ಕುಣಿಗಲ್: ಅಂದ್ರ ಪ್ರದೇಶದ ತಿರುಪತಿಗೆ ಕೆಲಸಕ್ಕೆ ಹೋಗಿ ಬರುವುದ್ದಾಗಿ ಹೇಳಿ ಕಳೆದ ಏಳು ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯನ್ನು ಕುಣಿಗಲ್ ಪೊಲೀಸರು ಹುಡುಕಿ ಕುಟುಂಬಸ್ಥರಿಗೆ ಒಪ್ಪಿಸಿದ ಅಪರೂಪದ ಘಟನೆ ನಡೆದಿದೆ.
ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ಸೊಬಗಾನಹಳ್ಳಿ ಗ್ರಾಮದ ಕಾಣೆಯಾಗಿದ್ದ ಬಾಲಕೃಷ್ಣ (35) ನನ್ನು ಪೊಲೀಸರು ಪತ್ತೆ ಹಚ್ಚಿ ಕುಟುಬಸ್ಥರಿಗೆ ಒಪ್ಪಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ರಾಧ ಎಂಬುವರ ಜೊತೆ ಬಾಲಕೃಷ್ಣ ವಿವಾಹವಾಗಿದ್ದು ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಕಳೆದ ಏಳು ವರ್ಷದ ಹಿಂದೆ ಬಾಲಕೃಷ್ಣ ಟೂರ್ಸ್ ಅಂಡ್ ಟ್ರಾವಲ್ಸ್ ಕಂಪನಿಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಹೊದವರು ಮತ್ತೆ ಮನೆಗೆ ವಾಪಸಾಗಿರಲಿಲ್ಲ.
ಕುಟುಬಸ್ಥರು ತಿರುಪತಿಯ ಟೂರ್ಸ್ ಅಂಡ್ ಟ್ರಾವಲ್ಸ್ ಕಂಪನಿ ಸೇರಿದಂತೆ ಹಲವೆಡೆ ಹುಡುಕಿದರೂ ಬಾಲಕೃಷ್ಣ ಸಿಗಲಿಲ್ಲ, ಬಾಲಕೃಷ್ಣ ಹಾಗೂ ಅವರ ತಾಯಿ ಮತ್ತು ಹೆಂಡತಿ ಮಕ್ಕಳಿರುವ ಪಡಿತರ ಚೀಟಿಯಲ್ಲಿ ಪಡಿತರ ಸಾಮಗ್ರಿ ಸ್ಥಗಿತಗೊಂಡಿತ್ತು. , ಈ ಸಂಬಂಧ ಬಾಲಕೃಷ್ಣನ ಹೆಂಡತಿ ರಾಧ ಕುಣಿಗಲ್ ಆಹಾರ ಇಲಾಖೆಯಲ್ಲಿ ವಿಚಾರಿಸಿದ್ದು, ಬಾಲಕೃಷ್ಣ ಅವರು ಐಟಿ ಫೈಲ್ ಮಾಡಿದ್ದಾರೆ ಹಾಗಾಗಿ ಪಡಿತರ ಚೀಟಿ ರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುಮಾನಗೊಂಡ ಬಾಲಕೃಷ್ಣನ ತಾಯಿ ಭಾಗ್ಯಮ್ಮ ಆ10 ರಂದು ಕುಣಿಗಲ್ ಪೊಲೀಸರಿಗೆ ದೂರು ನೀಡಿದರು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಡಿವೈಎಸ್‌ಪಿ ಲಕ್ಷ್ಮಿಕಾಂತ್, ಸಿಪಿಐ ನವೀನ್‌ಗೌಡ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಟಿಕ್ನಿಕಲ್ ಸೆಕ್ಷನ್ಸ್ ಸಿಬ್ಬಂದಿಯ ಸಹಾಯದಲ್ಲಿ ಪೊಲೀಸ್ ಸಿಬಂದಿಗಳಾದ ಹೇರೂರು ರವಿ, ಬೇಗೂರು ನಟರಾಜ್ ತೆಲಂಗಾಣ ರಾಜ್ಯದ ಮೆಡ್‌ಚೆಲ್ ಸಿಟಿಯಲ್ಲಿ ಬಾಲಕೃಷ್ಣನನ್ನು ಪತ್ತೆ ಮಾಡಿ ತಾಯಿ ಭಾಗ್ಯಮ್ಮ ಅವರ ವಶಕ್ಕೆ ನೀಡಿದ್ದಾರೆ.
ಆರ್ಥಿಕ ಸುಳಿಯಿಂದ ಪಾರಾಗಲು ಹೊರ ರಾಜ್ಯಕ್ಕೆ
ಬಾಲಕೃಷ್ಣ ಕಳೆದ ಏಳು ವರ್ಷಗಳ ಹಿಂದೆ ಅರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಅದರಿಂದ ಪಾರಾಗಲು ತೆಲಂಗಾಣ ರಾಜ್ಯದ ಮೆಡ್‌ಚೆಲ್ ಸಿಟಿಯಲ್ಲಿ ಅಂಗಡಿ ಬಾಡಿಗೆ ಪಡೆದು ಟೂರ್ಸ್ ಅಂಡ್ ಟ್ರಾವಲ್ಸ್ ಅಂಗಡಿಯನ್ನು ಇಟ್ಟುಕೊಂಡು ವವ್ಯಹಾರ ನಡೆಸುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.