ಬೆಂಗಳೂರು: ರಾಜ್ಯದಲ್ಲಿರುವ ಡೀಮ್ಡ್ ವಿಶ್ವ ವಿದ್ಯಾಲಯಗಳ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೀಟುಗಳಲ್ಲಿ ಕನ್ನಡಿಗರಿಗೆ ಶೇ. 50ರಷ್ಟು ಸೀಟುಗಳನ್ನು ಮೀಸಲಿಡುವಂತೆ ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯಕ್ಕೆ ಪತ್ರ ಬರೆಯುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಡೀಮ್ಡ್ ವಿಶ್ವ ವಿದ್ಯಾಲಯಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಜತೆ ಬುಧವಾರ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 8 ಡೀಮ್ಡ್ ವಿಶ್ವ ವಿದ್ಯಾಲಗಳಿದ್ದು, 1630 ವೈದ್ಯಕೀಯ ಹಾಗೂ 640 ದಂತ ವೈದ್ಯಕೀಯ ಸೀಟುಗಳು ಲಭ್ಯವಿದೆ. ಡೀಮ್ಡ್ ವಿವಿಗಳಲ್ಲಿ ಬಹುತೇಕ ಹೊರ ರಾಜ್ಯ ಹಾಗೂ ಹೊರ ದೇಶಗಳ ವಿದ್ಯಾರ್ಥಿಗಳೇ ಅಧ್ಯಯನ ಮಾಡುತ್ತಾರೆ. ಇದರಿಂದ ರಾಜ್ಯದಲ್ಲಿ ವೈದ್ಯರ ಕೊರತೆಯುಂಟಾಗುತ್ತಿದೆ. ಅದನ್ನು ತಪ್ಪಿಸಲು ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 50ರಷ್ಟು ಸೀಟುಗಳನ್ನು ನೀಡುವಂತೆ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ.
ಆದರೆ, ಸೀಟು ಹಂಚಿಕೆಯನ್ನು ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯವೇ ನಿಗದಿ ಮಾಡುವುದರಿಂದ ತಾವು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಡೀಮ್ಡ್ ವಿವಿ ಆಡಳಿತ ಮಂಡಳಿಯವರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯಕ್ಕೆ ಪತ್ರ ಬರೆದು, ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಸೀಟುಗಳನ್ನು ಬಿಟ್ಟುಕೊಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಮಣಿಪಾಲ್, ನಿಟ್ಟೆ, ಯೆನೆಪೊಯಾ, ಸಿದ್ದಾರ್ಥ, ದೇವರಾಜ ಅರಸು, ಕೆಎಲ್‌ಇ ಹಾಗೂ ಬಿಎಲ್‌ಡಿ ಡೀಮ್ಡ್ ವಿವಿಗಳು ಕಾರ್ಯ ನಿರ್ವಹಿಸುತ್ತಿದ್ದು, ಬಹುತೇಕ ಆಡಳಿತ ಮಂಡಳಿಗಳು ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸಕಾರಾತ್ಮಕವಾಗಿ ಸ್ಪಂದಿಸಿವೆ. ಒಂದೆರಡು ಡೀಮ್ಡ್ ವಿವಿಗಳು ಮಾತ್ರ ಆಕ್ಷೇಪ ವ್ಯಕ್ತಪಡಿಸಿವೆ ಎಂದರು.
ಈಗ ಆದಿ ಚುಂಚನಗಿರಿ ಡೀಮ್ಡ್ ವಿವಿಯಲ್ಲಿ ಶೇ. 90ರಷ್ಟು ಸೀಟುಗಳು ಕನ್ನಡಿಗರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಅದೇ ರೀತಿ ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಪ್ರಯತ್ನ ನಡೆಸಲಾಗುತ್ತಿದೆ. ಕಾನೂನು ತಿದ್ದುಪಡಿಯ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡುವುದಿಲ್ಲ. ಈಗಿರುವ ಕಾನೂನಿನಡಿಯಲ್ಲಿಯೇ ಹೆಚ್ಚಿನ ಸೀಟು ಪಡೆಯಲು ಮತ್ತು 2018-19 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಪ್ರವಾಸೋದ್ಯಮ: ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ಉನ್ನತ ದರ್ಜೆಗೇರಿಸಿ ಆರೋಗ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಪ್ರಯತ್ನ ನಡೆಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ಗುಣಮಟ್ಟದ ಆರೋಗ್ಯ ಸೇವೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರವೇಶ ದರ ನಿಗದಿಯಾಗಿಲ್ಲ: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ದರ ಹೆಚ್ಚಳ ಕುರಿತಂತೆ ಇನ್ನೂ ನಿರ್ಧಾರವಾಗಿಲ್ಲ. ಖಾಸಗಿ ಆಡಳಿತ ಮಂಡಳಿಗಲು 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಿಬ್ಬಂದಿ ವೇತನವನ್ನು ಶೇ. 30ರಷ್ಟು ಹೆಚ್ಚಳ ಮಾಡಿರುವುದರಿಂದ ಶುಲ್ಕವನ್ನೂ ಶೇ. 30ರಷ್ಟು ಹೆಚ್ಚಿಸಬೇಕು ಎಂದು ಕೋರಿದ್ದಾರೆ. ಆದರೆ, ಅಷ್ಟೊಂದು ಪ್ರಮಾಣದಲ್ಲಿ ಶುಲ್ಕ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿಲ್ಲ. ಹೀಗಾಗಿ ಶುಲ್ಕ ಹೆಚ್ಚಳ ಕುರಿತಂತೆ ಮಾತುಕತೆ ಮುಂದುವರಿದಿದೆ ಎಂದು ತಿಳಿಸಿದರು.