ನಾನು ಶೂಟಿಂಗ್‌ಗೆ ಹೋಗ್ತಾ ಇದ್ದ ಸಂದರ್ಭದಲ್ಲಿ ಇಷ್ಟು ಬ್ಯುಸಿ ಇದ್ದೇನೋ, ಅದಕ್ಕಿಂತ ಜಾಸ್ತಿ ಬ್ಯುಸಿ ಆಗಿದ್ದೇನೆ ಈಗ. ಯಾಕಂದ್ರೆ, ಈಗ ಮನೆಯ ಎಲ್ಲಾ ಕೆಲಸವನ್ನೂ ನಾವೇ ಮಾಡಬೇಕು. ಮೊದಲಾಗಿದ್ರೆ ಕೆಲಸದವರು ಬರ್ತಾ ಇದ್ರು. ಅವರೇ ಎಲ್ಲಾ ಕೆಲಸ ಮಾಡ್ತಾ ಇದ್ರು. ನಾನು ಶೂಟಿಂಗ್ ಮುಗಿಸಿಕೊಂಡು ಬಂದು ರಿಲ್ಯಾಕ್ಸ್ ಮಾಡ್ತಾ ಇದ್ದೆ. ಆದ್ರೆ ಈಗ ಬೆಳಗ್ಗೆ ತಿಂಡಿ ಮಾಡೋದ್ರಿಂದ ಹಿಡಿದು ಎಲ್ಲಾ ಕೆಲಸವೂ ನಮ್ಮದೇ, ಎಲ್ಲಾ ಕೆಲಸಗಳನ್ನು ಹಂಚಿಕೊಂಡು ಮಾಡ್ತಾ ಇದ್ದೇವೆ.
ಬಿಡುವಿನ ಸಮಯದಲ್ಲಿ ಚೌಕಾಬಾರ ಸೇರಿದಂತೆ ಹಳೆಯ, ಹೊಸ ಆಟಗಳನ್ನು ಆಡ್ತೇವೆ. ಸ್ವಲ್ಪ ಹೊತ್ತು ಹಾಡಿನ ಕಾರ್ಯಕ್ರಮ ಕೂಡ ನಡೆಯುತ್ತೆ. ಅಂದಹಾಗೆ ನಾನೀಗ ಮಗಳ ಮನೆಗೆ ಬಂದಿದ್ದೇನೆ. ಇಲ್ಲಿ ಹೌಸ್ ಕೀಪಿಂಗ್‌ನವರಿಗೆ ಜಾಗ ಕೊಟ್ಟಿದ್ದಾರೆ. ಹಿರಿಯ ನಾಗರೀಕರೂ ತುಂಬಾ ಜನ ಇದ್ದಾರೆ. ಅವರ ಜೊತೆಗೆ ಕುಶಲೋಪರಿ ಮಾತಾಡುವುದು ಸಮಾಧಾನದ ಮಾತು ಹೇಳುವುದು, ಹೌಸ್ ಕೀಪಿಂಗ್ ಜನರಿಗೆ ತರಕಾರಿ ಕೊಡೋದು, ಅವರು ಮಾಡಿದ ಅಡುಗೆಯ ರುಚಿ ನೋಡುವುದು, ಬಟ್ಟೆ ಕೊಡುವುದೂ ಸೇರಿದಂತೆ ಏನಾದರೂ ಸಹಾಯ ಮಾಡುವುದು, ಆ
ಮೂಲಕ ಇದು ಕಷ್ಟ ಕಾಲ ಎಂಬ ಫಿಲ್ ಅವರಿಗೆ ಬರದಂತೆ ನೋಡಿಕೊಳ್ಳುವುದು… ಹೀಗೆ ಸಾಗುತ್ತಿದೆ ಬದುಕು.
ಮಗಳ ಜೊತೆ, ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕು ಅಂತ ನನಗೆ ತುಂಬಾ ಆಸೆ ಇತ್ತು. ಅದೀಗ ಈಡೇರಿದೆ. ಮೊಮ್ಮಗಳಂತೂ, ಹಗಲು-ರಾತ್ರಿ ನನ್ನ ಜೊತೆಗೆ ಇರ್ತಾಳೆ. ಈ ಅನಿರೀಕ್ಷಿತ ರಜೆಯಿಂದ ಒಂದು ರೀತಿಯಲ್ಲಿ ಖುಷಿ. ಇನ್ನೊಂದು ರೀತಿಯಲ್ಲಿ ಬೇಸರ. ಕಣ್ಣಿಗೆ ಕಾಣದ ಒಂದು ಕ್ರಿಮಿಯಿಂದ ಇಡೀ ಜಗತ್ತು ಗಢಗಢ ನಡುಗುವ ಹಾಗೆ ಆಯ್ತಲ್ಲ ಅಂತ ಯೋಚಿಸಿದಾಗ ಭಯ ಮತ್ತು ಸಂಕಟ ಒಟ್ಟೊಟ್ಟಿಗೆ ಆಗುತ್ತೆ.
ಉಡುಪಿಯಲ್ಲಿರುವ ಅಮ್ಮನಿಗೆ ದಿನವೂ ಕಾಲ್ ಮಾಡುವುದು, ಬೆಳಗ್ಗೆ ತಪ್ಪದೇ ವಾಕ್ ಹೋಗುವುದು, ಯೋಗ ಮಾಡುವುದು ನನ್ನ ದಿನಚರಿಯ ಒಂದು ಭಾಗ. ಪ್ರಕೃತಿಯನ್ನು ಪ್ರಶ್ನೆ ಮಾಡದೆ ಬಂದದ್ದೆಲ್ಲಾ ನಿನ್ನ ಪ್ರಸಾದ ಅಂದುಕೊಂಡು ಬಾಳುವುದಷ್ಟೇ ನಮ್ಮ ಕೆಲಸ ಅನ್ನುವುದು ನನ್ನ ನಂಬಿಕೆ.
– ವಿನಯಾ ಪ್ರಸಾದ್, ಖ್ಯಾತ ನಟಿ