Advertisement

ಪೊಲೀಸ್‌ ಬಲೆಗೆ ಬಿದ್ದ ಗಾಂಜಾ ವ್ಯಾಪಾರಿ

10:56 AM Aug 23, 2018 | Team Udayavani |

ಬೆಂಗಳೂರು: ರಾಜಧಾನಿ “ಉಡ್ತಾ ಬೆಂಗಳೂರು’ ಆಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ನಗರ ಪೊಲೀಸರು ಮಾದಕ ವಸ್ತು ಮಾರಾಟಗಾರು ಹಾಗೂ ಗ್ರಾಹಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಸೂಚನೆ ಮೇರೆಗೆ ಮಫಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಆಗ್ನೇಯ ವಿಭಾಗದ ಪೊಲೀಸರು ತಮಿಳುನಾಡು ಮೂಲದ ಮಾದಕ ವಸ್ತು ಗಾಂಜಾ ಸರಬರಾಜುದಾರರನ್ನು ಬಂಧಿಸಿದ್ದಾರೆ.

Advertisement

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಶ್ರೀನಿವಾಸ್‌ (42) ಬಂಧಿತ. ಆರೋಪಿ ಆಂಧ್ರಪ್ರದೇಶ ಮತ್ತು ಚಿಕ್ಕಬಳ್ಳಾಪುರದಿಂದ ಕೆಜಿಗಟ್ಟಲೆ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಪರಪ್ಪನ ಅಗ್ರಹಾರದ ಗೋವಿಂದಶೆಟ್ಟಿಹಳ್ಳಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸೂರಿನಲ್ಲಿ ಶ್ರೀನಿವಾಸ್‌ ವಾಸವಾಗಿದ್ದು, ಆಂಧ್ರಪ್ರದೇಶದ ಮಹಿಳೆ ಹಾಗೂ ಚಿಕ್ಕಬಳ್ಳಾಪುರ ಮೂಲದ ಒಬ್ಬ ವ್ಯಕ್ತಿ ಮೂಲಕ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದ. ಬಳಿಕ ಅದನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಬಸ್‌ನಲ್ಲಿ ನಗರಕ್ಕೆ ಬರುತ್ತಿದ್ದ. ಗಾಂಜಾ ವಾಸನೆ ಬಾರದಂತೆ ಎಚ್ಚರಿಕೆ ವಹಿಸಿದ್ದ ಆರೋಪಿ ಈ ಚೀಲಗಳಲ್ಲಿ ಹೊಗೆಸೊಪ್ಪು ತುಂಬಿಕೊಂಡು ಯಾಮಾರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಿವಾಸ್‌ ವಿರುದ್ಧ ಕೊಲೆ ಆರೋಪ: 6 ವರ್ಷಗಳ ಹಿಂದೆ ಹೊಸೂರಿನ ಸಿಪ್‌ ಕಾಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣದಲ್ಲಿ ಶ್ರೀನಿವಾಸ್‌ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಚಿಲ್ಲರೆ ಅಂಗಡಿ ನಡೆಸುತ್ತಿದ್ದ ಈತ, ದುಶ್ಚಟಗಳ ದಾಸನಾಗಿ, ಸಂಸಾರ ನಿರ್ವಹಣೆ ಮಾಡಲು ಹಣವಿಲ್ಲದೇ, ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದಾನೆ. ನಗರದಲ್ಲಿ ಈತನಿಂದ ಗಾಂಜಾ ಖರೀದಿಸುತ್ತಿದ್ದ ಇತರೆ ಮಂದಿಯ ಬಗ್ಗೆಯೂ ಮಾಹಿತಿ ನೀಡಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು
ಪೊಲೀಸರು ತಿಳಿಸಿದ್ದಾರೆ. 

ನಗರದ ಹಲವಡೆ ಮಾಹಿತಿ ಪೆಟಿಗೆ
ಮಾದಕ ವಸ್ತು ದಂಧೆಕೋರರ ಬಗ್ಗೆ ಮಾಹಿತಿ ಸಂಗ್ರಹಿಸಲು ವೈಟ್‌ಫೀಲ್ಡ್‌ ವಲಯದ ಎಲ್ಲ ಠಾಣೆಗಳ ವ್ಯಾಪ್ತಿಗಳಲ್ಲಿ ಸುಮಾರು 35 ಮಾಹಿತಿ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ. ಶಾಲಾ-ಕಾಲೇಜುಗಳು, ಪ್ರತಿಷ್ಠಿತ ಕಂಪನಿಗಳ ಕಚೇರಿ ಬಳಿ ಮಾಹಿತಿ ಪೆಟ್ಟಿಗೆಗಳನ್ನು ಇರಿಸಿದ್ದು, ಮಾಹಿತಿ ನೀಡುವವರು ತಮ್ಮ ವೈಯಕ್ತಿಕ ವಿಳಾಸ ಅಥವಾ ಸಂಪರ್ಕ ಸಂಖ್ಯೆ ನಮೂದಿಸುವ ಅಗತ್ಯವಿಲ್ಲ. ಮಾರಾಟಗಾರ ಹಾಗೂ ಸ್ಥಳದ ಬಗ್ಗೆ ಮಾಹಿತಿ ನೀಡಿದರೆ ಸಾಕು. ಇದನ್ನೇ ಆಧಾರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಉಳಿದವರ ಪತ್ತೆಗಾಗಿ ವಿಶೇಷ ತಂಬಂಧಿತ ಆರೋಪಿಗಳಾದ ಸಾದಿಕ್‌, ಸಯ್ಯದ್‌ ಹಾಗೂ ಇತರೆ 12 ಮಂದಿ ಆರೋಪಿಗಳು ನಗರದಲ್ಲಿ ಇತರೆಡೆ ಅವ್ಯಾಹತವಾಗಿ ಮಾದಕ ವಸ್ತು ಮಾರಾಟ ಮಾಡುವ ಸುಮಾರು 35 ಮಂದಿಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಆ ಆರೋಪಿಗಳು ಪೊಲೀಸರು ನಮ್ಮ ಮೇಲೂ ಗುಂಡು ಹಾರಿಸುತ್ತಾರೆ ಎಂಬ ಭಯದಲ್ಲಿ ನೆರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next