Advertisement

ಎನ್‌ಪಿಎಸ್‌ನಲ್ಲಿ ಕೊಂಚ ಬದಲು: ಶೇ.45 ಪಿಂಚಣಿ ಸಿಗುವ ಸಾಧ್ಯತೆ

08:35 PM Jun 21, 2023 | sudhir |

ನವದೆಹಲಿ: ಸದ್ಯ ಜಾರಿಯಲ್ಲಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌)ಯಲ್ಲಿ ಕೆಲವೊಂದು ಬದಲಾವಣೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಪಡೆದಿರುವ ಕೊನೆಯ ಸಂಬಳದ ಶೇ.40ರಿಂದ ಶೇ.45ರಷ್ಟು ಮೊತ್ತವನ್ನು ಪಿಂಚಣಿಯಾಗಿ ವಿತರಿಸುವ ಬಗ್ಗೆ ಶಿಫಾರಸು ಮಾಡುವ ಸಾಧ್ಯತೆಗಳು ಇವೆ.

Advertisement

ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ತಮ್ಮ ತಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೆ ತರುವ ಬಗ್ಗೆ ಘೋಷಣೆ ಮಾಡಿರುವ ಬೆನ್ನಲ್ಲಿಯೇ ಕೇಂದ್ರದ ಹೊಸ ಇರಾದೆ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ನಿಯಮದಲ್ಲಿ ಕೊಂಚ ಬದಲಾವಣೆ ತರುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಯಥಾವತ್ತಾಗಿ ಜಾರಿ ಮಾಡುವ ಸಾಧ್ಯತೆಯೇ ಇಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಹೇಳಿದ್ದಾರೆ.

2004ರಲ್ಲಿ ಆಗ ಅಧಿಕಾರದಲ್ಲಿ ಇದ್ದ ಸರ್ಕಾರ ಜಾರಿಗೊಳಿಸಿದ್ದ ಪಿಂಚಣಿ ವ್ಯವಸ್ಥೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬದಲಾವಣೆಗೊಳಿಸಿತ್ತು. ಜತೆಗೆ 2006ರಿಂದ ಸರ್ಕಾರಿ ಸೇವೆಗಳಿಗೆ ಸೇರಿದವರಿಗೆ ಪಿಂಚಣಿ ನೀಡದೇ ಇರುವ ಬಗ್ಗೆ ಆ ವ್ಯವಸ್ಥೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ವ್ಯವಸ್ಥೆಯ ಬಗ್ಗೆ ಹಲವಾರು ಆಕ್ಷೇಪಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಎನ್‌ಪಿಎಸ್‌ ವ್ಯವಸ್ಥೆ ಪರಿಶೀಲನೆಗೆ ಸಮಿತಿ ರಚನೆ ಮಾಡಿತ್ತು.

ಎನ್‌ಪಿಎಸ್‌ನಲ್ಲಿ ಉದ್ಯೋಗಿಗಳ ಮೂಲ ವೇತನದಿಂದ ಶೇ.10, ಸರ್ಕಾರದ ವತಿಯಿಂದ ಶೇ.14ನ್ನು ಪಿಂಚಣಿಗೆ ನೀಡಲಾಗುತ್ತಿದೆ. ಆದರೆ, ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ ಸರ್ಕಾರಿ ಉದ್ಯೋಗಿಗೆ ಕೊನೆಯ ಬಾರಿ ಪಡೆದುಕೊಂಡ ವೇತನದ ಮೊತ್ತದ ಶೇ.50ರಷ್ಟು ಪಿಂಚಣಿಯಾಗಿ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next