ಒಬ್ಬ ರಾಜನಿದ್ದ. ಅವನೊಂದು ದಿನ ಬೇಟೆಗೆ ಹೋಗಿದ್ದ. ಅಲ್ಲೊಬ್ಬ ಮುನಿಯ ದರ್ಶನವಾಯಿತು. ಅರಸ ಮುನಿಗೆ ವಂದಿಸಿ ತನ್ನ ಅರಮನೆಗೆ ಬಂದು ಆತಿಥ್ಯ ಸ್ವೀಕರಿಸಬೇಕೆಂದು ಕೇಳಿಕೊಂಡ. ಯತಿಯ ಮನಸ್ಸು ಅರಸನ ಆತಿಥ್ಯವನ್ನು ಪಡೆಯಲು ನಿರಾಕರಿಸಿತು. ಆದರೂ ಅರಸ ಬಿಡಲಿಲ್ಲ. ಮುನಿ, ಬೇಡ ಬೇಡವೆಂದು ಹೇಳಿದರೂ ರಾಜ ಅತ್ಯಂತ ಒತ್ತಾಯದಿಂದ ಅರಮನೆಗೆ ಆಹ್ವಾನಿಸಿದ.
ದಾರಿಯಲ್ಲಿ ಈರ್ವರೂ ಕಾಲ್ನಡಿಗೆಯಲ್ಲಿ ಸಾಗುತ್ತಿರುವಾಗ ಅರಸನಿಗೆ ಬಹಳ ತೀವ್ರವಾದ ತೃಷೆಯುಂಟಾಯಿತು. ಝರಿ, ತೊರೆಗಳೊಂದೂ ಆ ಕಾಡಿನ ದಾರಿಯಲ್ಲಿ ಗೋಚರಿಸಲಿಲ್ಲ. ಆಗ ಮುನಿ, ಅರಸನನ್ನು ಒಂದು ಗುಡಿಸಲಿನಂತೆ ಕರೆದುಕೊಂಡು ಹೋದನು. ಆ ಗುಡಿಸಲಿನಾತನೊ, ಅತ್ಯಂತ ಕೊಳಕ. ಒಗೆಯದ, ನಾರುವ ವಸ್ತ್ರ ಉಟ್ಟಿದ್ದ. ಮನೆಯ ಸುತ್ತೆಲ್ಲ ಅಮೇಧ್ಯ ಹಾಗೂ ಕೊಳೆತ ಮಾಂಸದ ವಾಸನೆ. ಅರಸನು ಉಸಿರಾಡಲೂ ಸಂಕಟಪಡಬೇಕಾದ ವಾತಾವರಣ. ಅಂತಹ ಜಾಗದಲ್ಲಿ ನಾರುವ ತೆಂಗಿನ ಚಿಪ್ಪಿನಲ್ಲಿ ಕೊಟ್ಟ ನೀರನ್ನು ಕುಡಿಯುವುದಾದರೂ ಹೇಗೆ?
“”ನನಗೆ ಬಾಯಾರಿಕೆ ಇಲ್ಲ” ಅಂದುಬಿಟ್ಟ ಅರಸ. ಮುನಿ ಮತ್ತು ಅರಸ ಇಬ್ಬರೂ ಅಲ್ಲಿಂದ ಮುಂದಕ್ಕೆ ನಡೆದರು. ಆಗ ಮುನಿಯೇ ಅರಸನನ್ನು ಪ್ರಶ್ನಿಸಿದ, “”ಬಾಯಾರಿಕೆಯಾಗುತ್ತಿದೆ ಎಂದು ಹೇಳಿದ್ದು ಸುಳ್ಳೋ ಅಥವಾ ಇಲ್ಲವೆಂದದ್ದು ಸುಳ್ಳೋ?”
ಆಗ ಅರಸನು, ಅಂತಹ ಅಸಹ್ಯ ಪ್ರದೇಶದಲ್ಲಿ ನೀರು ಕುಡಿಯಲು ನನ್ನಿಂದಾಗದು” ಎಂದು ನಿಜ ಹೇಳಿದ.
ಮುನಿ ನಗುತ್ತ ಹೇಳಿದ, “”ನಾನು ನಿನ್ನ ಆತಿಥ್ಯವನ್ನು ನಿರಾಕರಿಸಿದ್ದು ಇಂತಹುದೇ ಕಾರಣಕ್ಕಾಗಿ”
ಅರಸನಿಗೆ ಆಶ್ಚರ್ಯ! ಕೇಳಿಯೇಬಿಟ್ಟ “”ನಮ್ಮ ಅರಮನೆ ಅಷ್ಟೊಂದು ಅಸಹ್ಯವಾಗಿರುವುದೇ?”
“”ಹೌದು” ಅಂದ ಮುನಿ. “”ನಿನ್ನ ಸಂಪತ್ತು, ಯುದ್ಧ-ಆಕ್ರಮಣ ಮುಂತಾದ ಹಿಂಸಾವೃತ್ತಿಯಿಂದಲೇ ಸಂಗ್ರಹವಾದುದು. ಅರಮನೆ, ಆಹಾರಗಳನ್ನು ನೀನು ಶುಚಿಯಾಗಿಸಿಕೊಂಡಿರಬಹುದು. ಆದರೆ, ಆತ್ಮಶುದ್ಧವಿಲ್ಲದಿದ್ದರೆ ಅದು ಬಾಹ್ಯ ಮಲಿನತೆಗಿಂತಲೂ ಘೋರವಾದುದಲ್ಲವೆ?”
ಅರಸ, ಆಯುಧವನ್ನು ಕೈಚೆಲ್ಲಿ ಮುನಿಗೆ ಶರಣಾದ.