Advertisement

ಮುದ್ದು ಮಗಳಿಗೆ ಪತ್ರ

06:00 AM Sep 19, 2018 | |

ಆಸ್ಪತ್ರೆಯಲ್ಲಾದರೆ ದಾದಿಯೋ, ಮನೆಯಲ್ಲಾದರೆ ಸೂಲಗಿತ್ತಿಯೋ ಹೆಣ್ಮಗೂ ಎಂದು ಉದ್ಗರಿಸಿದಾಗ, ಆ ಕ್ಷಣದಲ್ಲೇ ತಾಯಿ ಅನ್ನಿಸಿಕೊಂಡಾಕೆ ಒಮ್ಮೆ ಧನ್ಯತೆಯಿಂದ ಸಂಭ್ರಮಿಸುತ್ತಾಳೆ. ಮರುಕ್ಷಣವೇ ಬೆಚ್ಚುತ್ತಾಳೆ. ಮಡಿಲಿಗೊಂದು ಮಗು ಬಂತು ಎಂಬುದು ಸಂಭ್ರಮಕ್ಕೂ, ಅದೇ ಮಗುವಿಗೆ ಮುಂದೆ ಏನೇನೆಲ್ಲಾ ಕಷ್ಟಗಳು ಬರುತ್ತವೆ ಎಂಬ ಯೋಚನೆಯೇ ಸಂಕಟಕ್ಕೂ ಕಾರಣವಾಗಿರುತ್ತದೆ. ಅಂಥ ತಲ್ಲಣಗಳನ್ನು ಜೊತೆಗಿಟ್ಟುಕೊಂಡ ಅಮ್ಮನೊಬ್ಬಳು, ತನ್ನ ಮುದ್ದು ಮಗಳಿಗೆ ಬರೆದ ನವಿಲುಗರಿಯಂಥ ಪತ್ರ ಇಲ್ಲಿದೆ… 

Advertisement

ಚಿನ್ನಾರಿ ಮಗಳೇ…
ಮಗಳು ಎನ್ನುವ ಶಬ್ದವೇ ತತ್ತಕ್ಷಣಕ್ಕೆ ಹೃದಯ ಮೀಟಿಬಿಡಬಲ್ಲ ಪದ. ಸ್ವತಃ ಮಗಳಾಗಿದ್ದರೂ ನನಗೆಂದೂ ಇದರ ಅನುಭವವಾಗಿರಲಿಲ್ಲ ನೀ ಹುಟ್ಟುವವರೆಗೂ. ಮಗಳು ಎಂದಾಕ್ಷಣ ಅದೆಷ್ಟೋ ದಿನಗಳಿಂದ ಉಸಿರಾಡದೆ ಪ್ರಜ್ಞೆ ಕಳೆದುಕೊಂಡಿದ್ದ ವಸ್ತ್ರ- ಒಡವೆಗಳಿಗೆ ಜೀವ ಬಂದುಬಿಟ್ಟಿತು. ಮನೆಮುಂದಿನ ಮಲ್ಲಿಗೆಬಳ್ಳಿ ಹೂ ಹಿಡಿದು ನಿಂತಿತು.

  ಮಗಳೇ, ನಿನಗೆ ಅಂತ ಕೂಡಿಟ್ಟುಕೊಂಡ ನನ್ನ ಅವೆಷ್ಟೋ ಖಾಸಾ ಮಾತುಗಳು ಒಂದೊಂದಾಗಿ ಪದಗಳಾಗಿ ಹೊರ ಬರುತ್ತಿವೆ. ಎಲ್ಲವನ್ನೂ ಹೇಳಿ ಬರಿದಾಗುತ್ತೇನೆ ಎಂದಲ್ಲ. ಇಷ್ಟಿಷ್ಟೇ ಹೇಳತೊಡಗುತ್ತೇನೆ. 

  ಗಂಡು ಮಗು ಹುಟ್ಟಿದಾಕ್ಷಣ ಎಂಥದೋ ನಿರಾಳತೆ, ಎಂಥದೋ ಹೆಮ್ಮೆ ಧರಿಸಿ ತಾಯ್ತನವನ್ನು ಅನುಭವಿಸುವ ಮನಃಸ್ಥಿತಿಯನ್ನೇ ಕಳೆದುಕೊಂಡುಬಿಡುತ್ತೇವೆ ಏಕೋ. ಗಂಡು ಮಗುವನ್ನು ಹೆರಬೇಕೆಂಬ ಕುಟುಂಬದ ಒತ್ತಾಸೆಯೋ, ಸಮಾಜದ ಕುಟುಕೋ ಇದಕ್ಕೆ ಕಾರಣವೂ ಇದ್ದೀತು. ಗಂಡು ಹೆತ್ತರೆ ಮಾತ್ರ ಸ್ವರ್ಗ ಪ್ರಾಪ್ತಿ ಎನ್ನುವ ಮನಃಸ್ಥಿತಿ ಯಾವುದೇ ಹೆಣ್ಣಿಗೆ, ಅದೂ ಒಬ್ಬ ತಾಯಿಗೆ ಬರುತ್ತದೆಂದರೆ ನಂಬಲಸಾಧ್ಯವೇ. ಆದರೆ, ನೀ ನನ್ನ ಮಡಿಲ ತುಂಬಿದಾಗ ನಿನ್ನ ಮೇಲೆ ಇದ್ಯಾವುದರ ಸೋಂಕೂ ತಗುಲದ ಮಮಕಾರ ಉಂಟಾಗಿ, ನಿನ್ನನ್ನು ಮತ್ತಷ್ಟು ಮತ್ತಷ್ಟು ಪ್ರೀತಿಸುತ್ತಾ ಹೋದದ್ದು ನನಗೂ ಅಚ್ಚರಿ.

  ನಿನ್ನ ಅಳು, ನಗು, ಕೇಕೆ ನನ್ನೊಳಗೆ ನಗಾರಿಯೇಳಿಸುತ್ತವೆ. ನಿನ್ನ ಬೊಚ್ಚು ಬಾಯಲ್ಲಿ ಅಮ್ಮ ಎಂದು ಕರೆಸಿಕೊಳ್ಳಲಿಕ್ಕೆ ಕಾತರಿಸುತ್ತೇನೆ. ಮುಂದೊಂದು ದಿನ ನೀ ಬೆಳೆದು ಈ ಅಮ್ಮನ ಅರೆಬೆಂದ ಕನಸುಗಳ ಸಾಕಾರವಾಗುತ್ತೀ ಎನ್ನುವ ಭರವಸೆಯೊಳಗೆ ಆಸೆಗಳ ತಿದಿ ಒತ್ತುತ್ತಾ ಮೈಮರೆಯುತ್ತೇನೆ. ಆದರೆ, ನನ್ನ ಆಶಯಗಳು ನಿನಗೆ ಭಾರವಾಗದು; ನೀನು ನಿನ್ನ ಬದುಕನ್ನು ಬದುಕಬೇಕೇ ಹೊರತು ಇನ್ನಾರದೋ ಆಶಯಗಳನ್ನಲ್ಲ.

Advertisement

  ನಿನ್ನ ಮೃದು ಮೈ, ಹವಳದ ತುಟಿಗಳನ್ನು ಎಷ್ಟು ಮುದ್ದಿಸಿದರೂ ತೃಪ್ತಿಯಿಲ್ಲ ಈ ಅಮ್ಮನಿಗೆ. ನಿನ್ನ ಮುಗ್ಧ ಮನಸ್ಸು ಬಲಿಯಲು ಪ್ರಾರಂಭಿಸಿದೆ. ನಿನ್ನ ತನವೂ ಮೊಳೆಯುತ್ತಿದೆ. ಈಗೀಗ ನಾನು ಹಾಲು ಕುಡಿಸಲು ಬಲವಂತಪಡಿಸಿದರೆ ನೀ ರಚ್ಚೆ ಹಿಡಿಯುತ್ತಿ. ಅದು ಬೇಡ ಎನ್ನುವ ನಿನ್ನ ಭಾಷೆ. ಆದರೂ ನಾ ಉಣಿಸಲು ತೊಡಗುತ್ತೇನೆ. ಕೆಲವೊಮ್ಮೆ ನೀ ಮೈಮರೆಯುತ್ತೀ. ಕೆಲವೊಮ್ಮೆ ನನ್ನನ್ನು ನಿರಾಸೆಗೊಳಿಸುತ್ತಿ. ನಾನಾದರೂ ಏಕೆ ನಿರಾಶಳಾಗಬೇಕು? ಹೆತ್ತ ಮಾತ್ರಕ್ಕೆ ನಿನ್ನೊಳಗೊಂದು ಪುಟ್ಟ ಮನಸ್ಸಿರುವುದನ್ನು ನಾನಾದರೂ ಏಕೆ ಮರೆಯಬೇಕು?

  ಮುಂದೆ, ನೀನು ಬೆಳೆದು ಹೆಣ್ಣಾಗುತ್ತೀ. ಆಕರ್ಷಕಳಾಗುತ್ತೀ. ಗಂಡು ಸಮೂಹವೇ ನಿನ್ನೆಡೆಗೆ ಆಕರ್ಷಿತರಾಗುವಷ್ಟು. ಹೂವಿರುವೆಡೆ ದುಂಬಿಗಳು ಬರುವುದು ಸಹಜವೇ. ಸುಲಭವಲ್ಲ ಮನುಷ್ಯರ ನಡುವಣ ಸಂಬಂಧ. ಮನುಷ್ಯ, ದೇಹದ ಲಾಲಸೆಗಾಗಿ ಏನನ್ನಾದರೂ ಮಾಡಬಲ್ಲ. ನೀನಾಗ ಹುಷಾರಾಗಬೇಕು. ಗಂಡನ್ನು ಅರ್ಥ ಮಾಡಿಕೊಳ್ಳಬೇಕು. ನಿನ್ನನ್ನು ನೀನು ಕಾಪಾಡಿಕೊಳ್ಳುವಷ್ಟು ಚತುರಳಾಗಬೇಕು. ನಿನ್ನ ದೇಹ ಮದುವೆಗೆ ಸಿದ್ಧವಾಗುವವರೆಗೂ.

  ಒಮ್ಮೊಮ್ಮೆ ಭಯವಾಗುತ್ತದೆ ಮಗಳೇ. ಇಲ್ಲಿ ಕ್ಷಣಕ್ಕೊಂದು ಹೆಣ್ಣು ಮಗುವನ್ನು ಹುರಿದುಮುಕ್ಕುತ್ತಿ¨ªಾರೆ. ಹೇಗೆ ನಿನ್ನನ್ನು ರಕ್ಷಿಸುವುದೆಂದು ತಿಳಿಯದೆ ಕಂಗಾಲಾಗುತ್ತೇನೆ. ಆದರೆ ಕೈಚೆಲ್ಲಿ ಕೂರುವುದಿಲ್ಲ. ಈ ಜಗತ್ತಿನ್ನೂ ಪೂರಾ ಕೆಟ್ಟು ಹೋಗಿಲ್ಲ. ಇಲ್ಲಿ ಎದೆಯೊಳಗೆ ಬಚ್ಚಿಟ್ಟುಕೊಂಡು ಪೊರೆಯುವ ಅಪ್ಪಂದಿರಿನ್ನೂ ಉಳಿದಿದ್ದಾರೆ. ಅಪ್ಪನಂಥ ಅಣ್ಣ, ತಮ್ಮ, ಗಂಡ, ಮಗ, ಗೆಳೆಯ, ಪರಿಚಿತ, ಅಪರಿಚಿತ… ಎಲ್ಲರೂ ಇ¨ªಾರೆ. ನಾ ಹೆದರಲಾರೆ ಮಗಳೇ. ನಿನ್ನನ್ನು ನೀನು ಕಂಡುಕೊಂಡು ದೃಢವಾಗಿ ನಿಲ್ಲುವವರೆಗೂ ಈ ಅಮ್ಮ ನಿನ್ನೊಂದಿಗೆ ಇರುತ್ತಾಳೆ. ನಿನ್ನ ಪ್ರತಿ ಹೆಜ್ಜೆಯಲ್ಲೂ ನನ್ನವೆರೆಡು ಹೆಜ್ಜೆಗಳು ಜೊತೆಯಾಗುತ್ತವೆ.

  ಹೆಣ್ಣು ದೈಹಿಕವಾಗಿ ಕೌಟುಂಬಿಕವಾಗಿ ಸಾಮಾಜಿಕವಾಗಿ ಏನೆಲ್ಲಾ ಅನುಭವಿಸಬೇಕು ಎಂಬುದನ್ನು ಪ್ರಲಾಪಿಸುತ್ತಾ ಹೇಳಿಕೊಟ್ಟು ನಿನ್ನ ಧೈರ್ಯವನ್ನು ನಾನೇಕೆ ಹಾಳುಗೆಡುವಲಿ? ಅದು ಅಷ್ಟಕ್ಕೂ ಅರ್ಧ ಸತ್ಯ ಮಾತ್ರ. ಸತ್ಯವೆಂದರೆ ಎಲ್ಲರೂ ಶೋಷಿಸುವ ಮನಃಸ್ಥಿತಿಯವರಾಗಿರುವುದಿಲ್ಲ ಮತ್ತು  ಶೋಷಣೆಯ ಹೆಸರಲ್ಲಿ ಅನ್ಯಾಯ ಆದಾಗೆಲ್ಲಾ ಹೆಣ್ಣು ಒಳಗೊಳಗೇ ಗಟ್ಟಿಯಾಗುತ್ತಾ ಹೋಗುತ್ತಾಳೆ. ಅದು ಅವಳೊಳಗಿನ ಅಂತಃಶಕ್ತಿ. ಸ್ನಾಯು ಬಲ ಮಾತ್ರವೇ ಶಕ್ತಿ ಎನ್ನುವುದಾಗಿದ್ದರೆ ಈ ಜಗತ್ತಿನಲ್ಲಿ ಶಕ್ತಿ ಎನ್ನುವ ಪದ ಅರ್ಥ ಕಳೆದುಕೊಂಡಿರುತಿತ್ತು.

  ಹೆಣ್ಣು ದೈಹಿಕವಾಗಿ ಬದಲಾವಣೆಗೆ ತೆರೆದುಕೊಳ್ಳುವ ಅತಿ ಮುಖ್ಯ ಘಟ್ಟವೇ ಅವಳಲ್ಲಿ ಋತುಸ್ರಾವ ಆರಂಭವಾಗುವುದು. ಈ ಹಂತದಲ್ಲಿ ಅವಳ ದೇಹ ಸಾದ್ಯಂತವಾಗಿ ಬದಲಾಗುತ್ತಾ ಹೋಗುತ್ತದೆ. ಸಪಾಟು ಎದೆಯ ಮೇಲೆ ಮೊಲೆಗಳು ಚಿಗುರುತ್ತವೆ. ನಿನ್ನ ದೇಹ ಹಿಂದೆಂದಿಗಿಂತಲೂ ಅಪ್ಪಟ ಹೆಣ್ಣಾಗತೊಡಗುತ್ತದೆ. ಮಗಳೇ, ನಿನ್ನೊಳಗೆ ಯೋನಿಯೆನ್ನುವ ಪುಟ್ಟ ಅಂಗವಿದೆ. ಅದು ಗರ್ಭವನ್ನು ತಲುಪುವ ದಾರಿ. ಮಗುವಿನ ಗುಲಾಬಿ ಬಣ್ಣದ್ದು ಧ್ಯಾನಿಸುವ ತ್ರಿಕೋನ ಗೂಡಿನಂತಿರುತ್ತದೆ ಗರ್ಭ. ಅದು ಪ್ರತಿ ತಿಂಗಳು ತನ್ನ ಕೋಣೆಯನ್ನು ತಾನು ಗುಡಿಸಿ ಶುಚಿಮಾಡಿಕೊಳ್ಳುತ್ತದೆ. ನೆತ್ತರ ರೂಪದಲ್ಲಿ ಸ್ರವಿಸುತ್ತದೆ. ಅದನ್ನೇ ಋತುಸ್ರಾವ ಎನ್ನುತ್ತೇವೆ. ಆ ದಿನಗಳು ನಿಜಕ್ಕೂ ಯಾತನಾಮಯವೇ. ಅಲ್ಲಿಂದಲೇ ನೀನು ನೋವನುಂಡು ಗಟ್ಟಿಯಾಗುವುದ ಕಲಿಯಲು ತೊಡಗುತ್ತಿ.

  ಋತುವಿನ ಮುಖ್ಯ ಕೆಲಸವೆಂದರೆ ಜಗದ ಜೀವ ಸರಪಳಿ ತುಂಡಾಗದಂತೆ ಕಾಪಿಡಲು ಮು¨ªಾದ ಮಕ್ಕಳನ್ನು ಹೆರುವುದು. ಇದೊಂದು ಶಕ್ತಿ ಹೆಣ್ಣಿಗೆ ಮಾತ್ರವಿರುವುದು ನಮ್ಮ ಸುಕೃತವೇ.

ಗರ್ಭದಲ್ಲಿ ಪುಟ್ಟ ಮಗುವನ್ನು ಹೊರುವುದು ಹೆರುವುದೆಂದರೇನು ಗೊತ್ತಾ? ಬಸುರಿಯಾಗುವುದೆಂದರೆ ಪುಟ್ಟ ಜೀವವೊಂದು ಅಣು ಮಾತ್ರವಾಗಿ ಗರ್ಭದೊಳಗೆ ಜೀವ ತಳೆದು ಮಗುವಾಗಿ ಬೆಳೆಯುತ್ತದೆ. ನವಮಾಸ ನಾವದನ್ನು ಗರ್ಭದಲ್ಲಿ ಹೊತ್ತು ಪೋಷಿಸಿ ಹೆರಬೇಕು. ಅಸಾಧ್ಯ ನೋವಿನೊಟ್ಟಿಗೆ ಏಳುವ ತರಂಗಗಳ ಮೇಲೆ ಆ ಶಿಶು ತೇಲುತ್ತಾ ಹೊರಬರುತ್ತದೆ. ನಿನಗೊಂದು ಆಶ್ಚರ್ಯದ ವಿಷಯ ಹೇಳುವೆ. ಮಗು ಹೊರಬರುವವರೆಗೂ ಅಸಾಧ್ಯವಾಗಿ ಕಾಡಿದ ನೋವು, ಮಗು ಹೊರಬಂದ ತಕ್ಷಣವೇ ಥಟ್ಟನೆ ಮಾಯವಾಗಿಬಿಟ್ಟಿರುತ್ತದೆ! ಹೆರಿಗೆಯಾದ ಮರುಕ್ಷಣ ನವಜಾತ ಶಿಶುವಿನ ಮುಖ ನೋಡುವುದು, ಮೊದಲ ಬಾರಿಗೆ ಸ್ಪರ್ಶಿಸುವುದಿದೆಯಲ್ಲ ಅದು ಅನಿರ್ವಚನೀಯ ಮಗಳೇ… ಅದು ಹೆಣ್ಣಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತೆನಿಸುವ ಅಪೂರ್ವ ಕ್ಷಣಗಳು. ಮತ್ತೂಂದು ಜನ್ಮವಂತಿದ್ದರೆ ಹೆಣ್ಣಾಗಿಯೇ ಹುಟ್ಟಬೇಕೆನಿಸುವ ಕ್ಷಣಗಳವು. ಅದಕ್ಕೆ ನಾವೀ ಜಗತ್ತಿಗೆ ಕೃತಜ್ಞತೆ ಹೇಳಲೇಬೇಕು.

  ಮುಂದೊಂದು ದಿನ ನೀನೂ ಮುದ್ದು ಮಕ್ಕಳ ತಾಯಾಗುತ್ತೀ. ತಾಯ್ತನ, ಹೆಣ್ಣನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅವಳು ಎಷ್ಟೋ ಬಾರಿ ತನ್ನತನವನ್ನು ಕಳಕೊಂಡು ಕುಟುಂಬಕ್ಕಾಗಿ ಬದುಕತೊಡಗುತ್ತಾಳೆ. ಕುಟುಂಬ ಅವಳ ಸರ್ವಸ್ವ. ಗಂಡನನ್ನು ಮಗುವಿನಂತೆ ಲಾಲಿಸುತ್ತಾಳೆ. ಅತ್ತೆ, ಮಾವ, ಮೈದುನ, ನಾದಿನಿ ಅಂತ ತನ್ನ ಸುತ್ತಮುತ್ತಲಿನ ಎಲ್ಲ ಸಂಬಂಧಿಗಳನ್ನೂ ಚೆಂದವಾಗಿ ಆಧರಿಸಿ ನಿಭಾಯಿಸತೊಡಗುತ್ತಾಳೆ. ತಾನು ಹಸಿದಿದ್ದರೂ ಅಡುಗೆ ಮಾಡಿ ಬಡಿಸುತ್ತಾಳೆ. ಮಕ್ಕಳು ಉಣ್ಣದಿದ್ದರೆ ಅವಳೂ ಉಪವಾಸ. ನೀನೂ ಈ ಎಲ್ಲ ಸ್ಥಿತ್ಯಂತರಗಳಿಗೂ ಯಾವೊಂದು ಪೂರ್ವತಯಾರಿ ಇಲ್ಲದೇ ಯಾರ ಸಹಾಯವೂ ಇಲ್ಲದೇ ಪಕ್ಕಾಗುತ್ತಾ ಹೋಗುತ್ತೀ. ಇದನ್ನೆÇÉಾ ಬೆರಗಿನಿಂದ ನೋಡುತ್ತಾ ಹೋಗುವುದೀಗ ನನ್ನ ಸರದಿ.

  ಇಲ್ಲಿ ಹೆಣ್ಣಾದ ಕಾರಣಕ್ಕೆ ಅಸಹಾಯಕತೆಯಿಂದ ಸೋಲಬೇಕಾದ ಕೆಲವು ಕ್ಷಣಗಳು ಬರುತ್ತವೆ ಮಗಳೇ… ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತಳಾಗಬೇಕಾದ ಪ್ರಸಂಗಗಳು ಬರುತ್ತವೆ. ನೀನವುಗಳನ್ನು ಮೆಟ್ಟಿ ನಿಲ್ಲವುದನ್ನು ಕಲಿಯಬೇಕು. ಒಂದು ಮಾತು ನೆನಪಿಟ್ಟುಕೋ: ಸೋಲು ಅಪಮಾನವಲ್ಲ ಮತ್ತು ಸಾವು ನೈಸರ್ಗಿಕವಾಗಿರಬೇಕು. ನಿನ್ನನ್ನು ನೀನು ಎಂದಿಗೂ ಸಾವಿಗೆ ಈಡಾಗಿಸಿಕೊಳ್ಳಬೇಡ. ಪ್ರತಿಯೊಂದು ಜೀವಿಯೂ ಬದುಕುವುದಕ್ಕಾಗಿ ಮತ್ತೆ ಮತ್ತೆ ಪ್ರಯತ್ನಿಸುತ್ತಿರುತ್ತದೆ. ನೀನಾದರೂ ಒಂದು ಅತ್ಯದ್ಭುತ ಹೆಣ್ಣು. ನಿನ್ನ ಪ್ರಯತ್ನಗಳೇಕೆ ಮಣಿಯಬೇಕು.

  ನಿನ್ನ ಕೋಮಲತೆ ಜಗತ್ತನ್ನು ಸಂತೈಸಲಿ. ನಿನ್ನ ಆತ್ಮವಿಶ್ವಾಸ ಅನುಕರಣೀಯವಾಗಲಿ. ಮನೆಬಳಕೆಗಷ್ಟೇ ಸೀಮಿತವಾಗದೆ ಹೊರಜಗತ್ತಿಗೂ ಕಾಲಿಡು. ಮನೆಯಿಂದಾಚೆಗೂ ನಿನಗೊಂದು ಅಸ್ತಿತ್ವವಿದೆ. ಗಂಡ, ಮನೆ, ಮಕ್ಕಳ ಬೇಕು ಬೇಡಗಳು ನಿನ್ನ ಜೀವನದ ಅವಿಭಾಜ್ಯ ಅಂಗ ನಿಜ… ಆದರೆ, ಅದೇ ಜೀವನವಲ್ಲ . ನಿನ್ನ ಇನ್ನೊಂದು ಅಸ್ತಿತ್ವವನ್ನು ನೀನು ಕಂಡುಕೊಳ್ಳಬೇಕು. ಅದನ್ನು ದೃಢಗೊಳಿಸಿಕೊಳ್ಳಲು ಏನು ಮಾಡಬೇಕಿದೆಯೆಂದು ನೀನೇ ನಿರ್ಧರಿಸು. ನಿನ್ನ ನಿರ್ಧಾರ ನಿನ್ನದು ಮಾತ್ರ. ಗಟ್ಟಿಯಾಗು ಆದರೆ ಎಂದಿಗೂ ಮುರಿದು ತುಂಡಾಗಬೇಡ. ಯಾರು ಯಾರನ್ನೂ ಶೋಷಿಸಬಾರದು, ತುಳಿಯಬಾರದು. ಯಾರು ಯಾರಿಗಿಂತಲೂ ಮೇಲೂ ಅಲ್ಲ, ಕೀಳೂ ಅಲ್ಲ. ಸೃಷ್ಟಿಯ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಒಳಗಿನ ಹಣ್ಣು ಮೃದುವಾಗಿರುತ್ತದೆ ಮತ್ತು ಸವಿಯಾಗಿರುತ್ತದೆ ನಿಜ. ಆದರೆ, ಹೊರಗಿನ ಬಲಿಷ್ಠ ಸಿಪ್ಪೆ ಇಲ್ಲದೆ ಅದು ಉಳಿಯುವುದು ಹೇಗೆ ಯೋಚಿಸು. ಅದನ್ನು ಅರಿತು ಬಾಳಬೇಕು ನೀನು.

  ಮಗಳೇ, ನಿನ್ನೆಲ್ಲ ಕಷ್ಟ ಸುಖದಲ್ಲಿ ಉಸಿರಿರುವವರೆಗೂ ನಿನ್ನೊಂದಿಗಿರುವ ಶಪಥ ಮಾಡುವೆ. ಉಸಿರು ನಿಂತ ಮೇಲೂ ನಿನ್ನೊಂದಿಗೆ ನೆರಳಾಗಿ ಬರುವೆ. ನೀನು ಹೆಣ್ಣಾಗಿದ್ದೀ ಎಂಬುದಕ್ಕೆ ಹೆಮ್ಮೆ ಪಡು. ಆದರೆ, ಹುಸಿ ಗರ್ವ ಬೇಡ. ಕಷ್ಟಗಳೊಂದಿಗೆ ಆಟವಾಡು. ಜನರನ್ನು ಪ್ರೀತಿಸು. ಮತ್ತದೇ ಪ್ರೀತಿ ನಿನ್ನೆಡೆಗೆ ಸಾವಿರ ಪಟ್ಟಾಗಿ ಮರಳಿ ಬರುತ್ತದೆ.
  ಮಾತುಗಳಿನ್ನೂ ಉಳಿದಿವೆ, ಇನ್ನೊಮ್ಮೆ ಆಡಲಿಕ್ಕಾಗಿ…

ಇಂತಿ
ನಿನ್ನ ಅಮ್ಮ

– ಆಶಾ ಜಗದೀಶ್‌ 

Advertisement

Udayavani is now on Telegram. Click here to join our channel and stay updated with the latest news.

Next