ಈ ವರ್ಷದ ಏಪ್ರಿಲ್ ತಿಂಗಳಿನಿಂದ ನೌಕರರಿಗೆ ತಿಂಗಳ ಕೊನೆಗೆ ಸಿಗುವ ಸಂಬಳದಲ್ಲಿ ಸ್ವಲ್ಪ ಕಡಿತವಾಗಲಿದೆ ಎಂಬ ಮಾತುಗಳಿವೆ. ಅಂದ ಹಾಗೆ, ಇದು ಅರ್ಥಿಕ ಮುಗ್ಗಟ್ಟಿನ ಹೆಸರಿನಲ್ಲಿ ನೌಕರರಿಗೆ ಸಂಬಳ ಕಡಿಮೆ ಮಾಡುವ ಉದ್ದೇಶದಿಂದ ಆಗುತ್ತಿರುವುದಲ್ಲ. ಇದು ಏಪ್ರಿಲ್ 2021ರಿಂದ ಜಾರಿಗೆ ಬರಲಿರುವ ವೇಜ್ ಕೋಡ್ 2019ನ ಪರಿಣಾಮ. ಎರಡು ವರ್ಷದ ಹಿಂದೆಯೇ, ಅಂದರೆ 2019ರಲ್ಲಿಯೇ ಸಂಸತ್ತು ಈ ವೇಜ್ ಕೋಡ್‌ಗೆ ಅನುಮತಿ ನೀಡಿದೆ. ಈ ನಿಯಮ ಜಾರಿಗೆ ಬಂದ ನಂತರ ಕಂಪನಿಗಳು ಮತ್ತು ಉದ್ಯೋಗದಾತರು ತಾವು ನೀಡುವ ಸಂಬಳದ ಪ್ಯಾಕೇಜ್ ಅನ್ನು ಪುನರ್ ವಿನ್ಯಾಸ ಮಾಡಬೇಕಾಗುತ್ತದೆ. ವೇಜ್ ಕೋಡ್ 2019ರ ಮೂಲ ಉದ್ದೇಶ, ದುಡಿಯವ ವರ್ಗದ ನಿವೃತ್ತಿಯ ನಂತರದ ಬದುಕಿ ನಲ್ಲಿ ಅರ್ಥಿಕ ಸಂಕಷ್ಟ ಕಡಿಮೆ ಯಾಗಲಿ ಎನ್ನುವುದು. ಅಂತೆಯೇ ಅವರ ಕೈಗೆ ಸಿಗುವ ಸಂಬಳದಲ್ಲಿ ಸ್ವಲ್ಪ ಕಡಿತ ಮಾಡಿ ನಿವೃತ್ತಿಯಲ್ಲಿ ದೊರಕುವ ನಿವೃತ್ತಿ ಸೌಲಭ್ಯವನ್ನು ಹೆಚ್ಚಿಸುವುದು.
ಈ ಕೋಡ್‌ನ ವಿಶೇಷ ಏನು?
ಸಂಬಳದಲ್ಲಿ ಮೂಲವೇತನ, ಭತ್ಯೆಗಳು ಎಂದು ಎರಡು ವಿಭಾಗಗಳು ಇರುತ್ತವೆ. ಈ ಕೋಡ್ ಪ್ರಕಾರ, ಭತ್ಯೆಗಳು ಒಟ್ಟು ಸಂಬಳದ ಶೇ.50 ಮೀರ ಬಾರದು. ಮೂಲ ವೇತನವು ಒಟ್ಟು ಸಂಬಳದ 50%ಕ್ಕಿಂತ ಕಡಿಮೆ ಇರಬಾರದು. ಈ ನಿಯಮಾವಳಿ ಜಾರಿಗೆ ಬಂದರೆ, ಮೂಲವೇತನವು ಹೆಚ್ಚಾಗುತ್ತದೆ. ಅದೇ ಅನುಪಾತದಲ್ಲಿ ಗ್ರಾಚುಯಿಟಿಯೂ ಹೆಚ್ಚಾಗುತ್ತದೆ.
ಪ್ರೊವಿಡೆಂಟ್ ಫಂಡ್‌ಗೆ ಉದ್ಯೋಗಿಗಳ ಕೊಡುಗೆಯೂ ಹೆಚ್ಚುತ್ತದೆ. ಹೀಗಾದಾಗ, ಕೈಗೆ ಬರುವ ಸಂಬಳದಲ್ಲಿ ಸ್ವಲ್ಪ ಕಡಿತವಾಗುತ್ತದೆ. ಇದು ಸಾಮಾನ್ಯವಾಗಿ ಮೂಲವೇತನದ 12% ಇರುತ್ತಿದ್ದು, ನಿವೃತ್ತಿ ಸೌಲಭ್ಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ಈ ಮೊತ್ತ ನಿವೃತ್ತಿ ಸೌಲಭ್ಯದ ಹೆಸರಿನಲ್ಲಿ ಉದ್ಯೋಗಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಪ್ರಸ್ತುತ ಅನೇಕ ಕಂಪನಿಗಳು ಒಟ್ಟು ಸಂಬಳದಲ್ಲಿ ಭತ್ಯೆಯೇತರ ((non allowancepar) ಪ್ರಮಾ ಣವನ್ನು 50% ಕ್ಕಿಂತ ಕಡಿಮೆ ಇಡುತ್ತಿದ್ದು, ಭತ್ಯೆ ಭಾಗ ವನ್ನು ಹೆಚ್ಚಿಗೆ ಇಡುತ್ತಿವೆ. ಮುಂದಿನ ದಿನಗಳಲ್ಲಿ ಇದನ್ನು ರಿವರ್ಸ್ ಮಾಡಬೇಕಾಗುತ್ತದೆ. ಅಂದರೆ, ಮೂಲ ವೇತನ
ಹೆಚ್ಚಾಗಿ ಇತರ ಭತ್ಯೆಗಳು ಕಡಿಮೆಯಾಗುತ್ತವೆ.
ಒಟ್ಟಾರೆ ಸಂಬಳದಲ್ಲಿ ಕಡಿತವಾಗುವುದಿಲ್ಲ. ಖಾಸಗಿ ರಂಗದ ಉದ್ಯಮಗಳಲ್ಲಿ, ಅದಾಯ ತೆರಿಗೆಯನ್ನು ಉಳಿಸಲು ಕೆಲವು ಭತ್ಯೆಯ ಪ್ರಮಾಣವನ್ನು ಹೆಚ್ಚು ಮಾಡಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಈ ಹೊಸ ನಿಯಮಾವಳಿಯ ಪರಿಣಾಮವನ್ನು ಖಾಸಗಿ ರಂಗದಲ್ಲಿ ಹೆಚ್ಚು ಕಾಣಬಹುದು. ಸರ್ಕಾರಿ ರಂಗದಲ್ಲಿ ಭತ್ಯೆಗಳು ಕಡಿಮೆ ಇರುತ್ತಿದ್ದು ಇದರ ಪರಿಣಾಮ ಹೆಚ್ಚು ಆಗಲಿಕ್ಕಿಲ್ಲ ಎನ್ನುವ ಲೆಕ್ಕಾಚಾರ ಕೇಳುತ್ತಿದೆ. ದುಡಿಯುವ ವರ್ಗಕ್ಕೆ ನೀಡುವ ಭತ್ಯೆಗಳಲ್ಲಿ ಗೃಹ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ, ತುಟ್ಟಿ ಭತ್ತೆ, ಮೆಡಿಕಲ್ ಭತ್ಯೆ, ಗುಡ್ಡಗಾಡು ಭತ್ಯೆ, ನಗರ ಭತ್ಯೆ ಮುಂತಾದ ಭತ್ಯೆಗಳು ಇರುತ್ತವೆ. ಈ ವೇಜ್ ಕೋಡ್‌ನ ಪ್ರಕಾರ, ಅಡಳಿತ ವರ್ಗ ಸಿಬ್ಬಂದಿಗಳ ಪ್ರೊವಿಡೆಂಟ್ ಫಂಡ್ ಮತ್ತು ಗ್ರಾಚುಯಿಟಿಗೆ ಹೆಚ್ಚಿನ ಹಣ ಕೊಡಬೇಕಿರುವುದರಿಂದ ಅವರ ಸ್ಯಾಲರಿ ಬಿಲ್ ಹೆಚ್ಚಾಗಬಹುದು.
*ರಮಾನಂದ ಶರ್ಮಾ