ಜಾನಿ ಸರ್ ತರಗತಿಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಎದ್ದು ನಿಂತು, “ಸರ್, ನಾನು ನಿಮ್ ಕಡೆ ಕೊಟ್ಟಿದ್ದ ಮಾಕ್ಸ್‌ಕಾರ್ಡ್ ಸಿಕ್ಕುಬಿಡು¤ ಸರ್. ಕೊಪ್ಪಳದಲ್ಲಿ ಒಂದು ಬೇಲೀಲಿ ಬಿದ್ದಿತ್ತಂತೆ. ಅದು ನನ್ನ ಗೆಳೆಯನಿಗೆ ಸಿಕ್ಕಿದೆ. ತಂದು ಕೊಟ್ಟ ಸರ್… ತಗೊಳ್ಳಿ…’! ಅಂತ ಅವರ ಕೈಗಿಟ್ಟೆ. ಮೇಷ್ಟ್ರು ಒಂದು ಕ್ಷಣ ವಿಚಲಿತರಾದರು. ದುರುಗುಟ್ಟಿ ನೋಡಿದರು. ನನ್ನ ಮಾತನ್ನು ಸುಳ್ಳೆಂದು ವಾದಿಸಿದರು.
ಹದಿನಾರು ವರ್ಷಗಳ ಹಿಂದಿನ ಮಾತು. ಆಗಷ್ಟೇ ಹೈಸ್ಕೂಲಿಗೆ ಸೇರಿದ್ದೆ. ಕೆಲವು ದಿನಗಳ ಬಳಿಕ ಹೈಸ್ಕೂಲ್‌ನ ಮುಖ್ಯ ಶಿಕ್ಷಕರು ತಮ್ಮ ದಾಖಲೆ ನಿರ್ವಹಣೆ ಸಲುವಾಗಿ ನಮ್ಮ ಮೂಲ ಅಂಕಪಟ್ಟಿಯನ್ನೂ ಕೇಳಿದ್ದರು. ಅದನ್ನು ಸಲ್ಲಿಸುವ ಮುನ್ನ ಅದರ ಜೆರಾಕ್ಸ್ ಪ್ರತಿಯನ್ನು ಮಾಡಿಸಿಟ್ಟುಕೊಳ್ಳಬೇಕೆಂದು ನಮಗೆ ಯಾರೋ ಹೇಳಿದ್ದರು. ನಾವು ಓದುತ್ತಿದ್ದುದು ಹಳ್ಳಿಯಾದ್ದರಿಂದ ಅಲ್ಲಿ ಯಾವ ಜೆರಾಕ್ಸ್ ಅಂಗಡಿಯೂ ಇರಲಿಲ್ಲ. ಕಾರಣ, ಕೊಪ್ಪಳದಿಂದ ನಮ್ಮ ಹಿಂದಿ ಗುರುಗಳಾದ ಮುಕಬುಲ್ ಜಾನಿ ಸರ್ ಬರುತ್ತಿದ್ದರು. ಅವರಿಗೆ ನಾವು ನಾಲ್ವರು ಗೆಳೆಯರು ಸೇರಿ ಜೆರಾಕ್ಸ್ ಮಾಡಿಸಿಕೊಂಡು ಬರುವಂತೆ ನಮ್ಮ ಮೂಲ ಅಂಕಪಟ್ಟಿಯನ್ನು ಕೊಟ್ಟಿದ್ದೆವು.
ಅದಾದ ಬಳಿಕ ಕೆಲವು ದಿನಗಳವರೆಗೆ ಅವರು ಅಂಕಪಟ್ಟಿಯ ಕುರಿತು ಏನೂ ಕೇಳಿರಲಿಲ್ಲ. ಅವರೇ ಮುಂದಾಗಿ ಆಫೀಸಿಗೆ ಅಂಕಪಟ್ಟಿಯನ್ನು ಸಲ್ಲಿಸಿರಬಹುದೆಂದು ಅಂದುಕೊಂಡಿದ್ದೆವು. ಆದರೆ, ವಾಸ್ತವ ಬೇರೆಯೇ ಆಗಿತ್ತು. ನಮ್ಮ ಇತರೆ ಗೆಳೆಯರಿಗೆ ಜೆರಾಕ್ಸ್ ಪ್ರತಿಯನ್ನು ಕೊಟ್ಟು ಮೂಲಪ್ರತಿಯನ್ನು ಆಫೀಸಿಗೆ ಸಲ್ಲಿಸಿದ್ದಾಗಿ ಹೇಳಿದರು. ಆದರೆ, ನನ್ನ ಅಂಕಪಟ್ಟಿ ಮಾತ್ರ ಅವರ ಬಳಿ ಇರಲಿಲ್ಲ. ಬಹುಶಃ ಬಸ್ಸಿನಲ್ಲಿ ಕೈ ತಪ್ಪಿ ಬೀಳಿಸಿ ಕಳೆದುಕೊಂಡಿದ್ದರೇನೋ. ಕೇಳಿದರೆ, ನೀನು ಅಂಕಪಟ್ಟಿಯನ್ನು ನನಗೆ ಕೊಟ್ಟೇ ಇಲ್ಲ ಎಂದು ವಾದಿಸುತ್ತಿದ್ದರು. ಬಹುಶಃ ನಾನು ಕೊಟ್ಟಿದ್ದು ಅವರ ಗಮನಕ್ಕೆ ಇರಲಿಲ್ಲವೇನೋ ಅನ್ನಿಸಿ ಸುಮ್ಮನಾದೆ. ಆದರೆ, ನನಗೆ ಅದೊಂದು ದೊಡ್ಡ ತಲೆನೋವಾಗಿತ್ತು. ಹೆಡಾ¾ಸ್ಟರ್ ದಿನವೂ ಕ್ಲಾಸಿಗೆ ಬಂದು ಅಂಕಪಟ್ಟಿ ಕೇಳುತ್ತಿದ್ದರು. ನಾನು ಜಾನಿ ಸರ್‌ಗೆ ಕೊಟ್ಟಿರೋದನ್ನು ಹೇಳುತ್ತಿದ್ದರೆ ಯಾರೂ ನಂಬುತ್ತಿರಲಿಲ್ಲ. ಕೆಲವು ದಿನಗಳು ಹೀಗೇ ಕಳೆದವು.
ಒಂದು ದಿನ ನಮ್ಮೂರಿನ ಕಾಲೇಜು ಸ್ನೇಹಿತನೊಬ್ಬ ನನ್ನ ಮೂಲ ಅಂಕಪಟ್ಟಿಯೊಂದಿಗೆ ನಮ್ಮ ಮನೆಗೆ ಬಂದು, ಇದು ಕೊಪ್ಪಳದ ಹೊರವಲಯದ ರಸ್ತೆ ಬದಿಯ ಬೇಲಿಯಲ್ಲಿ ಬಿದ್ದಿತ್ತೆಂದೂ, ತನ್ನ ಸ್ನೇಹಿತ ಇದನ್ನು ಕೊಟ್ಟಿದ್ದಾಗಿಯೂ ಹೇಳಿ ಅಂಕಪಟ್ಟಿಯನ್ನು ಕೊಟ್ಟು ಹೋದ! ಕಳೆದು ಹೋದ ಜೀವ ಮತ್ತೇ ಬಂದಂತಾಯಿತು. ನಾನು ಅಂಕಪಟ್ಟಿಯನ್ನು ಜಾನಿ ಗುರುಗಳ ಕೈಯಲ್ಲಿ ಕೊಟ್ಟಿದ್ದು ಖಾತರಿ ಇದ್ದುದರಿಂದ ಬಹುಶಃ ಅವರೇ ಬಸ್ಸಿನಲ್ಲಿ ಹೋಗುವಾಗ ಕಳೆದುಕೊಂಡಿರಬಹುದು, ಅದು ನಮ್ಮೂರಿನ ಕಾಲೇಜು ಸ್ನೇಹಿತರಿಗೆ ಸಿಕ್ಕಿರಬಹುದೆಂದು ಭಾವಿಸಿ ಸುಮ್ಮನಾದೆ.
ಮರುದಿನ ಎಂದಿನಂತೆ ತರಗತಿ ಪ್ರಾರಂಭವಾಯಿತು. ಜಾನಿ ಸರ್ ತರಗತಿಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಎದ್ದು ನಿಂತು, “ಸರ್, ನಾನು ನಿಮ್ ಕಡೆ ಕೊಟ್ಟಿದ್ದ ಮಾಕ್ಸ್‌ಕಾರ್ಡ್ ಸಿಕ್ಕುಬಿಡು¤ ಸರ್. ಕೊಪ್ಪಳದಲ್ಲಿ ಒಂದು ಬೇಲೀಲಿ ಬಿದ್ದಿತ್ತಂತೆ. ಅದು ನನ್ನ ಗೆಳೆಯನಿಗೆ ಸಿಕ್ಕಿದೆ. ತಂದು ಕೊಟ್ಟ ಸರ್… ತಗೊಳ್ಳಿ…’! ಅಂತ ಅವರ ಕೈಗಿಟ್ಟೆ. ಒಂದು ಕ್ಷಣ ವಿಚಲಿತರಾದರು. ದುರುಗುಟ್ಟಿ ನೋಡಿದರು. ನನ್ನ ಮಾತನ್ನು ಸುಳ್ಳೆಂದು ವಾದಿಸಿದರು. ಬೇಲಿಯಲ್ಲಿ ಬಿದ್ದಿದ್ದರೆ ಬಿಸಿಲಿಗೆ ಮಾಸುತ್ತಿತ್ತು, ಮಳೆಗೆ ನೆನೆದು ಹರಿಯುತ್ತಿತ್ತು ಎಂದು ಸಮರ್ಥನೆ ನೀಡುತ್ತ ಕೊನೆಗೂ ತಾವು ನನ್ನಿಂದ ಅಂಕಪಟ್ಟಿಯನ್ನು ಪಡೆದಿದ್ದನ್ನು ಒಪ್ಪಲೇ ಇಲ್ಲ.
ಜಾನಿ ಸರ್ ಮೊದಲೇ ಹಾಸ್ಯಪ್ರವೃತ್ತಿಯುಳ್ಳವರು. ಇದೇ ವಿಷಯವನ್ನು ಮುಂದಿಟ್ಟುಕೊಂಡು “ಇವನ ಮಾಕ್ಸ್‌ಕಾರ್ಡ್ ಬೇಲೀಲಿ ಬಿದ್ದಿತ್ತಂತೆ! ಅದು ಮಳೆಗೂ ನೆನೆದಿಲ್ಲ, ಬಿಸಿಲಿಗೂ ಮಾಸಿಲ್ಲ, ಗಾಳಿಗೂ ಹರಿದಿಲ್ಲ, ಮುಳ್ಳೂ ಚುಚ್ಚಿಲ್ಲ…’ ಅಂತೆಲ್ಲ ತರಗತಿಗೆ ಸಾರಿ ಸಾರಿ ಹೇಳಿ ಎಲ್ಲರನ್ನೂ ನಗಿಸುತ್ತಿದ್ದರು. ನಾನು ಮಾತ್ರ ರೋಸಿ ಹೋಗುತ್ತಿದ್ದೆ. ಹೈಸ್ಕೂಲು ಮುಗಿಯೋವರೆಗೂ ಆ ಮಾಕ್ಸ್‌ಕಾರ್ಡ್ ಭೂತ ನನ್ನನ್ನು ಬಿಡಲೇ ಇಲ್ಲ. ನಿಜವಾಗಿಯೂ ಆ ಅಂಕಪಟ್ಟಿ ತಪ್ಪಿಸಿಕೊಂಡಿದ್ದಾದರೂ ಎಲ್ಲಿ? ನನ್ನ ಸ್ನೇಹಿತರಿಗೆ ಸಿಕ್ಕಿದ್ದಾದರೂ ಎಲ್ಲಿ? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿಲೇ ಇದ್ದೇನೆ. ಆದರೆ ಅದಿನ್ನೂ ನಿಗೂಢವಾಗಿಯೇ ಇದೆ.
– ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ