Advertisement

ಆಟೋದಲ್ಲಾದ ಪ್ರೀತಿಗೆ ಮೀಟರ್‌ ತೋರಿಸಿದ ಪ್ರೇಮಿಗಳು

09:50 AM Jun 15, 2019 | Suhan S |

ಬಾಗಲಕೋಟೆ: ಆತ ಶಾಲೆಯ ಮುಖ ನೋಡದ ಯುವಕ. ಇವಳು ನಿತ್ಯ ಶಾಲೆಗೆ ಹೋಗುವವಳು. ಶಾಲೆಗೆ ಹೋಗಲು ಆ ಯುವಕನ ಆಟೋ ಹತ್ತುತ್ತಿದ್ದಳು. ಆಟೋದಲ್ಲೇ ಅವರಿಬ್ಬರಿಗೆ ಪ್ರೇಮಾಂಕುರವಾಯಿತು. ಈಗ ಮದುವೆಯ ಹಂತಕ್ಕೆ ಬಂದಿದ್ದು, ಪಾಲಕರನ್ನು ಒಪ್ಪಿಸಿ ಮದುವೆಯಾಗುವುದೇ ಈಗ ಆ ಪ್ರೇಮಿಗಳಿಗೆ ದೊಡ್ಡ ಸವಾಲು. ಹೀಗಾಗಿ ಮಧ್ಯಸ್ಥಿಕೆ ವಹಿಸಲು ಪೊಲೀಸರ ನೆರವು ಕೇಳಿದ್ದಾರೆ!.

Advertisement

ಹೌದು, ನವನಗರದ ಸೆಕ್ಟರ್‌ ನಂ.44ರ, ದ್ವಿತೀಯ ಪಿಯುಸಿ ಅರ್ಧಕ್ಕೆ ನಿಲ್ಲಿಸಿರುವ ಜ್ಯೋತಿ ಬಾಟಿ ಎಂಬ ಯುವತಿ, ಇದೇ ನವನಗರದ ಸೆಕ್ಟರ್‌ ನಂ.46ರ ನಿಖೀಲ್ ಭಜಂತ್ರಿ ಎಂಬ ಯುವಕ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ. ಕಾಲೇಜಿಗೆ ಹೋಗಲು ಈ ಯುವಕನ ಆಟೋದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲೇ ಇವರಿಬ್ಬರಿಗೆ ಪ್ರೀತಿಯಾಗಿದೆ.

ಮೊದಲು ಯುವಕ ಮತ್ತು ಯುವತಿಯ ಎರಡೂ ಮನೆಯಲ್ಲಿ ತೀವ್ರ ವಿರೋಧವಾಗಿತ್ತು. ಆದರೆ, ಈಗ ನಿಖೀಲ್ನ ತಾಯಿ, ಜ್ಯೋತಿಯನ್ನು ಸೊಸೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾಳೆ. ಆದರೆ, ಜ್ಯೋತಿಯ ತಂದೆಯ ಮನೆಯ ಕಡೆ ವಿರೋಧ ಉಂಟಾಗಿದೆ ಎನ್ನಲಾಗಿದೆ.

ಯುವಕನಿಗಾಗಿ ಮನೆ ಬಿಟ್ಟು ಬಂದಳು: ಇವರಿಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಎರಡು ತಿಂಗಳ ಹಿಂದೆ ಮನೆಯವರಿಗೆ ವಿಷಯ ಗೊತ್ತಾಗಿದೆ. ಹೀಗಾಗಿ ಎರಡೂ ಕಡೆಯ ದೊಡ್ಡವರು ಕುಳಿತು, ಯುವಕ-ಯುವತಿಗೆ ಬುದ್ಧಿವಾದ ಹೇಳಿ, ನಿಮ್ಮಷ್ಟಕ್ಕೆ ನೀವಿರಿ ಎಂದು ಹೇಳಿ ಹೋಗಿದ್ದರು. ಬಳಿಕ ಯುವತಿಗೆ ಕಾಲೇಜು ಬಿಡಿಸಿ, ಆಕೆಯ ಸಂಬಂಧಿಕರ ಮನೆಯಲ್ಲಿ (ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸೂತಿ ಗ್ರಾಮದಲ್ಲಿ) ಇರಲು ಬಿಟ್ಟು ಬಂದಿದ್ದರು. ಆದರೆ, ಆ ಯುವತಿಗೆ ಪ್ರೀತಿ ಸುಮ್ಮನಿರಲು ಬಿಡಲಿಲ್ಲ. ಶುಕ್ರವಾರ ಬೆಳಗ್ಗೆ, ಮಸೂತಿಯಿಂದ ಬಾಗಲಕೋಟೆಗೆ ಬಂದು, ಯುವಕನ ಮನೆಗೆ ಹೋಗಿದ್ದಾಳೆ. ನನ್ನ ಮದುವೆ ಮಾಡಿಕೋ, ಇಲ್ಲದಿದ್ದರೆ ನಾನು ಬದುಕುವುದಿಲ್ಲ ಎಂದೂ ಹೇಳಿದ್ದಾಳೆ. ಹೀಗಾಗಿ ಯುವಕ ನಿಖೀಲ್, ತನ್ನ ತಾಯಿ ಹಾಗೂ ಯುವತಿಯನ್ನು ಕರೆದುಕೊಂಡು ಎಸ್ಪಿ ಕಚೇರಿಗೆ ಬಂದು, ನಮ್ಮ ಪ್ರೇಮ ವಿವಾಹಕ್ಕೆ ಸಹಕಾರಿ ಕೊಡಿ ಎಂದು ಕೇಳಿಕೊಂಡಿದ್ದಾನೆ.

ಪಾಲಕರ ಮನವೊಲಿಸಲು ಪ್ರಯತ್ನ: ಎಸ್ಪಿ ಅಭಿನವ್‌ ಖರೆ ಅವರನ್ನು ಈ ಪ್ರೇಮಿಗಳು ಭೇಟಿ ಮಾಡಿ, ವಿವರಣೆ ನೀಡಿದ್ದು, ಬಾಗಲಕೋಟೆ ಡಿವೈಎಸ್ಪಿ ಎಸ್‌.ಬಿ. ಗಿರೀಶ ನೇತೃತ್ವದಲ್ಲಿ ನವನಗರ ಸಿಪಿಐ ಶ್ರೀಶೈಲ ಗಾಬಿ ಅವರಿಗೆ ಆ ಪ್ರೇಮಿಗಳ ಎರಡೂ ಕಡೆಯ ಪಾಲಕರ ಮನವೊಲಿಸುವ ಜವಾಬ್ದಾರಿ ನೀಡಿದರು. ಯುವತಿ ಮತ್ತು ಯುವಕನ ಮನೆಯವರನ್ನು ಕರೆಸಿ, ಅವರಿಬ್ಬರು ವಯಸ್ಕರರಾಗಿದ್ದು, ಅವರ ನಿರ್ಧಾರದಂತೆ ಮದುವೆ ಮಾಡಿಕೊಡಿ ಎಂದು ಹೇಳುತ್ತೇವೆ. ಅಷ್ಟಕ್ಕೂ ಪಾಲಕರು ಒಪ್ಪಿಕೊಳ್ಳಲಿದ್ದರೆ, ಪ್ರೇಮಿಗಳ ನಿರ್ಧಾರಕ್ಕೆ ಬಿಟ್ಟಿದ್ದು. ಅವರು ಮದುವೆ ನಂತರ ಬಯಸಿದ್ದಲ್ಲಿ ಸೂಕ್ತ ಭದ್ರತೆ ಕೊಡಲಾಗುವುದು ಎಂದು ಎಸ್ಪಿ ಅಭಿನವ ಖರೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next