Advertisement

ನಾಳೆ ಬೇಲೂರಲ್ಲಿ ಕಾಫಿ ಬೆಳೆಗಾರರ ಸಭೆ

02:35 PM Jun 11, 2019 | Team Udayavani |

ಚಿಕ್ಕಮಗಳೂರು: ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕುರಿತು ಚರ್ಚಿಸುವ ಸಲುವಾಗಿ ಕಾಫಿ ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳ ಸಭೆಯನ್ನು ಜೂ. 12ರಂದು ಮಧ್ಯಾಹ್ನ 3ಗಂಟೆಗೆ ಹಾಸನ ಜಿಲ್ಲೆ ಬೇಲೂರಿನ ಪ್ಲಾಟರ್ ಕ್ಲಬ್‌ನಲ್ಲಿ ಕರೆಯಲಾಗಿದೆ ಎಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಡಿ.ಎಂ.ವಿಜಯ್‌ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ ಉದ್ಯಮ ಬೆಲೆ ಇಳಿಕೆ, ಹವಾಮಾನ ವೈಪರೀತ್ಯ, ಕಾರ್ಮಿಕರ ಬವಣೆ, ಕಾಡುಪ್ರಾಣಿಗಳ ಉಪಟಳ, ಬ್ಯಾಂಕ್‌ಗಳ ಕಾಟ, ಬೆಳೆ ವಿಮೆ, ಒತ್ತುವರಿ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

ಬೆಳೆಗಾರರು ಕಂಗಾಲು: ಈ ಎಲ್ಲ ಸಮಸ್ಯೆಗಳ ನಡುವೆ ಕಳೆದ 10 ವರ್ಷಗಳಿಂದ ಕಾಫಿ ಧಾರಣೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಾರ್ಮಿಕರ ವೇತನ, ರಸಗೊಬ್ಬರ ಮತ್ತು ಯಂತ್ರೋಪಕರಣಗಳ ಬೆಲೆ ಬಹಳ ಹೆಚ್ಚಾಗಿದೆ. ಕಾಫಿ ಉಪ ಬೆಳೆಯಾದ ಕಾಳು ಮೆಣಸು ಆಮದಿನಿಂದ ಬೆಳೆಗಾರರಿಗೆ ತೀವ್ರ ಅನ್ಯಾಯವಾಗುತ್ತಿದೆ. ಈ ರೀತಿಯ ಹಲವು ಸಮಸ್ಯೆಳಿರುವುದರಿಂದ ಕಾಫಿ ತೋಟಗಳನ್ನು ಮುಂದುವರಿಸಲು ಸಾಧ್ಯವಾಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಇದರಿಂದಾಗಿ ಸರ್ಕಾರಕ್ಕೂ ಆದಾಯ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಸಾಲದ ಬಡ್ಡಿ ಮನ್ನಾ ಮಾಡಿ: ಕಾಫಿ ಉದ್ಯಮವನ್ನು ದೇಶಾದ್ಯಂತ ಸುಮಾರು 50ಲಕ್ಷ ಜನ ಅವಲಂಬಿಸಿದ್ದಾರೆ. ಉದ್ಯಮದಿಂದ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ಕೋಟ್ಯಂತರ ರೂ. ವಿದೇಶಿ ವಿನಿಮಯ ಬರುತ್ತಿದೆ. ಕಾಫಿ ಉದ್ಯಮವನ್ನು ರಕ್ಷಿಸುವ ಜವಾಬ್ದಾರಿ ಬೆಳೆಗಾರರಿಗೆ ಮಾತ್ರವಲ್ಲದೆ, ಸರ್ಕಾರಕ್ಕೂ ಇದೆ. ಕೂಡಲೇ, ಸರ್ಕಾರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ಹಲವು ವರ್ಷಗಳಿಂದ ಬೆಳೆಗಾರರು ಮಾಡಿರುವ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಹಲವು ಬೆಳೆಗಾರರ ಸಾಲದ ಖಾತೆಗಳು ಎನ್‌ಪಿಎ ಆಗಿದೆ. ಮತ್ತೆ ಕೆಲವು ಬೆಳೆಗಾರರ ವಿರುದ್ಧ ಬ್ಯಾಂಕ್‌ಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿವೆ. ಕೂಡಲೇ, ಸರ್ಕಾರ ಕಾಫಿ ಬೆಳೆಗಾರರ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸಬೇಕು. ಬಡ್ಡಿ ರಹಿತ ಸಾಲ ವಿತರಿಸಬೇಕೆಂದು ಆಗ್ರಹಿಸಿದರು.

Advertisement

ಸಮಸ್ಯೆ ಪರಿಹರಿಸಿ: ಈ ಹಿಂದೆ ವಾಣಿಜ್ಯ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್‌ ಅವರು ಈಗ ಹಣಕಾಸು ಸಚಿವರಾಗಿದ್ದಾರೆ. ಅವರಿಗೆ ಕಾಫಿ ಬೆಳೆಗಾರರ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ ಇದೆ. ಹಾಗಾಗಿ, ಬೆಳೆಗಾರರ ಸಮಸ್ಯೆ ಪರಿಹರಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಜೂ.12 ರಂದು ಮಧ್ಯಾಹ್ನ 3ಗಂಟೆಗೆ ಹಾಸನ ಜಿಲ್ಲೆ ಬೇಲೂರಿನ ಪ್ಲಾಟರ್ ಕ್ಲಬ್‌ನಲ್ಲಿ ಸಭೆ ಕರೆಯಲಾಗಿದೆ. ಸಭೆಗೆ ಕಾಫಿ ಬೆಳೆಯುವ ಪ್ರದೇಶಗಳ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ, ಪ್ರಜ್ವಲ್ ರೇವಣ್ಣ ಹಾಗೂ ಸ್ವತಃ ಕಾಫಿ ಬೆಳೆಗಾರರಾದ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ, ಟಿ.ಡಿ.ರಾಜೇಗೌಡ, ಸುರೇಶ್‌, ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್‌. ಲಿಂಗೇಶ್‌, ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್.ಧರ್ಮೇಗೌಡ, ಸದಸ್ಯರಾದ ಎಂ.ಕೆ.ಪ್ರಾಣೇಶ್‌, ಎಸ್‌.ಎಲ್.ಬೋಜೇಗೌಡ, ಗೋಪಾಲಸ್ವಾಮಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್‌.ಬೋಜೇಗೌಡ ಅವರನ್ನು ಆಹ್ವಾನಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸುರೇಶ್‌, ಶ್ರೀಧರ್‌, ಮಹೇಶ್‌, ರತೀಶ್‌, ರೇವಣ್ಣ, ನಾರಾಯಣಗೌಡ ಉಪಸ್ಥಿತರಿದ್ದರು.

ಕಾಫಿ ಉದ್ಯಮವನ್ನು ದೇಶಾದ್ಯಂತ ಸುಮಾರು 50ಲಕ್ಷ ಜನ ಅವಲಂಬಿಸಿದ್ದಾರೆ. ಉದ್ಯಮದಿಂದ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ಕೋಟ್ಯಂತರ ರೂ. ವಿದೇಶಿ ವಿನಿಮಯ ಬರುತ್ತಿದೆ. ಕಾಫಿ ಉದ್ಯಮವನ್ನು ರಕ್ಷಿಸುವ ಜವಾಬ್ದಾರಿ ಬೆಳೆಗಾರರಿಗೆ ಮಾತ್ರವಲ್ಲದೆ, ಸರ್ಕಾರಕ್ಕೂ ಇದೆ. ಕೂಡಲೇ, ಸರ್ಕಾರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಕಳೆದ ಹಲವು ವರ್ಷಗಳಿಂದ ಬೆಳೆಗಾರರು ಮಾಡಿರುವ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಹಲವು ಬೆಳೆಗಾರರ ಸಾಲದ ಖಾತೆಗಳು ಎನ್‌ಪಿಎ ಆಗಿದೆ. ಮತ್ತೆ ಕೆಲವು ಬೆಳೆಗಾರರ ವಿರುದ್ಧ ಬ್ಯಾಂಕ್‌ಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿವೆ. ಕೂಡಲೇ, ಸರ್ಕಾರ ಕಾಫಿ ಬೆಳೆಗಾರರ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸಬೇಕು. ಬಡ್ಡಿ ರಹಿತ ಸಾಲ ವಿತರಿಸಬೇಕು. ಈ ಹಿಂದೆ ವಾಣಿಜ್ಯ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್‌ ಅವರು ಈಗ ಹಣಕಾಸು ಸಚಿವರಾಗಿದ್ದಾರೆ. ಅವರಿಗೆ ಕಾಫಿ ಬೆಳೆಗಾರರ ಸಮಸ್ಯೆ ಕುರಿತು ಮಾಹಿತಿ ಇದೆ. ಬೆಳೆಗಾರರ ಸಮಸ್ಯೆ ಪರಿಹರಿಸಲು ಮುಂದಾಗಬೇಕು.
Advertisement

Udayavani is now on Telegram. Click here to join our channel and stay updated with the latest news.

Next