ಗದಗ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಜ್ವರ ಹಾಗೂ ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಲಕ್ಕುಂಡಿ ಗ್ರಾಮದ ವ್ಯಕ್ತಿಯೊಬ್ಬ ಮೃತಪಟ್ಟ ಬಳಿಕ ಕೋವಿಡ್-19 ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ದಿಂದ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿದ್ದು, ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿದೆ. ತಾಲೂಕಿನ ಲಕ್ಕುಂಡಿ ಗ್ರಾಮದ 44 ವರ್ಷದ ವ್ಯಕ್ತಿ ಜ್ವರ, ಮಧುಮೇಹ ಹಾಗೂ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಜ್ವರ ಹೆಚ್ಚಾಗಿದ್ದರಿಂದ ಮೇ 27ರಂದು ಬೆಟಗೇರಿಯ ಸಿಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಜ್ವರ ಉಪಶಮನವಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜೂ.1 ರಂದು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಈ ವೇಳೆ ಜ್ವರದ ಲಕ್ಷಣಗಳ ಬಗ್ಗೆ ಅನುಮಾನಗೊಂಡಿದ್ದ ಅಲ್ಲಿನ ವೈದ್ಯರು ರೋಗಿಯ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ, ಕೋವಿಡ್ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ವರದಿ ಬರುವ ಮುನ್ನವೇ ಬುಧವಾರ ಆತ ಮೃತಟ್ಟಿದ್ದಾರೆ. ಆನಂತರ ಬಂದ ವರದಿಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿದೆ. ಕೋವಿಡ್-19 ವಿಪತ್ತು ನಿರ್ವಹಣೆ ಮಾರ್ಗಸೂಚಿಯಂತೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರಮಠ ಮಾಹಿತಿ ನೀಡಿದರು.
ಲಕ್ಕುಂಡಿಗೆ ಕೋವಿಡ್ ಲಗ್ಗೆ: ಈವರೆಗೆ ಗದಗ ನಗರ ಹಾಗೂ ವಲಸಿಗ ಕಾರ್ಮಿಕರ ಆಗಮನದಿಂದಾಗಿ ಜಿಲ್ಲೆಯ ವಿವಿಧ ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳ ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ, ಇದೇ ಮೊದಲ ಬಾರಿಗೆ ಗದಗ ತಾಲೂಕಿನ ಹಳ್ಳಿಯೊಂದಕ್ಕೆ ಕೋವಿಡ್ ಪ್ರವೇಶಿಸಿದೆ. ಲಕ್ಕುಂಡಿ ಗ್ರಾಮದ ನಿವಾಸಿಯಾಗಿದ್ದ 44 ವರ್ಷದ ವ್ಯಕ್ತಿ ಬಲಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸೋಂಕು ಪತ್ತೆಯಾಗುತ್ತಿದ್ದಂತೆ ಗ್ರಾಮಸ್ಥರು ಮನೆಯಿಂದ ಹೊರ ಬರಲೂ ಹಿಂದೇಟು ಹಾಕುತ್ತಿದ್ದು, ಗ್ರಾಮದ ಎಲ್ಲ ಓಣಿಗಳೂ ಜನ ಸಂಚಾರವಿಲ್ಲದೇ, ಬಿಕೋ ಎನ್ನುತ್ತಿವೆ. ಇದರ ಬೆನ್ನಲ್ಲೇ ಗ್ರಾಪಂ ಸಿಬ್ಬಂದಿ ಮೃತನ ಮನೆಯಿಂದ 100 ಮೀಟರ್ ದೂರದ ವರೆಗಿನ ಎಲ್ಲ ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿ, ಜನ ಸಂಚಾರವನ್ನು ನಿಷೇಧಿಸಿದ್ದಾರೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸೋಂಕಿನ ಮೂಲವೇ ನಿಗೂಢ!: ಮೃತ ವ್ಯಕ್ತಿಗೆ ಯಾವುದೇ ರೀತಿಯ ಟ್ರಾವೆಲ್ ಇಸ್ಟರಿ ಇಲ್ಲ. ಹೀಗಾಗಿ ಸೋಂಕು ಹರಡಿರುವುದೇ ನಿಗೂಢವಾಗಿದೆ. ಆದರೆ, ವೃತ್ತಿಯಲ್ಲಿ ಮದುವೆ, ಮುಂಜಿ ಹಾಗೂ ಇನ್ನಿತೆರೆ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದರು. ಲಾಕ್‌ಡೌನ್ ವೇಳೆ ಯಾವುದಾರೂ ಮದುವೆಯಲ್ಲಿ ಪಾಲ್ಗೊಂಡಿದ್ದರೋ, ಅಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ ಪ್ರಥಮ ಅಥವಾ ದ್ವಿತೀಯ ಸಂಪರ್ಕಕ್ಕೆ ಬಂದಿದ್ದರೋ ಎಂಬುದು ಗ್ರಾಮಸ್ಥರ ಅನುಮಾನ. ಅಲ್ಲದೇ, ಮೃತ ವ್ಯಕ್ತಿ ಸ್ನೇಹ ಜೀವಿಯಾಗಿದ್ದರಿಂದ ಗ್ರಾಮದ ಅನೇಕರೊಂದಿಗೆ ನಿಕಟ ಸಂಪರ್ಕವಿತ್ತು. ಹೀಗಾಗಿ ಗ್ರಾಮದ ಅನೇಕರಿಗೆ ಕೋವಿಡ್ ಆತಂಕ ತಂದೊಡ್ಡಿದೆ ಎನ್ನಲಾಗಿದೆ.
ಮುಂಬೈ ವ್ಯಕ್ತಿಯಿಂದ ನಗರದಲ್ಲಿ ಆತಂಕ: ಲಕ್ಕುಂಡಿಯ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಇದರ ನಡುವೆ ಮಂಗಳವಾರ ಮುಂಬೈನಿಂದ ಗದಗಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಕ್ವಾರಂಟೈನ್‌ಗೆ ಒಳಗಾಗದೇ, ಬುಧವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವಳಿ ನಗರದಲ್ಲಿ ಆತಂಕ ತಂದೊಡ್ಡಿದ್ದಾರೆ. ಆತ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಜೊತೆಗೆ ಕೋವಿಡ್ ಟೆಸ್ಟ್‌ನಲ್ಲಿ ನೆಗೆಟೀವ್ ಬಂದಿದೆ. ಆದರೂ, ವಲಸಿಗರು 14 ದಿನ ಕ್ವಾರಂಟೈನ್ ಲ್ಲಿ ಇರಬೇಕು. ಈ ಕುರಿತು ಸಂಬಂಧಿಸಿದವರ ಗಮನ ಸೆಳೆಯುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ|ನೀಲಗುಂದ ತಿಳಿಸಿದರು.