ಮಂಡ್ಯ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಮೂಲ-ವಲಸಿಗರು ಎಂಬ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಪಕ್ಷದ ಮೂಲ ಹಿರಿಯ ಮುಖಂಡರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂಬ ಅಸಮಾಧಾನದ ಕಟ್ಟೆಯೊಡೆದಿದೆ.
ಜಿಲ್ಲಾ ಘಟಕದ ಯಾವುದೇ ವಿಭಾಗಗಳ ಪದಾಧಿಕಾರಿಗಳ ನೇಮಕಾತಿಯಲ್ಲಿ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದಿಂದ ಆಯ್ಕೆ ಮಾಡುತ್ತಿಲ್ಲ. ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡುವ ಉದ್ದೇಶದಿಂದ ನಾಯಕರು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಬಗ್ಗೆ ಆಕ್ಷೇಪ, ಭಿನ್ನಾಭಿಪ್ರಾಯ ಜೋರಾಗಿದೆ.
ಸುರೇಶ್‌ಕಂಠಿ ಬದಲಾವಣೆಗೆ ಒತ್ತಡ: ಕಾಂಗ್ರೆಸ್ ಪರಿಶಿಷ್ಟ ಜಾತಿ, ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಸುರೇಶ್‌ಕಂಠಿ ನೇಮಕ ಮಾಡಿರುವ ಹಿನ್ನೆಲೆ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಆದರೆ, ಈಗ ಅದು ಸ್ಫೋಟಗೊಂಡಿದ್ದು, ಕೂಡಲೇ ಆತನನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಸಂಘಟನೆ ಮಾಡುವ ಪಕ್ಷದ ತತ್ವ ಸಿದ್ಧಾಂತ ಪಾಲಿಸುವ ಮುಖಂಡರಿಗೆ ನೀಡಬೇಕು ಎಂದು ಹಿರಿಯ ಮುಖಂಡರು ಒತ್ತಾಯಿಸಿದ್ದಾರೆ.
ಮೂಲ ಹಿರಿಯ ಮುಖಂಡರ ಸಭೆ: ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್‌ನ ಮೂಲ ಹಿರಿಯ ಮುಖಂಡರ ಸಭೆ ನಡೆದಿದ್ದು, ಸಭೆಯಲ್ಲಿ ಎಸ್ಸಿ ವಿಭಾಗ ಸೇರಿ ಎಲ್ಲಾ ವಿಭಾಗಗಳ ಪದಾಧಿಕಾರಿಗಳು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ದಲಿತ ಸಮುದಾಯವನ್ನು ಒಮ್ಮತಕ್ಕೆ ತೆಗೆದುಕೊಂಡು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಆಗ್ರಹಿಸಿದ್ದಾರೆ. ಸುರೇಶ್‌ಕಂಠಿ ಹಿಂದೆ ಜೆಡಿಎಸ್‌ನಿಂದ ವಲಸೆ ಬಂದಿದ್ದು, ಚಲುವರಾಯಸ್ವಾಮಿ ಆಪ್ತ ಎಂದು ಹಿರಿಯರನ್ನು ಕಡೆಗಣಿಸಿ ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿವೆ.
ಕೆಪಿಸಿಸಿಗೆ ದೂರು ನೀಡಲು ನಿರ್ಣಯ: ಸುರೇಶ್ ಕಂಠಿ ನೇಮಕದ ಬಗ್ಗೆ ಕೆಪಿಸಿಸಿಗೆ ದೂರು ನೀಡುವ ಮೂಲಕ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ಮುಖಂಡರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಹಾಗೂ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರಿಗೆ ಮನವಿ ಸಲ್ಲಿಸಿದರು. ಸಭೆಯಲ್ಲಿ ಕೆಪಿಸಿಸಿ ಸದಸ್ಯ ಎಂ.ಡಿ.ಜಯರಾಮು, ಮುಖಂಡರಾದ ಸುಂಡಹಳ್ಳಿ ಮಂಜುನಾಥ್, ರವಿಕುಮಾರ್ ತಗ್ಗಹಳ್ಳಿ, ರಾಚಪ್ಪ ಪುರ, ಕುಮಾರ್ ಕೊಪ್ಪ, ರಾಜಯ್ಯ, ಸುರೇಶ್, ಬಸವರಾಜು, ಶಿವಣ್ಣ, ಅರಸಯ್ಯ, ದೊರೆ ನಿಡಘಟ್ಟ, ಆನಂದ್ ಚಿಕ್ಕಮಂಡ್ಯ, ಹೊಂಬಯ್ಯ, ಮಮತಾ, ಕುಮಾರಸ್ವಾಮಿ, ಕಬ್ಟಾಳಯ್ಯ, ಅಂಬರೀಷ್, ಕುಮಾರ್ ಯಡವನಹಳ್ಳಿ, ಶಶಿಕಲಾ, ವಕೀಲ ಯೋಗಾನಂದ, ಕಾಂತ, ಶಿವಳ್ಳಿ ದೇವರಾಜ್, ಸಂಪತ್, ಜಯಶಂಕರ್ ಇದ್ದರು.
ಕೈ ಬಣ ಹೊಸದಲ್ಲ : ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹೊಸದೇನಲ್ಲ. ಮಾಜಿ ಸಚಿವ ಎಸ್.ಎಂ.ಕೃಷ್ಣ ಹಾಗೂ ದಿವಂಗತ ನಟ ಅಂಬರೀಷ್ ನಡುವೆ ಉಂಟಾದ ವೈಮನಸ್ಸಿನ ಬಣ ರಾಜಕೀಯ ಇಂದಿಗೂ ಶಮನಗೊಂಡಿಲ್ಲ. ಬೇರೆ ಪಕ್ಷದಿಂದ ಬಂದಿರುವ ನಾಯಕರು, ಕಾಂಗ್ರೆಸ್‌ನ ಹಿರಿಯ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಆಗಾಗ್ಗೆ ಕೇಳಿ ಬರುತ್ತಲೇ ಇವೆ. ಈಗ ಮತ್ತೂಮ್ಮೆ ಮುನ್ನೆಲೆಗೆ ಬಂದಿದೆ.
ಬಣ ಶಮನಕ್ಕೆ ನಿರಾಸಕ್ತಿ : ಬಣ ರಾಜಕೀಯ, ಗುಂಪುಗಾರಿಕೆ ಮುಂದುವರಿ ಯುತ್ತಿದ್ದರೂ ಶಮನಗೊಳಿಸಲು ಜಿಲ್ಲಾ ನಾಯಕರಾಗಲೀ, ರಾಜ್ಯ ನಾಯಕರಾಗಲೀ ಮುಂದಾಗು ತ್ತಿಲ್ಲ. ಇದರಿಂದ ಪಕ್ಷದ ಮೇಲೆ ಹೊಡೆತ ಬೀಳುವ ಮುನ್ಸೂಚನೆ ಇದ್ದರೂ ಯಾರೂ ತಲೆಕೆಡಿಸಿಕೊಳ್ಳು ತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಿಲ್ಲೆಗೆ ಬಂದಾಗಲೆಲ್ಲ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಶಿಸ್ತೇ ಇಲ್ಲ ಎಂದು ಬಹಿರಂಗವಾಗಿಯೇ ಹೇಳುತ್ತಾರೆ. ಆದರೆ ಇದುವರೆಗೂ ಎರಡು ಬಣಗಳ ಮುಖಂಡರನ್ನು ಕರೆಸಿ ಸಂಧಾನ ಮಾಡುವ ಪ್ರಯತ್ನ ಮಾತ್ರ ಮಾಡುತ್ತಿಲ್ಲ