ಪುತ್ತೂರು: ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿವಾಸಿ ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿದ ಪ್ರಕರಣದ ಆರೋಪಿ ಅಸ್ಸಾಂ ಮೂಲದ ಅಖ್ತರ್ ಹುಸೈನ್‌ನನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಕೇರಳದ ನೆಟ್ಟಣಿಗೆ ಗ್ರಾಮದಲ್ಲಿ ಬಂಧಿಸಿದ್ದಾರೆ.
ಪ್ರಕರಣದ ವಿವರ
ದ್ವಿತೀಯ ಪಿಯುಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಸಹಪಾಠಿಯ ಮನೆಗೆ ಓದಲೆಂದು ಮಾ.8 ರಂದು ಮಧ್ಯಾಹ್ನ ಮನೆಯಿಂದ ತೆರಳಿದ್ದ ಕಟ್ಟತ್ತಾರು ನಿಡ್ಯಾಣ ನಿವಾಸಿ ವಿದ್ಯಾರ್ಥಿನಿ ಬಳಿಕ ನಾಪತ್ತೆಯಾಗಿದ್ದಳು. ವಿದ್ಯಾರ್ಥಿನಿಯ ತಂದೆ ಜತೆ ಮೇಸ್ತ್ರಿ ಕೆಲಸದಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಸ್ಸಂ ಮೂಲದ ಅಖ್ತರ್ ಹಸೈನ್ ಕೂಡ ನಾಪತ್ತೆಯಾಗಿದ್ದ ಹಿನ್ನೆಲೆ ಯಲ್ಲಿ ಯುವತಿಯ ತಂದೆ ಅಖ್ತರ್ ಪ್ರೀತಿಯ ನಾಟಕವಾಡಿ ಅಪಹರಿಸಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಸಂಪ್ಯ ಪೊಲೀಸರು ಎರಡು ವಾರಗಳ ಬಳಿಕ ಯುವತಿಯನ್ನು ಅಸ್ಸಾಂನಲ್ಲಿ ಪತ್ತೆ ಹಚ್ಚಿದ್ದರು. ಆದರೆ ಯುವಕ ಅಖ್ತರ್ ತಪ್ಪಿಸಿಕೊಂಡು ನಾಪತ್ತೆಯಾಗಿದ್ದನು. ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯಿದೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮುಂದುವರೆದ ತನಿಖೆಯ ಭಾಗವಾಗಿ ಜೂ. 3 ರಂದು ಆರೋಪಿ ಅಖ್ತರ್‌ನನ್ನು ಕಾರ್ಯಾಚರಣೆ ನಡೆಸಿ ಕೇರಳದ ಮುಳ್ಳೇರಿಯ ಸಮೀಪದ ನೆಟ್ಟಣಿಗೆಯಲ್ಲಿ ಸಂಪ್ಯ ಠಾಣಾ ಎಸ್‌ಐ ಸಕ್ತಿವೇಲು ನೇತೃತ್ವದ ತಂಡ ಬಂಧಿಸಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.