Advertisement

ರಘುನಾಥ ರಾವ್‌ ಮಲ್ಕಾಪುರೆಗೆ ಪ್ರಮುಖರ ಸಾಂತ್ವನ

01:18 AM Dec 22, 2022 | Team Udayavani |

ಬೆಳಗಾವಿ: ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ  ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಸ್ಥಾನದಿಂದ ಕೆಳಗಿಳಿದ ಬಿಜೆಪಿಯ ರಘುನಾಥ ರಾವ್‌ ಮಲ್ಕಾಪುರೆ  ಅವರಿಗೆ ಪ್ರಮುಖ ನಾಯಕರು ಸಮಾಧಾನ ಹೇಳಿದರು.  ಹೊರಟ್ಟಿ  ಆಯ್ಕೆ ಬಳಿಕ ಸದನದಲ್ಲಿ ಮಾತನಾಡಿದ ಬಿಜೆಪಿಯ ಆಯನೂರು ಮಂಜುನಾಥ್‌, ರಘುನಾಥ ರಾವ್‌ ಮಲ್ಕಾಪುರೆ  ಸಭಾಪತಿ ಸ್ಥಾನದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಯೋಗ್ಯತೆಯಿದೆ, ಆದರೆ ಯೋಗವಿಲ್ಲ. ಹೀಗಾಗಿ ಅವರು ಸಭಾಪತಿ ಸ್ಥಾನದಲ್ಲಿ ಮುಂದುವರಿ ಯಲು ಸಾಧ್ಯವಾಗಲಿಲ್ಲ ಎಂದರು.

Advertisement

ಬಳಿಕ  ಮಾತನಾಡಿದ  ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್‌ ಗಾಯದ ಮೇಲೆ ಬೆರಳಿಡುವ ಕೆಲಸ ಮಾಡುತ್ತಾರೆ, ಅದು ಸರಿಯಲ್ಲ.  ಮಲ್ಕಾಪುರೆ ಅವರಿಗೆ ಉಜ್ವಲ ಭವಿಷ್ಯವಿದೆ. ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಬೇಡ. ಪಕ್ಷ ಅವರಿಗೆ ಎಲ್ಲವನ್ನೂ ನೀಡಲಿದೆ ಎಂದು ಹೇಳುವ ಮೂಲಕ ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ ಮುನಿಸನ್ನು ಶಮನ ಮಾಡಲು ಯತ್ನಿಸಿದರು.

ಯಜಮಾನರು ಕರೆಸುತ್ತಾರೆ
ಜೆಡಿಎಸ್‌ನ ಭೋಜೇಗೌಡ ಮಾತನಾಡಿ, ಬಸವರಾಜ ಹೊರಟ್ಟಿ  8 ಬಾರಿ ಎಂಎಲ್‌ಸಿ ಆಗಿದ್ದು, ಎರಡು ಬಾರಿ ಹೊರತುಪಡಿಸಿ ಉಳಿದ 6 ಬಾರಿ ಜೆಡಿಎಸ್‌ನಿಂದ ಗೆದ್ದಿದ್ದಾರೆ ಎಂದರು. ಆಗ ಮಧ್ಯಪ್ರವೇಶಿಸಿದ ಬಸವರಾಜ ಹೊರಟ್ಟಿ, ಮೊದಲು ಪಕ್ಷೇತರ, ಅನಂತರ ಜನತಾ ಪಕ್ಷ, ಜನತಾದಳ, ಲೋಕಶಕ್ತಿ, ಜೆಡಿಎಸ್‌, ಈಗ ಬಿಜೆಪಿಯಿಂದ ಆಯ್ಕೆಯಾಗಿದ್ದೇನೆ ಎಂದರು. ಅದಕ್ಕೆ ಭೋಜೆಗೌಡ ಬಿಜೆಪಿ ಬಿಟ್ಟು ಎಲ್ಲವೂ ನಮ್ಮ ಪಕ್ಷವೇ. ಹೊರಟ್ಟಿ ಅವರು ಬಿಜೆಪಿಯಲ್ಲಿದ್ದರೂ ಅವರ ಮನಸ್ಸು ಮಾತ್ರ ಇನ್ನೂ ಜೆಡಿಎಸ್‌ನಲ್ಲಿದೆ ಎಂದರು. ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಲೋಕಶಕ್ತಿ ನಿಮ್ಮ ಪ ಕ್ಷ ಎಂದು ಹೇಳಬೇಡಿ. ಇದು ಯಜಮಾನ್ರಿಗೆ (ದೇವೇಗೌಡರಿಗೆ) ಗೊತ್ತಾದರೆ ನಿಮ್ಮನ್ನು ಮನೆಗೆ ಕರೆಸುತ್ತಾರೆ ಎಂದು ಹೇಳಿದರು.

ಲೋಕಸಭೆ ಮಾದರಿಯಲ್ಲಿ ಪ್ರಶ್ನೋತ್ತರ ಕಲಾಪವಿರಲಿ
ಪ್ರಶ್ನೋತ್ತರ ಕಲಾಪ ಸಮರ್ಪಕವಾಗಿ ನಡೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿಯ ಎಚ್‌.ವಿಶ್ವನಾಥ್‌, ಲೋಕಸಭೆ, ರಾಜ್ಯಸಭೆಗಳಲ್ಲಿ 1 ಗಂಟೆ ಮಾತ್ರ ಪ್ರಶ್ನೋತ್ತರ ಕಲಾಪ ನಡೆಯಲಿದೆ. ಅದೇ ಮಾದರಿ ವಿಧಾನ ಪರಿಷತ್‌ನಲ್ಲೂ ಜಾರಿಯಾಗಬೇಕು ಎಂದರು. ಅದಕ್ಕೆ ಪೂರಕವಾಗಿ  ಮಾತನಾಡಿದ ಬಿಜೆಪಿಯ ಆಯನೂರು ಮಂಜುನಾಥ್‌, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ಅವಧಿ 1 ಗಂಟೆಗೆ ನಿಗದಿ ಮಾಡಲಾಗಿದೆ. ಅದು ಮುಗಿದ ಬಳಿಕ ಸಚಿವರು ಉತ್ತರ ಹೇಳುತ್ತಿದ್ದರು. ಅದನ್ನು ತಡೆದು ಮುಂದಿನ ಕಲಾಪಕ್ಕೆ ಹೋಗಲಾಗುತ್ತದೆ. ಅದನ್ನು ಇಲ್ಲೂ ಅಳವಡಿಸಬೇಕು ಎಂದು ಹೇಳಿದರು.

ಹೊರಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ಪ್ರಕ್ರಿಯೆಯು ಜನತಂತ್ರದ ಮೇಲಿನ ವಿಶ್ವಾಸ ಹೆಚ್ಚುವಂತಾಗಿದೆ. ಸದನದಲ್ಲಿ ಜನರ ಸಮಸ್ಯೆ ನಿವಾರಣೆಗೆ ಹೊರಟ್ಟಿ ಅವರ ಮಾರ್ಗದರ್ಶನ ಅತ್ಯಗತ್ಯ. ಆ ಕೆಲಸವನ್ನು ಅವರು ಮಾಡಲಿದ್ದಾರೆ.
-ಕೋಟ ಶ್ರೀನಿವಾಸ ಪೂಜಾರಿ, ಸಭಾನಾಯಕ

Advertisement

ಹೊರಟ್ಟಿ ಅವರು ರಾಮಕೃಷ್ಣ ಹೆಗ್ಗಡೆ ಅವರ ಗರಡಿಯಲ್ಲಿ ಬೆಳೆದವರು. ಅವರಂತೆಯೇ ಉತ್ತಮ ರಾಜಕಾರಣಿ. ಹೀಗಾಗಿಯೇ ವಿರೋಧ ಪಕ್ಷವಾದರೂ ಸಭಾಪತಿ ಆಯ್ಕೆಯಲ್ಲಿ ತಟಸ್ಥವಾಗಿ ಉಳಿದೆವು. ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಬಗ್ಗೆ ಭೇದವಿಲ್ಲದೆ ಅವರು ಕೆಲಸ ಮಾಡಬೇಕು.
-ಬಿ.ಕೆ. ಹರಿಪ್ರಸಾದ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next