Advertisement

ಪ್ರಧಾನಿಗೆ ಪತ್ರ ಬರೆದರೂ ಸುಧಾರಣೆ ಕಾಣದ ಬೆಳಾಲು ರಸ್ತೆ ಗೋಳು

02:46 PM Nov 29, 2019 | mahesh |

ಈ ಸರಣಿ ಆರಂಭಿಸಿರುವುದು ನಮ್ಮ ಪ್ರಮುಖ ರಸ್ತೆಗಳ ಸಚಿತ್ರ ದರ್ಶನ ನೀಡಲೆಂದೇ. ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಪಂಚಾಯತ್‌ನ ಹಲವು ರಸ್ತೆಗಳು ಇಂದು ಸಂಚಾರಕ್ಕೆ ಅಯೋಗ್ಯವಾಗಿವೆ. ಈ ಮಾತು ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಿಗೆ ಅನ್ವಯ. ಉದಯವಾಣಿಯ ವರದಿಗಾರರು ಈ ಹದಗೆಟ್ಟ ರಸ್ತೆಗಳಲ್ಲಿ ತಿರುಗಾಡಿ, ಸ್ಥಳೀಯರನ್ನು ಮಾತನಾಡಿಸಿ ರಸ್ತೆಗಳ ವಾಸ್ತವ ಸ್ಥಿತಿಯನ್ನು ಓದುಗರ ಎದುರು ತೆರೆದಿಡುವ ಪ್ರಯತ್ನವಿದು. ಲೋಕೋಪಯೋಗಿ ಇಲಾಖೆ ಕೂಡಲೇ ಜನರ ಗೋಳನ್ನು ಆಲಿಸಿ ಪರಿಹಾರ ಕಲ್ಪಿಸಬೇಕೆಂಬುದು ಜನಾಗ್ರಹ.

Advertisement

ಬೆಳ್ತಂಗಡಿ: ತಾಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿರುವ ಉಜಿರೆ ಪೇಟೆಯನ್ನು ಸಂಪರ್ಕಿಸುವ ಉಜಿರೆ- ಬೆಳಾಲು-ಬೈಪಾಡಿ ರಸ್ತೆ ಅಭಿವೃದ್ಧಿಗೆ ಕಳೆದ ಐದು ವರ್ಷಗಳಿಂದ ದಿನ ಕೂಡಿ ಬಂದಿಲ್ಲ. ಈ ರಸ್ತೆಯನ್ನು ಕೇಂದ್ರ ರಸ್ತೆ ನಿಧಿಯಿಂದ ನಿರ್ವಹಣೆ ಮಾಡ ಲಾಗುತ್ತಿದೆ. 2008ರಲ್ಲಿ ಗ್ರಾಮಸಡಕ್‌ ಯೋಜನೆಯಡಿ ನಿರ್ಮಾಣ ಗೊಂಡ ಈ ರಸ್ತೆ ಈವರೆಗೆ ಮೇಲ್ದರ್ಜೆ ಗೇರಿಸಿಲ್ಲ. ತೇಪೆ ಕಾರ್ಯಕ್ಕಷ್ಟೆ ಸೀಮಿತವಾಗಿದೆ. ಉಜಿರೆಯಿಂದ ಬೆಳಾಲು ತನಕದ 9 ಕಿ.ಮೀ. ರಸ್ತೆಯಲ್ಲಿ ಹೊಂಡ ಗುಂಡಿಗಳದ್ದೇ ಕಾರುಬಾರು. ತಿರುವುಗಳಲ್ಲಿ ಪ್ರತಿನಿತ್ಯ ಎಂಬಂತೆ ಅಪಘಾತಗಳಾಗುತ್ತಿವೆ.

ವಾಹನ ಚಾಲಕರ ಹಿಂದೇಟು
ಮೂರು ವರ್ಷಗಳ ಹಿಂದೆ ಇಲ್ಲಿನ ಶಾಲೆ ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಅವರು ತುರ್ತು ಕ್ರಮ ಕೈಗೊಳ್ಳುವಂತೆ ಸಬಂಧಪಟ್ಟ ಇಲಾಖೆಗೆ ಸೂಚಿಸಿದ್ದರು. ಆದರೂ ದುರಸ್ತಿಗೆ ಮುಹೂರ್ತ ಬಂದಿಲ್ಲ. ಪ್ರತಿನಿತ್ಯ 30ಕ್ಕೂ ಹೆಚ್ಚು ಆಟೋಗಳು ಓಡಾಡುತ್ತಿದ್ದ ರಸ್ತೆಯಲ್ಲಿ ಪ್ರಸಕ್ತ ಆಟೋಗಳ ಸಂಖ್ಯೆ 15ಕ್ಕೆ ಇಳಿದಿದೆ. ಬೆಳಾಲಿನಿಂದ ಓಡಲ, ಉಂಡ್ಯಾಪು ವರೆಗೆ 2ರಿಂದ 3 ಕಿ.ಮೀ. ರಸ್ತೆ ಒಂದು ಅಡಿಗಳಂತೆ 100 ಮೀ. ಅಂತರದಲ್ಲಿ 10ರಿಂದ 20 ಗುಂಡಿಗಳು ಸಿಗುತ್ತವೆ. ಪಾದೆ ರಸ್ತೆ ನಿನ್ನಿಕಲ್ಲು ತಿರುವುಗಳಲ್ಲಿ ಸಂಭವಿಸಿರುವ ಅಪಘಾತಗಳಿಗೆ ಲೆಕ್ಕವಿಲ್ಲ. ಕೋಡಿ ತಿರುವಿನಲ್ಲಿ ಮಳೆ ನೀರು ಸಾಗಲು ಚರಂಡಿ ಇಲ್ಲ. ಮಾಚಾರು ಮಸೀದಿ ಬಳಿ ಎತ್ತರದ ಪೊದೆಗಳು ಆವರಿಸಿ ಸೇತುವೆಯೇ ಕಾಣದ ಸ್ಥಿತಿ. ಮಾಪಲ, ಕೂಡಲಕೆರೆ ಬಳಿ ರಸ್ತೆ ಕಿರಿದಾಗಿದೆ. ಎಲ್ಲೂ ಸೂಚನಾ ಫಲಕಗಳಿಲ್ಲ.

ಸನಿಹದ ದಾರಿ
ಬೆಳಾಲು ರಸ್ತೆಯಾಗಿ ಮುಂದಕ್ಕೆ 4 ಕಿ.ಮೀ. ಸಾಗಿದರೆ ಬೈಪಾಡಿ ಹಾಗೂ ಮತ್ತೂ ಮುಂದು ವರಿದಾಗ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಪದ್ಮುಂಜ ರಸ್ತೆ ಸಿಗುತ್ತದೆ. ಪುತ್ತೂರು ಕಡೆಯಿಂದ ಧರ್ಮಸ್ಥಳಕ್ಕೆ ಬರುವವರಿಗೆ ಇದು ಸನಿಹದ ದಾರಿಯಾಗಿದೆ. ಹೊರರಾಜ್ಯಗಳ ಪ್ರವಾಸಿ ವಾಹನಗಳೂ ಈ ರಸ್ತೆಯನ್ನು ಬಳಸುತ್ತಿವೆ. 4 ಕಡೆಗಳಲ್ಲಿ ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸಲು ಸನಿಹವಾಗಿರುವ ರಸ್ತೆಯಾಗಿದೆ.

ಅತಿ ಹೆಚ್ಚು ಹಾಳಾಗಿರುವುದು
ಓಡಲ, ಕೆಂಬರ್ಜೆ ತಿರುವು
ಮಾಯ ದೇವಸ್ಥಾನ ತಿರುವು ತಿರುವು
ಪಾದೆ, ನಿನ್ನಿಕಲ್ಲು ತಿರುವು

Advertisement

ಎಚ್ಚರಿಕೆ ವಹಿಸಬೇಕಾದ ಅಂಶಗಳು
– 10ರಿಂದ 20ಕ್ಕೂ ಅಧಿಕ ತಿರುವುಗಳಲ್ಲಿ ಎಚ್ಚರ ಅಗತ್ಯ
– ಪೊದೆಗಳು ರಸ್ತೆಯನ್ನು ಮರೆಮಾಚುತ್ತಿದ್ದು ಅಪಘಾತ ಸಾಧ್ಯತೆ
– ಕಿರಿದಾದ ರಸ್ತೆಯಲ್ಲಿ ದೊಡ್ಡ ವಾಹನಗಳು ಬರುವಾಗ ಲಘು ವಾಹನ ಸವಾರರು ಬದಿಗೆ ನಿಲ್ಲುವುದೇ ಸೂಕ್ತ

ಊರಿನ ಅಭಿವೃದ್ಧಿಗೆ ಮಾರಕ
ರಸ್ತೆ ಅವ್ಯವಸ್ಥೆಯಿಂದ ಬೆಳಾಲು ಊರಿನ ಅಭಿವೃದ್ಧಿಯಾಗುತ್ತಿಲ್ಲ. 5 ವರ್ಷಗಳ ಹಿಂದೆ ತೇಪೆ ಹಾಕಿರುವುದು ಬಿಟ್ಟರೆ ಬೇರಾವ ಕಾಮಗಾರಿ ನಡೆಸಿಲ್ಲ. ದಿನ ನಿತ್ಯ ಓಡಾಟ ನಡೆಸುವ ನಾವು ಹೊಂಡ ಗುಂಡಿಗಳಿಂದ ಬೇಸತ್ತು ಹೋಗಿದ್ದೇವೆ.
– ಗಿರೀಶ್‌, ಬೆಳಾಲು

ಆದಾಯವೆಲ್ಲ ರಿಕ್ಷಾ ದುರಸ್ತಿಗೇ
ನಾಲ್ಕು ವರ್ಷಗಳಿಂದ ರಿಕ್ಷಾ ಬಾಡಿಗೆ ಮಾಡುತ್ತಿದ್ದೇನೆ. ಆದಾವೆಲ್ಲ ದುರಸ್ತಿಗೇ ಖರ್ಚಾಗುತ್ತಿದೆ. ನಾವಾದರು ಒಟ್ಟು ಸೇರಿ ರಸ್ತೆ ದುರಸ್ತಿ ಮಾಡೋಣ ಎಂದರೆ ಆದಾಯ ಮನೆ ಖರ್ಚಿಗೇ ಸಾಲುತ್ತಿಲ್ಲ.ಇದೇ
ಸ್ಥಿತಿ ಮುಂದುವರಿದರೆ ರಸ್ತೆ ತಡೆ ನಡೆಸುತ್ತೇವೆ.
– ಪೂವಪ್ಪ, ಮಾಯ, ರಿಕ್ಷಾ ಚಾಲಕ

ರಸ್ತೆ ತೆರಿಗೆ ಕಟ್ಟುವುದೇಕೆ?
ಎರಡು ವರ್ಷಗಳ ಹಿಂದೆ ರಸ್ತೆ ತೀವ್ರ ಹದಗೆಟ್ಟಿದ್ದಾಗ ಗೆಳೆಯ ಅಬ್ದುಲ್‌ ಖಾದರ್‌ ಜತೆಗೂಡಿ ಉಜಿರೆಯಿಂದ ಬೆಳಾಲು ವರೆಗೆ ನನ್ನ ಆಟೋದಲ್ಲಿ ಮಣ್ಣು ಸಾಗಿಸಿ ಹೊಂಡ ಮುಚ್ಚಿದ್ದೆವು. ನಾವೇ ದುರಸ್ತಿ ಮಾಡುವುದಾದರೆ ರಸ್ತೆ ತೆರಿಗೆ ಕಟ್ಟುವುದೇತಕ್ಕೆೆ.
– ಶರೀಫ್‌, ಆದರ್ಶನಗರ, ಆಟೋ ಚಾಲಕ

ದುರ್ಘ‌ಟನೆಗೆ ಮುನ್ನ ಎಚ್ಚರಾಗಿ
ಹಲವು ವರ್ಷಗಳಿಂದ ಬೆಳಾಲು ಉಜಿರೆ ಜೀಪು ಬಾಡಿಗೆ ಮಾಡುತ್ತಿದ್ದೇನೆ. ರಸ್ತೆ ನಿರ್ವಹಣೆ ಮಾಡದೆ ಅಪಘಾತಗಳು ಹೆಚ್ಚಾಗುತ್ತಿದೆ. ದುರ್ಘ‌ಟನೆ ಸಂಭವಿಸುವ ಮುನ್ನ ಶೀಘ್ರ ಉತ್ತಮ ರಸ್ತೆ ನಿರ್ಮಿಸಿಕೊಡಬೇಕು.
– ಶ್ರೀಪತಿ, ಜೀಪು ಚಾಲಕ

ಮನವಿಗೆ ಬೆಲೆಯೇ ಇಲ್ಲ
ರಸ್ತೆಯ ಸ್ಥಿತಿ ನೋಡಿ ಸಾಕಾಗಿದೆ. ಅಧಿಕಾರಿಗಳಿಗೆ ಶಾಸಕರಿಗೆ ಮನವಿ ನೀಡಿ ಬೇಸತ್ತಿದ್ದೇವೆ. ಪವಿತ್ರ
ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮೇಲ್ದರ್ಜೆಗೇರಿಸುವಲ್ಲಿ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ.
ಮೂರು ಕಡೆ ಹೆದ್ದಾರಿ ಸಂಪರ್ಕಿಸುವ ಈ ರಸ್ತೆಯನ್ನು ಶೀಘ್ರ ವಿಸ್ತರಿಸಿ.
-ಹರೀಶ್‌, ಅದವೂರು

ಸಮಯ ವ್ಯರ್ಥ
ರಸ್ತೆ ಸಮಸ್ಯೆಯಿಂದ ನೊಂದು ಎಲ್ಲ ಅಧಿಕಾರಿಗಳ ಕಚೇರಿಗೆ ಮನವಿ ನೀಡಿ ಸಾಕಾಗಿದೆ. ಯಾವುದೇ ಪ್ರಯೋಜನವಾಗಲಿಲ್ಲ. ರಸ್ತೆ ಅದೇ ಸ್ಥಿತಿಯಲ್ಲಿದೆ. 9 ಕಿ.ಮೀ. ರಸ್ತೆ ಸಂಚಾರಕ್ಕೆ ಒಂದು ತಾಸು ಬೇಕು. ಗ್ರಾಮೀಣ ರಸ್ತೆಗಳನ್ನು ಮೊದಲು ಅಭಿವೃದ್ಧಿ ಪಡಿಸಲಿ.
– ಪ್ರೀತು, ಬಾರ್ಜೆ

ಕೇಂದ್ರ ರಸ್ತೆ ನಿಧಿಯಿಂದ ಬೆಳಾಲು ರಸ್ತೆ ಅಭಿವೃದ್ಧಿ ಪಡಿಸಲಾಗುವುದು. 9 ಕೋಟಿ ರೂ. ಮೊತ್ತದ ಟೆಂಡರ್‌ ಕರೆಯಲಾಗಿದ್ದು, ಮಳೆಗಾಲದ ಬಳಿಕ 9 ಕಿ.ಮೀ. ರಸ್ತೆಯ ಸಂಪೂರ್ಣ ಡಾಮರೀಕರಣ ಕೈಗೆತ್ತಿಕೊಳ್ಳಲಾಗುವುದು.
-ಸುಬ್ಬರಾಮ ಹೊಳ್ಳ , ಕಾರ್ಯಪಾಲಕ ಎಂಜಿನಿಯರ್‌
ರಾಷ್ಟ್ರೀಯ ಹೆದ್ದಾರಿ,  ಮಂಗಳೂರು ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next