ಪ್ರೀತಿಯ ಅಂಚೆ ಅಣ್ಣನಿಗೆ ನಾನು ಮಾಡುವ ನಮಸ್ಕಾರಗಳು. ನಾನು ಕ್ಷೇಮ. ನಿನ್ನ ಕ್ಷೇಮ ಸಮಾಚಾರವನ್ನು ಕೇಳೊಣವೆಂದರೆ ಇತ್ತೀಚೆಗೆ ನೀನು ಕಾಣಲು ಸಿಗುತ್ತಿಲ್ಲವಲ್ಲ. ಮೊದಲೆಲ್ಲ “ಟ್ರಿಂಗ್ ಟ್ರಿಂಗ್’ ಎಂದು ನಿನ್ನ ಸೈಕಲ್ ಶಬ್ದ ಕೇಳಿದರೆ ಸಾಕು, ಮನೆ ಬಾಗಿಲ ಬಳಿ ಬಂದು ನಾವೆಲ್ಲ ನಿಲುತ್ತಿದ್ದೆವು. ಖಾಕಿ ಪ್ಯಾಂಟು, ಖಾಕಿ ಷರ್ಟು, ಒಂದು ಟೋಪಿ, ಒಂದು ಬದಿಗೆ ಚೀಲ ಇಳಿಬಿಟ್ಟು ಸೈಕಲ್‌ನಿಂದ ಇಳಿಯುಸುತ್ತಿದ್ದ ನಿನ್ನನ್ನು ಕಂಡರೆ ನಮಗೆಲ್ಲ ಸಂಭ್ರಮದೊಂದಿಗೆ ಕುತೂಹಲವು ಸೇರುತ್ತಿತ್ತು. ನೀನೆಂದರೆ, ಮನೆಯವರಿಗೆಲ್ಲ ಪ್ರೀತಿ, ಊರವರಿಗೆಲ್ಲ ಗೌರವ. ನಿನ್ನ ಚೀಲದ ತುಂಬ ಇರುತ್ತಿದ್ದ ಪತ್ರಗಳಲ್ಲಿ ನಮ್ಮನೆಗೆಷ್ಟಿವೆಯೊ, ಎಂಬ ಕೌತುಕ. ಪತ್ರ ಎಂಬ ಸುದ್ದಿ ಗಂಟನ್ನು ಬಿಚ್ಚಿ ಓದುವ ಕಾತರತೆ. ಪದೇ ಪದೇ ಪತ್ರ ಓದಿ ಅದರ ಅಕ್ಷರಗಳನ್ನು ಕಣ್ತುಂಬಿಕೊಳ್ಳುವ ಆಸೆ. ನಮಗಾಗಿ ನಮ್ಮವರು ಯಾರೋ ಬಹುದೂರದಿಂದಾಡುತ್ತಿದ್ದ ಮಾತುಗಳು ಅಕ್ಷರಗಳ ರೂಪತಾಳಿ ನಿನ್ನ ಮೂಲಕ ನಮ್ಮ ಕೈ ಸೇರುತ್ತಿತ್ತು.
ಆ ಪತ್ರದಲ್ಲಿ ಅಡಗಿರುವ ಭಾವನೆಗಳನ್ನು ತುಂಬಿಸಿಕೊಳ್ಳುವ ಹಂಬಲ ನಮ್ಮದಾಗಿತ್ತು. “ಶ್ರೀ ಕ್ಷೇಮ’ ದಿಂದ ಶುರುವಾದರೆ “ಇಂತಿ ನಿಮ್ಮ ವಿಶ್ವಾಸಿ’ ಎಂದು ಕೊನೆಗೊಳ್ಳುವುದರೊಳಗೆ ಅಕ್ಷರಗಳ ಸಾಗರವೇ ಮೇಳೈಸಿರುತ್ತಿತ್ತು. ನೀನು ತಲುಪಿಸಿದ ಪತ್ರ ಓದಿದ ತಕ್ಷಣ ಪತ್ರೋತ್ತರ ಸಿದ್ಧವಾಗಿರುತ್ತಿತ್ತು. ಪ್ರತಿದಿನ ನಿನ್ನ ಬರುವಿಕೆಗೆ ನಾವು ಹಪಹಪಿಸುತ್ತಿದ್ದೆವು. ನಿನ್ನ ಆಗಮನವನ್ನು ಎದುರು ನೋಡುವುದು ನಮ್ಮ ದಿನಚರಿಯಾಗಿತ್ತು. ಅದೆಷ್ಟೋ ಬಾರಿ ಮನೆಗೆ ಬಂದ ಪತ್ರವನ್ನು ಓದಿ ಹೇಳುವ ಕೆಲಸ ನಿನ್ನದಾಗಿರುತ್ತಿತ್ತು. ಊರವರ ವಿಚಾರಗಳೆಲ್ಲ ನಿನಗೆ ತಿಳಿದಿರುತ್ತಿತ್ತು. ಎಂದೂ ಯಾರಿಗೂ ನೀನು ಕೆಟ್ಟದ್ದನ್ನು ಹಂಚಲಿಲ್ಲ. ಆದರೆ, ಎಲ್ಲೂ ಒಳ್ಳೆಯದನ್ನು ಹಂಚಲು ಮರೆಯಲಿಲ್ಲ. ಒಬ್ಬರ ಮನೆಯ ವಿಚಾರವನ್ನು ಇನ್ನೊಬ್ಬರಿಗೆ ಹೇಳುವವರೇ ಇರುವ ಈ ಸಂದರ್ಭದಲ್ಲಿ ಅಷ್ಟರಮಟ್ಟಿಗೆ ನೀನೊಬ್ಬ ಸಹಕಾರಿ-ಸಂವಾದಿ ಹಾಗೂ ಎಲ್ಲಿಯೂ ಎಡವದ ಸಂದೇಶ ರೂವಾರಿ.
ಕೆಲವೊಮ್ಮೆ “ಇವತ್ತು ನಿಮಗೆ ಪತ್ರ ಬಂದಿಲ್ಲ’ ಎಂದು ನೀ ಕೈಯಾಡಿಸುತ್ತ ಸೈಕಲ್‌ನಲ್ಲಿ ಮುಂದೆ ಸಾಗಿದಾಗ ನಿರಾಸೆಯಾದರೂ, ನಾಳೆ ಖಂಡಿತ ಬರಬಹುದೆಂಬ ನಿರೀಕ್ಷೆ ನಮ್ಮದಾಗಿರುತ್ತಿತ್ತು. ನನಗೆ ನೆನಪಿದೆ, ನನ್ನ ದೊಡ್ಡಣ್ಣನ ಸರಕಾರಿ ನೇಮಕ ಪತ್ರವನ್ನು ನೀನೇ ತಂದುಕೊಟ್ಟಿದ್ದೆ. ಮರುದಿನ ನಮ್ಮನೆಯ ಹಬ್ಬದ ಊಟದಲ್ಲಿ ನಿನಗೂ ಪಾಲಿತ್ತು. ನಮ್ಮನೆಯಷ್ಟೇ ಅಲ್ಲದೆ ಊರವರೆಲ್ಲರ ಸಂತೋಷ ಕೂಟಗಳಲ್ಲಿಯೂ ನೀನಿರುತ್ತಿದ್ದೆ. ಶತಮಾನಗಳ ಕಾಲದಿಂದಲೂ ನಿನಗೊಂದು ಇತಿಹಾಸವೇ ಇದೆ. ಅಂದೆಲ್ಲ ನಿನ್ನದು ಇಡೀ ದಿನದ ಕಾಯಕ. ಬೆಳಗ್ಗೆ ಮನೆಯಿಂದ ಹೊರಟರೆ ಹತ್ತಾರು ಮೈಲಿ ನಡೆದು ಊರಿನವರೆಲ್ಲರ ಪತ್ರವನ್ನು ಅಂಚೆಗಿಳಿಸಿ ಬರುವಾಗ ಊರಿನ ಮನೆಯವರಿಗೆಲ್ಲ ಬಂದ ಪತ್ರವನ್ನು ತರುತ್ತಿ¨ªೆಯಂತೆ. ಹತ್ತೂರಿಗೊಂದು ಅಂಚೆ ಕಚೆೇರಿ ಇದ್ದಾಗಿನ ಕಥೆಯಿದು. ಸದಾ ನಿನ್ನ ಕೈಲೊಂದು ಘಂಟೆ ಇರುತ್ತಿತ್ತಂತೆ, ದಾರಿಯಲ್ಲಿ ನೀ ಬರುವಾಗ ಘಂಟೆ ಸದ್ದು ಕೇಳಿ ನಿನಗೆಲ್ಲರು ದಾರಿ ಬಿಡುತ್ತಿದ್ದರಂತೆ.
ನಿನ್ನ ಚೀಲದಲ್ಲಿ ಅದೆಷ್ಟೋ ವೈವಿಧ್ಯಮಯ ವಿಚಾರಗಳ ಕಂತೆಯೇ ಇರುತ್ತಿತ್ತಲ್ಲವೆ? ನಾಮಕರಣ, ವಿವಾಹ ಆಹ್ವಾನ ಪತ್ರಿಕೆ, ಇನ್ನು ಯಾರಧ್ದೋ ಲೇವಾದೇವಿ ಸಮಾಚಾರ, ಮತಾöರಧ್ದೋ ನ್ಯಾಯಾಲಯದ ವ್ಯಾಜ್ಯ ಸಮಾಚಾರ, ಇನ್ನೆಲ್ಲಿಯೋ ಪ್ರವಾಹದ ಹಾನಿಯ ಬಗ್ಗೆ, ಯಾರದ್ದೋ ಆಘಾತದ ಅಥವಾ ಅಪಘಾತದ ಸುದ್ದಿ, ಪ್ರೇಮಿಗಳ ಪ್ರೇಮ ನಿವೇದನೆ, ಕೈಲಾಸ ಸಮಾರಾಧನೆ ಹೀಗೆ ಹುಟ್ಟಿನಿಂದ ಸಾವಿನವರೆಗೆ ಎಲ್ಲ ವಿಚಾರಗಳನ್ನು ಎಲ್ಲರ ಮನೆಮುಟ್ಟಿಸುವ ನಿನ್ನ ಕಾರ್ಯ ಮೆಚ್ಚುವಂಥದ್ದು.
ಆ ಕಾಲದಲ್ಲಿ ನಳ-ದಮಯಂತಿಯರ ಪ್ರೇಮ ಸಲ್ಲಾಪಕ್ಕೆ ಹಂಸ ಪಕ್ಷಿಯೇ ಪತ್ರವಾಹಕಿಯಾಯಿತೆಂಬ ಮಾತು ಕವಿ ಕಲ್ಪನೆಯಾದರೂ, ಇಂದಿನ ಮಿಂಚಂಚೆಯಲ್ಲಿ (ಇ-ಮೇಲ್) ಸಾವಿರಾರು ನಳ- ದಮಯಂತಿಯರ ಪ್ರೇಮ ನಿವೇದನೆಯಾಗುವುದನ್ನು ಕಾಣುತ್ತಿದ್ದೇವೆ. ಆ ಕವಿಕಲ್ಪನೆಯ ಕಾಲದಿಂದಲೂ ಇಲ್ಲಿಯವರೆಗೂ ಮನುಜನ ಎಲ್ಲ ವ್ಯಾವಹಾರಿಕ ಸಂವಾದಿಯಾಗಿ ಕಾರ್ಯನಿರ್ವಹಿಸಿದ ಹಿರಿಮೆ ನಿನ್ನದಾಗಿದೆ. ನಿನ್ನ ಮುಂದಿನ ರೂಪವನ್ನು ವಿಜ್ಞಾನಿಗಳ ಆವಿಷ್ಕಾರಕ್ಕೇ ಬಿಡೋಣವೆ !
-ಇಂತಿ ಪತ್ರಾಭಿಮಾನಿ
ಇಂಚರಾ ಜಿ.ಜಿ. ಪ್ರಥಮ ಬಿಎ (ಪತ್ರಿಕೋದ್ಯಮ) ಎಸ್‌ಡಿಎಂ ಕಾಲೇಜು, ಉಜಿರೆ