Advertisement
ಪ್ರೀತಿಯ ಅಂಚೆಯಣ್ಣ,ಹೌದಲ್ವ? ನೀನೀಗ ಅಪರಿಚಿತ ಆಗ್ತಾ ಇದೀಯ. ಅಪರೂಪಕ್ಕೆ ಮಾತ್ರ ಸಿಕ್ತಾ ಇದೀಯ. ಈ ಹಿಂದೆ ಒಂದು ದಿನವೂ ತಪ್ಪದೆ ಮಟಮಟ ಮಧ್ಯಾಹ್ನವೇ ಮನೆ ಮುಂದೆ ನಿಲ್ಲುತ್ತಿದ್ದವ ನೀನು. ಆಗೆಲ್ಲ ಒಂದಿಡೀ ಊರಿಗೆ ಉಭಯ ಕುಶಲೋಪರಿ “ಸಾಂಪ್ರತ’ದ ಪತ್ರಗಳನ್ನು ಬಟವಾಡೆ ಮಾಡುತ್ತಿದ್ದವ ನೀನು. ಅಂಥ ನಿನಗೇ ಈಗ ಪತ್ರ ಬರೀತಿದೀನಲ್ಲ; ಅದು ನನ್ನ ಹಾಗೂ ನನ್ನಂಥ ಅನೇಕರ ಪಾಲಿಗೆ ಅಚ್ಚರಿ ಮತ್ತು ವಿಷಾದದ ಸಂಗತಿ.
***
ನೆನಪಿದೆ ತಾನೆ? 30 ವರ್ಷಗಳ ಹಿಂದೆ ಮನೆ ಮನೆಯ ನೆಂಟನಾಗಿದ್ದವ ನೀನು. ಮಧ್ಯಾಹ್ನ ಹನ್ನೆರಡು ಗಂಟೆಗೆ ಸ್ಕೂಲ್ ಮುಂದಿನ ರಸ್ತೆಯಲ್ಲಿ ಅಥವಾ ಊರಿನ ಮುಖ್ಯ ಬೀದಿಯಲ್ಲಿ ನೀನು ನಡೆದು ಬರುತ್ತಿ¨ªೆ. ಅಥವಾ ವಾರದ ಸಂತೆಯಲ್ಲಿ ಸಿಕ್ಕಿ ಬಿಡುತ್ತಿದ್ದೆ. ನಿಮಗೊಂದು ಕಾಗದ ಇತ್ತೂ.. ಅನ್ನುತ್ತಲೇ ಬ್ಯಾಗ್ ನಿಂದ ಒಂದು ಕಟ್ಟು ತೆಗೆದು ಅದರಿಂದ ನಮ್ಮ ಕಾಗದ ಎತ್ತಿ ಕೊಡುತ್ತಿದ್ದೆ. ಆ ದಿನಗಳಲ್ಲಿ ಶಾಲೆಯ ಪಠ್ಯದಲ್ಲಿ ನಿನ್ನ ಕಾಯಕವನ್ನು ವಿವರಿಸಿ ಹೇಳುವ ಒಂದು ಪದ್ಯವೂ ಇತ್ತು. ಅದನ್ನು ಮೇಷ್ಟ್ರು ರಾಗವಾಗಿ ಹಾಡುತ್ತಿದ್ದರು: ಓಲೆಯ ಹಂಚಲು ಹೊರಡುವೆ ನಾನು/ತೋರಲು ಆಗಸದಲಿ ಬಿಳಿ ಬಾನು/ ಮನೆಯಲಿ ನೀವು ಬಿಸಿಲಲಿ ನಾನು/ಕಾಗದ ಬಂತು ಕಾಗದವು.’ ಮೇಸ್ಟ್ರ ಈ ಹಾಡಿನಲ್ಲಿ ಪ್ರೀತಿಯಿರುತ್ತಿತ್ತು. ಮೆಚ್ಚುಗೆ ಇರುತ್ತಿತ್ತು. ಅವರ ಸ್ವರದಲ್ಲಿ, ಆ ರಾಗದಲ್ಲಿ ಎಂಥದೋ ಮೋದವಿರುತ್ತಿತ್ತು. ಮತ್ತು ಅದೇ ಕಾರಣಕ್ಕೆ ಆ ಹಾಡು ಎಲ್ಲ ಮಕ್ಕಳಿಗೂ ಬಾಯಿಪಾಠವಾಗಿತ್ತು! ಮರುದಿನ ನೀನು ಅಷ್ಟು ದೂರದಲ್ಲಿ ಕಂಡಾಕ್ಷಣ ನಾವೂ ಖುಷಿಯಿಂದ ಹಾಡುತ್ತಿದ್ದೆವು: ಓಲೆಯ ಹಂಚಲು ಹೊರಡುವೆ ನಾನು. ಶಾಲೆಯ ಹಾದಿಯಿಂದಲೇ ನಮ್ಮ ಊರಿಗೂ ಬರ್ತಿದ್ದೆ ನೀನು? ನೀನು ಬಂದಾಗ ಯಾರಿಗೂ ಬೆರಗಾಗ್ತಾ ಇರಲಿಲ್ಲ. ಬರದಿದ್ದರೆ ಮಾತ್ರ ಎಲ್ಲರಿಗೂ ಏನೋ ಕಳೆದುಕೊಂಡಂತೆ ಆಗ್ತಾ ಇತ್ತು. ಮನೆಯ ಮುಂದೆ ಸೈಕಲ್ ನಿಲ್ಲಿಸಿ ಟ್ರಿಣ್ ಟ್ರಿಣ್’ ಅನ್ನಿಸಿದರೆ ಸಾಕು- ಪೋಸ್ಟಾ, ಬಂದೆ ಬಂದೆ’ ಅನ್ನುತ್ತಲೇ ಮನೆಯೊಡತಿ ಓಡಿ ಬರುತ್ತಿದ್ದಳು. ಯಾವುದೋ ಕಾಗದಕ್ಕೆ ಕೈ ಒಡ್ಡುತ್ತಿದ್ದಳು. ನಿನ್ನ ಮುಖ ಕಂಡೇ- ಬಂದಿರುವುದು ಸಂತೋಷದ ಸುದ್ದಿಯೋ; ದುಃಖದ ವಾರ್ತೆಯೋ ಎಂದು ತಿಳಿದು ಬಿಡುತ್ತಿದ್ದಳು. ಸಂತೋಷವಾದರೆ ನಕ್ಕು ಮಾತಾಡುತ್ತಿದ್ದಳು. ದುಃಖದ ಸಂಗತಿಯಾದರೆ ಅತ್ತು ಹಗುರಾಗುತ್ತಿದ್ದಳು. ಕೆಲವೊಮ್ಮೆ ಸರಸರನೆ ಕಾಗದ ಗೀಚಿ, ಇದನ್ನು ಪೋಸ್ಟು ಮಾಡಬೇಕಲ್ಲಣ್ಣ.’ ಎಂದು ಬೇಡುತ್ತಿದ್ದಳು!
Related Articles
Advertisement
ತಮಾಷೆ ನೋಡು; ನಿಂಗೊಂದು ಹೆಸರಿರುತ್ತಿತ್ತು. ಅದು ಎಲ್ಲರಿಗೂ ಚೆನ್ನಾಗೇ ಗೊತ್ತಿರ್ತಿತ್ತು. ಆದ್ರೂ ನಾವು ಪೋಸ್ಟ್ ಮ್ಯಾನೂ’ ಅಂತಿದ್ವಿ. ನಡು ಮಧ್ಯಾಹ್ನ ನಿನ್ನ ಮುಖ ಕಂಡಾಗ ಖುಷಿ ಪಡುತ್ತಿದ್ದವರು, ಅದೇ ದಿನ ಸಂಜೆಯೋ, ಮುಸ್ಸಂಜೆಯೋ ಇದ್ದಕ್ಕಿದ್ದಂತೆ ನಿನ್ನ ಸೈಕಲ್ ನ ಟ್ರಿಣ್ ಟ್ರಿಣ್ ಸದ್ದು ಕೇಳಿಸಿದರೆ- ದೇವ್ರೇ, ಯಾವ ಕೆಟ್ಟ ಸುದ್ದಿ ಕೇಳುವುದಿದೆಯೋ ಗೊತ್ತಿಲ್ವಲ್ಲ ಎಂದು ಬೆವರುತ್ತಿದ್ದರು. ಆಗೆಲ್ಲ ನೀನು ಅಕ್ಕರೆಯ ಅಮ್ಮನಾಗುತ್ತಿದ್ದೆ. ಸೇನೆಯಲ್ಲಿ ಮಗ ತೀರಿಕೊಂಡ ಸುದ್ದಿಯನ್ನು, ತವರಿನಲ್ಲಿ ತಾಯಿ ಮೃತಪಟ್ಟ ಸಂಗತಿಯನ್ನು, ಬೈಕ್ ಆ್ಯಕ್ಸಿಡೆಂಟ್‌ನಲ್ಲಿ ಅಣ್ಣನಿಗೆ ಕಾಲು ಮುರಿದಿದೆ ಎಂಬ ವಿಷಯವನ್ನು ಸಂಕಟದಿಂದಲೇ ಹೇಳಿ, ಎಲ್ಲ ದೈವೇಚ್ಛೆ. ನಮ್ಮ ಕೈಲಿ ಏನಿದೆ? ಸಮಾಧಾನ ಮಾಡಿಕೊಳ್ಳಿ ಎಂದು ಸಂತೈಸುತ್ತಿದ್ದೆ. ಅಕಸ್ಮಾತ್ ಟೆಲಿಗ್ರಾಮ್ ಮೂಲಕ ಬಂದದ್ದು ಸರಕಾರಿ ಕೆಲಸ ಸಿಕ್ಕಿದ ಬಗೆಗಿನ ಆರ್ಡರ್ ಆಗಿದ್ದರೆ ಇಡೀ ಮನೆಯ ಖುಷಿಗೆ ಕಾರಣವಾಗ್ತಿದ್ದೆ.ಇದರ ಜತೆಗೆ ಓದು, ಬರಹ ಬರದ ಅದೆಷ್ಟೋ ಮನೆಯವರಿಗೆ ಪತ್ರ ತಲುಪಿಸುತ್ತಿದ್ದವನೂ ನೀನೇ, ಅದನ್ನ ಓದುತ್ತಿದ್ದವನೂ ನೀನೇ. ಅಷ್ಟೇ ಅಲ್ಲ, ಅದಕ್ಕೆ ಮಾರೋಲೆ ಬರೆಯುತ್ತಿದ್ದವ ಕೂಡ ನೀನೇ! ಅಂಥ ವೇಳೆಯಲ್ಲಿ ರಾಗ-ದ್ವೇಷವನ್ನು ಮೀರಿ ನಿಂತು ಮನೆ ಮನೆಯ ಗುಟ್ಟು ಕಾಪಾಡುತ್ತಿದ್ದೆಯಲ್ಲ, ಅದೆಲ್ಲ ನಿನ್ನಿಂದ ಹ್ಯಾಗೆ ಸಾಧ್ಯವಾಗ್ತಿತ್ತು ಮಾರಾಯ? ಈಗ ಏನಾಗಿದೆ ನೋಡು ? ಮೊಬೈಲ್‌ನ ಮಾಯೆಗೆ ಸಿಕ್ಕ ಜನ ಪತ್ರ ಬರೆಯುವುದನ್ನು ಮರೆತೇ ಬಿಟ್ಟಿದ್ದಾರೆ. ಯಾವುದೇ ಮುಜುಗರವಿಲ್ಲದೆ, ಕಾಗದ ಬರೆಯೋದೇ ನಮಗೆ ಮರೆತುಹೋಗಿದೆ ಅನ್ನುತ್ತಿದ್ದಾರೆ. ಪುಸ್ತಕವನ್ನೋ ಮತ್ತೂಂದು ವಸ್ತುವನ್ನೋ ಬೇರೊಂದು ಸ್ಥಳಕ್ಕೆ ಕಳಿಸಬೇಕಾದಾಗ, ಪೋಸ್ಟ್ ಗಿಂತ ಕೊರಿಯರ್ ಬೆಟರ್ ಅನ್ನತೊಡಗಿದ್ದಾರೆ. ಆ ಮೂಲಕ ನಿನ್ನನ್ನು ಇಷ್ಟಿಷ್ಟೇ ಮರೆಯತೊಡಗಿದ್ದಾರೆ.
***
ಯಾಕಪ್ಪ ಹೀಗಾಯ್ತು ಅಂದೆಯಾ? ಕಾರಣ ಸಿಂಪಲ್. ಈಗ ನಮಗೆ ಸಂಬಂಧಗಳು ಭಾರ ಅನ್ನಿಸತೊಡಗಿವೆ. ಗೆಳೆತನ ಬೇಡವಾಗಿದೆ. ಸಹನೆ ಮಾಯವಾಗಿದೆ. ಪತ್ರ ಬರೆಯುವ ಉಮೇದು ಕಣ್ಮರೆಯಾಗಿದೆ. ಈಗ ಎಲ್ಲರಿಗೂ ಇ-ಮೇಲ್ ಐಡಿ ಇದೆ. ಎಲ್ಲರ ಬಳಿಯೂ ಮೊಬೈಲ್ ಎಂಬ ಮಾಯೆಯಿದೆ. ಈ ಹಿಂದೆ ತುಂಬ ಪ್ರೀತಿಯಿಂದ ನೂರಾ ಇಪ್ಪತ್ತೆರಡು ಸಾಲನ್ನು ಪುಟ್ಟ ಕಾಗದದಲ್ಲಿ ಬರೀತಿದ್ದ ನಾವೇ, ಈಗ ಸಿಡಿಮಿಡಿಯಿಂದ ನಾಲ್ಕೇ ಸಾಲಿನ ಮೆಸೇಜ್ ಕಳಿಸಿ ಸುಮ್ಮನಾಗ್ತಿದೀವಿ! ಅಜ್ಜನ ಪಿಂಚಣಿಗೆ, ಅಜ್ಜಿಯ ನೆಮ್ಮದಿಗೆ ಬ್ಯಾಂಕ್‌ನಲ್ಲಿ ಅಕೌಂಟು ತೆಗೆದು, ನೆಟ್ ಬ್ಯಾಂಕಿಂಗ್ ಮೂಲಕ ಹಣ ಕಳಿಸಿ ಜವಾಬ್ದಾರಿ ಮುಗೀತು ಅನ್ನುತ್ತಿದ್ದೇವೆ. ಆ ನೆಪದಲ್ಲಿ ನಿನ್ನನ್ನ ಪೂರ್ತಿ ಮರೆತೇ ಬಿಟ್ಟಿದೀವಿ! ಉಹುಂ, ನಮಗೆ ರವೆಯಷ್ಟೂ ಪಾಪಪ್ರಜ್ಞೆ ಕಾಡ್ತಾನೇ ಇಲ್ಲ, ಆದ್ರೆ, ಮೈ ಡಿಯರ್ ಪೋಸ್ಟ್ ಮ್ಯಾನ್, ಇವೆೆಲ್ಲದರ ಮಧ್ಯೆಯೂ ನಿನ್ನನ್ನ ಪ್ರೀತಿಸಲಿಕ್ಕೆ, ನಿನ್ನನ್ನ ನೆನೆದು ಹೆಮ್ಮೆ ಪಡಲಿಕ್ಕೆ ಕಾರಣವಿದೆ. ಏನೆಂದರೆ, ನೀನು; ನಿನ್ನವರು ಯಾವತ್ತೂ ಲಂಚಕ್ಕೆ ಕೈ ಒಡ್ಡಿದವರಲ್ಲ. ಕೆಲಸಕ್ಕೆ ಕಳ್ಳ ಬಿದ್ದವರಲ್ಲ. ಮಳೆಬರಲಿ, ಬಿಸಿಲು ಉಕ್ಕಲಿ, ಚಳಿ ಅಪ್ಪಲಿ ನೀವೆಂದೂ ಕೆಲಸಕ್ಕೆ ಚಕ್ಕರ್ ಹಾಕಲಿಲ್ಲ. ಅದಕ್ಕಾಗಿ ನಿನಗೆ ಶರಣು. ಈಗ ಕಾಲ ಬದಲಾಗಿದೆ. ನಾವೂ ಬದಲಾಗಿದೀವಿ. ಹಿಂದೊಮ್ಮೆ ಪಠ್ಯದಲ್ಲಿ ನಿನ್ನ ಕುರಿತು ಪದ್ಯವಿತ್ತು ಅಂದೆನಲ್ಲ, ಅದು ಹೆಚ್ಚಿನವರಿಗೆ ಮರೆತೇ ಹೋಗಿದೆ. ಇವತ್ತಲ್ಲ, ನಾಳೆ, ನಾವು ನಿನ್ನನ್ನೂ ಮರೆತುಬಿಡ್ತೀವಿ. ಪೋಸ್ಟು ಸರಿಯಿಲ್ಲ ಕಣ್ರೀ, ಕೊರಿಯರೆ ಸೈ ಅಂತ ಈಗಾಗಲೇ ವಾದ ಮಂಡಿಸ್ತಾ ಇದ್ದೇವೆ. ಆದ್ರೆ ಅಮ್ಮನ ನೆನಪಾದಾಗ, ಆಕೆ ಅಜ್ಜಿಗೆ ಪತ್ರ ಬರೆಸಿದ್ದು; ಅಜ್ಜನ ಸಾವಿಗೆ ಅಮ್ಮ ಕಣ್ಣೀರಾದದ್ದು ನೆನಪಾದಾಗ, ಅಜ್ಜಿಯ ಸಾವಿಗೆ ಎಲ್ಲರೂ ಬಿಕ್ಕಳಿಸಿದಾಗ ನಿನ್ನನ್ನ ನೆನಪು ಮಾಡಿಕೊಳ್ತೀವಿ. ಆ ನೆನಪಿನ ದೋಣಿಯಲ್ಲಿ ತೇಲಿ ಹೋಗ್ತಿವಿ. ಮರೆತು ಬಿಡುವ ಮುನ್ನ ನಿಂಗೆ ಹೇಳಬಹುದಾದ ಮಾತು- ನಿಂಗೆ ತುಂಬ ಒಳ್ಳೆಯದಾಗಲಿ. ನಿನಗಿದ್ದ ಒಳ್ಳೆಯ ಬುದ್ಧಿ ನಮಗೂ ಬರಲಿ.
ನಮಸ್ಕಾರ… – ಎ.ಆರ್.ಮಣಿಕಾಂತ್