. ಮಾಧವ ನಾಯಕ್‌ ಇದರ ಮಾಲಕರು. 1934ರಲ್ಲಿ ಗಾಂಧೀಜಿ ಮಂಗಳೂರಿನಿಂದ ಪಾದಯಾತ್ರೆ ಮೂಲಕ ಪುತ್ತೂರಿಗೆ ಬಂದು ಸುಳ್ಯಕ್ಕೆ ಹೋಗುವ ಮೊದಲು ಟಿಫಿನ್‌ ಹಾಲ್‌ ಪಕ್ಕದ ಅಶ್ವತ್ಥ ಮರದ ದೊಡ್ಡ ಬೇರಿನ ಮೇಲೆ ಕುಳಿತಿದ್ದರು. ಸ್ವಾತಂತ್ರ್ಯ ಚಳವಳಿ ಬಗ್ಗೆ ಭಾಷಣ ಮಾಡಿದ್ದರು. ದಲಿತ ಕಾಲನಿಗೆ ಭೇಟಿ ನೀಡಿ ಬಾವಿ ನಿರ್ಮಿಸುವಂತೆ ಸೂಚಿಸಿದ್ದರು. ಅನೇಕರ ಮನೆಗೆ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ತುಂಬಿದ ಹಿನ್ನೆಲೆಯನ್ನು ಈ ಗಾಂಧಿಕಟ್ಟೆ ಸ್ಥಳ ಹೊಂದಿದೆ.

ಗಾಂಧಿಕಟ್ಟೆ ನಿರ್ಮಾಣ
ಗಾಂಧೀಜಿ ಅವರ ಭೇಟಿ ನೆನಪಿಗಾಗಿ ಹಲವು ವರ್ಷಗಳ ಹಿಂದೆ ಮಾಧವ ನಾಯಕ್‌ ಮುಂದಾಳತ್ವದಲ್ಲಿ ಮರದ ಬುಡದಲ್ಲಿ ಸಣ್ಣ ಕಟ್ಟೆ ನಿರ್ಮಿಸಲಾಯಿತು. ಕೆಲವೇ ವರ್ಷಗಳಲ್ಲಿ ಈ ಕಟ್ಟೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಪೂಜೆ ಆರಂಭಗೊಂಡಿತು. ಬಳಿಕ ಅವರ ಅಳಿಯ ರಾಮಕೃಷ್ಣ ಶೆಣೈ (ಕಿಟ್ಟ ರಾಯರು) ಈ ಹೊಣೆ ಹೊತ್ತರು. ಕಿಟ್ಟರಾಯರ ಮಕ್ಕಳಾದ ಸಾಯಿನಾಥ್‌ ಶೆಣೈ ಮತ್ತು ವಿಶ್ವನಾಥ ಶೆಣೈ ಈ ಪರಂಪರೆ ಮುಂದುವರಿಸಿಕೊಂಡು ಬಂದಿದ್ದು, ಕಟ್ಟೆಪೂಜೆ ವೇಳೆ ಇವರೇ ಸಾಂಪ್ರದಾಯಿಕವಾಗಿ ದೇವರನ್ನು ಎದುರುಗೊಳ್ಳುತ್ತಾರೆ. ಎರಡು ದಶಕಗಳ ಹಿಂದೆ ಗಾಂಧಿಕಟ್ಟೆ ಅಭಿವೃದ್ಧಿ ಸಮಿತಿ ಹುಟ್ಟಿಕೊಂಡು ಗಾಂಧಿಕಟ್ಟೆಯ ಜವಾಬ್ದಾರಿ ವಹಿಸಿಕೊಂಡಿತು.

Advertisement

ಸಮಿತಿಗೆ ಆಹ್ವಾನ ನೀಡದಿರುವುದಕ್ಕೆ ಅಸಮಾಧಾನ
25 ವರ್ಷಗಳಿಂದ ಗಾಂಧಿಕಟ್ಟೆಯ ನೇತೃತ್ವ ವಹಿಸಿರುವ ಗಾಂಧಿಕಟ್ಟೆ ಸಮಿತಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ಹಿಂದೆ ಸಮಾನ ಮನಸ್ಕರು ಸೇರಿ ಅಂದಿನ ಸಹಾಯಕ ಆಯುಕ್ತರು ಮತ್ತು ಶಾಸಕ ವಿನಯ ಕುಮಾರ್‌ ಸೊರಕೆ ಅವರ ಮುಖಾಂತರ ಗಾಂಧಿಕಟ್ಟೆ ಸಮಿತಿ ರಚನೆಯಾಗಿತ್ತು. ದಾನಿಗಳ ಸಹಕಾರದಿಂದ ಮತ್ತು ತಾ.ಪಂ. ಅನುದಾನದಿಂದ ಸಮಿತಿ ಮುಖಾಂತರ ಗಾಂಧಿ ಪ್ರತಿಮೆ, ಗಾಂಧಿ ಮಂಟಪ ರಚನೆಯಾಗಿದ್ದು, 25 ವರ್ಷಗಳಿಂದ ಗಾಂಧಿಕಟ್ಟೆ ಸಮಿತಿ ರಾಷ್ಟ್ರೀಯ ಹಬ್ಬಗಳ ಸಮಿತಿಯೊಂದಿಗೆ ಗಾಂಧಿ ಅಭಿಯಾನ, ಇತಿಹಾಸ, ಗಾಂಧಿ ಪುತ್ತೂರಿಗೆ ಬಂದ ನೆನಪಿಗಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಆದರೆ ಗಾಂಧಿಕಟ್ಟೆ ನವೀಕರಣ ಉದ್ಘಾಟನೆಗೆ ಗಾಂಧಿಕಟ್ಟೆ ಸಮಿತಿಗೆ ಆಮಂತ್ರಣ ನೀಡಿಲ್ಲ ಎಂದು ಸ್ಥಾಪಕ ಸಂಚಾಲಕ, ಹಾಲಿ ಕಾರ್ಯದರ್ಶಿ ಕೃಷ್ಣ ಪ್ರಸಾದ್‌ ಆಳ್ವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಲೋಕಾರ್ಪಣೆ
ನಗರಸಭೆ 8 ಲಕ್ಷ ರೂ. ಪೂರ್ಣ ಅನುದಾನ ಬಳಸಿ ಗಾಂಧಿಕಟ್ಟೆ ನಿರ್ಮಿಸಿದೆ. ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಆ. 26ರಂದು ಲೋಕಾರ್ಪಣೆಗೊಳ್ಳಲಿದೆ.
-ರೂಪಾ ಶೆಟ್ಟಿ , ಪೌರಾಯುಕ್ತೆ, ಪುತ್ತೂರು ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next