Advertisement

ಎರಡು ವರ್ಷಗಳು ಕಳೆದರೂ ಪೂರ್ಣಗೊಳ್ಳದ ಅಳಕೆ ಮಾರುಕಟ್ಟೆ

11:16 PM Mar 14, 2020 | mahesh |

ಮಹಾನಗರ: ಕುದ್ರೋಳಿಯ ಅಳಕೆಯಲ್ಲಿ ಎರಡು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ಮಾರುಕಟ್ಟೆಯ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ! ಒಂದು ಹಂತದ ಕಾಮಗಾರಿ ಪೂರ್ಣಗೊಂಡಿದ್ದ ಕಟ್ಟಡ ಹಲವು ತಿಂಗಳುಗಳ ಕಾಲ ಪಾಳುಬಿದ್ದ ಸ್ಥಿತಿಯಲ್ಲಿದೆ. ಹೆಸರಿಗೆ ಮಾತ್ರ ಎಂಬಂತೆ ಕಟ್ಟಡ ನಿರ್ಮಾಣವಾಗಿತ್ತೇ ಹೊರತು ಮಾರುಕಟ್ಟೆಗೆ ಅಗತ್ಯವಾದ ನೀರು ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಹಾಗಾಗಿ ಈ ಮಾರುಕಟ್ಟೆ ವ್ಯಾಪಾರಿಗಳು, ಸಾರ್ವಜನಿಕರಿಗೆ ತೆರೆದುಕೊಂಡಿಲ್ಲ.

Advertisement

1 ಕೋ.ರೂ. ವೆಚ್ಚದ ಕಾಮಗಾರಿ
ಇದು ಒಟ್ಟು ಅಂದಾಜು 1 ಕೋ.ರೂ. ವೆಚ್ಚದ ಕಾಮಗಾರಿ. ಮೊದಲು 87 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಟೆಂಡರ್‌ ಕರೆಯಲಾಗಿತ್ತು. 84 ಲ.ರೂ.ಗಳಿಗೆ ಬಿಡ್‌ ಸಲ್ಲಿಕೆಯಾಗಿ 2016-17ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಮತ್ತೆ ನೀರಿನ ಟ್ಯಾಂಕ್‌ ಮತ್ತಿತರ ಸೌಕರ್ಯಗಳಿಗೆ ಮತ್ತೆ 30 ಲ.ರೂ. ವೆಚ್ಚದ ಕಾಮ ಗಾರಿಗೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ.

30 ಮಳಿಗೆಗಳು
ಈ ಮಾರುಕಟ್ಟೆಯಲ್ಲಿ ಮಾಂಸ, ತರಕಾರಿ ಸಹಿತ ಸುಮಾರು 30ರಷ್ಟು ಮಳಿಗೆಗಳಿಗೆ ಅವ ಕಾಶ ಒದಗಿಸಲಾಗುತ್ತಿದೆ. 4 ಜನರಲ್‌ ಸ್ಟಾಲ್‌ಗಳು, 12 ಹಸಿಮೀನು ಮಾರಾಟ ಮಳಿಗೆಗಳು, 2 ಒಣಮೀನು ಮಾರಾಟ ಮಳಿಗೆಗಳು, 4 ಹಣ್ಣು ಹಂಪಲು, ಒಂದು ಚಿಕನ್‌, ಮಟನ್‌ ಸ್ಟಾಲ್‌ಗಳು ಇದರಲ್ಲಿ ಒಳಗೊಂಡಿವೆ. ಮಾರು ಕಟ್ಟೆಯ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೆ ಗುತ್ತಿಗೆದಾರರಿಂದ ಲೋಪವಾಗಿದೆ. ಇದೀಗ ಇದೇ ಮಾರುಕಟ್ಟೆಗೆ 30 ಲ.ರೂ. ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗುತ್ತಿದೆ. ಈ ಹಿಂದಿನ ಗುತ್ತಿಗೆದಾರರಿಗೆ ಕಾಮಗಾರಿ ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೆಲವು ಮಂದಿ ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ ಇದನ್ನು ಪಾಲಿಕೆ ಅಧಿಕಾರಿಗಳು ನಿರಾಕರಿಸಿದ್ದಾರೆ. 84 ಲ.ರೂ. ವೆಚ್ಚದ ಕಾಮಗಾರಿ ನಡೆದಿದೆ. ಮರಳು ಕೊರತೆ, ಚುನಾವಣೆ ಮೊದಲಾದ ಕಾರಣಗಳಿಂದ ವಿಳಂಬವಾಗಿದೆ. ಆದರೆ ಎಲ್ಲ ಪ್ರಕ್ರಿಯೆಗಳ ಪಾರದರ್ಶಕವಾಗಿ ನಡೆದಿವೆ. ಈಗ ನೀರಿನ ಟ್ಯಾಂಕ್‌, ಇತರ ಕೆಲವು ಅಗತ್ಯ ಕಾಮಗಾರಿ ಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗು ತ್ತಿದೆ. ಯಾರು ಕಾಮಗಾರಿ ವಹಿಸಿಕೊಳ್ಳುತ್ತಾರೆ ಎಂಬುದು ಅಂತಿಮ ವಾಗಿಲ್ಲ. ಯಾವುದೇ ಲೋಪ ನಡೆದಿಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

2 ವರ್ಷಗಳಿಂದ ಕಾಯುತ್ತಿದ್ದೇವೆ
ಯಾರ ಕಡೆಯಿಂದ ವಿಳಂಬವಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಆದರೆ ಎರಡು ವರ್ಷಗಳಿಂದ ಮಾರ್ಕೆಟ್‌ ಕಟ್ಟಡ ನಿರ್ಮಾಣ ವಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ. ಹಳೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಈ ಜಾಗ ಕೂಡ ಕೊಳಚೆಯಂತಾಗುತ್ತಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಕುದ್ರೋಳಿಯಲ್ಲಿ ಸುವ್ಯವಸ್ಥಿತವಾದ ಮಾರುಕಟ್ಟೆಯ ಬೇಡಿಕೆ ಮುಂದಿಟ್ಟಿದ್ದ ಸ್ಥಳೀಯ ಮತ್ತು ಸುತ್ತಲಿನ ಸಾರ್ವಜನಿಕರು ಕೂಡ ಮಾರ್ಕೆಟ್‌ ಕಾಮಗಾರಿ ವಿಳಂಬದ ಬಗ್ಗೆ ಅಸಮಾಧಾನ ಹೊರಗೆಡಹಿದ್ದಾರೆ. ಮಾರುಕಟ್ಟೆಗೆ ಅಗತ್ಯ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

Advertisement

ತಿಂಗಳಾಂತ್ಯಕ್ಕೆ ಪೂರ್ಣ
ಮಾರುಕಟ್ಟೆಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳು ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿವೆ. ಅನಂತರ ಮಳಿಗೆಗಳ ಏಲಂ ನಡೆಯಲಿದೆ. ಪೂರಕ ಕಾಮಗಾರಿಗಳಿಗಾಗಿ ಟೆಂಡರ್‌ ಕರೆಯಲಾಗಿದೆಯೇ ಹೊರತು ಒಂದೇ ಕಾಮಗಾರಿಗೆ ಅಲ್ಲ. ಟೆಂಡರ್‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಕಾಮಗಾರಿ ಸ್ಥಳಕ್ಕೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾನೆ. ಕಾಮಗಾರಿ ಸಂಪೂರ್ಣಗೊಳ್ಳುವವರೆಗೂ ನಿಗಾ ವಹಿಸಲಾಗುತ್ತದೆ.
 - ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ, ಆಯುಕ್ತರು, ಮಹಾನಗರ ಪಾಲಿಕೆ

-  ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next