Advertisement

ಪ್ರೇಯಸಿಗೆ ಹಿಡಿಸುವ ಮನೆ ಮಾಡಲು ಬೈಕ್‌ ಕದಿಯುತ್ತಿದ್ದ ಪ್ರೇಮಿ ಸೆರೆ

12:05 PM Apr 23, 2017 | Team Udayavani |

ಬೆಂಗಳೂರು: ಪ್ರೇಯಸಿಯ ಐಷಾರಾಮಿ ಬೇಡಿಕೆಗಳನ್ನು ಈಡೇರಿಸಲು ಬೈಕ್‌ಗಳನ್ನು ಕದಿಯುತ್ತಿದ್ದ, ಕ್ರಿಕೆಟ್‌ ಹಾಗೂ ಬಿಗ್‌ಬಾಸ್‌ ಕಾರ್ಯಕ್ರಮದ ಮೇಲೆ ಬೆಟ್ಟಿಂಗ್‌ ಆಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಹೊಂಗಸಂದ್ರದ ನಿವಾಸಿ ಮನೋಹರ್‌ (23) ಬಂಧಿತ ಆರೋಪಿ. ಈತನಿಂದ 25 ಲಕ್ಷ ರೂ.ಮೌಲ್ಯದ 51 ಬೈಕ್‌ಗಳನ್ನ ವಶಕ್ಕೆ ಪಡೆಯಧಿಲಾಗಿದೆ. ಈ ಪೈಕಿ ಕೆಲ ದ್ವಿಚಕ್ರ ವಾಹನಗಳನ್ನು ಕೋರ್ಟ್‌ ಆದೇಶದ ಮೇರೆಗೆ ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಂಧ್ರಪ್ರದೇಶ ಆನಂತಪುರದ ಗೊರಂಟ್ಲ ಮಂಡಲ್‌ ಮೂಲದ ಆರೋಪಿ ಮನೋಹರ್‌ ಪಿಯುಸಿ ಓದಿದ್ದು, ಕೆಲ ವರ್ಷಗಳ ಹಿಂದೆ ಬೊಮ್ಮಸಂದ್ರದ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಸೇರಿದ್ದ. ಇದೇ ಸಂದರ್ಭದಲ್ಲಿ ಪರಿಚಯಧಿವಾದ ಆತನದ್ದೇ ಗ್ರಾಮದ ಯುವತಿ ಜತೆ ಪ್ರೇಮಾಂಕುರವಾಗಿತ್ತು. ನಂತರ ಇಬ್ಬರು ಲಿವಿಂಗ್‌ ಟುಗೆದರ್‌ನಂತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ನಡುವೆ ಅನಾರೋಗ್ಯಕ್ಕೊಳಗಾದ ಯುವತಿ ಊರಿಗೆ ವಾಪಸ್‌ ಹೋಗಿಧಿದ್ದಳು. ಕೆಲ ತಿಂಗಳಾದರೂ ವಾಪಸ್‌ ಬರಲಿಲ್ಲ.

ಆತಂಕದಿಂದ ಆಕೆಯ ಗ್ರಾಮಕ್ಕೆ ಹೋಗಿದ್ದ ಮನೋಹರ್‌, ಪ್ರೇಯಸಿಗೆ ಬೆಂಗಳೂರಿಗೆ ಬರುವಂತೆ ಒತ್ತಾಯಿಸಿದ್ದ. ಇದನ್ನು ಒಪ್ಪದ ಯುವತಿ, ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲಸ ಮಾಡಲು ಸಾಧ್ಯವಿಲ್ಲ. ಇರುವ ಬಾಡಿಗೆ ಮನೆ ಬಿಟ್ಟು ಬೇರೆಡೆ ಒಳ್ಳೆ ಮನೆ ಮಾಡಿದರೆ ಮಾತ್ರ ಬರುತ್ತೇನೆಂದು ಹೇಳಿದ್ದಳು. ಆಕೆಯ ಆಸೆಯಂತೆ ಒಳ್ಳೆಯ ಮನೆ ಮಾಡಲು ಬೈಕ್‌ ಕಳ್ಳತನ ಮಾಡಲು ಆರೋಪಿ ನಿರ್ಧರಿಸಿದ್ದ. 

ಹಣ ಹೊಂದಿಸಿ ಮನೆ ಮಾಡಿದ್ದ ಆರೋಪಿ: ರಾತ್ರಿ ವೇಳೆ ನಗರದಲ್ಲಿ ಬೈಕ್‌ ಕಳವು ಮಾಡುತ್ತಿದ್ದ ಮನೋಹರ್‌, ಕದ್ದ ಬೈಕ್‌ ಅನ್ನು ಆಂಧ್ರ ಹಾಗೂ ಇತರೆಡೆ ಚಲಾಯಿಸಿಕೊಂಡೆ ಹೋಗುತ್ತಿದ್ದ. ಅಲ್ಲಿನ ರೈತರಿಗೆ 5-10 ಸಾವಿರ ರೂ. ಮಾರಿ, ದಾಖಲೆಗಳನ್ನು ಮತ್ತೂಮ್ಮೆ ಬಂದು ಕೊಡುತ್ತೇನೆಂದು ವಂಚಿಸುತ್ತಿದ್ದ. ಈ ರೀತಿ ಲಕ್ಷಾಂತರ ರುಪಾಯಿ ಸಂಪಾದಿಸಿ ನಗರದ ನಾಯ್ಡು ಲೇಔಟ್‌ನಲ್ಲಿ 2 ಬಿಎಚ್‌ಕೆ ಮನೆ ಕೂಡ ಬಾಡಿಗೆ ಪಡೆದಿದ್ದ.

Advertisement

ಒಂದೆರಡು ದಿನಗಳಲ್ಲಿ ಪ್ರೇಯಸಿಯನ್ನು ಮನೆಗೆ ಕರೆ ತರುವ ಯೋಚನೆಯಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮನೋಹರ್‌ ಈ ಹಿಂದೆ ಹಿಂದೂಪುರ, ಕದ್ರಿಯಲ್ಲಿ ಬೈಕ್‌ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ.  ಮಡಿವಾಳ, ಬೇಗೂರು, ಬೊಮ್ಮನಹಳ್ಳಿ, ಮಧುಗಿರಿ, ಕೊರಟೆಗೆರೆ, ಮಿಡಿಗೇಸಿ, ಬಾಗೇಪಲ್ಲಿ, ಗುಡಿಬಂಡೆಗಳಲ್ಲೂ ಬೈಕ್‌ ಕದ್ದಿದ್ದ. ಮರು ಮಾರಾಟಕ್ಕೆ ಹೆಚ್ಚಿನ ಬೆಲೆ ಇರುವ ಹೀರೊ ಹೋಂಡಾ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದ. 

ಬಿಗ್‌ಬಾಸ್‌ನಲ್ಲೂ ಬೆಟ್ಟಿಂಗ್‌: ಆರೋಪಿ ಮನೋಹರ್‌ ಕ್ರಿಕೆಟ್‌ ಬೆಟ್ಟಿಂಗ್‌ ಮಾತ್ರವಲ್ಲದೇ ಇತ್ತೀಚೆಗೆ ಮುಕ್ತಾಯಗೊಂಡ ಬಿಗ್‌ಬಾಸ್‌ ಕಾರ್ಯಕ್ರಮದಲ್ಲೂ ಬೆಟ್ಟಿಂಗ್‌ ಕಟ್ಟಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಪ್ರತಿ ವಾರ ಯಾವ ಸೆಲೆಬ್ರೆಟಿ ಹೊರಬರುತ್ತಾರೆ, ಒಳ ಹೋಗುತ್ತಾರೆ ಎಂದೆಲ್ಲ ಸ್ನೇಹಿತರ ಜತೆ ಬೆಟ್ಟಿಂಗ್‌ ಕಟ್ಟುತ್ತಿದ್ದ.

ಆದರೆ, ಇದ್ಯಾವುದು ಪ್ರೇಯಸಿಗೆ ಗೊತ್ತಿಲ್ಲ. ಪ್ರಿಯಕರ ಹೊರಗಡೆ ಕಷ್ಟ ಪಟ್ಟು ದುಡಿಯುತ್ತಿದ್ದಾನೆಂದು ಭಾವಿಸಿದ್ದಳು ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದರು. ಆರೋಪಿಯನ್ನು ಬಂಧಿಸಿದ ಬೊಮ್ಮನಹಳ್ಳಿ ಪೊಲೀಸರಿಗೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ನಗದು ಬಹುಮಾನ ನೀಡಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next