ಚಿಕ್ಕೋಡಿ: ಕಳೆದ ನಾಲ್ಕೈದು ದಿನಗಳ ಹಿಂದೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ದುಷ್ಕರ್ಮಿಗಳು ಬೀಕರ ಹತ್ಯೆ ಮಾಡಿ ಮೃತದೇಹವನ್ನು ಕತ್ತರಿಸಿ ಕೊಳವೆ ಬಾವಿಗೆ ಎಸೆದಿರುವ ಘಟನೆ ಖಂಡಿಸಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜೈನ ಸಮಾಜ ಬಾಂಧವರು ಸೇರಿದಂತೆ ಉಳಿದ ಸಮಾಜದ ನಾಗರಿಕರು ಮೌನ ಪ್ರತಿಭಟನೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ಹುಕ್ಕೇರಿ ತಾಲೂಕು ಮತ್ತು ನೆರೆಯ ಮಹಾರಾಷ್ಟ್ರದ ನಾಗರಿಕರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹತ್ಯೆಯಾದ ಜೈನಮುನಿಗಳಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದರು.
ಮೌನ ಪ್ರತಿಭಟನೆಯು ನಗರದ ಅರ್.ಡಿ.ಕಾಲೇಜಿನ ಮೈದಾನದಲ್ಲಿ ಸೇರಿರುವ ನಾಗರಿಕರು ಅಲ್ಲಿಂದ ಬಸ್ ನಿಲ್ದಾಣ, ಮಹಾವೀರ ಸರ್ಕಲ್, ಎನ್.ಎಂ.ರಸ್ತೆ, ಬಸವ ಸರ್ಕಲ್ ಮಾರ್ಗವಾಗಿ ಮಿನಿವಿಧಾನಸೌಧಕ್ಕೆ ತೆರಳಿ ಉಪವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ವರೂರ ಧರ್ಮಸೇನ ಭಟ್ಟಾಚಾರ ಸ್ವಾಮೀಜಿ ಮಾತನಾಡಿ, ಜೈನಮುನಿ ಹತ್ಯೆ ಮಾಡಿರುವುದು ಹೇಯ ಕೃತ್ಯ. ಇದು ಜೈನ ಮುನಿಗಳಿಗೆ ಅಷ್ಟೇ ಅಲ್ಲದೇ ಉಳಿದ ಸಮಾಜದ ಸ್ವಾಮೀಜಿಗಳಿಗೂ ಇಂತಹ ಘಟನೆ ಮರುಕಳಿಸಬಾರದು. ಈ ಘಟನೆಯನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ಕೃತ್ಯ ಎಸಗಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ನಾಂದಣಿಯ ಜೀನಸೇನ ಭಟ್ಟಾಚಾರ್ಯ ಸ್ವಾಮೀಜಿ, ಕೊಲ್ಲಾಪೂರದ ಲಕ್ಷ್ಮೀಸೇನಾ ಭಟ್ಟಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ವೀರಕುಮಾರ ಪಾಟೀಲ, ಮೋಹನ ಶಾ, ವರ್ಧಮಾನ ಸದಲಗೆ, ರಣಜೀತ ಸಂಗ್ರೊಳ್ಳೆ, ಅನಿಲ ಸದಲಗೆ, ಉತ್ತಮ ಪಾಟೀಲ, ಡಾ.ಪದ್ಮರಾಜ ಪಾಟೀಲ, ಬಸವಪ್ರಸಾದ ಜೊಲ್ಲೆ, ರಾಜು ಖಿಚಡೆ, ರವಿ ಹಂಪನ್ನವರ, ಡಾ.ಎನ್.ಎ.ಮಗದುಮ್ಮ, ಸಂಜಯ ಪಾಟೀಲ, ಭರತೇಶ ಬನವನೆ, ಎಸ್.ಟಿ.ಮುನ್ನೋಳ್ಳಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದರು.